ಎಲ್ಲದರಿಂದ ಓಡಿ ಹೋಗಬಯಸಿದ್ದೆ. ಬೆಳಗೆದ್ದು ರೆಡಿಯಾಗಿ ಆಫೀಸ್‌ಗೆ ಹೊರಡು, ಸಂಜೆವರೆಗೂ ಕೀಪ್ಯಾಡ್ ಕುಟ್ಟು, ಮತ್ತೆ ಟ್ರಾಫಿಕ್‌ನಲ್ಲಿ ಒದ್ದಾಡಿ ಪಿಜಿ ಸೇರು, ಮಲಗು, ವೀಕೆಂಡ್‌ನಲ್ಲಿ ಫ್ರೆಂಡ್ಸ್ ಮೀಟ್ ಮಾಡು...ಇಷ್ಟೆನಾ ಬದುಕು? ಇದೂ ಒಂದು ಬದುಕಾ? ಥೂ ಏನ್ ಮಾಡ್ತಿದೀನಿ? ಹಿಂಗೇ ವಯಸ್ ಆಗ್ಬಿಡತ್ತಾ?- ಪ್ರಶ್ನೆಗಳು ಪ್ರತಿದಿನ ಒಳಗನ್ನು ಕೊರೀತಿದ್ವು. ಇದಕ್ಕೆಲ್ಲ ಸರಿಯಾದ ಉತ್ತರವಲ್ಲದಿದ್ದರೂ ಉತ್ತರವೆಂದು ಬಗೆದೇ ಅಂದು ನಾನು ಉತ್ತರಖಂಡದ ಕಡೆ ಹೊರಟಿದ್ದು, ರೂಪ್‌ಕುಂಡ್ ಚಾರಣದ ನೆಪದಲ್ಲಿ.
ದೆಹಲಿಯ ಭೂಸ್ಪರ್ಶವಾಗುತ್ತಿದ್ದಂತೇ ಮೈ ಬೆವರಿ ಅಂಟಂಟಾಗಿ ಬಿಸಿಲ ಝಳಕ್ಕೆ ಇನ್ನಿಲ್ಲದಂತೆ ಶಾಪ ಹಾಕಿದ್ದೆ. ಅದೇ ಸಿಟ್ಟಿಗೋ ಏನೋ ನಂತರದ ದಿನಗಳಲ್ಲಿ ಸೂರ್ಯ ಗೋಗರೆದರೂ ಬಾರದೆ ಮೂಳೆಗಳಾಳಕ್ಕೂ ನಡುಕ ಹುಟ್ಟಿಸಿಬಿಟ್ಟ.
42 ತಾಪಮಾನದಿಂದ ಹೊರಟು ಉತ್ತರಾಖಂಡದ ನೆಲದಲ್ಲಿ 1ಕ್ಕಿಳಿದ ಉಷ್ಣಾಂಶದ ಅತಿರೇಖಗಳ ನಡುವೆ ನಮ್ಮ ನಡಿಗೆ ಶುರುವಾಗಿತ್ತು. ಈ ನಡಿಗೆಗೆ ಪೂರಕಾಭ್ಯಾಸವಾಗಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಎದ್ದು ವಾಕಿಂಗ್, ಜಾಗಿಂಗ್ ಎಂದು ವೇಳಾಪಟ್ಟಿ ಹಾಕಿಕೊಂಡಿದ್ದೆ. ಏಳಲಾಗದೆ ಎದ್ದು ನಡೆದದ್ದು ನಾಲ್ಕೇ ದಿನ. ಹೋದ ಮೇಲೆನೋಡಿಕೊಂಡ ಎಂಬ ಹುಂಬ ಧೈರ್ಯ ನನ್ನೊಳಗಿನ ಉದಾಸೀನಕ್ಕೆ ಇಂಬು ನೀಡಿತ್ತು. ಆದರೆ ಯಾವುದೂ ಅಂದುಕೊಂಡಷ್ಟು ಸುಲಭವಿರಲಿಲ್ಲ.
8200 ಅಡಿ ಎತ್ತರದಲ್ಲಿತ್ತು ಅಲ್ಮೋರಾ ಜಿಲ್ಲೆಯಲ್ಲಿರುವ ಲೋಹಾಜಂಗ್‌ನ ಬೇಸ್‌ಕ್ಯಾಂಪ್. ಕಾಟ್‌ಗೋಡಂನ ರೈಲ್ವೈ ನಿಲ್ದಾಣದಿಂದ ಬೇಸ್‌ಕ್ಯಾಂಪ್‌ವರೆಗಿನ ಒಂದಿಡೀ ದಿನದ ಪ್ರಯಾಣದಲ್ಲಿ ಒಂದೇ ಒಂದು ಸಾರ್ವಜನಿಕ ಸಾರಿಗೆಯನ್ನು ನೋಡಿದ್ದು! ಊಟಿ, ಚಿಕ್ಕಮಗಳೂರಿನ ಘಾಟಿಯಂತಾ ರೋಡಿನಲ್ಲಿ ಸುತ್ತೀ ಸುತ್ತೀ ಹತ್ತುವಾಗ ಹೊಟ್ಟೆಯಲ್ಲಿದ್ದುದೆಲ್ಲ ಬಾಯಿಗೆ ಬಂದಿತ್ತು. ಪೈನ್ ಮರಗಳೊಂದೆಡೆಯಾದರೆ, ಸಣ್ಣಗೆ ನೀರು ಹರಿವ ಕಲ್ಲು ಕಣಿವೆ ಪ್ರಪಾತ ಇನ್ನೊಂದೆಡೆ.
ಅಲ್ಲಿಂದ 15800 ಅಡಿ ಎತ್ತರದ ರೂಪ್‌ಕುಂಡ್ ತಲುಪುವುದು ನಮ್ಮ ಗುರಿಯಾಗಿತ್ತು. ದೇಶದೆಲ್ಲ ರಾಜ್ಯಗಳಿಂದ ಬಂದ ಎಲ್ಲ ಸೇರಿ ಒಟ್ಟು 32 ಮಂದಿ ನಾವು. ಇಂಡಿಯಾಹೈಕ್ಸ್‌ನ ಗೈಡ್‌ಗಳು ಹೈ ಆಲ್ಟಿಟ್ಯೂಡ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಉಸಿರಾಟಕ್ಕೆ ತೊಂದರೆಯಾಗಬಹುದೆಂದು ಡೈಮಾಕ್ಸ್ ಮಾತ್ರೆ ತೆಗೆದುಕೊಳ್ಳಲು ಹೇಳಿದ್ದರು. ಉಸಿರಾಟವೇನೋ ಸರಿಯಾಗಿತ್ತು. ಆದರೆ ಮಾತ್ರೆಯ ಸೈಡ್ ಎಫೆಕ್ಟ್ಸ್‌ಗೆ ಹೊಟ್ಟೆ ಮಾತ್ರ ಗುಡುಗುಡನೆ ಓಡಲು ಶುರು ಮಾಡಿ ನಮ್ಮನ್ನೂ ಪದೇ ಪದೆ ಓಡಿಸುತ್ತಿತ್ತು.
ಪ್ರತಿದಿನ ಒಂದು ಕ್ಯಾಂಪ್‌ನಿಂದ ಮತ್ತೊಂದಕ್ಕೆ ಆರು, ಒಂಬತ್ತರಿಂದ ಹಿಡಿದು ಹದಿಮೂರು ಕಿಮೀ ತನಕವೂ ಕಾಲೆಳೆಯುತ್ತಿದ್ದೆವು. ಪರ್ವತಗಳ ಬುಡದಲ್ಲಿದ್ದ ನೀಲ್‌ಗಂಗಾ ನದಿಯಿಂದ ಹಿಡಿದು ಮಂಜಿನ ಮುಸುಕಿನ ನೆತ್ತಿಯವರೆಗೂ ಬೈತಲೆಯಂತಾ ದಾರಿಯಲ್ಲಿ ನಡಿಗೆ. ಊಟವೇನೋ ಚೆನ್ನಾಗೇ ಇತ್ತು. ಆದರೆ ದಕ್ಷಿಣ ಭಾರತದ ನನ್ನ ಮೂಗಿಗೆ ದಾಲ್ ವಾಸನೆಯಾಗಿಯೂ, ನಾಲಿಗೆಗೆ ಆಲೂ ಪರಾಟ ಅಲರ್ಜಿಯಾಗಿಯೂ ಕಾಡಿದವು. ಹೀಗಾಗಿ ಹೊತ್ತು ಹೋಗಿದ್ದ ಡ್ರೈಫ್ರೂಟ್ಸ್‌ಗಳು, ಬಿಸ್ಕೆಟ್ ಪ್ಯಾಕ್‌ಗಳು ಜೀವರಕ್ಷಕರಂತೆ ಕೆಲಸ ಮಾಡಿದವು.
ಅಲ್ಲಿನ ಹವಾಮಾನವೋ ಊಸರವಳ್ಳಿಯೇ ಸರಿ, ನಿಮಿಷಕ್ಕೊಂದು ಅವತಾರವೆತ್ತಿ ರೈನ್‌ಕೋಟ್ ಹಾಕುತ್ತಿದ್ದಂತೆ ಬಿಸಿಲ ಕೋನ ಬಿಟ್ಟು, ತೆಗೆಯುತ್ತಿದ್ದಂತೆ ಸೂಚನೆ ಇಲ್ಲದೆ ಮಳೆಹನಿಗಳನ್ನುದುರಿಸಿ ಮಜಾ ನೋಡುತ್ತಿತ್ತು.
ಉತ್ತರಖಂಡ
ಅದು ಭಾರತದ ಕುತ್ತಿಗೆಯಿಂದ ಭುಜಕ್ಕಿಳಿವ ಭಾಗ. ಭಾರತಾಂಬೆಯ ಕಂಠ, ನೀಲಕಂಠನ ತವರು. ಕಳೆದ ವರ್ಷ ಪ್ರವಾಹದ ರೂಪದಲ್ಲಿ ಶಿವತಾಂಡವಕ್ಕೆ ಸಿಲುಕಿ ರುದ್ರಭೂಮಿಯಾಗಿ ದೇಶವನ್ನೇ ನಡುಗಿಸಿದ್ದ ಕೇದಾರನಾಥ, ಬದರಿನಾಥಗಳ ಹೊತ್ತಿರುವ ನೆಲ. ಹರಿದ್ವಾರ್, ಉತ್ತರಕಾಶಿ, ರುದ್ರಪ್ರಯಾಗಗಳ ಹೊಂದಿದ ದೇವಭೂಮಿ.
ದೂರದಿಂದ ಕಾಣುವ ಹಿಮಾಲಯದ ಎತ್ತರೆತ್ತರದ ಪರ್ವತಗಳು ಚಳಿಗೆ ಹಸಿರು ಹಾಸು ಹಾಗೂ ಬಿಳಿ ಮಂಜಿನ ಮುಸುಕು ಹೊದ್ದು ಮಲಗಿರುವ, ಹತ್ತಿದಂತೆಲ್ಲಾ ಝೂಮ್ ಆಗುವ ದೈತ್ಯ ಪರ್ವತಗಳು. ಒಂದನ್ನು ಹತ್ತಿ ನಿಂತರೆ ಸವಾಲೆಸೆಯುವ ಅದಕ್ಕಿಂತಾ ಎತ್ತರದ ಹತ್ತು ಪರ್ವತಗಳ ಸಾಲು ಸುತ್ತಲೂ. ಶೇ.93 ಭಾಗ ಪರ್ವತಗಳಿಂದ, ಶೇ.65 ಭಾಗ ಹಸಿರು ಕಾಡಿನಿಂದ ಕೂಡಿದ ರಾಜ್ಯವಿದು. ಒಂದೊಂದು ಪರ್ವತದ ಹಾದಿಯಲ್ಲೂ ಹುದುಗಿ ಕುಳಿತಿರುವ ಶಿವಪಾರ್ವತಿಯರ ಸರಸ, ವಿರಸ, ಪ್ರೀತಿ ಪುರಾಣದ ಕಂತೆ ಕಂತೆ ಕತೆಗಳು.. ಈ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.80 ಭಾಗವಿರುವ ಹಿಂದೂಗಳ ಮಂತ್ರವೂ ಭಂ ಭಂ ಭೋಲೇನಾಥ್.
ಶಿವನಿದ್ದ ಮೇಲೆ ಗಂಗೆ ದೂರ ಸರಿದಾಳು ಹೇಗೆ? ಇಡಿ ದೇಶದ ಪಾಪಗಳನ್ನೆಲ್ಲಾ ತಾನು ಹೊತ್ತು, ಜನರ ಮನಸ್ಸನ್ನು ಹಗುರಗೊಳಿಸುವ ತ್ಯಾಗಮೂರ್ತಿ ಗಂಗೆ, ಪುಟ್ಟ ಕೃಷ್ಣನ ಪಾದಸ್ಪರ್ಶದಿಂದ ಪಾವನಳಾಗಿರುವ ಯಮುನೆಯರ ತವರು ರಾಜ್ಯ ಉತ್ತರಖಂಡ. ಸಂಸ್ಕೃತವನ್ನೂ ಆಡಳಿತ ಭಾಷೆಯಾಗಿ ಹೊಂದಿರುವ ನೆಲಕ್ಕೆ ಹೊಂದದ ಹೆಸರಾದರೂ ಡೆಹ್ರಾಡೂನ್ ಇಲ್ಲಿನ ರಾಜಧಾನಿ. ಹಿಂದಿ ಬಿಟ್ಟರೆ ಹತ್ತಾರು ಗುಡ್ಡಗಾಡು ಭಾಷೆಗಳು ಇಲ್ಲಿ ಮೊಳಗುತ್ತವೆ. ವ್ಯವಸಾಯ, ಟೂರಿಸಂ ಮತ್ತು ಜಲವಿದ್ಯುತ್ ರಾಜ್ಯದ ಆರ್ಥಿಕತೆಯನ್ನು ಸಬಲವಾಗಿರಿಸುತ್ತಿವೆ.
ಒಂದು ಬಾರಿಯಂತೂ ಆಲಿಕಲ್ಲು ಮಳೆ ಟಪ್ ಟಪ್ ಎಂದು ಕಲ್ಲಿನಲ್ಲಿ ಹೊಡೆದಂತೆ ಮೈಮೇಲೆರಗಿ ಜಕ್ಕಿಣಿ ಕಾಟವೇ ಇದು ಎಂಬ ಊಹಾಪೋಹಕ್ಕೆಡೆ ನೀಡಿತು. ಅದು ನಮ್ಮ ಮೊದಲ ಕ್ಯಾಂಪ್ ದಿಡಿನಕ್ಕೆ ಹೋಗುವ ಹಾದಿ. ಅಲ್ಲಿನವರೆಗಿನ ಕಾಡಿನ ಹಾದಿಯ ದಣಿವನ್ನೆಲ್ಲ ಒಮ್ಮೆಗೇ ಮರೆಸುವಂತೆ ಹೊಸ ಲೋಕವೊಂದು ಎದುರಿಗೆ ತೆರೆದುಕೊಂಡಿತ್ತು. ಭಾರತದ ಸ್ವಿಜರ್‌ಲೆಂಡ್ ಎಂಬ ವರ್ಣನೆಗೆ ಇಂಬು ನೀಡುವ ಪುಟ್ಟ ಪುಟ್ಟ ಹಸಿರು ಗಿಡಗಳ ತುಂಬಾ ಹರಡಿ ನಿಂತ ಕೆಂಪು, ಹಳದಿ, ನೇರಳೆ ಹೂವುಗಳು. ಬೆಟ್ಟದ ಇಳಿಜಾರಿನಲ್ಲಿ ಹುಲ್ಲು ಮೇಯುವ ನೂರಾರು ಕುರಿ, ದನ, ಕುದುರೆಗಳು. ಅಲ್ಲಿಂದ ನಂತರ ಪರ್ವತ, ಮಂಜು, ಮುಸುಕು ಎಂದು ಕಣ್ಣಿಗೆ ಸಾಲು ಸಾಲು ಹಬ್ಬಗಳು.
ಅಂತೂ ಪರ್ವತಗಳ ಓಣಿಯಲ್ಲಿ ಹಾಯುತ್ತಾ ದಿಡಿನ, ಅಲಿ ಬುಗ್ಯಾಲ್, ಬೇದ್ನಿ ಬುಗ್ಯಾಲ್, ಭಗವಭಾಸ, ಪತಲ್‌ನಚೌನಿಗಳಲ್ಲಿ ನಮ್ಮ ಟೆಂಟಿನ ನಾಲ್ಕು ಕಾಲುಗಳ ಹೆಜ್ಜೆಗುರುತುಗಳು ಬೇರೂರಿದವು. ಎಷ್ಟೇ ನಡೆದು ದಣಿದರೂ ಹೈ ಆಲ್ಟಿಟ್ಯೂಡ್‌ನಲ್ಲಿ ತೆಳುವಾಗುವ ಆಕ್ಸಿಜನ್ ಪರದೆಗೆ ಅಕ್ಲಮಟೈಸ್ ಆಗಬೇಕೆಂದು ರಾತ್ರಿವರೆಗೂ ಮಲಗಲು ಬಿಡದೆ ಮತ್ತೆ ನಡೆಸುತ್ತಿದ್ದರು. ಪ್ರತಿದಿನ ಆಕ್ಸಿಜನ್, ಬಿಪಿ ಚೆಕ್ ಮಾಡುತ್ತಿದ್ದರು. ಕೊರೆವ ಚಳಿಗೆ ಅಲ್ಲಿನ ಎಲ್ಲ ಕಾಗೆಗಳ ಗಂಟಲೂ ಕೂತು ಕರ್ಕಶತೆ ಮೇರು ಮುಟ್ಟಿದ್ದು ಆಶ್ಚರ್ಯವೇನಾಗಿರಲಿಲ್ಲ.
ಬಟ್ಟೆಯ ಟಾಯ್ಲೆಟ್‌ನೊಳಗೆ ಒಂದು ಕೈಲಿ ಮೂಗನ್ನು ಹಿಡಿದರೆ, ಮತ್ತೊಂದು ಕೈಲಿ ಟಾಯ್ಲೆಟ್ ಝಿಪ್ ಹಿಡಿದು ಕುಳಿತುಕೊಳ್ಳುತ್ತಿದ್ದೆವು. ಏಕೆಂದರೆ ಆ ಟಾಯ್ಲೆಟ್‌ಗೆ ಎರಡೂ ಕಡೆಯಿಂದಲೂ ಝಿಪ್ ಇದ್ದು ಹೊರಗಿನಿಂದ ಯಾರಾದರೂ ಬಂದು ತೆರೆದರೆ ಎಂಬ ಭಯ. ಕೊನೆಯ ಕ್ಯಾಂಪ್‌ನಲ್ಲಿ ನೀರೂ ಇಲ್ಲದ ಟಾಯ್ಲೆಟ್ ಒಳಗೆ, ಅಪ್ಪಿತಪ್ಪಿ ಹೋದವರೆಲ್ಲ ವಾಕರಿಸುತ್ತಲೇ ಹೊರಬಂದರು. ಮತ್ತೆ ಕತ್ತಲರಾತ್ರಿಯಲ್ಲಿ ಟಾರ್ಚ್ ಬೆಳಕುಗಳು ಬಯಲಿನಲ್ಲೇ ಅಲ್ಲಲ್ಲಿ ಮಿಣಕುತ್ತಾ ಬೆಳಗಿನ ರೂಪ್‌ಕುಂಡ್ ಹಾದಿಯಲ್ಲಿ 'ಕೇಕ್‌ವಾಕ್' ಪದಸಂಶೋಧನೆಗೆ ಕಾರಣವಾದವು.
ರೂಪ್‌ಕುಂಡ್‌ನ ಮಿಸ್ಟರಿಲೇಕ್
ಮಂಜನ್ನು ದಂಡಿದಂಡಿಯಾಗಿ ಹೇರಿಕೊಂಡು ಕುಳಿತಿದ್ದ ರೂಪ್‌ಕುಂಡ್‌ನಲ್ಲೊಂದು ಮಿಸ್ಟರಿ ಲೇಕ್(ಸ್ಕೆಲಿಟನ್ ಲೇಕ್) ಇದೆ. ಅಲ್ಲಿ ಇಂದಿಗೂ ಮಾನವ ದೇಹದ ಮೂಳೆಗಳು ಕಾಣಿಸಿಕೊಳ್ಳುತ್ತಲೇ ಇದೆ. ಮೂಳೆಗಳ ಆಧಾರದ ಮೇಲೆ ಸುಮಾರು 300 ಮಂದಿ ಸಾವಿಗೀಡಾಗಿರುವ ಪ್ರದೇಶವಿದು ಎಂದೆಣಿಸಲಾಗಿದೆ. ಎಲ್ಲರಿಗೂ ದೊಡ್ಡ ಪ್ರಶ್ನೆಯಾಗುಳಿದಿದ್ದ ಈ ಕೌತುಕಕ್ಕೆ ವಿಜ್ಞಾನಿಗಳು ನೇಪಾಳದ ಕಡೆ ಹೊರಟಿದ್ದ ರಾಜ ಮತ್ತು ಆತನ ಬಳಗ ಬಿರುಗಾಳಿಗೆ ಸಿಲುಕಿ ಇಲ್ಲಿ ಸಾವಿಗೀಡಾಗಿದ್ದಾರೆ ಎಂಬ ಉತ್ತರ ನೀಡಿದರೂ ಕೆರೆ ಮಾತ್ರ ಇನ್ನೂ ಮಿಸ್ಟರಿ ಎಂಬ ಪದವನ್ನು ಹೊತ್ತೇ ಕುಳಿತಿದೆ. ಈ ದುರಂತಕ್ಕೆ 1200 ವರ್ಷಗಳಾಗಿರಬಹುದೆಂದು ಅಂದಾಜಿಸಲಾಗಿದ್ದರೂ ಇತ್ತೀಚೆಗೆ ನ್ಯಾಷನಲ್ ಜಿಯೋಗ್ರಫಿಕ್ ವಿಜ್ಞಾನಿಗಳು ಮೂಳೆಗಳನ್ನು ಹೊರತೆಗೆದಾಗ, ಇಲ್ಲಿನ ಥಂಡಿ ವಾತಾವರಣ ಮತ್ತು ಮಂಜಿನ ಪ್ರಭಾವಕ್ಕೆ ಕೆಲವು ಮೂಳೆಗಳಲ್ಲಿ ಇನ್ನೂ ಮಾಂಸ ಅಂಟಿಕೊಂಡಿತ್ತಂತೆ! ಬೆಳಗಾಗಿ ಸೂರ್ಯ ಮೂಡಿದರೆ ಮಂಜು ಕರಗಿ ದಾರಿಯಲ್ಲಿ ಕಲ್ಲುಗಳು ಬೀಳುವ ಸಂಭವವಿರುತ್ತದೆ ಎಂಬ ಕಾರಣಕ್ಕೆ ಇದು ಅರ್ಧ ರಾತ್ರಿಯ ಚಾರಣವಾಗಿತ್ತು. ಈ ಆರು ದಿನಗಳಲ್ಲಿ ವಾರ, ತಾರೀಕು, ಸಮಯ ಮೂರನ್ನೂ ಅರಿಯದ ಸ್ಥಿತಿ ನಮ್ಮದು. ಏಕೆಂದರೆ ಬೆಳಗ್ಗೆ 5 ಗಂಟೆಗೆಲ್ಲ ಸೂರ್ಯ ಬೆಳಕು ಹಾಯಿಸಿಕೊಂಡು ಬಂದರೆ ರಾತ್ರಿ 8ರವರೆಗೂ ಹೋಗಲೊಲ್ಲ. ಬಹುಷಃ ಪರ್ವತಗಳ ಚೆಲುವಿಗೆ ಅವನೂ ಮನಸೋತಿದ್ದ. ಆದರೆ ಇದ್ದಕ್ಕಿದ್ದಂತೆ ಬಂದು ನಮ್ಮೆದುರೇ ನರ್ತಿಸುತ್ತಿದ್ದ ಮೋಡಗಳು ಸೂರ್ಯನನ್ನೂ ಸತಾಯಿಸುತ್ತಿದ್ದವು.
ಇಷ್ಟೊಂದು ಅಗಾಧ ಸೌಂದರ್ಯದ ನಡುವೆ ನಿಂತಾಗಲೂ ಸ್ನಾನವಿಲ್ಲ, ನೆಟ್‌ವರ್ಕ್ ಇಲ್ಲ, ಹೊಟ್ಟೆ ಸರಿಯಿಲ್ಲ, ನೀರಿಲ್ಲ, ಕ್ಯಾಮೆರಾದಲ್ಲಿ ಚಾರ್ಜಿಲ್ಲ, ಊಟ ಸೇರುತ್ತಿಲ್ಲ ಇತ್ಯಾದಿ ಇಲ್ಲಗಳು 'ಅಯ್ಯೋ, ನನಗೆ ಮೇಕಪ್ ಮಾಡಿಕೊಳ್ಳಬೇಕಿನಿಸುತ್ತಿದೆ.. ಬೆಂಗಳೂರಿನ ಟ್ರಾಫಿಕ್ ಮಧ್ಯೆ ಗಾಡಿ ತೂರಿಸಿಕೊಂಡು ಆಫೀಸಿಗೆ ಹೋಗಬೇಕೆನಿಸುತ್ತಿದೆ.. ಪಿಜಿಯ ಹಾಸಿಗೆ ಮೇಲೆ ಮಲಗಿ ಕಾದಂಬರಿ ಓದಬೇಕಿನಿಸುತ್ತಿದೆ...' ಎನ್ನುತ್ತಾ ಎಂದಿನ ದಿನಚರಿಯನ್ನು ಮಿಸ್ ಮಾಡಿಕೊಳ್ಳತೊಡಗಿದ್ದೆ. ಕೊನೆಯ ದಿನ ದಕ್ಷಿಣ ಭಾರತದವರೆಲ್ಲಾ ಒಟ್ಟಾಗಿ ದಕ್ಷಿಣ ಭಾರತೀಯ ಆಹಾರ ಹೊಂದಿದ್ದ ಹೊಟೇಲ್‌ಗೆ ದಾಂಗುಡಿ ಇಟ್ಟು ಮೈ ಮೇಲೆ ಭೂತ ಹೊಕ್ಕವರಂತೆ ಇಡ್ಲಿ, ದೋಸೆ, ಮೊಸರನ್ನ ತಿಂದು ಅದರ ಅಪ್ರತಿಮ ರುಚಿಯನ್ನು ಕಂಡುಕೊಂಡೆವು.
ಅಂತೂ ಭಾರತದ ಉತ್ತರ, ದಕ್ಷಿಣ ದಿಕ್ಕೇ ನನಗೆ ಸರಿಯಾದದ್ದು ಎಂದು ವಾಸ್ತು ನುಡಿಯಿತು. 6 ದಿನಗಳ ರೂಪ್‌ಕುಂಡ್ ಚಾರಣ ಪ್ರಶ್ನೆಗಳನ್ನೆಲ್ಲ ಮಖಾಡೆ ಮಲಗಿಸಿ ದೈನಂದಿನ ಬದುಕನ್ನು ಪ್ರೀತಿಸುವಂತೆ ಮಾಡಿತ್ತು. ರೂಟಿನ್ ಜೀವನದ ಸೌಂದರ್ಯ ಅನಾವರಣಗೊಂಡಿದ್ದು ಎಲ್ಲವೂ ಬದಲಾದಾಗಲೇ.
ಸ್ನಾನವಿಲ್ಲದ, ಕೊನೆಕೊನೆಗೆ ವಾಸನೆ ಹೊಡೆಯತೊಡಗಿದ ಐದೈದು ಲೇಯರ್ ಬಟ್ಟೆಗಳನ್ನೇ ನೆಚ್ಚಿಕೊಂಡ, ಅಷ್ಟು ಹೊದ್ದೂ ಅತಿಯಾದ ಚಳಿಗೆ ಒಳಗೊಳಗೇ ನಡುಗಿದ, ನೆಟ್‌ವರ್ಕ್ ಇಲ್ಲದ ಲೋಕದಲ್ಲಿ ಆತ್ಮೀಯ ಸ್ವರಗಳು ಕಿವಿಗೆ ಬೀಳದ, ನಾಲಿಗೆಗೆ ಸೇರದ ಆಹಾರವನ್ನು ಅನಿವಾರ್ಯವಾಗಿಸಿದ, ಹೊಟ್ಟೆ ಹಾಳಾದರೂ ಅನಾಮಿಕ ಸ್ಥಳದಲ್ಲಿ ಅನಾಥವಾಗುವ ಭಯದಿ ನಡೆದೇ ನಡೆದ, ದಾಲ್ ವಾಸನೆಗೆ ಮೂಗು ಮುರಿಯುತ್ತಲೇ ಅನ್ನದ ಮೇಲೆ ಸುರಿದುಕೊಂಡ, ಸುತ್ತಲೂ ಬೃಹದಾಕಾರದಿ ಹರಡಿ ನಿಂತ ಪರ್ವತಗಳ ನಡುವೆ ಹೊರಗೊಂದು ಜಗತ್ತಿದೆ ಎಂಬುದನ್ನೇ ನಂಬಲು ಕಷ್ಟವಾಗುವಂತೆ ಮಾಡಿದ ಆ 6 ದಿನಗಳು ತಮ್ಮೆಲ್ಲಾ ಸೌಂದರ್ಯದೊಂದಿಗೇ ನೆನಪಿನ ಖಜಾನೆ ಬಗೆದು ಒಳಗೆ ಶಾಶ್ವತ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ.
- ರೇಶ್ಮಾ ರಾವ್ ಸೊನ್ಲೆ
reshmaraksha.rao7@gmail.com
ಚಿತ್ರಗಳು: ಬಸವರಾಜ್ ಕುಳ್ಳಿ, ಅಭಿಲಾಶ್ ವಿ.ಕೆ.