ಭಾರತ ಗಣರಾಜ್ಯವಾದ ಎರಡು ಮೂರು ತಿಂಗಳಲ್ಲೇ ಯೋಜನಾ ಆಯೋಗವು ದೇಶದ ಭವಿಷ್ಯ ಯೋಜನೆಗಳಿಗೆ ಮುನ್ನುಡಿ ಬರೆಯಬೇಕಿತ್ತು. ಪ್ರಥಮ ಪಂಚವಾರ್ಷಿಕ ಯೋಜನೆ 1951ರಲ್ಲಿ ಪ್ರಾರಂಭವಾಯಿತು. ಪ್ರಕಾಶನ ವಿಭಾಗದಲ್ಲಿ ಯೋಜನಾ ಶಾಖೆಯು ಕಾರ್ಯನಿರ್ವಹಿಸುತ್ತಿತ್ತು. ಕನ್ನಡಿಗರೇ ಆದ ಎಚ್.ವೈ. ಶಾರದಾ ಪ್ರಸಾದ್ ಅವರು ಆಗ 'ಯೋಜನಾ' ಇಂಗ್ಲಿಷ್ ಮಾಸಪತ್ರಿಕೆಯ ಸಂಪಾದಕರು. ನಂತರ ಈ ಶಾಖೆಯು 'ಯೋಜನಾ ಭವನ'ಕ್ಕೆ ಸ್ಥಳಾಂತರವಾಯಿತು. ಕನ್ನಡ, ಹಿಂದಿ, ಬೆಂಗಾಳಿ, ಮರಾಠಿ, ತೆಲುಗು, ಗುಜರಾತಿ ಭಾಷೆಗಳಲ್ಲೂ ಪ್ರಕಟಣೆ ಆರಂಭವಾಯಿತು.
ಖ್ಯಾತ ಲೇಖಕರೂ, ವಿದ್ವಾಂಸರೂ ಆದ ಶಾರದಾ ಪ್ರಸಾದ್ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. 'ಎಲ್ಲ ಬಲ್ಲವರಿಲ್ಲ' ಎಂಬ ಅವರ ಕೃತಿ 2006ರ ಮೇನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಕಂಡಿತು. ಸಂ. ಡಾ. ಪ್ರಭುಶಂಕರ. ಈ ಸಮಾರಂಭಕ್ಕೆ ಎಚ್.ವೈ. ಶಾರದಾ ಪ್ರಸಾದರು ಆಗಮಿಸಿದ್ದರು.
ಶಾರದಾ ಪ್ರಸಾದರು 1993ರಲ್ಲಿ ಬರೆದ ಒಕ್ಕಣಿಕೆ ಸಾಲುಗಳು ಹೀಗಿವೆ; 'ನನಗೆ ಪ್ರಶಸ್ತಿ ದೊರೆತದ್ದಕ್ಕಾಗಿ ಒಳ್ಳೆಯ ಮಾತಾಡಿದ್ದೀರಿ. ಅದಕ್ಕಾಗಿ ಕೃತಜ್ಞ. ಪ್ರಕಾಶನ ವಿಭಾಗದ ದಿನಗಳು ಬಹಳ ಚೆನ್ನಾಗಿದ್ದವು. ನೀವು ಬರವಣಿಗೆಯನ್ನು ಮುಂದುವರಿಸಿದ್ದೀರಿ ಎಂದು ತಿಳಿದು ಸಂತೋಷವಾಯಿತು'.
ಹಗಲು- ರಾತ್ರಿ ಸೇವೆ
ಎಚ್.ವೈ. ಶಾರದಾಪ್ರಸಾದರು 17 ವರ್ಷ ಇಂದಿರಾಗಾಂಧಿ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ಪಂಚವಾರ್ಷಿಕ ಯೋಜನೆ ಬಗ್ಗೆ ಕನ್ನಡದಲ್ಲಿ ಪ್ರಚಾರ ಕಿರುಹೊತ್ತಗೆಗಳ ಪ್ರಕಟಣೆ ಶ್ರೀ ತಿರುಮಲೇಶ ಭಟ್ಟರು ಭಾಷಾ ಪಂಡಿತರಾಗಿದ್ದರು. ಅವರ ಬರವಣಿಗೆ ಶೈಲಿ, ಆಡುಭಾಷೆಯಲ್ಲೇ ಇರುತ್ತಿದ್ದವು. ಅವರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡೇ ಅವರು ತುಂಬಾ ಪ್ರೋತ್ಸಾಹಿಸುತ್ತಿದ್ದರು. ಅವರು ಆದರ್ಶ ಮಾರ್ಗದರ್ಶಕರಾಗಿದ್ದರು. ನಿಮಗೆ ಬೇಕಾದ್ದನ್ನು ಮುಕ್ತ ಮನಸ್ಸಿನಿಂದ ಕೇಳಿ ಎಂದು ಹೇಳುತ್ತಿದ್ದರು. ಅವರ ಕಾರ್ಯಚಟುವಟಿಕೆಗಳ ವಿಸ್ತಾರ ತುಂಬಾ ದೊಡ್ಡದು. ಕರ್ನಾಟಕ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಅವರು ಕಂಕಣಬದ್ಧರಾಗಿದ್ದರು. ಹಗಲು- ರಾತ್ರಿಯೆನ್ನದೆ ಅವರು ಶ್ರಮಿಸುತ್ತಿದ್ದರು. ನನ್ನನ್ನು ಕೆಲಸ ಕಾರ್ಯಗಳಲ್ಲಿ ತೊಡಗಿಸುತ್ತಿದ್ದರು. ಕರ್ನಾಟಕದ ಹಿರಿಯ ಮುಖಂಡರೂ ಹಾಗೂ ಲೋಕಸಭೆಯ ಸದಸ್ಯರೂ ಆಗಿದ್ದ ಎಸ್. ನಿಜಲಿಂಗಪ್ಪನವರು ಕರ್ನಾಟಕ ಸಂಘಧ ಅಧ್ಯಕ್ಷರಾಗಿದ್ದರು. ಲೋಕಸಭೆಯ ಉಪಾಧ್ಯಕ್ಷರಾಗಿದ್ದ ಎಸ್.ವಿ. ಕೃಷ್ಣಮೂರ್ತಿರಾಯರು ಸಂಘದ ಉಪಾಧ್ಯಕ್ಷರಾಗಿದ್ದರು. ನಾನು ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದುದರಿಂದ ಎಲ್ಲರ ಪರಿಚಯವಾಗುತ್ತಿಲ್ಲ. ದಿಲ್ಲಿ ಕರ್ನಾಟಕ ಸಂಘವು ಏರ್ಪಡಿಸಿದ್ದ 'ಬೇಡರ ಕಣ್ಣಪ್ಪ' ಕನ್ನಡ ಚಲನಚಿತ್ರ ಪ್ರದರ್ಶನವನ್ನು ರೀಗಲ್ ಟಾಕೀಸ್‌ನಲ್ಲಿ ಪ್ರದರ್ಶಿಸಲಾಗಿತ್ತು. ಚಿತ್ರ ನೋಡಲು ಜನ ಕಿಕ್ಕಿರಿದು ತುಂಬಿದ್ದರು.
ಆಗ ಪ್ರಕಾಶನ ವಿಭಾಗದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿತ್ತು. ಯು.ಎಸ್. ಮೋಹನರಾವ್, ಎಚ್.ವೈ. ಶಾರದಾ ಪ್ರಸಾದ್, ಜಿ. ನಂಜನಾಥ, ಟಿ. ಕಾಶಿನಾಥ, ನಾಗರಾಜ, ಯು.ಕೆ. ಮಲ್ಯ, ಭಾಸ್ಕರರಾವ್ ಅವರು ಉನ್ನತ ಹುದ್ದೆಯಲ್ಲಿದ್ದರು.
1956ರಲ್ಲಿ ದ್ವಿತೀಯ ಪಂಚವಾರ್ಷಿಕ ಯೋಜನೆ ಹಾಗೂ ಅದಕ್ಕೆ ಸಂಬಂಧಪಟ್ಟ ಪುಸ್ತಕ ಪ್ರಕಟಣೆಯ ಮುದ್ರಣ ಕೆಲಸಕ್ಕೆ ತಿರುಮಲೇಶ್ ಭಟ್ಟರೊಂದಿಗೆ ಹುಬ್ಬಳ್ಳಿಯಲ್ಲಿ ಎರಡು ತಿಂಗಳು ಇರುವ ಅವಕಾಶ ದೊರಕಿತ್ತು. ಆಗ ದಿಲ್ಲಿಯಲ್ಲಿ ಕನ್ನಡ ಮುದ್ರಣ ಸೌಕರ್ಯವಿರಲಿಲ್ಲ. ಆಗ ಎಲ್ಲೆಲ್ಲೂ ಗಣೇಶೋತ್ಸವಗಳು ನಡೆಯುತ್ತಿದ್ದವು. ಲಕ್ಷ್ಮೇಶ್ವರದ ಗಣೇಶೋತ್ಸವದ ಸಮಾರಂಭಕ್ಕೆ ತಿರುಮಲೇಶ ಭಟ್ಟರು ಮುಖ್ಯ ಅತಿಥಿ. ಅವರ ಭಾಷಣ ಕೇಳಲು ಪಂಪವಾಚನಾಲಯದಲ್ಲಿ ಜನ ಕಿಕ್ಕಿರಿದಿದ್ದರು.
ಮುಂಬೈ ಫ್ರಾಂಟಿಯರ್ ಮೇಳ
ದಿಲ್ಲಿ ಪ್ರಕಾಶನ ವಿಭಾಗದ ಪುಸ್ತಕ ಪ್ರಕಟಣಾ ವಿಭಾಗದಲ್ಲಿ ಮುಖ್ಯಾಧಿಕಾರಿ ಕನ್ನಡಿಗರೇ ಆದ ಜಿ. ನಂಜನಾಥರಿದ್ದರು. ಆಗಲೇ ಮುಂಬೈ ಪ್ರಾದೇಶಿಕ ಪುಸ್ತಕ ವಿಚಾರಣಾ ಕೇಂದ್ರ ಪ್ರಾರಂಭವಾಗಿತ್ತು. ಇವರು ನನ್ನನ್ನು ಕರೆದು, ಮೂಲ ಕಚೇರಿಯಲ್ಲಿ ಒಬ್ಬ ಕನ್ನಡಿಗನಿರಬೇಕೆಂಬುದು ನನ್ನಿಚ್ಛೆ. ನಾನು ನಿಮ್ಮನ್ನೇ ಆಯ್ಕೆ ಮಾಡಿದ್ದೇನೆಂಬುದು ಅವರ ಖಚಿತ ಅಭಿಪ್ರಾಯ. ಅದರಂತೆ ಅದು ಅವರ ತೀರ್ಮಾನವಾಗಿತ್ತು. 'ಸರ್, ಯು ಆರ್ ಪುಷಿಂಗ್ ಮಿ ಟು ದಿ ಅರೇಬಿಯನ್ ಸೀ' ಎಂದು ನಗುತ್ತಲೇ ಹೇಳಿದೆ. ಅವರು ಅದಕ್ಕೆ 'ನೊ, ನೊ, ವೈ ಡು ಯು ಥಿಂಕ್ ಲೈಕ್ ದಟ್. ಐ ವಿಲ್ ಬಿ ವಿತ್ ಯು' ಎಂದು ನನ್ನ ಕೈಗೆ ವರ್ಗಾವಣೆ ಆರ್ಡರ್ ಕೊಟ್ಟರು. ಫ್ರಾಂಟಿಯರ್ ಮೇಲಿನಿಂದ ಮುಂಬೈಗೆ ಪ್ರಯಾಣ.
ಮಹಾರಾಷ್ಟ್ರ, ಗುಜರಾತ್ ಹಾಗೂ ಮಧ್ಯಪ್ರದೇಶ ರಾಜ್ಯಗಳು ಮುಂಬೈ ಕಚೇರಿ ವ್ಯಾಪ್ತಿಗೆ ಒಳಪಟ್ಟಿದ್ದವು. ಈ ರಾಜ್ಯಗಳ ಪುಸ್ತಕ ವ್ಯಾಪಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಲ್ಲದೇ ಅನೇಕ ಸಂಘ, ಸಂಸ್ಥೆಗಳು ಪುಸ್ತಕಗಳನ್ನು ಖರೀದಿಸುವ ಸದಸ್ಯತ್ವವನ್ನು ಹೊಂದಿದ್ದವು. ಅವರೆಲ್ಲ ಪತ್ರ ವ್ಯವಹಾರಗಳ ಮೂಲಕ ಆರ್ಡರ್ ಕಳುಹಿಸುತ್ತಿದ್ದರು. ಸ್ಥಳೀಯ ವ್ಯಾಪಾರಿಗಳು ಕಚೇರಿಗೆ ಬಂದು ಪುಸ್ತಕಗಳನ್ನು ಕೊಂಡೊಯ್ಯುತ್ತಿದ್ದರು. ಜನ ಸಂಪರ್ಕ ದಿನೇ ದಿನೇ ಹೆಚ್ಚಾಗುತ್ತಿತ್ತು.
ಮನೆಗೆ ಬರುತ್ತಿರು...
ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾದ ಡಾ. ಎನ್.ಎಸ್. ಹರ್ಡೀಕರರು ಆಗ ರಾಜ್ಯಸಭಾ ಸದಸ್ಯರಾಗಿದ್ದರು. ನಾನು ದಿಲ್ಲಿಗೆ ಹೋದಾಗ ಅವರನ್ನು ಭೆಟ್ಟಿಮಾಡಿ, ನಾನು ಹುಬ್ಬಳ್ಳಿಯವನೆಂದು ಹೇಳಿದೆ. ಅವರಿಗೆ ಸಂತೋಷವಾಯಿತು. ದಿಲ್ಲಿ 'ಗಿರಕಿ' ಹೊಡೆಯುವ ಊರು. ತುಂಬಾ ಹುಷಾರಾಗಿರು ಎಂದು ಹೇಳಿ, ಈಗ ನೀನು ಎಲ್ಲಿ ಇರುವಿ' ಎಂದು ವಿವರವಾಗಿ ಕೇಳಿದರು. 'ಹಳೇ ದಿಲ್ಲಿಯ ನಯಾ ಬಜಾರಿನಲ್ಲಿರುವ ಮಹಾರಾಷ್ಟ್ರ ಸಮಾಜದಲ್ಲಿ' ಎಂದು ಹೇಳಿದೆ. ಆಗಾಗ ಫೋನು ಮಾಡಿ ಮನೆಗೆ ಬರುತ್ತಿರು' ಎಂದು ಹೇಳಿದರು.
ಆಗ ನಾನು ಕಾರ್ಯನಿಮಿತ್ತ ಹುಬ್ಬಳ್ಳಿಗೆ ಹೋಗುವ ಮೊದಲು ಡಾ. ಹರ್ಡಿಕರ್ ಅವರ ಮನೆಗೆ ಹೋಗಿ, ನಾನು ಹುಬ್ಬಳ್ಳಿಗೆ ಹೊರಟಿದ್ದೇನೆಂದು ಖುಷಿಯಿಂದಲೇ ಹೇಳಿದೆ. ಹುಬ್ಬಳ್ಳಿ 'ಜೈ ಹಿಂದ' ವಾರಪತ್ರಿಕೆಯ ಕಾರ್ಯಾಲಯದಲ್ಲಿ ದ್ವಿತೀಯ ಪಂಚವಾರ್ಷಿಕೆಯ ಪ್ರತಿಗಳು ಪ್ರಿಂಟಾಗುತ್ತಿದ್ದವು. ನಾನು ಹುಬ್ಬಳ್ಳಿ ತಲುಪುವ ಮೊದಲೇ ಅವರು ನನ್ನ ವಸತಿ, ಇತ್ಯಾದಿ ಏರ್ಪಾಡು ಮಾಡಿ ನನ್ನ ಯೋಗಕ್ಷೇವುವನ್ನು ನೋಡಿಕೊಳ್ಳಲು ತಮ್ಮ ಸಂಬಂಧಿಕರಿಗೆ ತಿಳಿಸಿದ್ದರು. ನಾನು ಅಲ್ಲಿರುವವರೆಗೂ ಅವರೆಲ್ಲ ವಿಶೇಷ ಕಾಳಜಿಯಿಂದ ನೋಡಿಕೊಂಡರು, ನನಗೋ, ದಾಕ್ಷಿಣ್ಯ, ಸಂಕೋಚಗಳ ನಡುವೆ ಚಪ್ಪಟೆಯಾಗಿ ಹೋಗಿದ್ದೆ. ಏನು ಮಾಡಲಿ! ಎಂದುಕೊಳ್ಳುತ್ತಿದ್ದೆ. ಡಾ. ಹರ್ಡಿಕರರು, ನೀನು ದಿಲ್ಲಿಗೆ ತಿರುಗಿ ಬರುವಾಗ ನನ್ನೊಂದಿಗೆ ಒಂದೆರಡು ದಿನ ಘಟಪ್ರಭಾದ ಕರ್ನಾಟಕ ಆರೋಗ್ಯ ಧಾಮದಲ್ಲಿ ಇರಲೇಬೇಕೆಂದು ತಾಕೀತು ಮಾಡಿದ್ದರು. ನೀನು ಹುಬ್ಬಳ್ಳಿಯಲ್ಲಿರುವಾಗ, ನಾನು ಬಂದರೆ, ನೀನು ಭೆಟ್ಟಿಯಾಗುವಿಯಂತೆ, ಆಗ ಅವರಿಗೆ ಹುಬ್ಬಳ್ಳಿಗೆ ಬರುವುದಾಗಲಿಲ್ಲ. ನಾನು ದಿಲ್ಲಿಗೆ ಹೋಗುವಾಗ ಎರಡು ದಿವಸ ಅಲ್ಲಿದ್ದು, ಅವರ ಪ್ರೀತಿ, ವಾತ್ಸಲ್ಯಗಳಲ್ಲಿ ಮುಳುಗಿ ಹೋಗಿದ್ದೆ. ಅವರು ಘಟಪ್ರಭಾ ಆರೋಗ್ಯ ಧಾಮದ ಸಂಸ್ಥಾಪಕರಾಗಿದ್ದರು.
= ಬಿ.ಎಚ್. ಕೊಪ್ಪರ