ಮನುಷ್ಯ ನಾಗರಿಕನಾಗಿದ್ದರ ಮೊದಲ ಸೂಚನೆ ಉಡುಪು. ಮೈಮೇಲೆ ಬಟ್ಟೆ ತೊಡುವ ಪರಿಪಾಠ ನಾಗರಿಕತೆಯ ಲಕ್ಷಣವಾಗಿ ಬೆಳೆಯಿತು. ಆಗ ಬಟ್ಟೆ ಎನ್ನುವುದು ಕೇವಲ ಮಾನ ಮುಚ್ಚುವ ಒಂದು ಸಾಧನವಾಗಿತ್ತು. ಬರಬರುತ್ತಾ ಬಟ್ಟೆಯ ಮೇಲಿನ ಮಾನವ ಪ್ರಯೋಗ ಹೆಚ್ಚಾಗಿ ಮಹಿಳೆಯರಿಗೆ ಸೀರೆ, ಪುರುಷರಿಗೆ ಪಂಚೆ ಹೀಗೆ ವಿಂಗಡಣೆಯಾಯಿತು. ಶಿಕ್ಷಣ ತಂತ್ರಜ್ಞಾನ ಬೆಳೆದಂತೆ ಬಟ್ಟೆ ಎಂಬುದು ಆಧುನಿಕತೆಯ ಸೂಚಕವಾಯಿತು.
ಬಟ್ಟೆಗಳ ಮೇಲೆ ವಿಪರೀತ ಎಕ್ಸ್‌ಪರಿಮೆಂಟ್ ನಡೆಯಿತು. ಅಲ್ಲಿಂದ ಶುರುವಾಯ್ತು ನೋಡಿ ಲಂಗ, ಚೋಲಿ, ಚೂಡಿದಾರ್, ಮ್ಯಾಕ್ಸಿ, ಮಿಡಿ, ಗೌನ್, ಶಾರ್ಟ್ಸ್... ಹೀಗೆ ಹೆಳುತ್ತಾ ಹೋದರೆ ಮುಗಿಯದಷ್ಟು ವಿಧಗಳು.
ವಿಶ್ವಮಟ್ಟದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ವಸ್ತ್ರಾಲಂಕಾರಗಳ ಬಗ್ಗೆ ಅನೇಕ ಪ್ರಯೋಗಗಳು ನಡೆದಿವೆ. ಹೊಸ ಹೊಸ ರೀತಿಯ ಉಡುಪುಗಳು ಕ್ರಾಂತಿ ಮಾಡಿವೆ. ಕಾಲಕಾಲಕ್ಕೆ ಬಟ್ಟೆಯ ಟ್ರೆಂಡ್‌ಗಳು ಬದಲಾಗಿವೆ. ಬೇರೆಲ್ಲಿಂದಲೋ ಬಂದ ಹೊಸ ಶೈಲಿಗಳು ನಮ್ಮವೇ ಆಗಿ ನಮ್ಮಲ್ಲಿ ಸೇರಿ ಹೋಗಿವೆ.
ಪುರಾಣಗಳ ಕಾಲದಿಂದಲೂ ಭಾರತದ ನಾರಿಯರ ಮುಖ್ಯ ಉಡುಪು ಸೀರೆ. ಈ ಬಟ್ಟೆಗೆ ಸಭ್ಯ ಉಡುಪು ಅಂತಾನು ಕರೀತಾರೆ, ಜೊತೆಗೆ ಸೆಕ್ಸಿಯೆಸ್ಟ್ ಕಾಸ್ಟ್ಯೂಮ್ ಅಂತಾನೂ ಹೇಳ್ತಾರೆ. ಎಲ್ಲ ರೀತಿಯಲ್ಲೂ ಮನ್ನಣೆ ಪಡೆದಿದೆ ನಮ್ಮ ಭಾರತೀಯ ಸಾಂಪ್ರದಾಯಿಕ ಉಡುಗೆ. ಸೀರೆಯ ನಂತರ ಚೂಡಿದಾರ್, ಅಲ್ಲಿಂದ ಜೀನ್ಸ್, ಮಿಡಿ, ಮಿನಿಗಳಿಗೆ ವರ್ಗಾವಣೆ ಹೇಗೆ ಆಯ್ತು ಅನ್ನೋದು ಸ್ವಾರಸ್ಯಕರ.
50ರ ದಶಕದಲ್ಲಿ ಬದಲಾವಣೆ ಮತ್ತು ಆಧುನಿಕತೆಯ ಗಾಳಿ ಬೀಸಿದ್ದೇ ಇದಕ್ಕೆ ಕಾರಣ. ಸ್ವತಂತ್ರಪೂರ್ವ ಭಾರತದಲ್ಲಿ ಮಹಿಳೆಯರಿಗೆ ಸೀರೆ ಮತ್ತು ಲಂಗ ಚೋಲಿಗಳೇ ಮುಖ್ಯ ಉಡುಪು. ಇಲ್ಲಿನ ಜನರಿಗೆ ಬ್ರಿಟಿಷ್ ಮಹಿಳೆಯರ ಉಡುಪುಗಳು ಸ್ವಲ್ಪ ಮಟ್ಟಿಗೆ ವಿಭಿನ್ನತೆಯ ರುಚಿ ತೋರಿಸಿದ್ದವು. ಆದರೂ ಸಂಪ್ರದಾಯದ ನೆರಳು ಮಾತ್ರ ಬೆನ್ನು ಬಿಟ್ಟಿದ್ದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸುಮಾರು 1948ರಲ್ಲಿ ಜಸ್ಲೀನ್ ದಮೀಜಾ ಎನ್ನುವ ವಸ್ತ್ರ ವಿನ್ಯಾಸಕಿಯಿಂದ ಚೂಡಿದಾರ್‌ನ ಪರಿಚಯವಾಯಿತು. 1940ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಇವರು ಸೀರೆಯ ಬದಲಾಗಿ ಹೊಸದನ್ನು ಸೃಷ್ಟಿಸುವ ಪ್ರಯತ್ನ ಮಾಡಿ ವಿವಿಧ ಬಣ್ಣಗಳ ಬಟ್ಟೆಯಿಂದ ಸಲ್ವಾರ್ ತಯಾರಿಸಿದರು. ಆರಂಭದಲ್ಲಿ ಇದಕ್ಕೆ ವಿರೋಧವೂ ವ್ಯಕ್ತವಾಯ್ತು, ಇದನ್ನು ಹಾಕಲು ಮಹಿಳೆಯರೂ ಹಿಂದು ಮುಂದು ನೋಡಿದರು. ಆದರೆ ನಂತರ ಆರಂಭವಾಗಿದ್ದು ವಸ್ತ್ರವಿನ್ಯಾಸಗಳ ಪರ್ವ ಕಾಲ.
ಇದೆಲ್ಲದಕ್ಕೂ ಮುನ್ನವೇ, 12ನೇ ಶತಮಾನದಲ್ಲೇ ಈ ರೀತಿಯ ಉಡುಪುಗಳು ಚಾಲ್ತಿಯಲ್ಲಿದ್ದವು. ಮೊಘಲ್ ಸಾಮ್ರಾಟರ ಬಟ್ಟೆಗಳ ವಿನ್ಯಾಸ ಸಲ್ವಾರ್‌ನಂತೆಯೇ ಇದೆ. ಇದನ್ನು ರಾಜರುಗಳಿಗಾಗಿ ವಿಶೇಷವಾಗಿ ಚಿನ್ನದ ಜರಿಗಳಿಂದ ತಯಾರಿಸಲಾಗುತ್ತಿತ್ತಂತೆ. ಬಹುಶಃ ಇತಿಹಾಸ ಆಧಾರಿತ ಸಿನಿಮಾ ಮತ್ತು ಕೆಲ ಹಳೆಯ ಪೇಂಟಿಂಗ್‌ಗಳಲ್ಲಿ ರಾಜರುಗಳಾದ ಸಲೀಂ ಮತ್ತು ಅಕ್ಬರ್‌ರ ಉಡುಪುಗಳನ್ನು ನೋಡಿದರೆ ನಮ್ಮ ಸಲ್ವಾರ್‌ನ ಹಳೆಯ ರೂಪ ಸಿಗುತ್ತದೆ. ಅದನ್ನೇ ಸ್ವಲ್ಪ ಬದಲಾಯಿಸಿ ಇಂದು ಹುಡುಗಿಯರು ಬಳಸುತ್ತಿದ್ದಾರಷ್ಟೆ ಅನಿಸುತ್ತದೆ. ಅದೇನೇ ಇರಲಿ, ಒಟ್ಟಿನಲ್ಲಿ 50ರ ದಶಕಗಳಲ್ಲಿ ಆರಂಭವಾದ ಸಲ್ವಾರ್ ಈಗ ಭಾರತೀಯ ಸಂಸ್ಕೃತಿಯ ಎರಡನೇ ಉಡುಪು ಎಂಬ ಸ್ಥಾನ ಪಡೆಯುವಷ್ಟು ಹೆಸರುವಾಸಿಯಾಗಿದೆ.
ನಂತರ ಆರಂಭವಾದದ್ದು ಜೀನ್ಸ್, ಮಿಡಿ, ಮಿನಿ ಮತ್ತು ಮ್ಯಾಕ್ಸಿಗಳ ಯುಗ. ಸೀರೆಯಿಂದ ಸಲ್ವಾರ್‌ಗೆ ಕಂಫರ್ಟ್ ದೃಷ್ಟಿಯಿಂದ ವರ್ಗವಾದ ಮಹಿಳೆಯರು ಫ್ಯಾಶನ್‌ನ ಹೆಸರಿನಲ್ಲಿ ಜೀನ್ಸ್ ಪ್ಯಾಂಟನ್ನು ಅಪ್ಪಿಕೊಂಡರು. 80ರ ದಶಕಗಳಲ್ಲಿನ ಸಿನಿಮಾಗಳಲ್ಲಿಯೂ ಜೀನ್ಸ್ ಮತ್ತು ಮಿನಿಗಳು ಮಿಂಚಿದ್ದವು. ಅಲ್ಲಿಂದ ಸಾಮಾನ್ಯರ ಬದುಕಿಗೂ ಅವುಗಳ ಎಂಟ್ರಿಯಾಗಿತ್ತು. ಮೊದಮೊದಲು ಈ ಬದಲಾವಣೆಗೆ ಒಗ್ಗಿಕೊಳ್ಳಲು ಹಿಂಜರಿದರೂ ಈಗ ಈ ಉಡುಪುಗಳೆಲ್ಲ ಸರ್ವೇಸಾಮಾನ್ಯವಾಗಿ ಹೋಗಿವೆ.
ಈ ಎಲ್ಲ ಬದಲಾವಣೆಗಳೂ ಫ್ಯಾಶನ್ ಮತ್ತು ಕಂಫರ್ಟ್ ಅನ್ನುವ ಎರಡು ಮುಖ್ಯ ಕಾರಣಗಳನ್ನಿರಿಸಿಕೊಂಡಿವೆ. ಹೊಸ ಉಡುಪುಗಳು ಅನೇಕ ಸಮಯದಲ್ಲಿ ಹಿತಕಾರಿ ಎನಿಸುತ್ತವೆ. ಎಲ್ಲಾ ಸಮಯದಲ್ಲೂ ಸೀರೆ ಮತ್ತು ಸಲ್ವಾರ್‌ಗಳನ್ನು ಹ್ಯಾಂಡಲ್ ಮಾಡಲು ಆಗುವುದಿಲ್ಲ. ಮುಖ್ಯವಾಗಿ ಪ್ರವಾಸಕ್ಕೆ ಹೋದಾಗ, ಟ್ರೆಕ್ಕಿಂಗ್ ಸಮಯದಲ್ಲಿ ಸೀರೆಗೆ ಜಾಗವೇ ಇಲ್ಲ. ಹಾಗಾಗಿ ಹೊಸ ಉಡುಪುಗಳನ್ನು ನಾವು ಸ್ವಾಗತಿಸಲೇಬೇಕಾಗಿದೆ. ಜೊತೆಗೆ ಫ್ಯಾಶನಬಲ್ ಆಗಿ ಕಾಣಿಸಿಕೊಳ್ಳಬೇಕು ಅನ್ನುವ ಕಾರಣವೂ ಹೌದು. ನಾನೂ ಮಾಡರ್ನ್, ನನಗೂ ಹೊಸ ರೀತಿ ಬದುಕಲು ಬರುತ್ತೆ ಅಂತ ತೋರಿಸಿಕೊಳ್ಳುವ ಆಸೆಗಳೂ ಇದಕ್ಕೆ ಕಾರಣ.
ಈವತ್ತು ಹಳೆಯ ಲಂಗಗಳು ಲೆಹಂಗಾಗಳಾಗಿವೆ. ಸೀರೆ ಉಡೋದು ಕಷ್ಟ ಉಡಕ್ಕೇ ಬರಲ್ಲ ಅನ್ನುವವರಿಗೆ ರೆಡಿಮೇಡ್ ಸೀರೆಯಿದೆ. ಹಳೆಯ ಪುಷ್‌ಬ್ಯಾಕ್ ಪ್ಯಾಂಟ್‌ಗಳು ಲೆಗ್ಗಿನ್ಸ್‌ಗಳಾಗಿವೆ. ಜೀನ್ಸ್‌ನಲ್ಲೇ ಪ್ರಯೋಗಗಳು ನಡೆದು ಜೆಗ್ಗಿಂಗ್ಸ್‌ಗಳಾಗಿವೆ. ಹೀಗೆ ಬಟ್ಟೆಗಳು ಹೆಸರು ಮತ್ತು ರೂಪವನ್ನು ಬದಲಿಸಿಕೊಳ್ಳುತ್ತಾ ಬರುತ್ತಿವೆ. ಆಧುನಿಕ ಉಡುಪುಗಳು ಕೆಲವು ಹಳೆಯ ಸ್ಟೈಲನ್ನು ಅಳವಡಿಸಿಕೊಳ್ಳುತ್ತಿವೆ.
ಭಾರತದಲ್ಲಿ ಬಟ್ಟೆಗಳ ಸಂಕ್ರಮಣ ಇನ್ನೂ ಮುಗಿದಿಲ್ಲ. ಪ್ರತೀದಿನ ಒಂದಲ್ಲಾ ಒಂದು ಟ್ರೆಂಡ್ ಮಾರುಕಟ್ಟೆಗೆ ಬಂದಿರುತ್ತೆ. ಹೊಸ ರೀತಿಯ ಉಡುಪುಗಳ ಆವಿಷ್ಕಾರದಲ್ಲಿ ನಮ್ಮ ವಸ್ತ್ರವಿನ್ಯಾಸಕರು ಬ್ಯುಸಿಯಾಗಿದ್ದಾರೆ. ಜೀನ್ಸ್‌ನಲ್ಲಿ ಬೇರೆ ಬೇರೆ ವಿಧಗಳು ಬರುತ್ತಿರುವುದು ಸಧ್ಯದ ಅಪ್‌ಡೇಟ್. ಮುಂದೆ ಯಾವ ರೀತಿಯ ಉಡುಗೆಗಳು ಬರುತ್ತೋ ಗೊತ್ತಿಲ್ಲ. ಆದರೆ ಎಲ್ಲವನ್ನೂ ಸ್ವಾಗತಿಸಲು ತಯಾರಾಗಿರಿ. <
ವ್ಯಕ್ತಿತ್ವ ಹೇಳುವುದಿಲ್ಲ
ವ್ಯಕ್ತಿತ್ವವನ್ನು ಪೂರ್ಣವಾಗಿ ಬಟ್ಟೆಯಿಂದಲೇ ಅಳೆಯುವುದು ಸಾಧ್ಯವಿಲ್ಲ. ಉಡುಪು ವ್ಯಕ್ತಿತ್ವದ ಒಂದು ಭಾಗ ಅಷ್ಟೇ. ಜೊತೆಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಒಬ್ಬೊಬ್ಬರ ಆಯ್ಕೆ ಒಂದೊಂದು ರೀತಿ ಇರುತ್ತೆ. ಉದಾಹರಣೆಗೆ ಒಂದೇ ರೀತಿಯ ಬಟ್ಟೆಯನ್ನು ಇಬ್ಬರಿಗೆ ಕೊಟ್ಟರೆ ಇಬ್ಬರೂ ಬೇರೆ ಬೇರೆ ರೀತಿ ಉಡುತ್ತಾರೆ. ಹಾಗೆಯೇ ಕೆಲವರು ನಾನು ಬುದ್ಧಿವಂತಳಂತೆ ಕಾಣುತ್ತೇನೆ ಅಂದುಕೊಂಡು ಸುಮ್ಮನೆ ಕನ್ನಡಕ ಧರಿಸುತ್ತಾರೆ. ಈ ರೀತಿ ವ್ಯಕ್ತಿತ್ವಗಳನ್ನು ದಿರಿಸು ನಿರ್ಧರಿಸುವುದಿಲ್ಲ. ಅದು ವೈಜ್ಞಾನಿಕವಾಗಿ ಸಹ ನಿರೂಪಿತವಾಗಿಲ್ಲ. ದಿರಿಸಿನಿಂದ ಕೇವಲ ಕೆಲವು ಮನೋಭಾವಗಳನ್ನು ತಿಳಿದುಕೊಳ್ಳಬಹುದು ಅಷ್ಟೇ.
- ನವ್ಯಶ್ರೀ, ಉಪನ್ಯಾಸಕಿ, ಸೈಕಾಲಜಿ ವಿಭಾಗ , ಎಸ್‌ಡಿಎಂ ಕಾಲೇಜು, ಉಜಿರೆ
ಎರಡು ರೀತಿಯ ವ್ಯಕ್ತಿತ್ವ
ಮುಖ್ಯವಾಗಿ ಈ ಸೌಂದರ್ಯ ಪ್ರಜ್ಞೆ ಮತ್ತು ಬಟ್ಟೆಯ ವಿಷಯಕ್ಕೆ ಕುರಿತಂತೆ ಎರಡು ರೀತಿಯ ವ್ಯಕ್ತಿತ್ವಗಳಿವೆ. ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದೆಂದರೆ ಹಿಸ್ಟ್ರಿಯಾನಿಕ್ ಪರ್ಸನಾಲಿಟಿ. ಈ ವ್ಯಕ್ತಿತ್ವ ಇರುವ ವ್ಯಕ್ತಿಗಳು ಎಲ್ಲರೂ ತನ್ನನ್ನು ಗುರುತಿಸಬೇಕು ಎಂದು ಆಶಿಸುತ್ತಾರೆ. ಯಾರೂ ಗಮನಿಸುತ್ತಿಲ್ಲ ಅನಿಸಿದರೆ ತಮ್ಮಷ್ಟಕ್ಕೇ ಕುಸಿಯುತ್ತಾರೆ. ಈ ರೀತಿಯ ವ್ಯಕ್ತಿಗಳು ಎಮೋಷನಲೀ ತುಂಬಾ ಬಲಹೀನರಾಗಿರುತ್ತಾರೆ. ಆದ್ದರಿಂದ ಯಾವಾಗಲೂ ಎಲ್ಲರನ್ನೂ ಆಕರ್ಷಿಸಲು ವಿಭಿನ್ನ ರೀತಿಯ ಉಡುಪುಗಳನ್ನು ಆಯ್ದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಸ್ವಂತ ಇಷ್ಟಗಳು ಬೆಳಕಿಗೆ ಬರುವುದಿಲ್ಲ. ಯಾವಾಗಲೂ ಹೆಚ್ಚು ಗಾಢವಾದ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಹೆಚ್ಚು ಮೇಕಪ್ ಮಾಡಿಕೊಳ್ಳುತ್ತಾರೆ. ಜೊತೆಗೆ ತುಂಬಾ ಮಾತಾಡುತ್ತಾರೆ. ಈ ರೀತಿಯ ಹಿಸ್ಟ್ರಿಯಾನಿಕ್ ವ್ಯಕ್ತಿಗಳನ್ನು ನಾವು ಸುಲಭದಲ್ಲಿ ಗುರುತಿಸಬಹುದು. ಬಾರ್ಡರ್ ಲೈನ್ ಪರ್ಸನಾಲಿಟಿ ಎನ್ನುವುದು ಇನ್ನೊಂದು ರೀತಿಯ ವ್ಯಕ್ತಿತ್ವ. ಇವರಿಗೆ ತಮ್ಮ ಸೌಂದರ್ಯದ ಬಗ್ಗೆ ಕೀಳರಿಮೆ ಇರುತ್ತದೆ. ನನ್ನ ದೇಹದಲ್ಲಿ ಏನೋ ಸರಿಯಿಲ್ಲ, ನಾನು ಜಾಸ್ತಿ ದಪ್ಪ, ನನ್ನ ಬಣ್ಣ ಕಪ್ಪು, ಮೂಗು ಸರಿಯಿಲ್ಲ ಹೀಗೆ ಯಾವುದೋ ಸಮಸ್ಯೆಯ ಬಗ್ಗೆ ಯೋಚಿಸುತ್ತಿರುತ್ತಾರೆ. ಅದನ್ನು ಸರಿಪಡಿಸಿಕೊಳ್ಳುವ ಭರದಲ್ಲಿ ಒಳ್ಳೆಯ ವಿಷಯಗಳನ್ನು ಮರೆತು ಹೋಗಿರುತ್ತಾರೆ.
- ಕೆ.ಎಸ್.ಶುಭ್ರತಾ, ಸೈಕಿಯಾಟ್ರಿಸ್ಟ್, ಶಿವಮೊಗ್ಗ