ಅಪ್ಪ ಈಗೀಗ ಬದಲಾಗಿದ್ದಾನೆ...
ದಿನರಾತ್ರಿ
ನನ್ನಪ್ಪನ ಸಿಡುಕಗಳನ್ನೆಲ್ಲ
ಊದುಗೊಳವೆಯಲಿಟ್ಟು
ಗಾಳಿ ಊದುತ್ತಾಳೆ ನನ್ನವ್ವ.
ಧಗಧಗನೆ ಉರಿದು
ಅನ್ನ ಬೇಯುವ ನೆಪದಲ್ಲಿ
ಸುಟ್ಟು ಬೂದಿಯಾಗುತ್ತವೆ ಸಿಟ್ಟುಗಳೆಲ್ಲ
ಗಂಟೆ ಎಂಟಾಗಿ
ಚಕ್ಕಮಕ್ಕಳ ಕೂರುತ್ತಾನೆ,
ಮಗುವಿನಂಥ ತಂದೆ
ತಟ್ಟೆಯ ಮುಂದೆ
ಸತ್ತ ಸಿಟ್ಟಿನ ಬೂದಿ
ನಗುತ್ತದೆ ಒಳಗೊಳಗೆ,
ನಿಗಿನಿಗಿ ಉರಿಕೆಂಡ ಅನ್ನದ ಮುಂದೆ
ಮಲ್ಲಿಗೆ ಅರಳಿದ ಪರಿಗೆ
ಇನ್ನೂ ಹೊಗೆಯಾಡುತ್ತಲೇ ಇದೆ
ಒಳ- ಹೊರಗೆ
ಹೇಳಬೇಕೆಂದರೆ
ಈಗೀಗ ನನ್ನಪ್ಪನಿಗೆ ಸಿಟ್ಟು ಬರುವುದಿಲ್ಲ
ತಟ್ಟೆ ತೂರುವುದಿಲ್ಲ, ಹಟ ಮಾಡುವುದಿಲ್ಲ
ತಟ್ಟೆಯಲಿ ಅನ್ನವಿರುವಾಗಲೇ ಕೈತೊಳೆಯುವುದಿಲ್ಲ
ಎಂದಿನಂತೆ ಮರುಬೆಳಗು
ನಸುಕಿನಲ್ಲಿ ಬೂದಿ ಚೆಲ್ಲುತ್ತಾಳೆ
ನನ್ನವ್ವ ಹೊರಗೆ,
ಯಾರೂ ಇಲ್ಲದ್ದ ನೋಡಿ ಬೂದಿ ಕದ್ದ
ಚಂದ್ರನ ಅಂಗಿಗೆ
ಇಂದಿಗೂ ಅದೇ ಬಣ್ಣ!
ಮಲಗಿದ್ದಾನೆ ಅಪ್ಪ
ಮಗುವಿನಂತೆ ಒಳಗೆ, ತಣ್ಣಗೆ!
- ಪ್ರವೀಣಕುಮಾರ ದೈವಜ್ಞಾಚಾರ್ಯ
pdaivajnacharya@gmail.com