ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಮಳೆ ಮಾತ್ರ ಬಿಡಲಿಲ್ಲ...

ಪಶ್ಚಿಮಫಟ್ಟದ ಮುಗಿಲು ಮೋಡಗಟ್ಟಿ ಕರ್ರಗಾಗಿ ಕಾಣಿಸಿದಾಗ ನೆಲ್ಲಿಕಾರಿನ ಹೊಸ ಡಾಂಬರು ರಸ್ತೆ ಕೂಡ ಇನ್ನೂ ...

Rashmi Kasaragodu
Updated On : 26 Jul 2014, 2:12 am

ಪಶ್ಚಿಮಫಟ್ಟದ ಮುಗಿಲು ಮೋಡಗಟ್ಟಿ ಕರ್ರಗಾಗಿ ಕಾಣಿಸಿದಾಗ ನೆಲ್ಲಿಕಾರಿನ ಹೊಸ ಡಾಂಬರು ರಸ್ತೆ ಕೂಡ ಇನ್ನೂ ಕಪ್ಪಗಾಗಿ ಕಾಣುತ್ತಿತ್ತು. ಕ್ಷಣಾರ್ಧದಲ್ಲೇ ಹನಿಗಳೆಲ್ಲ ನೆಲ್ಲಿಕಾರಿನ ಮಳೆಕಾಡ ತುಂಬೆಲ್ಲ ವ್ಯಾಪಿಸಿ ಇಡೀ ನೆಲ್ಲಿಕಾರಿನ ಚಿತ್ರವೇ ಬದಲಾಯ್ತು. ಲಯನ್ಸ್ ಕ್ಲಬ್ಬಿನ ಬಸ್ಸು ತಂಗುದಾಣದಲ್ಲಿ ತೂತಾದ ಮಾಡಿನ ಸಂದನ್ನು ನಿರುಕಿಸುತ್ತಾ, ಮತ್ತೊಮ್ಮೆ ಮಳೆ ಬೀಳುತ್ತಾ ಮಸುಕಾಗುತ್ತಿದ್ದ ರೋಡನ್ನು ನೋಡುತ್ತಾ, ಕೊನೆಗೊಮ್ಮೆ ಚೀಲದಿಂದ ಏನೋ ಒಂದನ್ನು ತೆಗೆಯುವ ಕಾರ್ಯವನ್ನು ಶುರು ಹಚ್ಚಿಕೊಳ್ಳುತ್ತಾ, ಶ್ಯಾಮ ತಂಗುದಾಣದಲ್ಲಿ ಸ್ವಚ್ಛವಾದ ಜಾಗವೊಂದನ್ನು ಹುಡುಕಿಕೊಳ್ಳುತ್ತಾ ಕೂತ. ಮಳೆ ಜಾಸ್ತಿಯಾಯಿತು. ಶಾಲೆ ತೀರಾ ಬೋರೆನ್ನಿಸಿದಾಗ, ಈ ಶಾಲೆಯ ಗುಂಗೇ ಬೇಡ ಇವತ್ತು ಅನ್ನುತ್ತಾ, ಶಾಲೆಯ ಮಧ್ಯಾಹ್ನದ ಬಿಸಿಯೂಟ ಮುಕ್ಕಿ ಯಾರಿಗೂ ಗೊತ್ತಾಗದ ಹಾಗೆ ಸೀದಾ ಬಸ್‌ಸ್ಟಾಪಿನಲ್ಲಿ ಬಂದು ಕೂತು ಏನಾದರೂ ಕತೆಯನ್ನು ಓದುವುದು ಶ್ಯಾಮನಿಗೆ ಅಭ್ಯಾಸವಾಗಿ ಹೋಗಿತ್ತು. ಪರಿಚಯದವರು ಅಷ್ಟಾಗಿ ಯಾರೂ ಈ ಬಸ್‌ಸ್ಟಾಪಿನ ಕಡೆ ಸುಳಿಯುತ್ತಿರಲಿಲ್ಲವಾದ್ದರಿಂದ, ಆ ಬಸ್‌ಸ್ಟಾಪಿನಲ್ಲಿ ಬೇಕಾದಷ್ಟು ಏಕಾಂತ ಮತ್ತೂ ಮತ್ತೂ ಧಾರೆಯಾಗಿ ಸುರಿಯೋ ಮೌನ, ಮಂಪರಾದಾಗಲೆಲ್ಲ ತೂಕಡಿಸಲು ಅನುವು ಮಾಡಿಕೊಡುವ ವಾತಾವರಣ, ಎಲ್ಲವೂ ಇದ್ದುದರಿಂದ ಶ್ಯಾಮನಿಗೆ ಈ ಬಸ್‌ಸ್ಟಾಪಿನಲ್ಲಿ ಏನೋ ಒಂದು ಆಪ್ತತೆ ಸಿಗುತ್ತಿತ್ತು. ಶಾಲೆಯ ಲೈಬ್ರೆರಿಯಿಂದ ಯಾವುದ್ಯಾವುದೋ ರೋಚಕ ಕತೆಪುಸ್ತಕಗಳನ್ನು ತಂದು ಈ ಬಸ್‌ಸ್ಟಾಪಿನಲ್ಲಿ, ಸಂಜೆಯ ಬಸ್ಸು- ಜಾಲಿ ಟ್ರಾವೆಲ್ಸು ಬರುವವರೆಗೆ ಓದುತ್ತಾ ಕೂತು ಬಸ್ಸು ಬಂದ ಕೂಡಲೇ ಹತ್ತಿ ಮನೆಗೆ ಹೋಗುವ ಪ್ರಕ್ರಿಯೆ ಶ್ಯಾಮನದ್ದು. ಇದೇ ಬಸ್‌ಸ್ಟಾಪಿನಲ್ಲಿ ಕೂತು ಎಷ್ಟೋ ಬಾರಿ ಕತೆಯ ರಹಸ್ಯಗಳಲ್ಲೇ, ಭೀಕರತೆಗಳಲ್ಲೇ, ಆ ಕತೆ ತನ್ನನ್ನು ಹಿಡಿದಿಟ್ಟುಕೊಳ್ಳುವ ಗುಂಗಿನಲ್ಲೇ ಶ್ಯಾಮ ಕಳೆದುಹೋಗಿದ್ದಾನೆ. ಇವತ್ತೂ ಶಾಲೆಯಿಂದ ಸೀದಾ ಬಂದವ ಆ ಮಧ್ಯಾಹ್ನ ಕಣ್ಣ ಬೊಗಸೆಯಲ್ಲಿ ಮಳೆ ಹಿಡಿಯುತ್ತಾ 'ಕಾಡು ಮತ್ತು ರೋಚಕ ಕತೆಗಳು' ಎನ್ನುವ ಹೊಸ ಪುಸ್ತಕವನ್ನು ಹಿಡಿದು ಓದಲು ಕುಳಿತ. ಬಸ್‌ಸ್ಟಾಪ್ ತೂತಾಗಿ ಮಳೆ ನೀರು ಒಳಗೆ ಬಂದು ಚೂರೇ ಚೂರು ಹನಿಯುತ್ತಿದ್ದರೂ ಯಾರೋ ಎಸೆದ ಗುಟ್ಕಾದ ರ್ಯಾಪರುಗಳು, ಸಿಗರೇಟಿನ ತುಂಡುಗಳು, ಇಡೀ ತಂಗುದಾಣದ ಅಂದವನ್ನೇ ಗಲೀಜು ಮಾಡುತ್ತಿದ್ದರೂ, ಶ್ಯಾಮ ಅದನ್ನೆಲ್ಲ ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ಕತೆಯ ಓದಿನಲ್ಲೇ ಕಳೆದುಹೋದ. ಕತೆ ಅವನೊಂದಿಗೆ ಮಾತಾಡುತ್ತಿತ್ತು.
ಆ ಕಾಡಿನಲ್ಲಿ ದೊಡ್ಡದೊಂದು ಬಾವಿಯಿತ್ತು. ಅದರ ನೀರು ಅದರ ಕುತ್ತಿಗೆವರೆಗೂ ಬರುತ್ತಿತ್ತು. ಆ ಕಾಡಿಗೆ ಮಜಾ ಮಾಡೊಣ ಅಂತ ಹೋದವರು ಖಂಡಿತಾ ಮತ್ತೆ ಬರುತ್ತಿರಲಿಲ್ಲ. ಆ ಕಾಡು ಎಷ್ಟು ಕಪ್ಪಗಿತ್ತೆಂದರೆ ದಾರಿ ಕಾಣುವುದೇನು ನಮಗೆ ನಾವು ಯಾರೆಂದೇ ಮರೆತೇ ಹಾಕಿಸುತ್ತಿತ್ತು. ಅವತ್ತು ಮಧ್ಯಾಹ್ನ ನಾನು ಆ ಕಾಡುದಾರಿಯ ಆಚೆಗಿರುವ ಇನ್ನೊಂದು ದಾರಿಯನ್ನು ಹಿಡಿದು ನಮ್ಮ ಮನೆಗೆ ಹೋಗುತ್ತಿದ್ದೆ .ಆಗ ಒಮ್ಮೆಲೇ 50 ನಾಯಿಗಳ ಬೊಬ್ಬೆ ಒಂದೇ ಸಲ ಕಾಡೊಳಗಿಂದ ಕೇಳಿ ಬಂತು. ಒಂದೆರಡು ಮರ ಉರುಳಿಬಿದ್ದ ಹಾಗೆ ಸದ್ದು. ಮತ್ತೆ ಹೆದರುತ್ತಾ ನಡೆದರೆ ಆ ಕಡೆಯಿಂದ ಈ ಕಡೆ... ಈ ಕಡೆಯಿಂದ ಆ ಕಡೆ ಎಷ್ಟೋ ಮಂದಿ ಓಡಿಹೋಗುತ್ತಿದ್ದಂತೆ ಸದ್ದು ಬಂದು ಧೈರ್ಯವಂತನಾಗಿದ್ದ ನಾನು ನಡುಗಿ ಸತ್ತೆ... ನಕ್ಸಲರಿರಬಹುದಾ ಅಂದುಕೊಂಡೆ. ಅಲಲ್ಲ... ದುಷ್ಟ ಶಕ್ತಿ ಏನಾದರೂ? ಅಂತ ಮತ್ತೆ ನಡುಗಿದೆ. ಏನೂ ಆಗಲಿ ಅಂತ ಮನೆ ಕಡೆ ಒಂದೇ ಉಸಿರಿಗೆ ಓಡಿದೆ, ಮಳೆ ಶುರುವಾಯ್ತು. ಸಿಡಿಲು ಬಂತು, ಸುಂಟರಗಾಳಿ ಕಾಡಿನ ತುಂಬೆಲ್ಲ ಬಂದು ನನ್ನನ್ನು ಎಳೆದುಕೊಂಡು ಎಲ್ಲೋ ಹಾಕಿದಂತೆ ಅನ್ನಿಸಿತು. ಗಿಡುಗವೋ ಹದ್ದೋ ಕ್ರೂರವಾಗಿ ಕೂಗಿತು. ಕೆಲವೊಮ್ಮೆ ಮಳೆ, ಗಾಳಿ, ಸಿಡಿಲು ದುಷ್ಟ ಶಕ್ತಿಗಳಾಗಿ ಬದಲಾಗುತ್ತದೆ ಅಂತ ಅಮ್ಮಾ ಆಗಾಗ ನಂಗೆ ಕತೆ ಹೇಳುತ್ತಿದ್ದುದು ನೆನಪಾಯ್ತು. ಇಡೀ ದಾರಿ ಕತ್ತಲಾಯ್ತು. ನಾನು ಓಡಿದೆ... ಓಡಿದೆ...
ಶ್ಯಾಮ ಓದುತ್ತಿದ್ದಂತೆಯೇ ನೆಲ್ಲಿಕಾರಿಯಲ್ಲೂ ಮಳೆ ಸುರಿದೇ ಸುರಿಯಿತು. ಕತೆಯ ಸನ್ನಿವೇಶ, ವಾತಾವರಣದಲ್ಲಿ ಕಳೆದುಹೋದ ಶ್ಯಾಮನ ಎಳೆಗಣ್ಣುಗಳಿಗೆ ಒಂದು ಕ್ಷಣ ಭಯ ಕವಿಯಿತು. ಕೆಲವೊಮ್ಮೆ ನಾವು ಆಳವಾಗಿ ಓದಿದ್ದರ ಪರಿಣಾಮ ನಮ್ಮ ಸುತ್ತಮುತ್ತಲೇ ಆ ಪ್ರಸಂಗಗಳು ನಡೆಯುತ್ತಿರುವಂತೆ ಅನ್ನಿಸುತ್ತದೆ. ಶ್ಯಾಮನಿಗೆ ಹಾಗೇ ಆಯಿತು. ಸುತ್ತಲೂ ದಿಟ್ಟಿಸಿದ. ದೂರದಿಂದ ಕಾಣುತ್ತಿದ್ದ ಪಶ್ಚಿಮಘಟ್ಟದ ಪರ್ವತಶ್ರೇಣಿ ಮೋಡದ ಮಕ್ಕಳನ್ನು ಸುತ್ತಿಕೊಳ್ಳುತ್ತಾ ಮೊಲೆಯುಡಿಸುವಂತೆ ವಿನಮ್ರವಾಗಿ ಕಾಣುತ್ತಿತ್ತಾದರೂ, ನೆಲ್ಲಿಕಾರಿನ ಮಟ್ಟಸ ರೋಡಿನಲ್ಲಿ, ಬಸ್ಸುಸ್ಟಾಪಿನ ಅಪ್ರತಿಮ ನೀರವದಲ್ಲಿ, ಸುತ್ತಲೂ ದಿಟ್ಟಿಸುವ ಕಾನನದ ಕಣ್ಣಂಚಲ್ಲಿ, ಮೋಡದ ಭಯಾನಕ ಕತ್ತಲು ಸುರಿದುಕೊಂಡು, ಇಡೀ ನೆಲ್ಲಿಕಾರು ವಿಲಕ್ಷಣವಾಗಿ ತೋರಿತು. ಕೆಲವೇ ಕ್ಷಣಗಳಲ್ಲಿ ಮಳೆ ಭಯಂಕರವಾಗಿ ಹರಿದು ಹಿಂದಿದ್ದ ಮೌನವೂ ನಿರ್ವಿಣ್ಣವಾಯ್ತು. ನೆಲ್ಲಿಕಾರು ಹೀಗೆ ಆಷಾಢದ ಮಳೆಯಲ್ಲಿ ವಿಚಿತ್ರವಾಗಿ ಬದಲಾಗುತ್ತ, ರೂಪ ಪರಿವರ್ತನೆಯಾಗುವುದು, ಅದನ್ನು ನೋಡಿ ಕೆಲವೊಬ್ಬರು ಇದೇನಪ್ಪಾ ಅಂತ ಅರೆಕ್ಷಣ ಗಾಬರಿಯಾಗುವುದು ಮಾಮೂಲು. ನೆಲ್ಲಿಕಾರಿನಿಂದ ಚಂಡೆಕ್ರಾಸಿನವರೆಗೂ ಕವಿದ ಕತ್ತಲದಾರಿಯ ನಡತೆ ಅರ್ಥವಾಗದೇ ಎಷ್ಟೋ ಬೈಕುಗಳು ಉರುಳಿವೆ. 'ಎಚ್ಚರ: ಆ್ಯಕ್ಸಿಡೆಂಟ್ ಝೋನ್- ನಿಧಾನವಾಗಿ ಚಲಿಸಿ' ಅಂತ ಬರೆದಿದ್ದ ಬೋರ್ಡನ್ನು ಬಳ್ಳಿ, ಪೊದೆಗಳೆಲ್ಲ ನುಂಗಿ ಹಾಕಿಕೊಂಡ ಪರಿಣಾಮವಾಗಿ, ಅದರ ಅಸ್ತಿತ್ವ ಕಾಣಿಯೋ ಕಾಣಿಸದೆಯೋ ಬೈಕುಗಳು ಸೀದಾ ಹೋಗಿ ಆ ಬೋರ್ಡ್‌ಗೆ ಗುದ್ದಿ, ಪರಿಸ್ಥಿತಿ ಘನಗಂಭೀರವಾದ ಉದಾಹರಣೆಗಳು ಇಲ್ಲಿ ಸಿಗುತ್ತವೆ. ಇಂತಿಪ್ಪ ನೆಲ್ಲಿಕಾರಲ್ಲಿ ಈಗ ಮಳೆ ಸುರಿದು, ಬಸ್‌ಸ್ಟಾಪಿನಲ್ಲಿ ಕತೆ ಓದಿಕೊಂಡು ಕೂತಿದ್ದ ಶ್ಯಾಮನಿಗೆ ನಿಜವಾಗಿ ಭಯಪಡಿಸಬೇಕು ಅಂತ ಪಣತೊಟ್ಟು ಕೂತಂತೆ ಕಾಣುತ್ತಿತ್ತು ಆ ನೆಲ್ಲಿಕಾರಿನ ದಾರಿ.
-
ಶ್ಯಾಮ ಅಂಥದ್ದೇ ಮತ್ಯಾವುದೋ ಕತೆ ಓದಿ ಮುಗಿಸಿದ್ದ. ಹಾಗೇ ಕೂತು ಸುತ್ತಲೂ ಬದಲಾಗಿದ್ದ ವಾತಾವರಣವನ್ನು ದಿಟ್ಟಿಸಿದ. ಸಣ್ಣಗೆ ಮಳೆ ಸುರಿಯುತ್ತಾ ಕತ್ತಲಾಗಿತ್ತು... ಅದು ಮಧ್ಯಾಹ್ನದ ಹೊತ್ತೇನೋ ಹೌದು. ಆದರೆ ಆ ಭಯಾನಕ ಕತ್ತಲು ಮಾತ್ರ ಇದು ಮಧ್ಯಾಹ್ನವೋ ಗಾಢವಾದ ಆಕಳಿಕೆಯನ್ನು ಭರಿಸೋ ರಾತ್ರಿಯೋ ಕೆಂಬಣ್ಣದಿಂದ ಕಿತ್ತಳೆಯಾಗುವ ಮುಸ್ಸಂಜೆಯೋ ಅನ್ನೋ ಸುಳುಹನ್ನು ಸುತರಾಂ ಬಿಟ್ಟುಕೊಡಲಿಲ್ಲ. ಯಾರಿಗಾದರೂ ಒಮ್ಮೆ ಈ ಊರನ್ನು ನೋಡಿದರೆ ಆ ಕ್ಷಣಕ್ಕೆ ಇರುಸು ಮುರುಸಾಗುತ್ತಿದ್ದದು ಸಹಜ. ಶ್ಯಾಮನಿಗೂ ಹಾಗೇ ಆಯಿತು. ಇಡೀ ಪ್ರಕೃತಿ ವಿಚಿತ್ರವಾಗಿ ಬದಲಾಗುತ್ತಿದ್ದಂತೆಯೇ ಅವನಿಗೆ ದಿಗಿಲಾಯ್ತು. ತಾನು ಓದಿದ ಕತೆಯಲ್ಲ ತನ್ನೆದುರು ಬರುತ್ತದೆಯೇನೋ ಅನ್ನಿಸಿತು ಅವನಿಗೆ. ಮತ್ತೂ ಮಳೆ... ಮತ್ತೊಂದಿಷ್ಟು ಪಕಳೆ ಸಿಡಿಲು, ಬೆಳ್ಳೆನ್ನುವ ಮುಗಿಲ ಮಿಂಚು, ನಾನೂ ಇದರದ್ದೇ ಭಾಗ ಎಂದು ದಿಗ್ಗನೇ ಆ ದಾರಿಯಲ್ಲಿ ಹಾದು ಹೋದ ಒಂದು ಬೈಕು, ಇಷ್ಟೇ ಬಿಟ್ಟರೆ ಆ ದಾರಿಯಲ್ಲಿ ಮತ್ಯಾವ ಪಿಳ್ಳೆಯೂ ಬರಲಿಲ್ಲ. ಒಮ್ಮೆ ಭಯಾನಕವಾಗಿ, ಮತ್ತೊಮ್ಮೆ ಕ್ರೂರವಾಗಿ, ಕೊನೆಗೊಮ್ಮೆ ನಾಟಕೀಯವಾಗಿ, ಯಾವುದೋ ಮರದಲ್ಲಿ ಕೂತ ಹದ್ದೊಂದು ಕೂಗಿದಾಗ ಮತ್ತೊಂದಿಷ್ಟು ಭಯಾನಕತೆ ಬಂತು ಆ ದಾರಿಗೆ. ಶ್ಯಾಮನಿಗೆ 'ನೀನು ಓದಿದ ಕತೆ ಇನ್ನೇನು ನಿನ್ನ ಮುಂದೆ ನಿಜವಾಗಿ ಬರುತ್ತದೆ ನೋಡು' ಎನ್ನುವಂತಿತ್ತು ಆ ವಾತಾವರಣ, ಆ ಮಳೆ, ಆ ದಾರಿ. ಭರ್ರೋ.. ಭರ್ರೋ ಅಂತ ಆ ಮಳೆ ಹೆದರಿಸಿದಂತೆ... 'ಆ ಕತೆಯಲ್ಲಿ ಬರೋ ಹದ್ದು ನಾನೇ' ಅಂತ ಆ ಹದ್ದು ಕೂಗಿ ಕೂಗಿ ತನ್ನನ್ನೇ ಹುಡುಕುವಂತೆ... ಸುಂಟರಗಾಳಿ ಅಟ್ಟಾಡಿಸಿಕೊಂಡು ಬೆನ್ನುರಿಮಾಡಿದಂತೆ ಅನ್ನಿಸಿ ಶ್ಯಾಮನ ಎಳೆಕಂಗಳಲ್ಲಿ ದಿಗ್ಗನೆ ಮೂಡಿದ ಭಯದ ಕೋಲ್ಮಿಂಚನ್ನು ನೋಡಲು ಮಳೆ- ಗಾಳಿ- ಹದ್ದು- ಬಿಬ್ಬಿರಿದು ನಗುವ ಪಶ್ಚಿಮಘಟ್ಟ- ಬಸ್‌ಸ್ಟಾಪು ಇಷ್ಟು ಬಿಟ್ಟರೆ ಮತ್ಯಾರೂ ಅಲ್ಲಿರಲಿಲ್ಲ. ಒಟ್ಟಾರೆ ಆ ಮಳೆಯ ಮಧ್ಯಾಹ್ನ ಶ್ಯಾಮ ಅಚಾನಕ್ಕಾಗಿ ಬಂದ ಭಯದಿಂದ ಏನೇನೋ ಆಗಿಹೋದದ್ದು ಮಾತ್ರ ಸುಳ್ಳಲ್ಲ. ಪಶ್ಚಿಮಫಟ್ಟದ ಕಡೆಯಿಂದ ಘೋರವಾದ ಸಿಡಿಲಿನ ಆರ್ಭಟವೊಂದು ಘೀಳಿಟ್ಟು, ದೂರದಲ್ಲಿದ ಲೈಟು ಕಂಬದ ಟ್ರಾನ್ಸ್‌ಫಾರ್ಮರ್ರೋ ಮತ್ತೊಂದಕ್ಕೋ ಬಡಿದು ತಂತಿಗಳು ಚೂರುಚೂರೇ ಹೊತ್ತಿಕೊಂಡಿತು. ಅದೇ ಶಬ್ದಕ್ಕೆ ತಂಗುದಾಣವೂ ಸಣ್ಣದಾಗಿ ನಡುಗಿತು. 'ಅಬ್ಬಾ...ಅಯ್ಯಾ...' ಅಂತ ಶ್ಯಾಮ ಹೆದರಿ ಮುಖವನ್ನೆಲ್ಲ ಕೈಯಿಂದ ಮುಚ್ಚಿಟ್ಟು, ತಂಗುದಾಣದ ಮೂಲೆಯೊಂದರಲ್ಲಿ ಮುದುರಿ ಕೂತ. ಅವನ ಆ ಕತೆಪುಸ್ತಕ ಅಲ್ಲೇ ಕೆಳಗೆ ಬಿದ್ದರೂ ಅದನ್ನು ಎತ್ತಿಕೊಳ್ಳುವುದಕ್ಕೂ ಶ್ಯಾಮನಿಗೆ ಭಯವಾಯ್ತು... ಆ ಮಧ್ಯಾಹ್ನ ಶ್ಯಾಮನ ಜಾಗದಲ್ಲಿ ಬೇರಾರೂ ಇದ್ದಿದ್ದರೂ ಕೊಂಚವಾದರೂ ಬೆಂಬಿಡದೇ ಕಾಡುತ್ತಿದ್ದ ಮಳೆಗೆ, ವಿಚಿತ್ರ ಏಕತಾನತೆಗೆ, ಭಯಂಕರ ಸಿಡಿಲಿಗೆ, ಅಧೈರ್ಯಗೊಳ್ಳುತ್ತಿದ್ದರೇನೋ? ಈ ನಡುವೆ ಶ್ಯಾಮನಿಗೆ ಮನೆಯ ನೆನಪಾಯ್ತು... ಮನೆ ಮನೆ ಅಂದಾಗ ಅಯ್ಯೋ ಬಸ್ಸು ಜಾಲಿ... ಹೊರಟೋಯ್ತಾ ಅಥವಾ ಇನ್ನು ಬರಬೇಕಾ ಅಂತ ಅಂದಾಜಾಗದೇ ಮತ್ತೆ ಚಿಂತೆ ಹತ್ತಿತು. ನೆಲ್ಲಿಕಾರಿನ ಕ್ರಾಸು ರೋಡಿನತ್ತ ನೋಡಿದ. ಬಸ್ಸು ಬಂದ ಕುರುಹಾಗಲೀ... ಬರುವ ಕುರುಹಾಗಲೀ ಏನೂ ಕಾಣಿಸಲಿಲ್ಲ ಅವನಿಗೆ... ಅಯ್ಯೋ ಬಸ್ಸು... ಜೋರು ಮಳೆ ಬಂತಂತ ಬರುವುದೇ ಇಲ್ಲವಾ ಅಥವಾ ನಂಗೆ ಗೊತ್ತಾಗದೇ ಹೊರಟೋಯ್ತಾ? ಮತ್ತೆ ಕಂಗಾಲು.. ಒಳಗೊಳಗೇ ಬಿಕ್ಕುತ್ತಾ ಹಾಗೇ ಮುದುರಿ ಕೂತವನಿಗೆ ತಂಗುದಾಣದ ಒಳಗಿದ್ದ ಅಷ್ಟಿಷ್ಟೆ ಬೆಳಕಿನಲ್ಲಿ ಹರಕಾಗಿ ಬಿದ್ದ ಪರ್ಸೊಂದು ಕಂಡಿತು. ತೆರೆದುಕೊಂಡಿದ್ದ ಆ ಪರ್ಸಿನಲ್ಲಿ ಯಾವುದೋ ಗಡ್ಡಬಿಟ್ಟ ಮನುಷ್ಯನ ವಿಚಿತ್ರಭಂಗಿಯ ಪಾಸ್‌ಪೋರ್ಟು ಫೋಟೋ ನೋಡಿ ಶ್ಯಾಮ ಹೌಹಾರಿದ. ಮೊದಲೇ ಅವನಲ್ಲಿ ಸೃಷ್ಟಿಗೊಂಡಿದ್ದ ಭಯಾನಕತೆಗೆ ಮತ್ತಷ್ಟು ಇಂಬು ಕೊಡುವಂತಿತ್ತು ಆ ಫೋಟೋ. ಏನೋ ಒಂದು ವಸ್ತು ಸಿಕ್ಕಿ, ಅದು ಮತ್ತೂ ದೊಡ್ಡದಾಗುತ್ತಾ ಹೋಗುತ್ತದೆ. ಫೋಟೋದಲ್ಲಿ ಕಾಣುವ ವ್ಯಕ್ತಿಗಳು ನಮ್ಮನ್ನು ಕಾಡಿಸುತ್ತಾರೆ. ಅದರಲ್ಲಿ ವಿಷಕಾರಕ ವಸ್ತುಗಳಿರುತ್ತವೆ ಅಂತ ಎಲ್ಲೋ ಓದಿದ್ದನ್ನೋ ಕೇಳಿದ್ದನ್ನೋ ನೆನೆದು ಇನ್ನೂ ಭಯವಾಯ್ತು ಶ್ಯಾಮನಿಗೆ. ಬಸ್‌ಸ್ಟಾಪಿನಿಂದ ಚೂರು ಈಚೆ ಬಂದು ಮಳೇಲಿ ನೆನೆಯುತ್ತಾ ಬಸ್ಸು ಬಂತಾ ಅಂತ ಅಳುಮುಂಜಿ ಮೋರೆಯಲ್ಲಿ ನೋಡಿದ. ಊಹ್ಞೂಂ ಬರಲೇ ಇಲ್ಲ. ಆದರೆ ಆ ಹಾಳು ಮಳೆ ಮಾತ್ರ ಬರುತ್ತಲೇ ಇತ್ತು. ಮಂಕಾಗಿ ಮತ್ತೆ ಸ್ಟಾಪಿನಲ್ಲಿ ಕೂತಾಗ, ದೂರದಿಂದ ಜಾಲಿ ಟ್ರಾವೆಲ್ಸಿನ ಹಾರ್ನು ಕೇಳಿ ಶ್ಯಾಮನ ಕಿವಿ ಎಚ್ಚರಾಯ್ತು. ಶ್ಯಾಮನಿಗೆ ಹೋದ ಜೀವ ಬಂತು. ಅದೇ ಹುಮ್ಮಸ್ಸಿನಲ್ಲಿ ಬಿದ್ದಿದ್ದ ಪರ್ಸನ್ನು ಎಲ್ಲಿಂದಲೋ ಬಂದ ಧೈರ್ಯದಿಂದ ಎತ್ತಿ ಮಾಡ್ತೇನೆ ನಿಂಗೆ ಪೂಜೆ ಅನ್ನುತ್ತಾ ಒಂದೇ ಸಲ ದೂರಕ್ಕೆ ಎಸೆದೇ ಬಿಟ್ಟ. ಲೈಬ್ರೆರಿ ಪುಸ್ತಕ ತೆಗೆಯುವ ಧೈರ್ಯ ಈಗ ಬಂತು ಅವನಿಗೆ... ಮಳೆಯಲ್ಲಿ ಹೆಡ್‌ಲೈಟ್ ಬೆಳಕನ್ನು ತೊಳೆದುಕೊಂಡು ಬಂದ ಜಾಲಿ ಟ್ರಾವೆಲ್ಸ್‌ನ ಎದುರು ಕೈ ಬೀಸಿ ಸ್ಟಾಪ್ ಎಂದಾಗ ಡ್ರೈವರ್ ಸುರೇಶ ಈ ಶ್ಯಾಮನನ್ನು ನೋಡಿ ಕೊಂಚ ನಗುತ್ತಲೇ ಬಸ್ಸು ನಿಲ್ಲಿಸಿದ... ಬಸ್ಸು ಬಿಟ್ಟಿತು ನೆಲ್ಲಿಕಾರಿನ ಕಾಡ ಹಾದಿಯನ್ನು ಹಿಡಿದುಕೊಳ್ಳುತ್ತಾ... ಆದರೆ ಭಯಾನಕಗೊಳ್ಳುತ್ತಾ ಬರುತ್ತಿದ್ದ ಮಳೆ ಮಾತ್ರ ಬಿಡಲಿಲ್ಲ...


-  ಪ್ರಸಾದ್ ಶೆಣೈ ಆರ್.ಕೆ.
prasad.shenoy93@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement