ಖುಷಿ

ಉತ್ತರೋತ್ತರ

ಒಂದು ಕಡೆ ಚೀನಾ ಗಡಿಯನ್ನು ಮತ್ತೊಂದು ಕಡೆ ಭಾರತದ ಗಡಿಯನ್ನು ಹಂಚಿಕೊಂಡಿರುವ ಹಿಮಾಲಯ ಪರ್ವತದಲ್ಲಿರುವ...

ಒಂದು ಕಡೆ ಚೀನಾ ಗಡಿಯನ್ನು ಮತ್ತೊಂದು ಕಡೆ ಭಾರತದ ಗಡಿಯನ್ನು ಹಂಚಿಕೊಂಡಿರುವ ಹಿಮಾಲಯ ಪರ್ವತದಲ್ಲಿರುವ ಬೌದ್ಧ ಧರ್ಮಕ್ಕೆ ಆಕರ್ಷಿತವಾಗಿರುವ ಸುಂದರ ದೇಶ ಭೂತಾನ್. ಕಿಚ್ಚು ಹಾಯಿಸುವ ನಿತ್ಯಹರಿದ್ವರ್ಣದ ಕಾಡು, ಪಾರೋ ಕಣಿವೆ, ಬೌದ್ಧ ಧರ್ಮದ ಚೆಂದದ ದೇಗುಲಗಳು, ಆಕರ್ಷಕ ಕೆತ್ತನೆಯಿಂದ ಮನಸೆಳೆಯುವ ಕಟ್ಟಡಗಳು, ಸದಾ ಚಳಿಯನ್ನೇ ಹೊದ್ದಿರುವ ಸಾರ್ಕ್ ದೇಶಗಳಲ್ಲೇ ಅತ್ಯಂತ ಸುಂದರ ಬೀಡಾದ ಭೂತಾನ್ ಈಗ ಬಹುಚರ್ಚಿತ ದೇಶವಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ವಿದೇಶ ಯಾತ್ರೆಯನ್ನು ನೆರೆಯ ಭೂತಾನ್‌ನಿಂದ ಆರಂಭಿಸುವುದರೊಂದಿಗೆ ಶುಭಾರಂಭ ಮಾಡಿದ್ದಾರೆ. ಮೊದಲಿನಿಂದಲೂ ಭೂತಾನ್ ಭಾವನಾತ್ಮಕವಾಗಿ ನಮಗೆ ಹತ್ತಿರವಾಗಿದೆ. ಈಗ ಇನ್ನೂ ಹತ್ತಿರವಾದಂತಾಗಿದೆ. ಜೊತೆಗೆ ಭೂತಾನ್ ಅನ್ನು ಅತಿಕ್ರಮಿಸಲು ಹವಣಿಸುತ್ತಿರುವ ಚೀನಾಕ್ಕೆ ಸಡ್ಡು ಹೊಡೆಯುವ ತಂತ್ರವೂ ಇದರಲ್ಲಿದೆ. ಭಾರತದ ಗಡಿ ವಿಚಾರದಲ್ಲಿ ಚೀನಾ ಕಿರಿಕಿರಿ ಮಾಡುತ್ತಲೇ ಇದೆ. ಭೂತಾನ್ ಬೆನ್ನಿಗೆ ತಾನಿದ್ದೇನೆ ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ.
ಪುರಾತನ ಕಾಲದಿಂದಲೂ ಇಂಡೋ ಭೂತಾನ್ ಸಂಬಂಧ ಆರೋಗ್ಯಕರವಾಗಿಯೇ ಇದೆ. 'ಭೂತಾನ್ ಮೇಲೆ ಯಾವುದೇ ರಾಷ್ಟ್ರ ದಾಳಿ ಮಾಡಿದರೂ ಅದು ಭಾರತದ ಮೇಲೆ ಮಾಡಿದಂತೆ' ಎಂದು ಜವಾಹರಲಾಲ್ ನೆಹರೂ ಅವತ್ತೇ ಹೇಳಿದ್ದರು.
ಭೂತಾನ್ ಪ್ರಾಚೀನ ನಾಗರಿಕತೆಯ ನೆಲ. ಮಂಗೋಲಿಯಾ ಮೂಲದ ಮಂದಿ ಇಲ್ಲಿನ ಮೂಲ ನಿವಾಸಿಗಳಾದ ಲ್ಹೋಪು ಎಂಬ ಪಂಗಡದ ಜನರನ್ನು ಓಡಿಸಿ ಇಲ್ಲಿ ನೆಲೆ ನಿಂತರು ಎಂಬ ನಂಬಿಕೆ. ಹಿಮಾಲಯದ ಈ ನಾಡಿಗೆ 8ನೇ ಶತಮಾನದಲ್ಲಿ ಬೌದ್ಧ ಧರ್ಮವನ್ನು ತಂದವನು ಗುರು ರಿಂಪೋಚೆ ಎಂದೇ ಹೆಸರು ಮಾಡಿರುವ ಭಾರತದ ಗುರು ಪದ್ಮಸಂಭವ. ಆಗಿಂದಾಗ್ಗೆ ಟಿಬೆಟೆನ್ನರು ಭೂತಾನ್ ಮೇಲೆ ದಾಳಿ ಮಾಡುತ್ತಲೇ ಇದ್ದರೂ ಆದರ ಸಾರ್ವಭೌಮತ್ವಕ್ಕೆ ಮಾತ್ರ ಧಕ್ಕೆ ಬರಲಿಲ್ಲ.
107 ವರ್ಷಗಳ ಹಿಂದೆ ಭೂತಾನ್‌ನಲ್ಲಿ ರಾಜಪ್ರಭುತ್ವ ಅಸ್ತಿತ್ವಕ್ಕೆ ಬಂದು ಉಗ್ಯೇನ್ ವಾಂಗ್ಚುಕ್ ಮೊದಲ ದೊರೆಯಾದರು. ಆದರೆ ಭೂತಾನ್ 3 ಮತ್ತು 4ನೇ ದೊರೆಗಳು ಆ ದೇಶದಲ್ಲಿ ಹೊಸ ಸಂವಿಧಾನ ಪರಿಚಯಿಸಿದರು. ಹಿಮಾಲಯದಲ್ಲಿ ಹುದುಗಿ ಮಲಗಿದ್ದ ಭೂತಾನ್ ಹೊರ ಪ್ರಪಂಚಕ್ಕೆ ನಿಧಾನಕ್ಕೆ ತೆರೆದುಕೊಳ್ಳಲು ಆರಂಭಿಸಿದ್ದು ಮೂರನೇ ದೊರೆ ಜಿಗ್ಮೆ ದೊರ್ಜಿ ವಾಂಗ್ಚುಕ್ ಕಾಲದಲ್ಲಿ. ಹಾಲಿ ರಾಜ ಜಿಗ್ಮೆ ಖೇಸರ್ ನಾಮ್ಜೀಲ್ ವಾಂಗ್ಚುಕ್ ಹಿಮಾಲಯದ ಈ ಪುಟ್ಟ ದೇಶವನ್ನು ಜಾಗತಿಕ ಮಟ್ಟದಲ್ಲಿ ತೆರೆಯಿಸಲು ಪ್ರಯತ್ನ ಮುಂದುವರಿಸಿದ್ದು ಅದರ ಫಲವಾಗಿ ಪ್ರಪಂಚದ ಹಲವಾರು ದೇಶಗಳ ರಾಯಬಾರಿಗಳನ್ನು ಭೂತಾನ್‌ಗೆ ಆಹ್ವಾನಿಸುತ್ತಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಪ್ರೇರಣೆ
ದೊರೆಗಳ ಆಡಳಿತಕ್ಕೆ ಒಳಪಟ್ಟ ಭೂತಾನ್‌ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರಲು ಸ್ವತಃ ದೊರೆಗಳೇ ಕಾರಣ. ಭಾರತದ ಪ್ರಜಾಪ್ರಭುತ್ವ ಮಾದರಿಯಿಂದ ಉತ್ತೇಜಿತರಾದ ಭೂತಾನ್ ದೊರೆಗಳು 1995ರಲ್ಲಿ ಭೂತಾನ್ ನಲ್ಲೇ ಪ್ರಜಾಪ್ರಭುತ್ವ ಸರ್ಕಾರ ಬರಲು ಕಾರಣರಾದರು. ಆದರೆ ಅಂತಿಮ ನಿರ್ಧಾರ ಇಂದಿಗೂ ದೊರೆಗಳದ್ದೇ. ಅವರ ಒಪ್ಪಿಗೆ, ಅಂಕಿತ ಇಲ್ಲದೆ ಯಾವ ಕೆಲಸವೂ ನಡೆಯುವಂತಿಲ್ಲ.
 ಪೀಪಲ್ ಡೆಮಾಕ್ರಾಟಿಕ್ ಪಕ್ಷದ ತ್ಸರಿಂಗ್ ತೊಬ್ಗೆ ಭೂತಾನ್ ದೇಶದ ಹಾಲಿ ಪ್ರಧಾನ ಮಂತ್ರಿ. ಇಂಡಿಯಾದಲ್ಲಿ ಒಬ್ಬ ಸಂಸತ್ ಸದಸ್ಯನ ಹಣೆಬರೆಹವನ್ನು ಲಕ್ಷಾಂತರ ಮಂದಿ ನಿರ್ಧರಿಸಿದರೆ ಭೂತಾನ್‌ನಲ್ಲಿ 750 ಮಂದಿ ಒಬ್ಬ ಸಂಸತ್ ಸದಸ್ಯನನ್ನು ಗೆಲ್ಲಿಸುತ್ತಾರೆ.
ಚೀನಾ ಸೈನ್ಯವು ಆಗಿಂದಾಗ್ಗೆ ಭೂತಾನ್ ಮೇಲೆ ದಾಳಿ ನಡೆಸುತ್ತಲೇ ಇದೆ. 10 ವರ್ಷಗಳ ಕೆಳಗೆ ಚೀನಾ, ಭೂತಾನ್‌ಗೆ ಅಕ್ರಮವಾಗಿ ನುಸುಳಿ ಸೇತುವೆಗಳನ್ನು, ರಸ್ತೆಗಳನ್ನು ನಿರ್ಮಿಸಿತ್ತು. 22 ಲಕ್ಷಕ್ಕೂ ಹೆಚ್ಚು ಸೈನ್ಯ ಬಲವನ್ನು ಹೊಂದಿರುವ ಚೀನಾ ಮುಂದೆ ಕೇವಲ 6 ಸಾವಿರ ಯೋಧರನ್ನಷ್ಟೆ ಹೊಂದಿರುವ ಭೂತಾನ್ ಯಾವ ಲೆಕ್ಕ? ಹೀಗಾಗಿ ಭೂತಾನ್‌ಗೆ ಭಾರತದ ರಕ್ಷಣೆ ಬೇಕೇ ಬೇಕು.
ಇತ್ತೀಚಿನ ದಿನಗಳಲ್ಲಿ ಚೀನಾ ಬಲಿಷ್ಟ ರಾಷ್ಟ್ರವಾಗಲು ಬೇರೆ ಬೇರೆ ದೇಶಗಳೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುತ್ತಿದೆ. ಈಗಾಗಲೇ ನೇಪಾಳದಲ್ಲಿ ಹೂಡಿಕೆ ಮಾಡಿದೆ. ಬೆನ್ನಲ್ಲೇ ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದೆ. ಈ ಮಧ್ಯೆ ಭೂತಾನ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಗಡಿ ಉಲ್ಲಂಘನೆ ಸೇರಿದಂತೆ ಎಲ್ಲ ತರಲೆಗಳನ್ನು ಮಾಡುತ್ತಲೇ ಇದೆ. ಕನಿಷ್ಟ ಸೇನೆಯನ್ನು ಹೊಂದಿರುವ ಹಿಮಾಲಯದ ದೇಶ ಭೂತಾನ್‌ಗೆ ಸಹಜವಾಗಿ ಚೀನಾದ ಭಯ ಇದ್ದೇ ಇದೆ.
ಎರಡೇ ರಸ್ತೆಯಲ್ಲಿ
ಹಿಮಾಲಯದ ನೆತ್ತಿಯಲ್ಲಿ ಅವುಡುಗಚ್ಚಿಕೊಂಡಿರುವ ಭೂತಾನ್ ವ್ಯಾಪಾರ, ವಹಿವಾಟಿಗೆ ಭಾರತವನ್ನೇ ಆಶ್ರಯಿಸಬೇಕು. ಅಂಗೈಯಷ್ಟಗಲದ ಹಿಮದ ನಾಡಾದ ಭೂತಾನ್‌ನ ರಾಜಧಾನಿ ಥಿಂಪುವಿನಲ್ಲಿರುವ ಎರಡು ರಸ್ತೆಗಳೇ ಆ ದೇಶದ ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದೆ. ಮುಖ್ಯವಾಗಿ ಬುದ್ಧನ ಕೆತ್ತನೆಗಳು, ಸುಂದರ ಕಲಾಕೃತಿಗಳು, ಮರದಿಂದ ನಿರ್ಮಿಸಿರುವ ವಸ್ತುಗಳಿಗೆ ಇದು ಖ್ಯಾತಿ ಪಡೆದಿದೆ.
ಒಂದು ಕಡೆ ಚೀನಾ ನುಸುಳುಕೋರರ ಭೀತಿ, ಮತ್ತೊಂದು ಕಡೆ ಹಿಮದ ರಾಶಿಯನ್ನು ಹೊದ್ದು ಮಲಗಿರುವ ಈ ದೇಶ ಆಧುನಿಕತೆಗೆ ಒಡ್ಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ದೇಶದಲ್ಲಿ ಸಿನಿಮಾ ಮಂದಿರಗಳಾಗಲಿ, ದೊಡ್ಡ ದೊಡ್ಡ ಮಾಲ್‌ಗಳಾಗಲಿ ಇಲ್ಲವೇ ಇಲ್ಲ. ಇಂಟರ್‌ನೆಟ್ ಕೂಡ ಬಂದದ್ದು ತೀರಾ ಇತ್ತೀಚೆಗೆ. ಹಿಮ, ಚಳಿ, ಮಳೆಯನ್ನೇ ಉಸಿರಾಗಿಸಿಕೊಂಡಿರುವ ಭೂತಾನ್‌ನಲ್ಲಿ ಮಳೆ ನೀರನ್ನು ಮೇಲಕ್ಕೆ ಎತ್ತಿ ಉಪಯೋಗಿಸಲು ಸಾಧ್ಯವಾಗಿಲ್ಲ. ಸದಾ ಮಳೆ ಸುರಿದರೂ ಈ ದೇಶದಲ್ಲಿ ನೀರಿನ ಬೆಲೆ ದುಬಾರಿಯೇ ಆಗಿದೆ.
ಭಿಕ್ಷುಕರೇ ಇಲ್ಲ, ಭಿಕ್ಷುಗಳೇ ಎಲ್ಲ!
ಹೇಳಿಕೊಳ್ಳುವಷ್ಟು ಆದಾಯ ಇರದಿದ್ದರೂ ಭೂತಾನ್‌ನಲ್ಲಿ ಬೌದ್ಧ ಭಿಕ್ಷುಗಳಿಗೇ ವಿಶೇಷ ಮಾನ್ಯತೆ. ಬೌದ್ಧ ಭಿಕ್ಷುಗಳ ರಕ್ಷಣೆಗೆ ಸರ್ಕಾರವೇ ನಿಂತಿವೆ. ಹಾಗಾಗಿ ಭೂತಾನ್‌ನಲ್ಲಿ ಭಿಕ್ಷುಕರು ಕಾಣಸಿಗುವುದಿಲ್ಲ. ಬರೀ ಬೌದ್ಧ ಭಿಕ್ಷುಗಳೇ ಸಿಗುತ್ತಾರೆ. ಭೂತಾನ್‌ನಲ್ಲಿ ಬಹಳಷ್ಟು ವ್ಯಾಜ್ಯಗಳು ಪರಿಹಾರವಾಗುತ್ತಿದ್ದದ್ದು ಬೌದ್ಧ ಮಂದಿರದಲ್ಲಿ. ಸಣ್ಣ ಪುಟ್ಟ ಹೊಡೆದಾಟ, ಬಡಿದಾಟ ಎಲ್ಲಕ್ಕೂ ಪರಿಹಾರವನ್ನು ಬುದ್ಧ ಮಂದಿರದಲ್ಲಿ ನೀಡಲಾಗುತ್ತಿತ್ತು. ಈಗ ದೇಶ ಬೆಳೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದು ಈಗ ಭಾರತದ ನೆರವಿನಲ್ಲಿ ಸುಪ್ರೀಂಕೋರ್ಟ್ ಕೂಡ ತಲೆ ಎತ್ತಿದೆ.
ಪಾರೂ ಎರಡನೇ ರಾಜಧಾನಿ?
ಭೂತಾನ್ ದೇಶದ ರಾಜಧಾನಿ ಥಿಂಪು. ಆದರೂ ಥಿಂಪುಗೆ ಸರಿಸಮನಾಗಿ ಬೆಳೆಯುತ್ತಿರುವ ಮತ್ತೊಂದು ಊರು  ಪಾರೂ. ಥಿಂಪುಗೆ 30 ಕಿ.ಮೀ. ದೂರದಲ್ಲಿರುವ ಪಾರೂ ಒಂದರ್ಥದಲ್ಲಿ ಕಣಿವೆಗಳ ಊರು. ವಿಮಾನ ನಿಲ್ದಾಣ ಇರುವುದು ಕೂಡ ಪಾರೂವಿನಲ್ಲಿ. ಪರ್ವತಗಳ ಮಧ್ಯೆ ಇರುವ ವಿಮಾನ ನಿಲ್ದಾಣಕ್ಕೆ ಭದ್ರತೆಯೇ ಇಲ್ಲ. ರಸ್ತೆ ಪಕ್ಕದಲ್ಲೇ ವಿಮಾನ ನಿಲ್ದಾಣದ ರನ್‌ವೇ. ರಸ್ತೆಯ ಆ ಬದಿಯಲ್ಲೇ ವಿಮಾನ ಟೇಕಾಫ್, ಲ್ಯಾಂಡಿಂಗ್ ಆಗಿರುತ್ತದೆ. ವಿಮಾನ ನಿಲ್ದಾಣದ ಸುತ್ತ ತಡೆಗೋಡೆ ಕೂಡ ಇಲ್ಲ. ಆರ್ಥಿಕವಾಗಿ ಮುಂದುವರಿಯದೆ, ಹೆಚ್ಚು ನೈಸರ್ಗಿಕ ಸಂಪತ್ತನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಈ ಪುಟ್ಟ ನೆರೆಯ ರಾಷ್ಟ್ರಕ್ಕೆ ಮೋದಿ ಭೇಟಿ ಸಹಜವಾಗಿ ಖುಷಿ ತರಿಸಿದೆ.
ಇಬ್ಬರಿಗೂ ಲಾಭ
ಸಾಕಷ್ಟು ನೈಸರ್ಗಿಕ ಸಂಪತ್ತನ್ನು ಹೊಂದಿದ್ದರೂ ಭೂತಾನ್ ದೇಶಕ್ಕೆ ಅದನ್ನು ಬಳಸಿಕೊಳ್ಳಲು ಮಾರ್ಗಗಳಿಲ್ಲ. ಸಾಕಷ್ಟು ಬೀಳುವ ಮಳೆ ನೀರನ್ನು ಮೇಲಕ್ಕೆತ್ತಿ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವಷ್ಟು ತಂತ್ರಜ್ಞಾನವನ್ನು ಈ ದೇಶ ಹೊಂದಿಲ್ಲ. ಭಾರಿ ಜಲವಿದ್ಯುತ್ ಯೋಜನೆಗೆ ಹಣ ಹೂಡಿದರೆ ಎರಡೂ ದೇಶಗಳು ಮತ್ತಷ್ಟು ಅಭಿವೃದ್ಧಿ ಹೊಂದುತ್ತವೆ. ಮುಖ್ಯವಾಗಿ ಪ್ರವಾಸೋದ್ಯಮ, ಜವಳಿ ಉದ್ಯಮಗಳಿಂದ ಆರ್ಥಿಕ ಸಂಪತ್ತನ್ನು ಕ್ರೋಢೀಕರಿಸಬಹುದು. ಭಾರತದೊಂದಿಗೆ ಭೂತಾನ್‌ಗೆ ಇದ್ದ ಸಂಬಂಧ ಮೋದಿ ಭೇಟಿ ಬಳಿಕ ಮತ್ತಷ್ಟು ಬಲಗೊಳ್ಳಲಿದೆ. ಇದು ಚೀನಾಕ್ಕೆ ನಡುಕ ತರಿಸುವುದರಲ್ಲಿ ಅನುಮಾನವಿಲ್ಲ. ಭೂತಾನ್ ಸಾಂಪ್ರದಾಯಿಕ ಹಿನ್ನೆಲೆ ಹೊಂದಿದ್ದರೂ ಆ ದೇಶದ ರಾಜ ದೂರದೃಷ್ಟಿ ಹೊಂದಿದ್ದಾರೆ. ಅಲ್ಲಿನ ಪ್ರಧಾನಿ ಆಧುನಿಕ ಆವಿಷ್ಕಾರಗಳಿಗೆ ಒಡ್ಡಿಕೊಂಡಿದ್ದಾರೆ.

- ಉಗಮ ಶ್ರೀನಿವಾಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video