ಸಂಸ್ಕೃತಂ ಗೆಲ್ಗೆ
16ನೇ ಲೋಕಸಭೆಯ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರದ ದಿನ ಸಂಸ್ಕೃತದ ಮಟ್ಟಿಗಂತೂ ಉತ್ತಮ ದಿನವೇ ಹೌದು. ಅಂದು ಮೂವರು ಸಚಿವರು ಸೇರಿದಂತೆ ಸುಮಾರು 20 ಸಂಸದರು ಸಂಸ್ಕೃತದಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ದೇವ ಭಾಷೆಗೆ ರಾಜಭಾಷೆಯ ಪಟ್ಟ ನೀಡಿದರು.
ಅತ್ತ ಸಂಸತ್ತಿನಲ್ಲಿ ಸಂಸ್ಕೃತ ಮೊಳಗುತ್ತಿರುವಂತೆ ಇತ್ತ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ಗಳಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡು ಸ್ವಾಗತಿಸಲ್ಪಟ್ಟಿತು. ಮೋದಿ ಸಂಪುಟದಲ್ಲಿ ವಿದೇಶಾಂಗ ಸಚಿವೆಯಾಗಿರುವ ಸುಷ್ಮಾ ಸ್ವರಾಜ್, ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ, ಆರೋಗ್ಯ ಸಚಿವ ಡಾ. ಹರ್ಷವರ್ಧನ ಹಾಗೂ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಮಹೇಶ್ ಗಿರಿ, ಮೀನಾಕ್ಷಿ ಲೇಖಿ, ಪರ್ವಿಶ್ ಸಾಹೇಬ್‌ಸಿಂಗ್ ವರ್ಮಾ, ಶಾಂತಕುಮಾರ್ ಸಂಸ್ಕೃತದಲ್ಲೇ ಪ್ರಮಾಣ ಸ್ವೀಕರಿಸಿ ತಮ್ಮ ಸಂಸ್ಕೃತಪ್ರೇಮ ಮೆರೆದಿದ್ದಾರೆ. ದೆಹಲಿಯ ಏಳು ಮಂದಿ ಸಂಸದರಲ್ಲಿ ನಾಲ್ವರು ಸಂಸ್ಕೃತದಲ್ಲಿ ಪ್ರಮಾಣ ಸ್ವೀಕರಿಸುವ ಮೂಲಕ ಸಂಸತ್ತಿನಲ್ಲಿ ಸಂಸ್ಕೃತ ಮೊಳಗಿದೆ. ಇದರೊಂದಿಗೆ ಇದುವರೆಗೆ ಆಳುವವರ ಅವಗಣನೆಗೆ ಒಳಗಾಗಿದ್ದ ಭಾಷೆಯೊಂದಕ್ಕೆ ಅಪೂರ್ವ ಅವಕಾಶ ಒದಗಿ ಬಂದಂತಾಗಿದೆ.
ಹಾಗಂತ ಸಂಸತ್ತಿನಲ್ಲಿ ಸಂಸ್ಕೃತ ಕಲರವ ಇದೇ ಮೊದಲಲ್ಲ. ಇಂಥ ಪ್ರಯತ್ನ ಈ ಮೊದಲೂ ನಡೆದಿತ್ತು. ಉ.ಕ. ಸಂಸದ ಅನಂತ ಹೆಗಡೆ, ಸತ್ಯನಾರಾಯಣ ಜತಿಯಾ ಸೇರಿದಂತೆ 9 ಮಂದಿ ಸಂಸದರು 15ನೇ ಲೋಕಸಭೆಯಲ್ಲಿಯೂ ಸಂಸ್ಕೃತದಲ್ಲಿಯೇ ಪ್ರಮಾಣ ಸ್ವೀಕರಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಪರಿಷತ್‌ಗೆ 2012ರಲ್ಲಿ ಆಯ್ಕೆಯಾಗಿದ್ದ ಶಿವಮೊಗ್ಗದ ಸಂಸ್ಕೃತ ಗ್ರಾಮ ಮತ್ತೂರಿನವರೇ ಆದ ಭಾನುಪ್ರಕಾಶ್ ಅವರು ಸಂಸ್ಕೃತದಲ್ಲೇ ಪ್ರಮಾಣ ಸ್ವೀಕರಿಸಿದ್ದರು.
ಕೇಂದ್ರ ಸಚಿವೆ ಸುಷ್ಮಾ ಅವರು ತಮ್ಮ ಪದವಿ ವ್ಯಾಸಂಗದಲ್ಲಿ ಸಂಸ್ಕೃತ ಹಾಗೂ ರಾಜ್ಯಶಾಸ್ತ್ರವನ್ನು ಪ್ರಧಾನ ವಿಷಯವಾಗಿ ಅಧ್ಯಯನ ಮಾಡಿದ್ದರೆ, ಡಾ. ಹರ್ಷವರ್ಧನ್ ಅವರು ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಸಂಸ್ಕೃತ ಅಭ್ಯಾಸ ಮಾಡಿದ್ದಾರೆ. ಸಾಧ್ವಿ ಉಮಾಭಾರತಿಯವರಂತೂ ಸಂಸ್ಕೃತದಲ್ಲೇ ವ್ಯವಹರಿಸಬಲ್ಲರು.
ಅಧಿಕೃತ ಭಾಷೆಗಳಲ್ಲಿ ಒಂದು
ಭಾರತದ 22 ಅಧಿಕೃತ ಭಾಷೆಯಲ್ಲಿ ಸಂಸ್ಕೃತವೂ ಒಂದು. 2001ರ ಜನಗಣತಿ ಪ್ರಕಾರ ದೇಶದಲ್ಲಿ 14,000 ಸಂಸ್ಕೃತ ಮಾತೃಭಾಷಿಕರಿದ್ದರೆ, 2011ರ ಗಣತಿಯಲ್ಲಿ ಅದು 50,000ಕ್ಕೇರಿದೆ. ಸಂಸತ್ತಿನ ಯಾವುದೇ ಸದಸ್ಯರು ಆ ಭಾಷೆಯಲ್ಲಿ ಮಾತನಾಡಬಹುದು ಅಥವಾ ಸಂಸತ್ತಿನಲ್ಲಾಗುವ ನಿರ್ಣಯದ ಭಾಷಾಂತರ ಪ್ರತಿಯನ್ನು ಸಂಸ್ಕೃತದಲ್ಲಿ ಪಡೆಯಲು ಅರ್ಹ. ಆದರೆ ಯಾವ ಸದಸ್ಯರೂ ಈ ಬಗ್ಗೆ ಪ್ರಯತ್ನಿಸಿಲ್ಲ.
ಭಾಷೆಯ ಪುನರುತ್ಥಾನಕ್ಕಾಗಿ ಸಂಸ್ಕೃತ ಭಾರತಿಯಿಂದ ಸಾಕಷ್ಟು ಕೆಲಸ ದೇಶಾದ್ಯಂತ ನಡೆಯುತ್ತಿದೆ. ದೇಶದ ಬಾಹುಳ್ಯ, ಅತಿಯಾದ ಜನಸಂಖ್ಯೆಯಿಂದಾಗಿ ಪ್ರಯತ್ನ ಎಲ್ಲರನ್ನೂ ತಲುಪಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಸಹಾಯ ಹಸ್ತ ದೊರೆತರೆ ಆಗ ಸಂಸ್ಕೃತದ ಸಂಸ್ಕೃತಿ ಪಸರಿಸಲು ಸಾಧ್ಯ. ಭಾರತದ ಅಪಾರ ಜ್ಞಾನ ಭಂಡಾರ ಸಂಸ್ಕೃತದಲ್ಲೇ ಹುದುಗಿದ್ದು, ಅದನ್ನು ಹುಡುಕುವ ಪ್ರಯತ್ನಕ್ಕೆ ಯಶಸ್ಸು ಸಿಗಲು ಸಾಧ್ಯ.
ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಅವರ ಪ್ರಕಾರ, ಮೃತ ಭಾಷೆಯೆಂದೇ ಪರಿಗಣಿಸಲ್ಪಟ್ಟ ಸಂಸ್ಕೃತದಲ್ಲೇ ಮಾತನಾಡಬಹುದು. ಸಂಸ್ಕೃತ ಭಾರತಿ ಇಡೀ ದೇಶದ ಮಟ್ಟದಲ್ಲಿ ತನ್ನ ನೆಟ್‌ವರ್ಕ್‌ನಿಂದ ಈ ದಿಶೆಯಲ್ಲಿ ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ಸರ್ಕಾರದಿಂದ ಪ್ರೋತ್ಸಾಹ ದೊರೆತಲ್ಲಿ ಸಂಸ್ಕೃತಕ್ಕೆ ಮನ್ನಣೆ ಸಿಗುವ ದಿನ ದೂರವಿಲ್ಲ ಎನ್ನುತ್ತಾರೆ.
ಹಿಬ್ರೂ ಹಣತೆ
ಒಂದು ಕಾಲದಲ್ಲಿ ಜನರ ಭಾಷೆಯಾಗಿದ್ದು, ಬಳಿಕ ಜನಸಾಮಾನ್ಯರಿಂದ ದೂರವಾಗಿ ಕೇವಲ ಗ್ರಾಂಥಿಕ ಭಾಷೆಯಾಗಿದ್ದ ಹಿಬ್ರೂ ಭಾಷೆಯನ್ನು ಇಸ್ರೇಲ್‌ನಲ್ಲಿ ಮತ್ತೆ ಪುನರುಜ್ಜೀವನಗೊಳಿಸಲಾಗಿದೆ. ಆ ಉದಾಹರಣೆ ನಮ್ಮ ಮುಂದಿದ್ದು, ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಕಾರ್ಯವಾಗಬೇಕಿದೆ. ಹಾಗೇ ಜಾಗತಿಕ ಮನ್ನಣೆಯಿದ್ದು, ಕಂಪ್ಯೂಟರ್‌ಗೆ ಸುಲಭ ಭಾಷೆಯೆಂದು ಗುರುತಿಸಲ್ಪಟ್ಟರೂ ದೇಶದಲ್ಲೇ ಅವಗಣನೆಗೆ ತುತ್ತಾಗಿದೆ. ಎಲ್ಲ ಭಾಷೆಗಳ ಮಾತೃಭಾಷೆ ಉತ್ತುಂಗಕ್ಕೇರಲು ಇನ್ನಷ್ಟು ಅವಕಾಶ ಸಿಗಬೇಕಿದೆ.
-ರಾಘವೇಂದ್ರ ಅಗ್ನಿಹೋತ್ರಿ