ಕಾನ್ವೆಂಟ್ ಸೇರಲು ಮಗು, ಡೊನೇಷನ್
ಎಷ್ಟಾದರೆ ಸಾಕು?
ಮೆಡಿಕಲ್ ಸೀಟು ಗಿಟ್ಟಲು ಮಾರ್ಕ್ಸ್
ಎಷ್ಟಾದರೆ ಸಾಕು?
ಕನ್ಯಾಸೆರೆ ಹರಿಯಲು ವರದಕ್ಷಿಣೆ
ಎಷ್ಟಾದರೆ ಸಾಕು?
ವಿವಾಹ ಬಂಧನ ಮುರಿಯಲು ಕಾರಣ
ಎಷ್ಟಾದರೆ ಸಾಕು?
ಬೇಕುಬೇಡದ್ದು ಕೊಳ್ಳಲು ಗಿಂಬಳ
ಎಷ್ಟಾದರೆ ಸಾಕು?
ಸರ್ಕಾರ ಉರುಳದಿರಲು ಬೆಂಬಲ
ಎಷ್ಟಾದರೆ ಸಾಕು?
ರಸ್ತೆಗುಂಡಿಗಳ ಮುಚ್ಚಲು ನರಬಲಿ
ಎಷ್ಟಾದರೆ ಸಾಕು?
ಭ್ರಷ್ಟಾಚಾರವ ಗುಡಿಸಲು ಪೊರಕೆ
ಎಷ್ಟಾದರೆ ಸಾಕು?
ರೈತರ ಆತ್ಮಹತ್ಯೆಗೆ ಸಾಲ
ಎಷ್ಟಾದರೆ ಸಾಕು?
ಸಿಡಿದೇಳಲು ಬಡಬಗ್ಗರ ಬವಣೆ
ಎಷ್ಟಾದರೆ ಸಾಕು?
ಮತ್ತೆ ಯುದ್ಧಕ್ಕೆ ಶಸ್ತ್ರ ಸಂಗ್ರಹಣೆ
ಎಷ್ಟಾದರೆ ಸಾಕು?
ಜಗದ ಮರಣದಂಡನೆಗೆ ಮಾಲಿನ್ಯ
ಎಷ್ಟಾದರೆ ಸಾಕು?
ಜಗದೋದ್ಧಾರಕೆ ಪುನರವತಾರ
ಎಷ್ಟಾದರೆ ಸಾಕು?
ಮುಗಿಯದೀ ಪದ್ಯ ಮುಗಿಯಲಿ ಸದ್ಯ,
ಅಷ್ಟಾದರೆ ಸಾಕು!
- ಬಿ.ಆರ್.ಲಕ್ಷ್ಮಣರಾವ್