ಕಾಶ್ಮೀರವನ್ನು 'ಭಾರತದ ಸ್ವರ್ಗ' ಎನ್ನುವುದಾದರೆ, ಅದಕ್ಕಿಂತ ತುಸು ಕೆಳಗಿರುವ ಶಿಮ್ಲಾವನುಢ್ನಿ ಸ್ವರ್ಗಕ್ಕೆ ಮೂರೇ ಗೇಣು ಎನ್ನಬಹುದಲ್ಲವೇ? ಒಂದು ವರುಷ ಅಲ್ಲೇ ಇದ್ದಾಗ ನನಗೆ ಹಾಗನ್ನಿಸಿತು. ಬೆಂಗಳೂರಿನಿಂದ ಅಲ್ಲಿಗೆ ಶಿಫ್ಟ್ ಆದಾಗ ಕಷ್ಟವೆನಿಸಿದ್ದು ನಿಜ. ಆದರೆ, ಅಲ್ಲಿನ ವಾತಾವರಣ ಕೊಟ್ಟ ಸಾಂತ್ವನ ಅಷ್ಟಿಷ್ಟಲ್ಲ.
ಆಗ ಅಗಸ್ಟ್ ತಿಂಗಳು. ಮಳೆಗಾಲ ಶುರುವಾಗಿತ್ತಷ್ಟೇ. ಅಲ್ಲಿನ ಮಳೆ ಥೇಟ್ ನಮ್ಮ ಮಲೆನಾಡಿನ ರೀತಿ. ಶುರು ಹಚ್ಕೊಂಡ್ರೆ ತಾಸುಗಟ್ಟಲೆ ಆರ್ಭಟ. ಆ ಮಳೆಯೊಂದಿಗೆ ಫ್ರೀಯಾಗಿ ಬರುವುದು ಭೂ ಕುಸಿತ. ಮಳೆ ಬಿಟ್ಟ ಮೇಲೆ ಮೋಡವೆಲ್ಲ ನೆಲದ ಮೇಲೆ ಬಂದು ಕೂರುವುದು ಇಲ್ಲಿನ ವಿಸ್ಮಯ. ಆಗ ನಮ್ಮೆದುರಿನ 1-2 ಮೀಟರು ದೂರ ಬೇರೇನೂ ಕಾಣಿಸುವುದಿಲ್ಲ. ಅಲ್ಲಿ ಓಡಾಡುವುದೇ ಕಷ್ಟ. ಇನ್ನು ಡ್ರೈವ್ ಮಾಡುವುದಂತೂ ನರಕ. ಬೆಂಗಳೂರಿನಲ್ಲಿ ಡಿಸೆಂಬರ್‌ನಲ್ಲಿ ಇರುವ ಚಳಿ, ಅಲ್ಲಿ 11 ತಿಂಗಳು ಇರುತ್ತೆ. ಮೇನಲ್ಲಷ್ಟೇ ತುಸು ಬೆಚ್ಚಗೆ. ಉಳಿದ 11 ತಿಂಗಳಲ್ಲಿ 4 ತಿಂಗಳು 1 ಸ್ವೆಟರ್ ಸಾಕಾಗುತ್ತೆ. ಇನ್ನುಳಿದ 7 ತಿಂಗಳು 2 ಸ್ವೆಟರ್, ಕಾಲು ಚೀಲ, ಟೋಪಿ, ಮಫ್ಲರ್ ಇತ್ಯಾದಿ ಬೆಚ್ಚಗಿಡುವ ಎಲ್ಲಾ ವಸ್ತ್ರಗಳೂ ಕಂಪಲ್ಸರಿ ಬೇಕು. ನೀವೆಂಥದ್ದೇ ಮೂರ್ನಾಲ್ಕು ಸಾವಿರ ರುಪಾಯಿಯ ಡ್ರೆಸ್ ಹಾಕ್ಕೊಂಡರೂ ಅದರ ಸೌಂದರ್ಯವನ್ನೆಲ್ಲ ಒಂದು ಸ್ವೆಟರ್‌ನಲ್ಲಿ ಮುಚ್ಚಿಡಬೇಕಾಗುತ್ತೆ. ಮಲಗುವಾಗ ಹೊದ್ದುಕೊಳ್ಳುವುದಕ್ಕೆ ಹಾಸಿಗೆಯಷ್ಟೇ ದಪ್ಪಗಿರುವ ರಜಾಯಿ ಬೇಕು. ಹಾಸಿಗೆಗೆ ಎಲೆಕ್ಟ್ರಿಕಲ್ ಬೆಡ್‌ಸ್ಪ್ರೆಡ್ ಬೇಕಾಗುತ್ತೆ. ರಾತ್ರಿ 8 ಗಂಟೆಯ ನಂತರ ಟ್ಯಾಪ್ ಎಲ್ಲಾ ಫ್ರೀಝ್ ಆಗಿಬಿಡುತ್ತೆ. ಮತ್ತೆ ಮರುದಿನ ಬಿಸಿಲು ಬಂದ ನಂತರವೇ ನಮಗೆ ಟ್ಯಾಪ್‌ಗಳಲ್ಲಿ ನೀರು ಸಿಗೋದು.
ಹೊರಗಿನಿಂದ ಹೋಗಿರುವ ನಾವು ಮಾತ್ರವೇ ಹೆಚ್ಚಾಗಿ ರೂಮ್ ಹೀಟರ್‌ಗಳನ್ನು ಬಳಸುವುದು. ಅಲ್ಲಿನವರೆಲ್ಲ್ಲ, ಮನೆಯೊಳಗಡೆ ಅಗ್ಗಿಷ್ಟಿಕೆ ಬಳಸುತ್ತಾರೆ, ಇನ್ನು ಅಗ್ಗಿಷ್ಟಿಕೆ ಇಲ್ಲದಿರುವವರು, ನಮ್ಮಲ್ಲೆಲ್ಲ ಹೋಮದಲ್ಲಿ ಬಳಸುವ ಹೋಮದ ಕುಂಡದಲ್ಲಿ, ಕೆಂಡ- ಸೌದೆ ಎಲ್ಲ ಬಳಸಿ ಅದರಲ್ಲಿ ಬೆಂಕಿ ಹಾಕಿ ಮನೆಯ ಮಧ್ಯಭಾಗದಲ್ಲಿ ಉರಿಸುತ್ತಾರೆ, ಅದು ಮನೆಯನ್ನು ಬೆಚ್ಚಗಿರಿಸುತ್ತೆ. ಏಕೆಂದರೆ, ಎಲೆಕ್ಟ್ರಿಕಲ್ ಹೀಟರ್‌ಗಳಿಂದ ಮೈಯಲ್ಲಿರುವ ರಕ್ತ ಒಣಗಿ ಹೋಗುತ್ತಂತೆ.
ಇನ್ನು ಫ್ರಿಡ್ಜ್ ವಿಷಯಕ್ಕೆ ಬಂದರೆ, ಅದರ ಟೆಂಪರೇಚರ್ ಹೆಚ್ಚಿಗೆ ಮಾಡಬೇಕಾಗತ್ತೆ, ಇಲ್ಲದಿದ್ದಲ್ಲಿ, ಅದರಲ್ಲಿ ಇಟ್ಟಿರುವ ತರಕಾರಿಗಳೆಲ್ಲ ಐಸ್ ಆದಂಗೆ ಆಗೋಗತ್ತೆ. ಏಕೆ ಅಂದ್ರೆ ಹೊರಗಿರುವ ನಾವೇ ಫ್ರಿಡ್ಜ್‌ಗಿಂತ ತಣ್ಣಗಿರುವ ವಾತಾವರಣದಲ್ಲಿರುತ್ತೇವಲ್ಲಾ!
ಇನ್ನು ಸ್ನೋ ಫಾಲ್ ಆದಾಗಲಂತೂ ರಸ್ತೆಗಳೆಲ್ಲ ಕ್ಲಿಯರ್ ಆಗೋವರೆಗೂ ಮನೆಯಿಂದ ಹೊರಗಡೆ ಹೋಗೋ ಹಾಗೆ ಇಲ್ಲ, ಹಾಲಿಲ್ಲ, ತರಕಾರಿ ಇಲ್ಲ, ಏನೇನೂ ಇಲ್ಲ.
ಹಕ್ಕಿಗಳು, ನಾಯಿಗಳು, ಇತರ ಯಾವ ಪ್ರಾಣಿಗಳೂ ಗೂಡಿಂದ ಹೊರಕ್ಕೆ ಬರುವುದೇ ಇಲ್ಲ. ಅಲ್ಲಿನ ಜನರಿಗೆ ಅವೆಲ್ಲ ಇಲ್ಲದೆ ಬದುಕುವುದಕ್ಕೆ ಗೊತ್ತು. ಹಾಲಿಲ್ಲದೆ ಬ್ಲ್ಯಾಕ್ ಟೀ ಕುಡಿತಾರೆ, ತರಕಾರಿ ಇಲ್ಲದೆ ಇದ್ರೂ, ದಾಲ್ ಮಾಡಿಕೊಂಡು ಊಟ ಮಾಡ್ತಾರೆ. ಉದ್ದಿನ ಕಾಳಿನಿಂದ ಬಾಳಕದ ರೀತಿಯಲ್ಲಿ ತಯಾರಿಸಿಟ್ಟುಕೊಂಡಿರುತ್ತಾರೆ. ಅದನ್ನು ಈ ರೀತಿಯ ದಿನಗಳಲ್ಲಿ ತರಕಾರಿಯ ರೀತಿಯಲ್ಲೇ ಬಳಸುತ್ತಾರೆ. ಸಬ್ಜಿ, ಸಾಗ್, ಪುಲಾವ್, ಕಡಿ- ಎಲ್ಲಕ್ಕೂ ಅದನ್ನೇ ಬಳಸುತ್ತಾರೆ.
ಚಳಿಗಾಲದಲ್ಲಿ, ಹೊರಗಡೆ ಬಿಸಿಲಿದ್ದರೂ ಹೊರಗಡೆ ಹೋಗಿ ನಿಲ್ಲುವುದಕ್ಕೆ ಆಗಲ್ಲ. ಏಕೆಂದರೆ ಬಿಸಿಲನ್ನು ಹೊಡೆಯುವಷ್ಟು ಚಳಿ ಗಾಳಿ ಬೀಸುತ್ತಾ ಇರುತ್ತೆ. ಹಾಗಾಗಿ ಕಿಟಕಿಯ ಗಾಜುಗಳಿಂದ ಒಳಬಂದ ಬಿಸಿಲನ್ನು ಮಾತ್ರವೇ ನಾವು ಅನುಭವಿಸಬಹುದು. ಮೊಸರು ಮಾಡುವುದು, ನಮಗೆ ಕರ್ನಾಟಕದವರಿಗೆ ಬೇಕಾಗುವ ದೋಸೆ, ಇಡ್ಲಿಗಾಗಿ ಹಿಟ್ಟು ಹುದುಗು ಬರಿಸುವುದು ತುಂಬಾ ಕಷ್ಟ. ದೋಸೆ- ಇಡ್ಲಿ ಹಿಟ್ಟನ್ನು ರುಬ್ಬಿ, ಅವನ್ನೆಲ್ಲ ಎರಡು ದಿನಗಟ್ಟಲೆ ಬಿಸಿಲಿಗೆ ಇಟ್ಟು ಹುದುಗು ಬರಿಸಬೇಕು.
ಹೀಗೆ ಶಿಮ್ಲಾ ಪ್ರವಾಸಕ್ಕೆ ಹೋದಾಗ ಎಷ್ಟು ಚೆನ್ನಾಗಿ ಸ್ವರ್ಗದ ಥರಾನೇ ಕಂಡಿತ್ತು. ಆದರೆ ಅಲ್ಲಿಯೇ ವಾಸಕ್ಕೆ ಹೋದಾಗಲೇ, ನನಗೆ ಅದು ದೂರದ ಬೆಟ್ಟ ಅಂತ ಗೊತ್ತಾಗಿದ್ದು! ಅಲ್ಲಿನ ಹೆಚ್ಚಿನವರಿಗೆ ಅದಕ್ಕಿಂತಲೂ ಹೆಚ್ಚಿನ ಕಂಫರ್ಟ್ ಇರೋದೇ ಗೊತ್ತಿಲ್ಲ. ವರ್ಷವೆಲ್ಲ ತಣ್ಣಗಿದ್ರೆ ಅದೇ ಸುಖ ಅಂತ ಅಂದ್ಕೊಂಡಿದ್ದಾರೆ. ನಾವೆಲ್ಲ 450 ಕಿ.ಮೀ. ದೂರದಲ್ಲಿರುವ ನಮ್ಮ ನೇಟಿವ್‌ಗೆ ಕೇವಲ 6 ತಾಸಿನಲ್ಲಿ ಡ್ರೈವ್ ಮಾಡ್ತೀವಿ ಅಂದರೆ, ಅಲ್ಲಿನ ಜನ ನಂಬುವುದೇ ಇಲ್ಲ. ಏಕೆಂದರೆ, ಅಲ್ಲಿ ಕೇವಲ 40 ಕಿಲೋಮೀಟರ್ ಹೋಗುವುದಕ್ಕೆ 3 ತಾಸು ತೆಗೆದುಕೊಳ್ಳುತ್ತಾರೆ. ಜನ ಅಂತೂ ತುಂಬಾ ಸೋಮಾರಿಗಳು ಮತ್ತು ಯಾವುದಕ್ಕೂ ಅವರಲ್ಲಿ ಧಾವಂತವೇ ಕಾಣಿಸಲ್ಲ. ಇಲ್ಲೊಂದು ಸಣ್ಣ ಘಟನೆ ಹೇಳ್ತೀನಿ. ಮೊದ್ಲೇ ಅಲ್ಲಿನ ರಸ್ತೆಗಳು ತುಂಬಾ ಕಿರಿದು. ಅಂಥದರಲ್ಲಿ, ಒಂದು ದಿನ ಆ ಕಿರಿದಾದ ರಸ್ತೆಯಲ್ಲಿನ ತಿರುವಿನಲ್ಲಿ ಯಾರೋ ವ್ಯಾನ್ ನಿಲ್ಲಿಸಿಕೊಂಡು ಅದರಲ್ಲಿನ ಸಾಮಾನುಗಳನ್ನು ಕೆಳಗಿಳಿಸುತ್ತಿದ್ದಾರೆ. ಮತ್ತು ಆ ಕಡೆ ಈ ಕಡೆಯಲ್ಲಿ ಎಲ್ಲರೂ ತಮ್ಮ ತಮ್ಮ ಗಾಡಿಗಳನ್ನು ಆಫ್ ಮಾಡಿಕೊಂಡು ವ್ಯಾನ್‌ನವರು ತಮ್ಮ ಕೆಲಸ ಮುಗಿಸಿ ಹೋಗುವುದನ್ನೇ ಕಾಯ್ತಾ ಇರ್ತಾರೆ ಮತ್ತು ಯಾರಾದರೂ ಒಬ್ಬರೇ ಒಬ್ಬರೂ ಹಾರನ್ ಮಾಡುವುದಿಲ್ಲ. ಅತ್ಯಂತ ಶಾಂತವಾಗಿ ಕಾಯ್ತಾರೆ. ಅದೇ ಘಟನೆ ಬೆಂಗಳೂರಿನಲ್ಲಿ ಆಗಿದ್ದಿದ್ದರೆ ಯೋಚಿಸಿದರೆ, ಭಯ ಆಗುತ್ತೆ. ಎಲ್ಲ ವಾಹನಗಳೂ ಕಿವಿ ಕಿತ್‌ಹೋಗೋ ರೀತಿ ಹಾರನ್ ಬಾರಿಸಿ, ಆ ವ್ಯಾನಿನವನ ಜೊತೆಯಲ್ಲಿ ಜಗಳ ಮಾಡಿ, ಅದಕ್ಕೂ ಆತ ಬಗ್ಗದಿದ್ದರೆ, ಅವನನ್ನು ಹೊರಗಡೆ ಎಳೆದು, ಹೊಡೆದಾದ್ರೂ ಆ ಗಾಡಿಯನ್ನು ತೆರವು ಮಾಡಿಸುತ್ತಿದ್ದರು. ಇನ್ನೊಂದು ಸಲ ಅಂತೂ ರಸ್ತೆಗೆ ಡಾಂಬರು ಹಾಕುವ ಕೆಲಸ ನಡೆದಿತ್ತು, ಆವಾಗಲೂ ಇರೋ 2 ಕಿ.ಮೀ. ಅಂತರದಲ್ಲೇ ಸುಮಾರು 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್. ಯಾರಿಗೂ ಅದರ ಬಗ್ಗೆ ಬೇಸರವೇ ಇಲ್ಲ. 'ಮೆಟಲಿಂಗ್ ಚಲ್ ರಹಾ ಹೈ' ಅಂತ ಹೇಳ್ಕೊಂಡು ಆರಾಮಾಗಿ ಅವರು ಮಾಸುತ್ತಿರುವ ಕೆಲಸವನ್ನು ನೋಡುತ್ತಾ ಕಾಯ್ಕೊಂಡು ಇರ್ತಾರೆ. ಹಾಗಾಗಿ ನಿಜವಾಗಲೂ ಅಲ್ಲಿನ ಜನರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲೇಬೇಕು.
ಇನ್ನು ಓಡಾಟದ ವಿಷಯ ಹೇಳೋದಾದ್ರೆ, ಇಡೀ ಶಿಮ್ಲಾದಲ್ಲಿ ಒಂದೂ ಅಟೋರಿಕ್ಷಾ ಇಲ್ಲ. ಕೇವಲ ಟ್ಯಾಕ್ಸಿ ಮತ್ತು ಬಸ್ಸು. ಸಾಮಾನುಗಳನ್ನು ಸಾಗಿಸುವುದು ಖಾನ್ ಎನ್ನುವ ಬುಡಕಟ್ಟು ಜನಾಂಗದವರು. ಫ್ರಿಡ್ಜ್, ಸೋಫಾ ಯಾವುದೇ ಭಾರವಾಗಿರೋ ವಸ್ತುವಿರಲಿ ಬೆನ್ನಿಗೆ ಕಟ್ಟಿಕೊಂಡು ಎಷ್ಟು ಮೈಲು ಬೇಕಾದರೂ ನಡ್ಕೊಂಡೇ ಹೋಗಿ ಡೆಲಿವರಿ ಕೊಡ್ತಾರೆ. ನಾವೂ ಅಲ್ಲಿದ್ದಷ್ಟು ದಿನಗಳೂ ತಲಾ ಒಂದೊಂದು ಬ್ಯಾಕ್ ಪ್ಯಾಕ್ ತಗಲ್ಹಾಕೊಂಡೇ ಶಾಪಿಂಗ್ ಸಲುವಾಗಿ ಹೋಗ್ತಾ ಇದ್ವಿ. ಹಮಾಲಿಗಳ ಥರಾ. ಅಲ್ಲಿನ ಜನರೆಲ್ಲರ ಹತ್ರ ಕಾರಿರುತ್ತೆ. ಆ ಕಾರನ್ನು ಪಾರ್ಕ್ ಮಾಡಕ್ಕೆ ಜಾಗ ಇರಲ್ಲ ಅನ್ನೋದು ಬೇರೆ ವಿಷಯ. ಕಾರನ್ನು ಎಲ್ಲೂ ಒಂದ್ಕಡೆ ನಿಲ್ಲಿಸಿ, ಅವರ ಮನೆಗೆ 1-2 ಕಿ.ಮೀ.ಗಟ್ಟಲೆ ಎಲ್ಲ ನಡ್ಕೊಂಡು ಹೋಗ್ತಾರೆ. ಅಂದಹಾಗೆ, ಅಲ್ಲಿನವರಿಗೆ ನಡೆಯೋದು ಒಂದು ದೊಡ್ಡ ಕೆಲಸಾನೆ ಅಲ್ಲ. 8-10 ಕಿ.ಮೀ. ಬೇಕಾದರೂ ಬೇಜಾರಿಲ್ಲದೆ ನಡ್ಕೊಂಡು ಹೋಗ್ತಾರೆ. ಅಷ್ಟಕ್ಕೂ ಅಲ್ಲಿ ನಡೆದಾಡಲು ಪ್ಲೇನ್ ರೋಡ್ ಇಲ್ಲ. ಗುಡ್ಡ ಹತ್ತಿ ಬೆಟ್ಟ ಇಳಿದೇ ಸಾಗಬೇಕು. ಯಾರ ಮನೆನೂ ರಸ್ತೆ ಪಕ್ಕದಲ್ಲಿ ಇರಲ್ಲ, ಒಂದೋ ಮುಖ್ಯ ರಸ್ತೆಯಿಂದ ಅವರ ಮನೆಗೆ ಒಂದಷ್ಟು ದೂರ ಮೆಟ್ಟಿಲು ಹತ್ಕೊಂಡೋ ಇಲ್ಲಾ ಇಳ್ಕೊಂಡೋ ಹೋಗ್ಬೇಕು. ಹತ್ತೋದೂ ಇಳ್ಯೋದೂ ಅಂದರೆ, ಗೋಡೆಯಷ್ಟೇ ಏರು ಆಗಿರೋ ದಾರಿ. ಯಾವತ್ತಾದರೂ ರಾತ್ರಿ 10-11 ಗಂಟೆಯ ಸುಮಾರಿಗೆ ಹಾಗೆ ಸುಮ್ನೆ ಶಿಮ್ಲಾದಲ್ಲಿ ಒಂದು ರೌಂಡ್ ಹೋದ್ರೆ, ರಸ್ತೆಯ ಎರಡೂ ಬದಿಗಳಲ್ಲೂ ಸಾಲಾಗಿ ಒಂದಿಂಚೂ ಜಾಗ ಬಿಡದಂಗೆ ಕಾರುಗಳನ್ನು ನಿಲ್ಲಿಸಿರುತ್ತಾರೆ. ಬಹುಶಃ ಜನರಿಗಿಂತ ಕಾರುಗಳೇ ಹೆಚ್ಚು ಇರಬಹುದೋ ಏನೋ.
ಎಲ್ಲರ ಮನೆಯ ಬಾಲ್ಕನಿಯೂ ಒಂದೊಂದು ಕ್ಲಿಫ್ ಥರಾ ಇರುತ್ತೆ. ಅಲ್ಲಿಂದ ಕೆಳಗಡೆ ನೋಡಿದ್ರೆ, ತಲೆ ತಿರುಗೋ ಹಾಗಾಗುತ್ತೆ. ರಾತ್ರಿ ಅಂಗಳಕ್ಕೆ ಬಂದು ತಲೆ ಮೇಲಕ್ಕೆತ್ತಿದ್ರೆ, ಅಲ್ಲಿ ತಾರೆಗಳು ಕಾಣಿಸಲ್ಲ. ಬದಲಾಗಿ ಯಾರದ್ದಾದರೂ ಮನೆಯ ಲೈಟ್‌ಗಳೇ ಕಾಣುತ್ತವೆ.
ಅಲ್ಲಿನ ಮಾರ್ಕೆಟುಗಳಲ್ಲಿ ನಮಗೆ ಬೇಕಾದ್ದೆಲ್ಲ ಸಿಗಲ್ಲ, ಅಲ್ಲಿ ಸಿಗೋ ಅಂಥದ್ದನ್ನು ನಾವು ಉಪಯೋಗಿಸಬೇಕು. ಆದರೆ, ಮಜಾ ವಿಷ್ಯ ಅಂದರೆ, ಅವರು ನಮ್ಮ ಮಲೆನಾಡಿನವರು ಬಳಸುವ ಕೆಸುವಿನ ಸೊಪ್ಪನ್ನು, ಅದರ ಬೇರು-ಗಡ್ದೆಗಳನ್ನೆಲ್ಲಾ ತುಂಬಾ ಹೆಚ್ಚಾಗಿ ಬಳಸುತ್ತಾರೆ. ಅವುಗಳಿಂದ ನಾವು ತಯಾರಿಸುವ ಸಾಂಬಾರ್, ಪತ್ರೊಡೆ ಇತ್ಯಾದಿಗಳನ್ನೆಲ್ಲ ತಯಾರಿಸುತ್ತಾರೆ. ಅಲ್ಲಿನ ವ್ಯಾಪಾರಿಗಳೆಲ್ಲ ಹೆಚ್ಚಿನವರು ಚಂಡೀಗಡದವರು. ಶಿಮ್ಲಾ ಮಂದಿಯೂ ವ್ಯಾಪಾರ ಮಾಡ್ತಾರೆ. ಆದರೆ, ಅದು ಮನೆತನದ ಕಸುಬಾಗಿದ್ದರೆ ಮಾತ್ರ. ಅವರು ಎಷ್ಟೆಲ್ಲಾ ಓದಿಕೊಂಡಿರ್ತಾರೆ ಗೊತ್ತಾ? ವಿದೇಶಕ್ಕೆಲ್ಲ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರ್ತಾರೆ. ಶಿಮ್ಲಾ ಮೂಲದವರು ಸಜ್ಜನರು, ಸ್ನೇಹಪರರು ಮತ್ತು ನಂಬಿಕಸ್ತರು. ಏಕೆಂದರೆ, ಪ್ರವಾಸೋದ್ಯಮ ಅಲ್ಲಿನ ಪ್ರಮುಖ ಆದಾಯ. ಹಾಗಾಗಿ ಅಲ್ಲಿ ಪ್ರವಾಸಿಗರನ್ನು ತುಂಬಾ ಚೆನ್ನಾಗಿ ನಡೆಸಿಕೊಳ್ತಾರೆ. ನೆರವಿಗೆ ಬರುತ್ತಾರೆ. ಅಲ್ಲಿ ಕ್ರೈಂ ತುಂಬಾ ಕಡಿಮೆ. ಇಲ್ಲಿನ ರೀತಿ ಸರಗಳ್ಳತನ, ಮನೆಗಳ್ಳತನ ದೂರುಗಳೇ ಇಲ್ಲ.
ಈ ಪ್ರಕಾರವಾಗಿಯೂ ಶಿಮ್ಲಾ ಸ್ವರ್ಗಕ್ಕೆ ಮೂರು ಗೇಣು! ಅಲ್ಲದೆ, ನೀವು ವಾಹನ ಚಲಾಯಿಸುವಾಗ ಸ್ವಲ್ಪ ಯಾಮಾರಿದರೂ, ನೇರ ಸ್ವರ್ಗಕ್ಕೆ ಹೋಗಬೇಕಾಗುತ್ತೆ. ಬಿದ್ದರೆ ತುಂಬಾ ಆಳವಾಗಿರೋ ಪ್ರಪಾತಕ್ಕೆ! ಬಚಾವಾಗೋ ಚಾನ್ಸೇ ಇಲ್ಲ. ನಂತರ ಕ್ರೇನ್ ತಂದೇ ನಿಮ್ಮನ್ನೂ ಗಾಡಿಯನ್ನೂ ಎತ್ತಬೇಕಾಗುತ್ತೆ.
ಈವಾಗ ವಾಪಸ್ಸು ಬೆಂಗಳೂರಿಗೆ ಬಂದು ನಿಜವಾದ ಸ್ವರ್ಗಕ್ಕೆ ಬಂದಂತಾಗಿದೆ. ಮನಸ್ಸು ಪಂಜರದಿಂದ ಹೊರಕ್ಕೆ ಬಿಟ್ಟ ಹಕ್ಕಿಯಂತಾಗಿದೆ. ಇಲ್ಲಿನ ಕಂಫರ್ಟ್, ವಾಹನ ಸೌಕರ್ಯ, ವಾತಾವರಣ, ಶಾಪಿಂಗ್ ಮಾಡುವುದಕ್ಕೆ ಜಾಗಗಳು, ಮಾಲ್‌ಗಳು... ಇತ್ಯಾದಿ ಇತ್ಯಾದಿ. ಒಟ್ಟಾರೆಯಾಗಿ, ನಮ್ಮೂರೇ ನಮಗೆ ಚೆಂದ.
- ವೀಣಾ ಮಾರ್ಕಂಡೆ
veenamarkande@yahoo.co.in