ದೇಹ ಬೇರೆ ಅಲ್ಲ, ಬಟ್ಟೆ ಬೇರೆ ಅಲ್ಲ. ಅಷ್ಟು ಬೋಲ್ಡು. ಹೆಚ್ಚು ಟೈಟು. ಜಾಸ್ತಿ ಲುಕ್ಕು. ಇವೆಲ್ಲವನ್ನು ನಮ್ಮ ಸೌಂದರ್ಯಕ್ಕೆ ಬೋನಸ್ ಆಗಿ ನೀಡುವ ಡ್ರೆಸ್ಸು ಜೀನ್ಸ್.
ಹೆಸರಿನ ಬಾಲ ಹಿಡಿದರೆ ನಮ್ಮ ಪೂರ್ವಿಕರು ಇದನ್ನು ತೊಡುತ್ತಿದ್ದರೇನೋ, ಅವರ ಜೀನ್‌ನಿಂದಲೇ ನಮಗೀ 'ಟೈಟು ಬಟ್ಟೆ'ಯ ಸಂಸ್ಕೃತಿ ಬಳುವಳಿಯಾಗಿ ಬಂತೇನೋ ಎಂಬ ಅನುಮಾನ. ಆದರೆ, ಆ ಜೀನ್‌ಗೂ ಈ ಜೀನ್ಸ್‌ಗೂ ಅಕ್ಷರಗಳ ನಂಟು ಬಿಟ್ಟರೆ ಬೇರೇನೂ ಲಿಂಕ್ ಇಲ್ಲ. ನಾವೆಷ್ಟೇ ಸ್ಲಿಮ್ ಆಗುತ್ತಾ ಹೋದರೂ ಈ ದಪ್ಪ ಬಟ್ಟೆಯನ್ನು ಯಾವತ್ತೂ ದೂರ ತಳ್ಳುವುದಿಲ್ಲ.
ಲೇಡಿಸ್ಸು- ಜೆಂಟ್ಸು ಎಂದು ವಿಶ್ವ ಎರಡೆರಡು ಕೆಟಗೆರಿ ಮಾಡಿ ಗೆರೆ ಎಳೆದಾಗ ಸಮಾನತೆಯ ಗೀತೆ ಹಾಡಿದ ಬಟ್ಟೆ ಈ ಜೀನ್ಸ್. ಪುರುಷರು- ಮಹಿಳೆಯರು ಇಬ್ಬರಿಗೂ ಅಚ್ಚುಮೆಚ್ಚು. ವಿದೇಶದಿಂದ ರಫ್ತಾದ ವಸ್ತುವಾದರೂ ನಮ್ಮ ಪಾಲಿಗಿದು ಮಸ್ತು. ಹಾಗಾಗಿ, ಈ ಜೀನ್ಸ್ ಕಂಡುಹಿಡಿದವನ ತಲೆಗೆ ಡಾಲರ್ ಲೆಕ್ಕದಲ್ಲಿ ಬಹುಮಾನ ಕೊಟ್ಟರೆ ಸಾಲದು, ರುಪಾಯಿ ಲೆಕ್ಕದಲ್ಲೂ ಕೊಡಬೇಕು.
ಕಥೆ ಒಂದಾ.. ಎರಡಾ...!
ಜೀನ್ಸು ಬಟ್ಟೆ ಮೇಲಿರುವ ಕಥೆ ಒಂದೆರಡಲ್ಲ. 16ನೇ ಶತಮಾನದಲ್ಲಿ ಇಟಲಿಯಲ್ಲಿನ ಕುದುರೆ ಸವಾರರು ಮಾಮೂಲಿ ಬಟ್ಟೆಯಲ್ಲಿ ಪ್ರಯಾಣ ಹೊರಡುತ್ತಿದ್ದರಂತೆ. ಕುದುರೆಯ ಓಟದ ವೇಳೆ ಕುಕ್ಕಾಟ- ತಿಕ್ಕಾಟದಿಂದ ಪೃಷ್ಟದ ಭಾಗದ ಬಟ್ಟೆಯೆಲ್ಲ ಹರಿದು ಹೋಗುತ್ತಿದ್ದವಂತೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಕಂಡಿದ್ದೇ ಜೀನ್ಸ್. ಜರ್ಮನ್ನರು ಇನ್ನೊಂದು ಕಥೆ ಹೇಳುತ್ತಾರೆ, ಜೀವಾವಧಿ ಶಿಕ್ಷೆಗೊಳಗಾದ ಜೈಲರ್‌ಗಳಿಗೆ ಬಟ್ಟೆ ಪೂರೈಸಿ ಅಲ್ಲಿನ ಆಡಳಿತ ಸುಸ್ತು ಹೊಡೆಯುತ್ತಿತ್ತಂತೆ. ಕೊನೆಗೆ ಅವರಿಗೆಲ್ಲ ದಾರಿಯಾಗಿ ಕಂಡಿದ್ದೇ ಜೀನ್ಸ್ ಅಂತೆ.
ಲೋಕ ಒಪ್ಪಿದೆ...
ಇಂದು ನಾವೇನು ಕೈದಿಗಳಲ್ಲ; ಕುದುರೆ ಸವಾರರೂ ಅಲ್ಲ. ಆದರೆ, ಜೀನ್ಸ್ ಇಲ್ಲದೆ ಒಂದು ಕ್ಷಣ ಇರೋರಲ್ಲ. ಹೊರಗೆ ಕಾಲಿಡೋರಲ್ಲ. ಈ ಬಟ್ಟೆಯ ಬಗ್ಗೆ ಇತಿಹಾಸಕಾರರೂ ಏನೇ ಹೇಳಿದರೂ ನಮಗೇನೂ ಅವರ ಮೇಲೆ ಕೋಪವಿಲ್ಲ. ಏಕೆಂದರೆ, ಜಗತ್ತೇ ಈಗಿದನ್ನು 'ಫ್ಯಾಶನ್' ಎಂದು ಒಪ್ಪಿಕೊಂಡಿದೆ. ಹಾಗಾಗಿ, ನಾವೀ ಬಟ್ಟೆಯನ್ನು ಕಳಚೋದಿಲ್ಲ. ಯಾಕೆಂದರೆ, ಇದನ್ನು ಒಗೆಯದಿದ್ದರೂ ನಡೆಯುತ್ತೆ!
ಸೃಷ್ಟಿಕರ್ತರು ಯಾರೋ...
ಈ ಜೀನ್ಸ್‌ಗೆ ಜನ್ಮ ಕೊಟ್ಟವರು ಇಬ್ಬರು ಎಂದು ನಂಬುತ್ತದೆ ಜಗತ್ತು. ಒಬ್ಬ ಜಾಕೋಬ್ ಡೇವಿಸ್. ಇನ್ನೊಬ್ಬ ಲೇವಿ ಸ್ಟ್ರಾಸ್. ಈಗೇನು ಲೇವಿಸ್ ಬ್ರ್ಯಾಂಡ್‌ನಲ್ಲಿ ಜೀನ್ಸನ್ನು ಕೊಳ್ಳುತ್ತೀರೋ, ಅದು ಸ್ಟಾಸ್‌ನದ್ದೇ ಪ್ರಭಾವದಿಂದ ಹುಟ್ಟಿದ್ದು. ಇಂಥ ಜೀನ್ಸು ಭಾರತಕ್ಕೆ ಹೇಗೆ ಬಂತು? ಯಾರು ಮೊದಲು ಹಾಕ್ಕೊಂಡು ಪೋಸು ಕೊಟ್ಟರು? ಇದಕ್ಕೂ ಉತ್ತರ ಸಿದ್ಧ. ಅರವಿಂದ ಮಿಲ್ಸ್ ಎಂಬಾತ ನಮಗೆ ಜೀನ್ಸ್ ಪರಿಚಯಿಸಿದನಂತೆ. 90ರ ದಶಕದ ಸುಮಾರಿನಲ್ಲಿ ಲೀ ಮತ್ತು ಲೆವಿಸ್ ಬ್ರ್ಯಾಂಡ್‌ಗಳು ಭಾರತಕ್ಕೆ ಕಾಲಿಟ್ಟ ಮೇಲೆ ಇಲ್ಲೂ 'ಜೀನ್ಸ್ ಜಮಾನ' ಶುರು.
ಬಗೆ ಬಗೆಯ ಜೀನ್ಸ್
ಬೂಟ್‌ಕಟ್ ಜೀನ್ಸ್: ಈ ಜೀನ್ಸ್‌ಗಳು ಮೊಣಕಾಲಿನವರೆಗೆ ನಾರ್ಮಲ್ ಆಗಿದ್ದು, ಮೊಣಕಾಲಿನ ಕೆಳಗೆ ಬೆಲ್ ಆಕಾರದಲ್ಲಿರುತ್ತದೆ. ಇದಕ್ಕೆ ಬೆಲ್ ಬಾಟಮ್ ಎಂದೂ ಹೆಸರು. ಈ ಥರದ ಜೀನ್ಸು, ದಪ್ಪಗಿರುವವರು ಹಾಗೂ ತೆಳ್ಳಗಿರುವವರಿಗೂ ಪರ್ಫೆಕ್ಟ್ ಮ್ಯಾಚ್.
ಸ್ಕಿನ್ನೀ ಜೀನ್ಸ್: ಇದು ಮೈಗೆ ಅಂಟಿಕೊಂಡಂತಿರುವ ಜೀನ್ಸ್. ಕಾಲಿನ ಭಾಗದಲ್ಲಿ ಫಿಟ್ ಆಗಿರುತ್ತದೆ. ತೆಳ್ಳಗಿನ, ಎತ್ತರದ ಮೈಕಟ್ಟಿನವರಿಗೆ ಹೆಚ್ಚು ಒಪ್ಪುತ್ತದೆ.
ಪೆನ್ಸಿಲ್ ಕಟ್: ಇದು ಪೆನ್ಸಿಲ್ ಆಕಾರದಲ್ಲಿದ್ದು, ತುದಿಯಲ್ಲಿ ಅಗಲ ಕಡಿಮೆ. ಹೆಚ್ಚು ಬಳಕೆಯಲ್ಲಿರುವ ಜೀನ್ಸ್ ಇದು.
ಸ್ಟ್ರೆಚೇಬಲ್ ಜೀನ್ಸ್: ಇದು ಮಾಮೂಲಿ ಜೀನ್ಸ್‌ಗಿಂತ ವಿಭಿನ್ನ. ಸ್ಟ್ರೆಚ್ಚೇಬಲ್ ಬಟ್ಟೆಯಿಂದ ತಯಾರಿಸಿದ್ದಾಗಿದ್ದರಿಂದ ಎಲ್ಲ ಥರದ ಮೈಕಟ್ಟಿನವರಿಗೂ ಓಕೆ.
ಜಗ್ಗಿನ್ಸ್- ಜೀನ್ಸ್ ಥರದ ಶೇಡ್ ಹೊಂದಿರುವ ಇದು, ಲೆಗ್ಗಿನ್ಸ್ ಬಟ್ಟೆಯಿಂದ ತಯಾರಾಗಿದ್ದಾಗಿರುತ್ತದೆ. ಇದು ಈಗಿನ ಹೊಸ ಟ್ರೆಂಡ್.