ಸರಹದ್ದುಗಳ ಆಚೆಗಿನ ಬದುಕು
ಹತ್ತೊಂಬತ್ತನೆ ಶತಮಾನ ಭಾರತದಲ್ಲಿ ಬ್ರಿಟಿಷರು ತಮ್ಮ ವಸಾಹತಿನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದ ಕಾಲ. ಯುರೋಪಿನ ಆಧುನಿಕ ಆವಿಷ್ಕಾರಗಳು, ಕೈಗಾರಿಕಾ ಕ್ರಾಂತಿಯ ಪರಿಣಾಮಗಳು ಭಾರತದ ಮೇಲೂ ಉಂಟಾಗಿದ್ದವು. ಬ್ರಿಟಿಷರ ವಿರುದ್ಧ ಜನಾಭಿಪ್ರಾಯಗಳೂ ಆಗಲೇ ರೂಪುಗೊಳ್ಳತೊಡಗಿದ್ದವು. ಭಾರತೀಯತೆಯ ಪ್ರಜ್ಞೆ ಆಗ ಮೂಡತೊಡಗಿತ್ತು. ಭಾರತೀಯತೆಯ ಪುನರುತ್ಥಾನ ಕಾಲ ಎಂದು ಇದನ್ನು ಕರೆಯಲಾಗುತ್ತಿದೆ. ವಿದೇಶಿ ಆಕ್ರಮಣಕಾರರ ಎದುರು ಭಾರತೀಯತೆಯ ಶ್ರೇಷ್ಠತೆಯನ್ನು ಮನಗಾಣಿಸುವುದು ಅಂದಿನ ರಾಷ್ಟ್ರೀಯ ತುರ್ತಾಗಿತ್ತು. ಆಗ ಬಂಗಾಳದಲ್ಲಿ ಜನಿಸಿದವರು ಶ್ರೀರಾಮಕೃಷ್ಣ ಪರಮಹಂಸರು ಮತ್ತು ಅವರ ಶಿಷ್ಯ ಸ್ವಾಮಿ ವಿವೇಕಾನಂದರು ಜಗತ್ತಿಗೇ ಪ್ರಸಿದ್ಧರಾದವರು. ಭಾರತೀಯತೆ ಪುನರುತ್ಥಾನಕ್ಕೆ ಈ ಇಬ್ಬರು ಸಂತರು ನೀಡಿದ ಕೊಡುಗೆ ಸರಿಸಾಟಿ ಇಲ್ಲದ್ದು. ಇವರ ಪೀಳಿಗೆಯಲ್ಲಿಯೇ ಉದಯಿಸಿದವರು ಸ್ವಾಮಿ ರಂಗನಾಥಾನಂದರು.
ಸ್ವಾಮಿ ವಿವೇಕಾನಂದರಂತೆಯೇ ಸ್ವಾಮಿ ರಂಗನಾಥಾನಂದರು ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದವರು. ರಾಷ್ಟ್ರೀಯ ಭಾವೈಕ್ಯತೆಗಾಗಿ ಇರುವ ಮೊಟ್ಟಮೊದಲ ಇಂದಿರಾಗಾಂಧಿ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು. 1908ರಲ್ಲಿ ಜನಿಸಿದ ಸ್ವಾಮಿ ರಂಗನಾಥಾನಂದರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಸ್ವಾಮಿ ರಂಗನಾಥಾನಂದ ಜನ್ಮಶತಮಾನೋತ್ಸವ ಸಮಿತಿ 'ಮಾಂಕ್ ವಿಥೌಟ್ ಫ್ರಾಂಟಿಯರ್ಸ್' ಎಂಬ ಗ್ರಂಥವನ್ನು ಹೊರತಂದಿತ್ತು. ಅದರಲ್ಲಿ ಸ್ವಾಮೀಜಿಯವರ ಬಹುಮುಖ ವ್ಯಕ್ತಿತ್ವವನ್ನು ಕಟ್ಟಿಕೊಡುವ 135 ಲೇಖನಗಳಿವೆ. ಈ ಕೃತಿ ಈಗ ಕನ್ನಡದಲ್ಲಿ 'ಸರಹದ್ದುಗಳಿಲ್ಲದ ಸಂತ' ಎಂದಾಗಿದೆ. ಕನ್ನಡದ ಹಿರಿಯ ವಿದ್ವಾಂಸರು ಅದನ್ನು ಅನುವಾದಿಸಿದ್ದಾರೆ. ರಾಮಕೃಷ್ಣ ಮಠದ ಸನ್ಯಾಸಿಗಳೇ ಬರೆದ 37 ಲೇಖನಗಳು ಇದರಲ್ಲಿವೆ. ಶಾರದಾಮಠದ ಮತ್ತು ರಾಮಕೃಷ್ಣ ಶಾರದಾ ಮಿಷನ್ನಿನ ಸನ್ಯಾಸಿನಿಯರು ಬರೆದಿರುವ ನಾಲ್ಕು ಲೇಖನಗಳಿವೆ.
ಇಂದಿರಾ ಗಾಂಧಿ, ಬಿ.ಡಿ. ಜತ್ತಿ, ಡಾ.ಮನಮೋಹನಸಿಂಗ್, ಎಲ್.ಕೆ.ಆಡ್ವಾಣಿ, ಐ.ಕೆ.ಗುಜ್ರಾಲ್, ಸ್ವಾಮಿಜಿಯವರ ಪ್ರಭಾವಕ್ಕೆ ಒಳಗಾದ ಹಲವು ವಿದೇಶಿ ಭಕ್ತರು ಬರೆದ ಲೇಖನಗಳೂ ಇದರಲ್ಲಿವೆ. ಜಿ.ಎನ್.ರಂಗನಾಥರಾವ್, ಡಾ.ಶ್ರೀರಾಮಭಟ್, ವಿ.ಕೃಷ್ಣ, ಎಚ್.ಸಿ.ವಿಶ್ವನಾಥ, ಕೆ.ಆರ್.ಮೋಹನ್, ಎಚ್.ಎನ್.ಮುರಳೀಧರ, ವಿ.ರಘು, ಡಾ.ಪ್ರಭುಶಂಕರ್, ಎಲ್.ವಿ.ಶಾಂತಕುಮಾರಿ ಮೊದಲಾದವರು ಈ ಅನುವಾದ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಸ್ವಾಮೀಜಿಯವರ ಬದುಕಿನ ಅಪೂರ್ವ ಕ್ಷಣಗಳನ್ನು ಹಿಡಿದಿಟ್ಟ 36 ವರ್ಣಚಿತ್ರಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.
ಸ್ವಾಮೀಜಿಯವರು 1958ರಿಂದ 1972ರ ವರೆಗೆ ಐವತ್ತಕ್ಕೂ ಹೆಚ್ಚು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಾಗೂ ಪುನಃ 1972ರಿಂದ 1986ರ ವರೆಗೆ ಅಮೆರಿಕ, ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಲ್ಲಿ ಸಂಚರಿಸಿ ರಾಮಕೃಷ್ಣ- ವಿವೇಕಾನಂದರು ವಿವರಿಸಿದ ವೇದಾಂತದ ಸಂದೇಶವನ್ನು ಪ್ರಸಾರ ಮಾಡಿದರು.
ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿಯ ಸನ್ಮಾನ ಪತ್ರದಲ್ಲಿ 'ತಮ್ಮ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪ್ರಪಂಚದ ಎಲ್ಲೆಡೆಗಳಲ್ಲೂ, ಬಯಸಿದ ಎಲ್ಲ ಬಗೆಯ ಜನರಿಗೂ... ನೀಡುವುದರೊಂದಿಗೆ ಮಾನವ ಸೇವೆಯ ಕ್ಷೇತ್ರದಲ್ಲಿ ಅವರು ಮಹತ್ಸಾಧನೆಯನ್ನು ಮಾಡಿದ್ದಾರೆ. 1943ರ ಬಂಗಾಳದ ಕ್ಷಾಮವಿರಬಹುದು, 1947ರ ಭಾರತ ವಿಭಜನೆಯ ನಂತರ ಜನಗಳು ಪಟ್ಟ ಕಷ್ಟವಿರಬಹುದು, ಅಥವಾ ದೇಶದ ನಾನಾ ಭಾಗಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡ ಪ್ರವಾಹಗಳಿರಬಹುದು, ಸಂತ್ರಸ್ತರ ಪರಿಹಾರ ಪುನರ್ವಸತಿಗಳನ್ನು ಸಂಘಟಿಸುವಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು... ಉಪನ್ಯಾಸಗಳ ಮೂಲಕ ವೇದಾಂತದ ಅಡಿಪಾಯವಾಗಿರುವ ಸಮನ್ವಯ ತತ್ವ, ಭಾರತದಲ್ಲಿ ಹಾಸುಹೊಕ್ಕಾಗಿರುವ ಪರಂಪರೆ- ಸಂಸ್ಕೃತಿಗಳು ಮತ್ತು ಮಾನವ ವ್ಯಾಪಾರಗಳಿಗೆ ಸಂಬಂಧಿಸಿದಂತೆ ವಿಜ್ಞಾನ- ತಂತ್ರಜ್ಞಾನಗಳ ಹೊಸ ಸಂದರ್ಭದಲ್ಲಿ ಅವುಗಳ ಪಾತ್ರ ಇವುಗಳ ಕುರಿತಾಗಿ ಜನರನ್ನು ಸ್ಫೂರ್ತಗೊಳಿಸುತ್ತಿದ್ದಾರೆ...' ಎಂದಿರುವ ಮಾತುಗಳ ಸ್ವಾಮಿ ರಂಗನಾಥಾನಂದರ ವ್ಯಕ್ತಿತ್ವವನ್ನು ವಿವರಿಸುತ್ತದೆ.
ಮಾನವೀಯತೆಯನ್ನು ಮೆರೆಯುವುದರಲ್ಲಿ ಸದಾ ಮುಂದಿರುತ್ತಿದ್ದ ಸ್ವಾಮಿಗಳ ಬದುಕಿನ ಹಲವು ಸ್ವಾರಸ್ಯಕರ ಘಟನೆಗಳು ಈ ಕೃತಿಯಲ್ಲಿವೆ. ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಅಡುಗೆಯವರಾಗಿದ್ದ ಸ್ವಾಮೀಜಿಯವರು ಉನ್ನತ ಪದವಿಯನ್ನು ಪಡೆದವರೇನಲ್ಲ. ಹಾಗಿದ್ದೂ ಅವರು ಅನೇಕ ಭಾಷೆಗಳನ್ನು ಕಲಿತರು. ವಿದೇಶಗಳಲ್ಲಿ ವೇದಾಂತದ ಪ್ರವಚನ ನೀಡುವ ಮಟ್ಟಕ್ಕೆ ಬೆಳೆದರು. ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾದರು. ಹಲವರಿಗೆ ಸ್ಫೂರ್ತಿಯಾದರು. ಕನ್ನಡ ಓದುಗರಿಗೆ ಈ ಕೃತಿಯನ್ನು ಒದಗಿಸಿಕೊಟ್ಟ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಕೃತಿಯ ಪ್ರಧಾನ ಸಂಪಾದಕರಾದ ಡಾ.ಪ್ರಧಾನ್ ಗುರುದತ್ತ ಅವರನ್ನು ಅಭಿನಂದಿಸಲೇಬೇಕು.
ಸಬರದರ ಗಜಲ್
ನಿನ್ನ ಮರೆತು ಬಿಡಬೇಕೆಂದು ಮೇಲೆ ಮೋಡವ ನೋಡಿದೆ/
ಮೋಡ ಕಣ್ಣೀರ ಸುರಿಸತೊಡಗಿತು, ಒಳಗೆ ಕಾಡುವ ಮನವ ನೋಡಿದೆ/
ಇಂಥ ಹಲವು ವಿಸ್ಮಯಕಾರಿಯಾದ ಸಾಲುಗಳು ಡಾ.ಬಸವರಾಜ ಸಬರದ ಅವರ 'ಹೇಳೆ ಸಖಿ' ಗಜಲ್ಗಳ ಸಂಕಲನದಲ್ಲಿವೆ. ಕನ್ನಡಕ್ಕೆ ಗಜಲ್ ಹೊರಗಿನಿಂದ ಬಂದ ಪ್ರಕಾರ. ಆದರೆ ಇಲ್ಲಿಯ ಗಜಲ್ಗಳಲ್ಲಿ ಪ್ರಕಟಗೊಂಡಿರುವ ಭಾವಗಳು ಮಾತ್ರ ಈ ನೆಲದ್ದೇ. ಪ್ರೀತಿ ಪ್ರೇಮ ಪ್ರಕೃತಿ ಪರಮಾತ್ಮ ಎಲ್ಲವನ್ನೂ ಸಬರದ ಅವರು ತಮ್ಮ ಶಬ್ದ ಚಮತ್ಕಾರದಲ್ಲಿ ಹಿಡಿದಿಟ್ಟಿದ್ದಾರೆ. ಪ್ರತಿ ಗಜಲ್ ಸ್ಫುರಿಸುವ ಅರ್ಥ ಶ್ರೀಮಂತಿಕೆ ಬಹಳ ದೊಡ್ಡದು. ಈ ಕೃತಿ ಕನ್ನಡದಲ್ಲಿ ಇನ್ನಷ್ಟು ಗಜಲ್ ಬೆಳೆಗೆ ದಾರಿಮಾಡಿಕೊಡಲಿ.
ಪ್ರ: ಕನ್ನಡನಾಡು ಪ್ರಕಾಶನ, ಗುಲಬರ್ಗಾ,
ಪುಟಗಳು 78, ಬೆಲೆ ರು. 80
ಕೀರ್ತನೆಗಳ ತತ್ವ ವಿಚಾರ
ದಾಸ ಸಾಹಿತ್ಯಕ್ಕೆ ಕನ್ನಡದಲ್ಲಿ ವಿಶಿಷ್ಟ ಸ್ಥಾನವಿದೆ. ವೇದೋಪನಿಷತ್ತು ಮತ್ತು ಪುರಾಣಗಳಲ್ಲಿ ಅಂತರ್ಗತವಾಗಿರುವ ಅಧ್ಯಾತ್ಮವನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುವ ಉದ್ದೇಶದಿಂದ ದಾಸರು ತಮ್ಮ ಕೃತಿಗಳನ್ನು ರಚಿಸಿದರು. ಶ್ರೀನಿವಾಸ ಸು. ಮಠದ್ ಅವರು ದಾಸರ ಮೂವತ್ತೊಂದು ರಚನೆಗಳನ್ನು ಅಧ್ಯಯನ ಮಾಡಿ ಅದರ ತತ್ವವನ್ನು ನಿರ್ವಚಿಸಿದ್ದಾರೆ. ಶ್ರೀಪಾದರಾಜರು, ವಾದಿರಾಜರು, ಪುರಂದರದಾಸರು, ಜಗನ್ನಾಥದಾಸರು, ಪ್ರಸನ್ನವೆಂಕಟದಾಸರು, ವೆಂಕಟವಿಠ್ಠಲದಾಸರ ರಚನೆಗಳನ್ನು ಇಲ್ಲಿ ಅಧ್ಯಯನಮಾಡಲಾಗಿದೆ. ಪಂಡಿತ ಮತ್ತು ಪಾಮರರಿಬ್ಬರಿಗೂ ಪ್ರಿಯವಾಗುವ ಕೃತಿ ಇದು.
ಪ್ರ: ಅಂಕಿತ ಪುಸ್ತಕ, ಬೆಂಗಳೂರು,
ಪುಟಗಳು 280, ಬೆಲೆ ರು. 195
ಲೇಖನಿ ಸಾಕ್ಷಿಯಾಗಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸುಪ್ರಸಿದ್ಧ ತೆಲುಗು ಕವಿ ಡಾ.ಸಿ.ನಾರಾಯಣ ರೆಡ್ಡಿಯವರ 'ಕಲಂ ಸಾಕ್ಷಿಗಾ' ದ್ವಿಪದಿಗಳ ಕೃತಿಯನ್ನು ಮಾರ್ಕಂಡಪುರಂ ಶ್ರೀನಿವಾಸ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡಕ್ಕೆ ದ್ವಿಪದಿಗಳು ಹೊಸದೇನಲ್ಲ. ಹಿಂದಿಯಲ್ಲಿ ಕಬೀರ್, ರಹೀಮ್ ಮೊದಲಾದವರು ದ್ವಿಪದಿಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾರೆ. ಮೂಲ ತೆಲುಗುವಿನಲ್ಲಿಯ ಮಾತ್ರಾಗಣವನ್ನು ಅನುವಾದದಲ್ಲಿಯೂ ಅನುಸರಿಸಲು ಪ್ರಯತ್ನಿಸಲಾಗಿದೆ. 'ಈ ದ್ವಿಪದಿಗಳು ನಡಿಗೆಯಲಿ ಜನಿಸಿದ ಮುತ್ತುಗಳು, ಮನಸ್ಸಿಗೆ ಕನ್ನಡಿ ಹಿಡಿದ ಮೌಲಿಕ ಸತ್ಯಗಳು' ಎಂದು ನಾರಾಯಣರೆಡ್ಡಿಯವರೇ ಹೇಳಿದ್ದಾರೆ.
ಪ್ರ: ಸಾಹಿತ್ಯ ವಾಹಿನಿ, ಬೆಂಗಳೂರು, ಪುಟಗಳು 104, ಬೆಲೆ ರು. 70
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,
ಬೆಂಗಳೂರು, ಪುಟಗಳು 634, ಬೆಲೆ ರು. 250
-ಡಾ. ವಾಸುದೇವ ಶೆಟ್ಟಿ