ದನ ಕಾಯುವವನೊಬ್ಬ ಸಂಜೆ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದ. ಕೊನೆಗುಳಿದ ಒಂದು ದನದ ಹಗ್ಗ ಕಳೆದುಹೋಗಿತ್ತು. ಆಗಲೇ ಕತ್ತಲಾದದ್ದರಿಂದ ಹಗ್ಗವೂ ಕಾಣಿಸಲಿಲ್ಲ. ಹಾಗೆ ಬಿಟ್ಟರೆ ದನ ಓಡಿಹೋಗುತ್ತದೆ, ಯಜಮಾನ ಬಯ್ಯುತ್ತಾನೆ ಎಂಬ ಭೀತಿ ಅವನನ್ನು ಕಾಡಿತು. ಸ್ವಲ್ಪ ಹೊತ್ತು ಯೋಚಿಸಿದ ಆತ, ಆ ದನದ ಬಳಿ ಹೋಗಿ ಪ್ರತಿನಿತ್ಯದಂತೆ ಅದನ್ನು ಕಟ್ಟಿಹಾಕುವಂತೆ ನಟಿಸಿದ. ಬಳಿಕ ಹೋಗಿ ಮಲಗಿಕೊಂಡ. ಬೆಳಗ್ಗೆ ಬಂದು ನೋಡುವಾಗ ಆ ದನ ನಿಂತಲ್ಲೇ ನಿಂತಿತ್ತು. ಉಳಿದೆಲ್ಲ ದನಗಳನ್ನೂ ಮೇಯಲು ಬಿಟ್ಟು ಆತ ಹೊರಟುನಿಂತರೆ ಈ ದನ ಮಾತ್ರ ತನ್ನ ಜಾಗದಲ್ಲೇ ನಿಂತಿತ್ತು. ತಕ್ಷಣ ಹುಡುಗ ಹೋಗಿ ಅದನ್ನು ಹಗ್ಗದಿಂದ ಬಿಡುವಂತೆ ನಟಿಸಿದ. ತಕ್ಷಣ ದನ ಖುಷಿಯಿಂದ ತನ್ನ ಮಂದೆ ಸೇರಿಕೊಂಡಿತು!