ಮರಳಿ ಪಡೆಯುವ ಪ್ರಶ್ನೆಯೇ ಇಲ್ಲ
ಮರಳಿ ಪಡೆಯುವ ಪ್ರಶ್ನೆಯೇ ಇಲ್ಲ
ಎಂ.ಜಿ. ಪಾಟೀಲ್, ಬೆಳಗಾವಿ (ರಂಕಲಕೊಪ್ಪ)
ಟೆನೆಂಟ್ ಕಾಯ್ದೆಯಡಿ ಜಮೀನು ಕಳೆದುಕೊಂಡವರಿಗೆ ಆ ಜಮೀನು ಮರಳಿ ಪಡೆಯಲು ಅವಕಾಶವಿದೆಯೇ?
- ಭೂಸುಧಾರಣಾ ಕಾಯ್ದೆಯನ್ವಯ ಪ್ರಕರಣ ಅಖೈರಾಗಿ ಇತ್ಯರ್ಥವಾಗಿದ್ದರೆ ಈಗ ಅದನ್ನು ಮರಳಿ ಪಡೆಯುವ ಪ್ರಶ್ನೆಯೇ ಇಲ್ಲ.
ನೀವೇ ವಾದ ಮಂಡಿಸಬಹುದು
ಆರ್ ಮಂಜುನಾಥ, ಬಾವಿಕೆರೆ, ತರೀಕೆರೆ ತಾ.
ಸುಪ್ರೀಮ್ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ವಕೀಲರ ಮೂಲಕವೇ ಆಗಬೇಕೆ? ಸಮಸ್ಯೆಯ ಜತೆಗೆ ಪರಿಹಾರವನ್ನೂ ರೂಪಿಸಿ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಬಹುದೇ?
- ಪಿಐಎಲ್ ಸಲ್ಲಿಸಲು ವಕೀಲರೇ ಆಗಬೇಕೆಂದೇನೂ ಇಲ್ಲ. ಆದರೆ ಅರ್ಜಿ ಸಲ್ಲಿಸುವವರು ತಾವೇ ತಮ್ಮ ಪ್ರಕರಣದಲ್ಲಿ ವಾದ ಮಂಡಿಸಬೇಕು. ಪರಿಹಾರವನ್ನು ರೂಪಿಸಿ ಕೊಡಲು ಅವಕಾಶವಿದೆ.
ಈಗಿನ ಹುದ್ದೆ ಮಾತ್ರ ನಮೂದಿಸಿ
ಎಂ.ಎನ್. ಛಪ್ಪರಬಂದ್, ವಿಜಾಪುರ
ಸಹಕಾರ ಸಂಘವೊಂದರಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದು ಲೆಟರ್‌ಹೆಡ್‌ನಲ್ಲಿ ನನ್ನ ಮೊದಲಿನ ಹುದ್ದೆ ಮಾತ್ರ ಬರೆಯುವ ವಿಚಾರ. ಹಾಗೇನಾದರೂ ಬರೆದರೆ ತಪ್ಪೇ? ಅಥವಾ ಬರೆಯಬಹುದೇ?
- ನೀವು ಈಗಿರುವ ಸಂಘಕ್ಕೂ, ನಿಮ್ಮ ಹಳೆಯ ಹುದ್ದೆಗೂ ಸಂಬಂಧವೇ ಇಲ್ಲ. ಆದ್ದರಿಂದ ನೀವು ಈಗಿನ ಹುದ್ದೆಯನ್ನೇ ನಿಮ್ಮ ಪತ್ರ ವ್ಯವಹಾರದಲ್ಲಿ ನಮೂದಿಸಬೇಕು. ಹಳೆಯ ಹುದ್ದೆ ನಮೂದಿಸಿದರೆ ಸಮಸ್ಯೆಯಾಗುವುದು ಖಂಡಿತ.
ನ್ಯಾ. ನಿಂದನಾ ಅರ್ಜಿ ಸಲ್ಲಿಸಿ
ಮಲ್ಲಿಕಾರ್ಜುನ, ಬೆಂಗಳೂರು
ನಿವೃತ್ತ ಪ್ರೌಢಶಾಲಾ ಶಿಕ್ಷಕ. ಪಿಂಚಣಿ ಕುರಿತು ಕರ್ನಾಟಕ ಆಡಳಿತ ಮಂಡಳಿಯಿಂದ ಆದೇಶ ಪಡೆದು ಶಿಕ್ಷಣ ಆಯುಕ್ತರು ಪಿಂಚಣಿ ದಾಖಲೆಗಳನ್ನು ಮಹಾಲೇಖಪಾಲರಿಗೆ ಕಳುಹಿಸಿ ಆರು ತಿಂಗಳಾದರೂ ಪಿಂಚಣಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಪರಿಹಾರವೇನು?
-ಜಿಲ್ಲಾ ಗ್ರಾಹಕರ ಸಂಘದಲ್ಲಿ ಅರ್ಜಿ ಕೊಡಿ. ಪರಿಹಾರ ಸಿಗಬಹುದು ಅಥವಾ ಜತೆಗೆ ಕೆಎಟಿಯಲ್ಲೂ ನ್ಯಾಯಾಲಯ ನಿಂದನಾ ಅರ್ಜಿ ಕೊಡಿ. ನಿಮಗೆ ಸಹಾಯವಾಗಬಹುದು.
ದಾವಾ ಹಾಕಬಹುದು
ಮಹಂತಪ್ಪ, ಚಿಕ್ಕಕೊಂಡನ ಹಳ್ಳಿ
ನಿವೃತ್ತಿಯಿಂದ ಬಂದ ಹಣವನ್ನು ಪ್ರೋನೋಟ್ ಮೂಲಕ ಒಬ್ಬರಿಗೆ ನೀಡಿದ್ದೆ. ಆತ ಈಗ ತೀರಿಕೊಂಡಿದ್ದಾನೆ. ಆತನಿಗೆ ಆಸ್ತಿಯಿದ್ದು ಹೆಂಡತಿ ಮಕ್ಕಳಿದ್ದಾರೆ. ಈಗ ಅವರಿಂದ ಹಣ ಪಡೆಯುವ ಬಗೆ ಹೇಗೆ?
- ನ್ಯಾಯಾಲಯದಲ್ಲಿ ದಾವಾ ಹಾಕಬಹುದು. ಹಣ ವಾಪಸ್ ಸಿಗಲೂಬಹುದು.
- ಎಚ್.ಆರ್. ಕಸ್ತೂರಿರಂಗನ್