ಖುಷಿ

ಕಮಲಾದಾಸರ ನೂರೊಂದು ಕಥೆಗಳು

ಕಮಲಾದಾಸರು ಕೆಲವು ಕಥೆಗಳಲ್ಲಿ ಓ ಹೆನ್ರಿಯ ತಂತ್ರವನ್ನು ಬಳಸಿದ್ದಾರೆ. ಅವರ ಹಲವಾರು ಕತೆಗಳು ಅನಿರೀಕ್ಷಿತ..

ಕಮಲಾದಾಸರು ಕೆಲವು ಕಥೆಗಳಲ್ಲಿ ಓ ಹೆನ್ರಿಯ ತಂತ್ರವನ್ನು ಬಳಸಿದ್ದಾರೆ. ಅವರ ಹಲವಾರು ಕತೆಗಳು ಅನಿರೀಕ್ಷಿತ ತಿರುವಿನಿಂದ ಕೊನೆಗೊಳ್ಳುತ್ತವೆ. ಉದಾಹರಣೆಗೆ 'ದನದ ಜಾತ್ರೆ'. ಅಜ್ಜಿ ತನ್ನ ಮೊಮ್ಮಗಳ ಮದುವೆ ಮಾಡಬೇಕೆಂದು ಹಾತೊರೆಯುತ್ತಿರುತ್ತಾಳೆ. ಮಧ್ಯಾಹ್ನ ಒಬ್ಬ ಯುವಕ ಅವಳ ಮನೆಗೆ ಬರುತ್ತಾನೆ. ಅವನು ಅಲ್ಲಿಗೆ ಎರಡು ಹಸುಗಳನ್ನು ಖರೀದಿಸಲು ಸಂತೆಗೆ ಬಂದವನು. ಊರಿಗೆ ಹೋಗಲು ಮಾರನೇ ದಿನವೇ ಬಸ್ಸು. ಹಾಗಾಗಿ ಒಂದು ರಾತ್ರಿ ತಂಗಲು ಅವಕಾಶ ಕೊಡುವಂತೆ ವಿನಂತಿಸುತ್ತಾನೆ ಮತ್ತು ತಾನು ನಾಯರ್ ಜನಾಂಗಕ್ಕೆ ಸೇರಿದವನು ಎನ್ನುತ್ತಾನೆ. ಆಗ ಅಜ್ಜಿ ಅವನ ಕುರಿತು ಕನಸು ಕಟ್ಟಲಾರಂಭಿಸುತ್ತಾಳೆ. ಮೊಮ್ಮಗಳ ಕುರಿತು ಹೇಳುತ್ತಾಳೆ. ಅವಳಿಗೆ ಗಂಡು ಹುಡುಕುತ್ತಿರುವುದಾಗಿ ಹೇಳುತ್ತಾಳೆ. ಅವಳ ಮದುವೆ ಖರ್ಚಿಗೆ ಅವಳ ಅಪ್ಪ ಹಣ ತೆಗೆದಿಟ್ಟಿರುವುದಾಗಿ ಹೇಳುತ್ತಾಳೆ. ಅವಳ ಶೀಲ ಗುಣನಡತೆಯ ಕುರಿತಾಗಿ ಪ್ರಶಂಸೆಯ ಮಾತುಗಳನ್ನಾಡುತ್ತಾಳೆ ಮತ್ತು ಅವನ ಮನೆಯವರೆಲ್ಲರ ಬಗ್ಗೆ ವಿಚಾರಿಸುತ್ತಾಳೆ. ಮೊಮ್ಮಗಳು ಅಡುಗೆ ಮಾಡುವುದರಲ್ಲಿ ತುಂಬ ಗಟ್ಟಿಗಳು ಎಂದು ಹೊಗಳುತ್ತಾಳೆ. ಮತ್ತೆ ಮೊಮ್ಮಗಳಿಗೆ ನೀಟಾಗಿ ಸೀರೆ ಉಡುವಂತೆ ಹೇಳುತ್ತಾಳೆ. ಬೆಳಗ್ಗೆ ಎದ್ದಾಗ ಅವನು ಅವಸರಿಸುತ್ತಾನೆ. ಅಜ್ಜಿಯ ರೊಟ್ಟಿ ಇನ್ನೇನು ತುಪ್ಪದಲ್ಲಿ ಬಿತ್ತು ಎನ್ನುವಾಗ ಆ ಯುವಕ ಹೇಳುತ್ತಾನೆ. 'ನಾಳೆ ಊಟದ ಹೊತ್ತಿಗೆ ನಾನು ಮನೆ ತಲುಪಲೇಬೇಕು. ದೊಡ್ಡ ಮಗನ ಹುಟ್ಟಿದ ಹಬ್ಬ.' ಈ ಮಾತನ್ನು ಕೇಳಿದ ಅಜ್ಜಿ ತುಂಬ ನಿರಾಶಳಾಗಿ ತನ್ನ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಆ ಮೊಮ್ಮಗಳೂ ಆ ಯುವಕನ ಬಗ್ಗೆ ಕನಸು ಕಂಡಿದ್ದಳು. ಕೊನೆಗೆ ಅವಳೂ 'ಬರಿ' ಚಾಪೆಯ ಮೇಲೆ ಮಲಗಿ ತನ್ನ ಬದುಕಿನ ನಿರಾಶೆಯ ಕುರಿತು ಯೋಚಿಸುತ್ತ ಒಂದಷ್ಟು ಹೊತ್ತು ಬಿಕ್ಕಿದಳು. ಇದು ಅನಿರೀಕ್ಷಿತ ತಿರುವು ಅಂತೆನಿಸಿದರೂ ಬದುಕಿನ ಕಟು ಸತ್ಯವನ್ನು ಅಭಿವ್ಯಕ್ತಿಸಲು ಉತ್ತಮ ತಂತ್ರದ ಭಾಗವಾಗಿದೆ. 'ಆಧುನಿಕತೆ, ಓದು ಬರಹ ಎಲ್ಲ ನನಗಿಷ್ಟಾನೆ. ಆದರೆ ಹೆಣ್ಣುಮಕ್ಕಳು ಹೀಗೆ ಸುಮ್ಮನೆ ಸಮಯ ಕಳೆಯೋದಂದ್ರೆ ನನಗೆ ಆಗಲ್ಲ'. ಹೆಣ್ಣಿನ ಈ ಅತಂತ್ರ ಸ್ಥಿತಿ ಲಾಗಾಯ್ತಿನಿಂದ ನಡೆದು ಬಂದ ಹೆಣ್ಣಿನ ಹೀನಾಯ ಬದುಕು ಈ ಸಣ್ಣಕತೆಯಲ್ಲಿ ಅನಾವರಣಗೊಳ್ಳುತ್ತದೆ. 'ಶಿಕ್ಷೆ' ಕಥೆಯಲ್ಲಿ ಕಥಾನಾಯಕಿ ಒಬ್ಬಳು ಚಿಕ್ಕ ಪ್ರಾಯದ ಹುಡುಗಿ. ಕಲಿಯುವುದರಲ್ಲಿ ಸ್ವಲ್ಪ ಹಿಂದೆ. ಅವಳಿಗೆ ಮದುವೆ ನಿಶ್ಚಯವಾಗುತ್ತದೆ. ಅವಳು ಹೇಳುತ್ತಾಳೆ; 'ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಪಾಸಾಗಿದ್ದರೆ ನನ್ನನ್ನು ಮದುವೆ ಮಾಡಿಕೊಡುತ್ತಿರಲಿಲ್ಲ ಅಲ್ವಾ ಅಜ್ಜಿ?' ಎಂದು ಕೇಳುತ್ತಾಳೆ. ಅಜ್ಜಿ ಹೇಳುತ್ತಾಳೆ, 'ಹೆಣ್ಣು ಮಕ್ಕಳಾದರೆ ಮದುವೆಯಾಗೋದು ಬೇಡ್ವಾ? ಹೆಚ್ಚು ಓದಿ ಏನು ಉಪಯೋಗ? ಮೊದಲ ರಾತ್ರಿ ಅವಳು ಹದಿನೈದರ ಬಾಲೆ. ಇವರ ಕಥೆಗಳು ಓದುಗರಿಗೆ ಶಾಕ್ ಟ್ರೀಟ್‌ಮೆಂಟ್ ಕೊಡುವುದರಲ್ಲಿ ಸಫಲವಾಗುತ್ತವೆ.
ಜಾಗತೀಕರಣದ ಪ್ರಭಾವವು ಮನುಷ್ಯ ಮನುಷ್ಯರ ಸಂಬಂಧಗಳನ್ನು ಬಿಗಡಾಯಿಸಿದೆ. ಹೆಣ್ಣು, ಗಂಡುಗಳ ಸ್ವಚ್ಛಂದ ವಿಹಾರದಲ್ಲಿ ಮನುಷ್ಯ ಮಾನವೀಯತೆಯನ್ನು ಮೃದು ಮಧುರ ಭಾವನೆಗಳನ್ನು ಯಾಂತ್ರಿಕತೆಯಲ್ಲಿ ಹೊಸಕಿ ಹಾಕುತ್ತಿದ್ದಾನೆ. ಇವರ ಕತೆಗಳಲ್ಲಿ ಪ್ರೇಮ, ಪ್ರಣಯ, ಪ್ರೀತಿ ಇವೆಲ್ಲವೂ ಇದ್ದೂ ಅದು ಗಂಡಸಿನ ಕ್ರೌರ್ಯದಲ್ಲಿ ಕರಕಲಾಗಿ ಬಿಟ್ಟಿವೆ. ಕಮಲಾದಾಸರ ಕಥೆಗಳು ಮನುಷ್ಯ ಜಗತ್ತಿನಲ್ಲಿ ಸುಖಿ ದಾಂಪತ್ಯ ಅನುಭವಿಸಿದ ದಂಪತಿ ಅದೂ ಹೆಂಡತಿ ಇಲ್ಲವೆ ಇಲ್ಲ ಎನ್ನಬಹುದಾಗಿದೆ. ಇವರ ಕತೆಗಳಲ್ಲಿ ಭಗ್ನ ಪ್ರೇಮದ ಹಲವಾರು ಚಿತ್ರಣಗಳಿವೆ. ಹೆಣ್ಣು ತನ್ನ ಪ್ರೇಮಿಯನ್ನು ಮದುವೆಯಾಗಲಾರದೆ, ಯಾರನ್ನೋ ಮದುವೆಯಾಗಿ ಆ ಪ್ರೇಮಿಯ ನೆನಪಿನಲ್ಲೇ ತನ್ನ ಬಾಳು ಹಾಳು ಮಾಡಿಕೊಂಡ ದಂಪತಿಯ ಚಿತ್ರಣ ಕೆಲವಿವೆ. 'ಪಾತಿವ್ರತ್ಯ' ಕತೆಯಲ್ಲಿ ಪ್ರಾರಂಭದ ಸಾಲು ಹೀಗಿದೆ; 'ಹಲವು ವರ್ಷಗಳ ಪ್ರಯತ್ನದ ಫಲವಾಗಿ ಅವಳಿಗೆ ತನ್ನ ಗಂಡನ ಪ್ರಿಯತಮೆಯನ್ನು ಭೇಟಿ ಮಾಡುವ ಸದವಕಾಶ ಒದಗಿ ಬಂತು'. ಮೊದಲ ವಾಕ್ಯದಲ್ಲೇ ನಾವು ಕತೆಯನ್ನು ದಿಢೀರನೆ ಪ್ರವೇಶ ಪಡೆಯುತ್ತೇವೆ. ಹೆಂಡತಿಗೆ ಹುಚ್ಚು ಹಿಡಿದಿದೆ ಎಂದು ಗಂಡ ಪ್ರಚಾರ ಮಾಡುತ್ತಾನೆ. ಆಗ ಅವಳು ಗೆಳೆಯರ ಮುಂದೆ ಗಂಡ ಇಂಗ್ಲಿಷಿನಲ್ಲಿ ಏನೋ ಹೇಳಿದಾಗ ಇವಳು ಹೇಳುತ್ತಾಳೆ; 'ನನಗೆ ಹುಚ್ಚೂಂತ ಹೇಳಿರಬೇಕಲ್ವಾ? ನಿಮಗೆ ಬಂಗಾಳಿ ಅರ್ಥವಾಗುತ್ತದಾ ಗೆಳೆಯರೆ? ನಾನು ದಿನವೂ ಹೇಳ್ತಿರ್ತೀನಿ, ನಾನು ಹುಚ್ಚಿಯಾಗಿದ್ದು ಇವಳು ಮಾಡಿದ ತಪ್ಪಿನಿಂದಾಗಿ... ಇವರು ನನ್ನತ್ತ ತಿರುಗಿ ನೋಡಿ ಎಷ್ಟು ಕಾಲವಾಯಿತು, ನನ್ನ ಜೊತೆ ಊಟ ಮಾಡಿ ಎಷ್ಟು ವರ್ಷಗಳಾದವು? ದಯವಿಟ್ಟು ನೀವೇ ವಿಚಾರಿಸಿ ನೋಡಿ ನನಗೆ ಇಂಗ್ಲಿಷ್ ಗೊತ್ತಿಲ್ಲ. ಆದ್ದರಿಂದ ನನ್ನನ್ನು ದ್ವೇಷಿಸತೊಡಗಿದರು. ಆದರೆ ಅದನ್ನು ಮೊದಲೇ ಹೇಳಬೇಕಿತ್ತು. ನನ್ನ ಅಪ್ಪನ ಹಣದಿಂದ ಶಿಕ್ಷಣ ಮುಗಿಸಿದರು... ನನ್ನ ಅಪ್ಪನ ಹಣದಿಂದ... ಇಲ್ಲಿಯೂ ಹೆಣ್ಣಿನ ಗೋಳಿನ ಚಿತ್ರಣ.
ಮನುಷ್ಯ ಲೋಕದ ಜನರು ಸ್ವಾರ್ಥಿಗಳು. ಅವರ ಪ್ರೇಮ ಕಾಮಮಯವಾಗಿದೆ. ಆದರೆ, ಶ್ರೀಕೃಷ್ಣ- ರಾಧೆಯರ ಪ್ರೇಮ ಮಾತ್ರ ಪವಿತ್ರವಾಗಿದೆ. ಪವಿತ್ರ ಪ್ರೇಮ ನಿರ್ವಾಜ್ಯ ಪ್ರೇಮ ಇದನ್ನು ನಾವು ಅಭೌತಿಕವಾಗಿ ಮತ್ತು ಅಮೂರ್ತವಾಗಿ ಮಾತ್ರ ಕಾಣಬಹುದು ಎಂದು ಸಾದೃಶ್ಯದಿಂದ ಮನುಷ್ಯನ ಸಣ್ಣತನವನ್ನು ಅನಾವರಣಗೊಳಿಸುತ್ತಾರೆ. ಏನೆ ಆಗಲಿ ಕಮಲಾದಾಸರ ಕತೆಗಳು ಓದಿಸಿಕೊಂಡು ಹೋಗುತ್ತವೆ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಹೊಸ ಒಳನೋಟವನ್ನು ಕೊಡುತ್ತವೆ. ಮತ್ತು ಕತೆಯ ಸೈಜು ಕತೆಯನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಮಾಡಿದೆ. ಕೃಷ್ಣ ರಾಧೆಯರ ಪ್ರೇಮದ ಕುರಿತು ಬರೆಯುವಾಗ ಕಮಲಾದಾಸರು ಶ್ರೇಷ್ಠ ಕವಿಗಳಾಗಿ ಅಲ್ಲಿ ಭಾವಗೀತಾತ್ಮಕತೆಯನ್ನು ತರುತ್ತಾರೆ. 'ಕೊನೆಯ ಅತಿಥಿ', 'ಲಾಕಪ್‌'ನಂತಹ ಥ್ರಿಲ್ಲರ್ ಡಿಟೆಕ್ಟಿವ್ ಕತೆಗಳನ್ನೂ ಮೌಲಿಕವಾಗಿ ಬರೆದಿದ್ದಾರೆ.
ಅನುವಾದಕರ ಬಗ್ಗೆ ಒಂದು ಮಾತು. ಈ ಅನುವಾದ ಮಲೆಯಾಳಂನ ಕತೆಯೆಂದೆನಿಸದೆ ಕನ್ನಡದ್ದೇ ಕತೆಗಳು ಎಂದೆನಿಸಿತು. ಅಷ್ಟು ಯಥಾವತ್ತಾಗಿ ತುಂಬ ಸರಳ ಕನ್ನಡದಲ್ಲಿ ಎಲ್ಲರಿಗೂ ಗ್ರಾಹ್ಯವಾಗುವಂತೆ ಅನುವಾದಿಸಿದ್ದಾರೆ. ಕಮಲಾದಾಸರ ಕಥೆಗಳ ಕುರಿತಂತೆ ಅನುವಾದಕರ ಟಿಪ್ಪಣಿ ಅಥವಾ ಪ್ರಸ್ತಾವನೆ ಇರುತ್ತಿದ್ದರೆ ಕಮಲಾದಾಸರ ಸಾಹಿತ್ಯವನ್ನು ಅಧ್ಯಯನ ಮಾಡಲು ಉಪಯುಕ್ತವಾಗುತ್ತಿತ್ತು.

-ಉದಯಕುಮಾರ ಹಬ್ಬು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!