ಕೋಟೆದಾರಿಯಲ್ಲಿ ಕೆಳಕ್ಕಿಳಿಯುವಾಗಲೇ ಕಣ್ಣಿಗೆ ದೊಡ್ಡದಾಗಿ ಎತ್ತರವಾಗಿ ಕಾಣುವುದೇ ಉತ್ಸವಾಂಬ ದೇವಾಲಯ. ಇದನ್ನು ಹುಚ್ಚಂಗಿ ಯಲ್ಲಮ್ಮ ಅಂತಲೂ ಕರೆಯುತ್ತಾರೆ. ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕನ ಆಳ್ವಿಕೆಯಲ್ಲಿ ನಡೆದ ಯುದ್ಧದಲ್ಲಿ ಹುಚ್ಚಂಗಿದುರ್ಗದಿಂದ ಈ ಶಕ್ತಿ ದೇವತೆಯನ್ನು ತಂದು ಪ್ರತಿಷ್ಠಾಪಿಸಲಾಗಿದೆ. ಐದು ಅಂತಸ್ತುಗಳ ಭವ್ಯ ಕಟ್ಟಡ ಆಲಯದ ಮಹಾದ್ವಾರಗಳ ಮೇಲಿದ್ದವಂತೆ. ಟಿಪ್ಪು ಆಡಳಿತಕ್ಕೆ ದುರ್ಗ ಒಳಪಟ್ಟಾಗ ಮೂರು ಅಂತಸ್ತುಗಳನ್ನು ಕೆಡವಿ ಈ ಕಲ್ಲುಗಳಿಂದ ಜುಮ್ಮಾ ಮಸೀದಿಯನ್ನು ನಿರ್ಮಿಸಲಾಯಿತೆನ್ನುತ್ತಾರೆ ಇತಿಹಾಸ ತಜ್ಞರು. ಈ ದೇವಿ ಪಾಳೇಗಾರರ ಇಷ್ಟದೇವತೆ. ದೇವಾಲಯದ ಮುಂದೆ ಎತ್ತರದ ದೀಪದಸ್ತಂಭ ಸಮೀಪದಲ್ಲೇ ಬೃಹತ್ ಉಯ್ಯಾಲೆ ಕಂಬಗಳಿದ್ದು ಇವುಗಳು ಕೋಟೆಯ ಮೇಲಿನ ಉಯ್ಯಾಲೆಕಂಬ ದೀಪಸ್ತಂಭದ ಮಾದರಿಯಲ್ಲೇ ಇವೆ. ಇವನ್ನೆಲ್ಲಾ ಫ್ರೆಂಚ್‌ಜಾನ್ ಕಟ್ಟಿದನೆಂದು ಇತಿಹಾಸತಜ್ಞರ ಅಭಿಮತ.
ರಂಗಯ್ಯನ ಬಾಗಿಲ ಒಳಬದಿ ಪ್ರಾಚ್ಯವಸ್ತು ಇಲಾಖೆಯ ಮ್ಯೂಸಿಯಂ ಇದ್ದು ಇಲ್ಲಿ ಪ್ರಾಚೀನ ಮದ್ದುಗುಂಡುಗಳು, ಕತ್ತಿ- ಕಠಾರಿ, ಕವಚ, ಭರ್ಜಿ, ಸರಪಳಿ ಮುಂತಾದ ಯುದ್ಧ ಸಾಮಗ್ರಿಗಳನ್ನು ನೋಡಬಹುದು. ಇವೆಲ್ಲ ರಾಜಬೀದಿ ಎಂದು ಕರೆಸಿಕೊಳ್ಳುವ ದೊಡ್ಡಪೇಟೆಯಲ್ಲಿ ಕಂಡುಬರುತ್ತವೆ. ಚಿಕ್ಕಪೇಟೆಯತ್ತ ಬಂದರೆ ಪಾತಾಳೇಶ್ವರ ದೇವಾಲಯವಿದೆ. ನಿಜಕ್ಕೂ ಇದು ಪಾತಾಳದಲ್ಲೇ ಇದೆ. ಮೆಟ್ಟಿಲುಗಳ ಮುಖೇನ ಹುಷಾರಾಗಿ ಕೆಳಗಿಳಿದರೆ ಪುಟ್ಟ ಪಾತಾಳೇಶ್ವರನ ಗುಡಿ, ಎದುರಿನಲ್ಲೇ ಬಾವಿ ಕೂಡ ಇರುವುದು ವಿಶೇಷ. ಮುಂದೆ ನಡೆದರೆ ಸಂತೆಬಾಗಿಲು ಕಾಣುತ್ತದೆ. ಇಲ್ಲೇ ಸನಿಹದಲ್ಲಿ ಭಕ್ತರ ಅಭೀಷ್ಟ ನೆರವೇರಿಸುವ ಶ್ರೀ ರಾಘವೇಂದ್ರಸ್ವಾಮಿ ಮಠವಿದೆ. ಸಂತೆಬಾಗಿಲಿಂದ ಈಚೆ ಬಂದರೆ ಪ್ರಾಚೀನ ಗುಡಿಗಳಿವೆ. ಕೋಟೆ ಆಂಜನೇಯ, ಲಕ್ಷ್ಮೀನಾರಾಯಣ ಗಣಪತಿ ವಿರಾಜಮಾನರಾಗಿದ್ದಾರೆ. ಇಲ್ಲಿ ಹಿಂದೆ ಬೃಹತ್ ಸ್ಪರ್ಧೆಗಳು ದಸರಾದಲ್ಲಿ ನಡೆಯುತ್ತಿದ್ದು ಸಂತೆಬಾಗಿಲ ಮೇಲೆ ದೊರೆಗಳು ಪರಿವಾರ ಸಮೇತ ಕೂತು ವೀಕ್ಷಿಸುತ್ತಿದ್ದರು. ಇದೀಗ ಇಲ್ಲಿ ವರ್ಷಕ್ಕೊಮ್ಮೆ ಗಣೇಶೋತ್ಸವ ಬಹು ವಿಜೃಂಭಣೆಯಿಂದ ನಡೆಯುತ್ತದೆ. ಮುಂದೆ ಇಳಿದರೆ ಸಂತೆಪೇಟೆ ಸರ್ಕಲ್ ಅರ್ಥಾತ್ ಮಹಾತ್ಮಾ ಗಾಂಧಿ ವೃತ್ತ, ಇಲ್ಲಿನ ಸುತ್ತಮುತ್ತ ಅಂಗಡಿ ಮುಂಗಟ್ಟು ಸೊಪ್ಪಿನ ಮಾರ್ಕೆಟ್ ಹೂವಿನ ಅಂಗಡಿಗಳು ಕಬ್ಬಿಣದ ಅಂಗಡಿ ಹೋಟೆಲ್ ಬೇಕರಿ ಸ್ಪೀಟ್‌ಸ್ಟಾಲ್ ಮೆಡಿಕಲ್ ಶಾಪ್‌ನಿಂದ ಬ್ರಾಂದಿಶಾಪ್‌ವರೆಗೆ ಏನೆಲ್ಲ ರಾರಾಜಿಸುತ್ತವೆ. ಒಂದು ಬದಿ ಹೊಳಲ್ಕೆರೆಗೆ ಹೋಗುವ ರಸ್ತೆ ಇದ್ದು ಅಲ್ಲೊಂದು ಶಕ್ತಿದೇವತೆಯ ಪ್ರಾಚೀನ ದೇವಸ್ಥಾನ ಗೌರಸಮುದ್ರದ ಮಾರಮ್ಮ ಇದ್ದಾಳೆ. ಮುಂದೆ ಸಾಗಿದರೆ ಚಂದ್ರವಳ್ಳಿ ಹತ್ತಿರ ಹತ್ತಿರ ಮತ್ತೊಬ್ಬ ಎಕ್ಸ್‌ಟ್ರಾ ಆರ್ಡಿನರಿ ಸ್ಟ್ರಾಂಗ್‌ಗಾಡೆಸ್ ಬರಗೇರಮ್ಮ ದೇವಾಲಯವಿದೆ. ಹೂ ಅಪ್ಪಣೆ ಕೊಡುವ ದೇವಿಯಾದ್ದರಿಂದ ಜನದಟ್ಟಣೆ ಸಾಮಾನ್ಯ. ಮುಂದೆ ಸಾಗಿದರೆ ಚಂದ್ರವಳ್ಳಿ ಭೂಪ್ರದೇಶ ಸಿಗುತ್ತದೆ. ಇಲ್ಲಿ ಉತ್ಖನನ ನಡೆದಾಗ ಹರಪ್ಪ ಮಹೆಂಜೋದರ ಸಂಸ್ಕೃತಿ ಇತ್ತೆಂದು ಅಲ್ಲಿ ಸಿಕ್ಕ ಸಾಮಗ್ರಿಗಳಿಂದ ತಿಳಿದು ಬಂದಿದೆ.
ಚಿತ್ರದುರ್ಗದ ಕಲ್ಲಿನ ಕೋಟೆ
ಲೇ: ಡಾ.ಬಿ.ಎಲ್. ವೇಣು
ಪ್ರ: ವಸಂತ ಪ್ರಕಾಶನ
ಪುಟ: 94, ಬೆಲೆ: 80