ನನ್ನ ಮುಖಪುಟ ನೋಡುತ್ತಿದ್ದಂತೆ ಆತನ ಮುಖದಲ್ಲಾಗುವ ಚಲನವಲನವನ್ನು ಗ್ರಹಿಸುತ್ತೇನೆ. ಮುಖಪುಟದಲ್ಲಿ ಬೆಕ್ಕಿನ ಮರಿಯನ್ನು ನೋಡಿ ಆತ ಕುತೂಹಲಗೊಂಡಿದ್ದಾನೆ. ಹೀಗಾಗಿ ಒಳಗೆ ಲೈಂಗಿಕ ವಿವರಗಳು ಸಾಕಷ್ಟು ಇರಬಹುದೆಂದು ಆತ ಅಂದುಕೊಂಡಿರುವುದು ಮಾತ್ರ ನನಗೆ ಆಶ್ಚರ್ಯ ಹುಟ್ಟಿಸಿದೆ. ಎರಡನೇ ಪುಟ, ಮೂರನೇ ಪುಟಗಳನ್ನು ನೋಡುವ ಗೋಜಿಗೇ ಆತ ಹೋಗುವುದಿಲ್ಲ. ಅದರಲ್ಲಿರುವ ಪುಟ ಬೆಲೆ ಇತ್ಯಾದಿ ವಿವರಗಳಿಗಿಂತಲೂ, ಯಾವ ಪಾತ್ರಗಳು ಏನು ಮಾಡತೊಡಗಿವೆ ಎಂದು ನೋಡುವುದೇ ಆತನಿಗೆ ಆಪ್ಯಾಯಮಾನವೆನಿಸುತ್ತಿದೆ. ಆದರೆ ಅದಕ್ಕೆಲ್ಲ ಹೋಗುವ ಮುನ್ನ ಲೇಖಕ ಮೊದಲ ಪುಟದಲ್ಲಿ ಮಳೆಗಾಲದ ಸುದೀರ್ಘ ವರ್ಣನೆ ಮಾಡತೊಡಗಿದ್ದಾನೆ. ಒಂದನೇ ಪುಟ ಓದಬಹುದು, ಎರಡನೇ ಪುಟ ಓದುವುದು ಬೋರು. ನನ್ನ ಪ್ರೀತಿಯ ಓದುಗ ಆಕಳಿಸುತ್ತಿದ್ದಾನೆ. ಮೂರನೇ ಪುಟದಲ್ಲಿ ನಾಯಕಿ ಒದ್ದೆಯಾಗಿ ನಾಯಕನ ಮನೆಯ ಬಾಗಿಲು ತಟ್ಟುತ್ತಿದ್ದಾಳೆ. ಈಗ ಓದುಗ ಕಣ್ಣು ತಿಕ್ಕಿಕೊಂಡು ನಿಜವಾಗಿ ಓದುತ್ತಿದ್ದಾನೆ. ಹೊರಗೆ ಮಳೆ ನಿಜಕ್ಕೂ ಹುಯ್ಯುತ್ತಿದೆಯೋ ಅಂತ ಅಂದುಕೊಂಡು ಬಿಸಿಬಿಸಿ ಟೀ ಮಾಡಿಕೊಂಡು ಬಂದು ಓದುತ್ತಾನೆ. ನಾಯಕ ನಾಯಕಿಯ ಮುಖಾಮುಖಿಯ ವೇಳೆ ಆತನ ಮುಖ ಪ್ರಫುಲ್ಲಿತವಾಗಿದೆ. ಆದರೆ ನಾಯಕನ ಕೈಗಳು ಉದ್ದಕ್ಕೆ ಬೆಳೆಯತೊಡಗಿದಾಗ ಇವನ ಕಣ್ಣು ಕಿರಿದಾಗುತ್ತಿದೆ. ಅಂದರೆ ವಿಲನ್ ಪ್ರವೇಶವಾಯಿತೇ ಎಂಬ ಕುತೂಹಲ ಅದು. ಆದರೆ ನಾನೊಂದು ಆಧುನಿಕ ಥ್ರಿಲ್ಲರ್ ಕಾದಂಬರಿ. ಹಾಗೆಲ್ಲ ಇಲ್ಲಿ ಯಾರೂ ಶಾಶ್ವತ ಹೀರೋಗಳೂ ಶಾಶ್ವತ ವಿಲನ್‌ಗಳೂ ಇಲ್ಲ. ಅದು ನನ್ನ ಓದುಗನಿಗೆ ಗೊತ್ತಿಲ್ಲವೆಂದಲ್ಲ. ಆದರೆ ಮನಸ್ಸು ಅನೇಕ ಬಾರಿ ರೂಢಿಗೆ ಬಿದ್ದಂತೆ ಚಿಂತಿಸುತ್ತದೆ. ಈಗಾಗಲೇ ಅನೇಕ ಬಾರಿ ಕತೆಯ ಕೊನೆ ಹೇಗಿರಬಹುದೆಂದೂ ಆತ ಕಲ್ಪಿಸಿಕೊಂಡಿದ್ದಾನೆ. ಆದರೆ ಆತನಿಗೆ ಶಾಕ್ ಕಾದಿದೆ.
ನನ್ನಿಂದ ಹೊರಜಿಗಿಯಲಿರುವ ನಾಯಕನ ಕೈ ನನ್ನ ಓದುಗನ ಕುತ್ತಿಗೆಯತ್ತ ಸರಿಯಲಿದೆ.
= ಹರೀಶ್ ಕೇರ