ಒಟ್ಟಿರುವುದು ಇಪ್ಪತ್ನಾಲ್ಕು ಗಂಟೆ. ಹೇಗೆ ಹೊಂದಿಸಿದರೂ 'ಇನ್ನೆರಡು ಗಂಟೆ ಎಕ್ಸ್‌ಟ್ರಾ ಇದ್ದಿದ್ರೆ...' ಎಂಬ ಚಿಂತೆ ತಲೆಯೊಳಗೆ ಲೊಚಗುಡುತ್ತದೆ. ಇನ್ನು ಈ ಬದುಕಿನ ಗಡಿಯಾರದಲ್ಲಿ ಸೆಕೆಂಡುಗಳ ಉಳಿತಾಯ ಹೇಗೆ? ಅದರಲ್ಲೂ ಗಂಟೆಗಟ್ಟಲೆ ಕರಗಿ ಹೋಗುವ ಶಾಪಿಂಗ್‌ಗೆ ಜಾಗ ಕಲ್ಪಿಸುವುದು ಹೇಗೆ?
ಇದು ಆಗಿದ್ದ ಸಮಸ್ಯೆ. ಈಗ ಸೆಕೆಂಡುಗಳನ್ನು ಉಳಿಸಲು 'ಆನ್‌ಲೈನ್'ನಲ್ಲೇ ದಾರಿ ಹಾಸಿಕೊಂಡಿದೆ. ಕೇವಲ ಇಂಟರ್ನೆಟ್ ಮೂಲಕ ಮನೆಯಲ್ಲೇ ಶಾಪಿಂಗ್ ಮಾಲ್ ಎದ್ದುಕೂತಿದೆ. 'ಅಂಗಡಿಯಲ್ಲಿ ಸೀರೆ ಆರಿಸಲು ಇವಳಿಗೆ ಗಂಟೆಗಟ್ಟಲೆ ಬೇಕು. ನಾನ್ ಶಾಪಿಂಗ್‌ಗೆ ಬರೊಲ್ಲ' ಎಂದು ಗಂಡ ಮುಖ ಜೋಲು ಹಾಕಿದರೂ ಹೆಂಡತಿಗೇನೂ ಚಿಂತೆಯಿಲ್ಲ. ಏಕೆಂದರೆ, ಮನೆಯಲ್ಲೇ ಇದ್ದ ಕಂಪ್ಯೂಟರ್ ಮಾಲ್ ಅನ್ನು ತೋರಿಸುತ್ತದೆ. ಕುಳಿತಲ್ಲೇ, ಮಾಲಿನ ಮೆಟ್ಟಿಲು- ಲಿಫ್ಟೇರದೆ ಖರೀದಿ ಬಹಳ ಸಲೀಸು. ಆಯಾಸವಿಲ್ಲದ ವ್ಯವಹಾರದ ಕಾರಣಕ್ಕಾಗಿಯೇ ಆನ್‌ಲೈನ್ ಶಾಪಿಂಗ್ ಹೆಚ್ಚು 'ಕ್ಲಿಕ್' ಆಗುತ್ತಿದೆ.
ಯಾವುದೋ ಹಬ್ಬದ ವೇಳೆ ಶಾಪಿಂಗ್‌ಗೆ ಹೋಗಬೇಕು ಅಂದ್ರೆ ಸಂಜೆ ಕೆಲಸ ಬೇಗ ಮುಗಿಸಬೇಕು, ಗಂಡನಿಗೆ ಮೊದಲೇ ಬೇಗ ಬರಲು ಹೇಳಿರಬೇಕು... ಹೀಗೆ ಅನೇಕ ಅನುಕೂಲಗಳನ್ನು ಮೊದಲೇ ತಯಾರಿ ಮಾಡಿಕೊಂಡಿರಬೇಕಾಗುತ್ತದೆ. ಹುಡುಗಿಯರೂ ಅಷ್ಟೇ ಕಾಲೇಜಿನಿಂದ ಬೇಗ ಹೊರಡಬೇಕು, ಅಂಗಡಿ ಅಂಗಡಿ ಸುತ್ತಿ ಕಾಲು ನೋಯಿಸಿಕೊಳ್ಳಬೇಕು- ಹೀಗೆ ಅನೇಕ ತೊಂದರೆಗಳು. ಆದರೆ ಆನ್‌ಲೈನ್ ಶಾಪಿಂಗ್‌ನಲ್ಲಿ ಇಂಥ ರಗಳೆಗಳೇ ಇಣುಕುವುದಿಲ್ಲ.
ತಂತ್ರಜ್ಞಾನ ಇಂದು ನಮ್ಮ ಮನೆ ಬಾಗಿಲಿಗೇ ಮಾರ್ಕೆಟನ್ನು ತಂದಿಟ್ಟಿದೆ. ಈ ಆನ್‌ಲೈನ್ ಶಾಪಿಂಗ್‌ನ ಪರಿಕಲ್ಪನೆ ಪಾಶ್ಚಾತ್ಯ ದೇಶಗಳಲ್ಲಿ 1976ರಲ್ಲೇ ಆರಂಭವಾಗಿತ್ತು. ಆದರೆ ಭಾರತದಲ್ಲಿ ಈ ಶಾಪಿಂಗ್ ಆರಂಭವಾದದ್ದು 1999ರ ಫ್ಯಾಬ್ಮಾಟರ್.ಕಾಮ್ ಎನ್ನುವ ವೆಬ್‌ಸೈಟ್‌ನಿಂದ. ಕೇವಲ ಹಾಡಿನ ಸಿಡಿಗಳನ್ನು ಮಾರಲು ಆರಂಭಿಸಿದ ಈ ಸಂಸ್ಥೆ 2000ದಲ್ಲಿ ಪುಸ್ತಕ, ಗಡಿಯಾರ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಆರಂಭಿಸಿತು. ಅಂದು ಆರಭವಾದ ಆನ್‌ಲೈನ್ ಶಾಪಿಂಗ್ ಈಗ ನಿಜವಾದ ಮಾರುಕಟ್ಟೆಯಷ್ಟೇ ಫೇಮಸ್ಸು.
ಲಾಭಗಳೇ ಅನೇಕ
ಹೌದು, ಆನ್‌ಲೈನ್ ಶಾಪಿಂಗ್ ಕಾಲು ನೋವು ತರಿಸುವುದಿಲ್ಲ. ತಲೆನೋವು ತಂದಿರಿಸುವುದಿಲ್ಲ. ಇವಿಷ್ಟೇ ಇದರ ಲಾಭಗಳೇನಲ್ಲ. ಯಾವ ಮುಂದಾಲೋಚನೆ ತಯಾರಿಗಳಿಲ್ಲದೆ ಮನೆಯಲ್ಲಿಯೇ ಬೇಕೆನಿಸಿದಾಗ ಶಾಪಿಂಗ್ ಮಾಡಬಹುದು. ಆಗ ಸಿಗುವ ಥ್ರಿಲ್ಲೇ ಬೇರೆ. ಮೈಂತ್ರಾ, ಫ್ಲಿಪ್‌ಕಾರ್ಟ್, ಯೆಪ್ಮಿ ಹೀಗೆ ಅನೇಕ ಶಾಪಿಂಗ್ ತಾಣಗಳಿಗೆ ಯಾವುದೇ ನಿಬಂಧನೆಗಳಿಲ್ಲದೇ ವಿಸಿಟ್ ಮಾಡಬಹುದು. ಅಲ್ಲೇನು ನಿಮಗೆ ಸೆಕ್ಯೂರಿಟಿ ಗಾರ್ಡ್‌ಗಳ ಕಿರಿಕ್ ಇಲ್ಲ. ಡೈರೆಕ್ಟ್ ಶಾಪಿಂಕ್‌ನಂತೆ ತುಂಬಾ ಹುಡುಕಿದರೆ ಖರೀದಿ ಮಾಡಲೇಬೇಕೆಂಬ ದಾಕ್ಷಿಣ್ಯಕ್ಕೀಡಾಗುವ ಪ್ರಸಂಗವೇ ಇಲ್ಲಿ ಉದ್ಭವಿಸುವುದಿಲ್ಲ. ವಿಂಡೋ ಶಾಪಿಂಗ್ ಮಾಡುವವರಿಗೆ 'ಆನ್‌ಲೈನ್' ಒಳ್ಳೆಯ ಆಯ್ಕೆ. ಕ್ಯಾಶ್ ಆನ್ ಡೆಲಿವರಿ ಆಗಿರುವುದರಿಂದ ಮೋಸ ಹೋಗುವ ಭಯವಿರುವುದಿಲ್ಲ. ಕೆಲವೊಮ್ಮೆ 4 ಬಟ್ಟೆಗಳಿಗೆ ಆರ್ಡರ್ ಮಾಡಿ, ಡೆಲಿವರಿ ವೇಳೆ ಎರಡನ್ನು ಮಾತ್ರ ಉಳಿಸಿಕೊಳ್ಳಲೂಬಹುದು. ನಿಮ್ಮ ಶಾಪಿಂಗ್ ಆಧಾರದ ಮೇಲೆ ದೊರೆಯುವ ಅಂಕಗಳಿಂದ ಮುಂದಿನ ಖರೀದಿಗಳಲ್ಲಿ ವಿನಾಯತಿಯನ್ನೂ ಪಡೆಯಬಹುದು.
ಹ್ಞಾಂ, ಇದಲ್ಲದೆ ಇನ್ನೊಂದು ಮುಖ್ಯ ಲಾಭವುಂಟು. ನೀವು ಅಂದದ ಹುಡುಗಿಯರೇ ಆಗಿದ್ದರೆ ಮಾಲ್‌ನಲ್ಲಿ ಪಡ್ಡೆಗಳಿಂದ 'ಲೈನ್' ಕಿರಿಕಿರಿ ಇದ್ದಿದ್ದೇ. ಆದರೆ, ಆನ್‌ಲೈನ್‌ನಲ್ಲಿ ಇದಕ್ಕೆ ಚಾನ್ಸ್ ಇಲ್ಲ!
ವೇಗದ ಹೆಜ್ಜೆ
ಇಷ್ಟೆಲ್ಲ ಅನುಕೂಲಗಳಿರುವುದರಿಂದಲೇ ಆನ್‌ಲೈನ್ ಶಾಪಿಂಗ್ ಅತ್ಯಂತ ವೇಗದ ಹೆಜ್ಜೆ ಇಡುತ್ತಿದೆ. 2013ರ ಒಂದು ಸಮೀಕ್ಷೆ ಹೇಳಿದಂತೆ, ಭಾರತವು ಇ- ಕಾಮರ್ಸ್ ವಿಭಾಗದಲ್ಲಿ ವೇಗವಾಗಿ ಸಾಗುತ್ತಿದೆಯಂತೆ. ಆನ್‌ಲೈನ್ ಶಾಪಿಂಗ್‌ನ ವಾರ್ಷಿಕ ವ್ಯವಹಾರ 2009ರಲ್ಲಿ 2.5 ಬಿಲಿಯನ್ ಡಾಲರ್, 2011ರಲ್ಲಿ 6.3 ಬಿಲಿಯನ್ ಡಾಲರ್, 2012 ರಲ್ಲಿ 8.5 ಬಿಲಿಯನ್ ಡಾಲರ್, 2013ರಲ್ಲಿ 16 ಬಿಲಿಯನ್ ಡಾಲರ್... ಹೀಗೆ ಆನ್‌ಲೈನ್ ಶಾಪಿಂಗ್‌ನ ಗ್ರಾಫ್ ಏರುತ್ತಲೇ ಇದೆ.
ಗ್ರಾಹಕರು ಹೆಚ್ಚಾಗಿ ಬಟ್ಟೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಗಾಗಿ ಆನ್‌ಲೈನ್ ಶಾಪಿಂಗ್ ಮಾಡುತ್ತಾರೆ. ಇದರ ಬೆಳವಣಿಗೆ ಹೀಗೇ ಮುಂದುವರಿದರೆ 2023ರ ವೇಳೆಗೆ 56 ಬಿಲಿಯನ್ ಡಾಲರ್ ವ್ಯವಹಾರ ನಡೆಯಬಹುದು ಮತ್ತು ಶೇ.6ರಷ್ಟು ರಿಟೇಲ್ ವ್ಯವಹಾರ ಆನ್‌ಲೈನ್‌ನಿಂದಲೇ ನಡೆಯಬಹುದು ಎಂದು ತಜ್ಞರು ಲೆಕ್ಕಿಸುತ್ತಾರೆ. ಶಾಪಿಂಗ್ ಮಾಲ್‌ಗಳು ಕೇವಲ ಸಿಟಿಗಳಿಗಷ್ಟೇ ಸಿಮಿತವಾಗಿತ್ತು. ಆದರೆ, ಈ ಆನ್‌ಲೈನ್ ವ್ಯವಸ್ಥೆಯಲ್ಲಿ ಪಶ್ಚಿಮ ಘಟ್ಟದ ತುತ್ತ ತುದಿ ಕೂತವನು ಕೂಡ ಫ್ಲಿಪ್‌ಕಾರ್ಟ್‌ನಿಂದ ಡಿವಿಡಿ ತರಿಸಿಕೊಳ್ಳಬಹುದು. ಯಾವುದಕ್ಕೂ ತಂತ್ರಜ್ಞಾನದ ಅರಿವಿದ್ದರೆ ಸಾಕು.
ನೀವು ಕೂಡ ನಿಮ್ಮ ಗಂಡ ಅಥವಾ ಬಾಯ್‌ಫ್ರೆಂಡ್ ಶಾಪಿಂಗ್ ಮಾಡಿಸದಿದ್ದರೆ ನೀವೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, ಬಿಲ್ ಕಟ್ಟುವ ಮೂಲಕ ಅವರ ಹುಬ್ಬೇರಿಸಬಹುದು. ತಡ ಯಾಕೆ. ಈಗಲೇ ಲಾಗಿನ್ ಆಗಿ ಶಾಪ್ ಮಾಡಿ.
ಆನ್‌ಲೈನ್ ಶಾಪಿಂಗ್ ಸೆಂಟರ್ಸ್
ಫ್ಲಿಪ್‌ಕಾರ್ಟ್: ಕರ್ನಾಟಕದಲ್ಲಿ ಜನಪ್ರಿಯವಾದ ವೆಬ್‌ಸೈಟ್. ಪುಸ್ತಕ, ಮೊಬೈಲ್, ಲ್ಯಾಪ್‌ಟಾಪ್, ವಾಚ್, ಟಿವಿ, ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಬಟ್ಟೆಗಳನ್ನು ಖರೀದಿಸಬಹುದು.
ಅಮೆಜಾನ್.ಇನ್: ವಿಶ್ವದ ಖ್ಯಾತ ಮತ್ತು ಹಳೆಯ ಆನ್‌ಲೈನ್ ಸೆಂಟರ್. ಪುಸ್ತಕ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಲಭ್ಯ.
ಮೈಂತ್ರಾ: ವಿಶ್ವದಲ್ಲಿ ಹೆಚ್ಚು ಜನ ಬಳಸುತ್ತಿರುವ ವೆಬ್‌ಸೈಟ್. ಮುಖ್ಯವಾಗಿ ಬಟ್ಟೆಗಳು ಮತ್ತು ಆಕ್ಸೆಸರೀಸ್‌ಗಳಿಗಾಗಿ ಹೆಸರಾಗಿದೆ.
ಈಬೇ: ಇದು ಸಹ ಬಟ್ಟೆಗಳಿಗಾಗಿಯೇ ಹೆಚ್ಚು ಉಪಯೋಗಿಸಲ್ಪಡುತ್ತದೆ.
ಯೆಭೀ: ಜ್ಯುವೆಲ್ಲರೀಸ್, ಶೂಸ್ ಮತ್ತು ಬ್ಯಾಗ್‌ಗಳ ಖರೀದಿಗೆ ಹೆಸರುವಾಸಿ.