ಕತ್ತಲೊಟ್ಟಿಗೆ ಕಿತ್ತಾಡಲೆಂದೇ
ಹುಟ್ಟಿದ ಬೆಳಕಿಗೆ
ಕತ್ತಲನ್ನಗಲಿ ಅರ್ಥವಿಲ್ಲ
ಬೆಳಕನ್ನು ಕೆಣಕಲೆಂದೇ
ಜನ್ಮವೆತ್ತಿದ ಕತ್ತಲಿಗೆ
ಬೆಳಕನ್ನುಳಿದು ಬಾಳಿಲ್ಲ
ಸಾವಿನ ತೊಡೆತಟ್ಟಲೆಂದೇ
ಎದ್ದ ಜೀವಕೆ
ಸಾವಿನಾಚೆ ಗುರಿಯಿಲ್ಲ
ಜೀವಗಳ ಮಾಗಿಸಲೆಂದೇ
ಹಟತೊಟ್ಟ ಸಾವಿಗೆ
ಜೀವನಿಂತರೆ ಬೆಲೆಯಿಲ್ಲ
ನೋವ ನೂಕಲಿಕೆಂದೇ ತೆರೆದ
ಸಾಂತ್ವನಕೆ
ನೋವಿಲ್ಲದೆ ನೆಲೆಯಿಲ್ಲ
ಸಾಂತ್ವನವ ಚಿಗುರಿಸಲೆಂದೇ
ಮೊಳೆತ ನೋವಿಗೆ
ಸಾಂತ್ವನದ ಹೊರತು ನಿಲುವಿಲ್ಲ
ಬರಡ ನೀಗಿಸಲೆಂದೇ ಹೊರಟ
ಹರಿವ ನದಿಗೆ
ಬರಡುಗಾಣದೆ ದನಿಯಿಲ್ಲ
ನದಿಗೆ ಎದೆಗೊಡುವ
ಸುಡು ಬರಡಿಗೆ
ನದಿಯಲ್ಲದೇ ಜೊತೆಯಿಲ್ಲ
ವೈರುದ್ಧ್ಯಗಳ ತೊಟ್ಟಿಲ ಬದುಕು
ಹಠದ ಜೊತೆ ಪ್ರೀತಿಯನ್ನೂ ತೂಗಿಸುತ್ತಿದೆ.
- ವಾಸುದೇವ ನಾಡಿಗ್
vvnadig@gmail.com