ನಂದುವ ಬೆಳಕಿನ ಕುಡಿ ಫಕ್ಕನೆ ಬೆಳಗಲು ನೀ ತೈಲವಾದೆಯೋ
ನಲಿವ ಬೆಡಗು ಮಾಯಲು ಕುಡಿಯ ಅಲಗದಿ ನೀ ಎದೆಯಿರಿದೆಯೋ
ಕಣ್ಣ ಕನ್ನಡಿಯಲಿ ಭಿತ್ತಿಗೊಂಡ ನಿನ್ನ ಬಿಂಬವ ಅಳಿಸಲಾಗದೋ ಪ್ರಿಯೆ
ಹೊಲಬನರಿತ ಹೊಳೆದ ಕಣ್ಣಿನ ಆ ಗುಡ್ಡೆಯು ಛಿದ್ರಗೊಂಡವೋ ಛಾಯೆ
ಹೂನಗೆಯ ಅದರವು ಕರ್ಣದಿ ಉಲಿಯಿತು ಗೂಡುಕಟ್ಟುವ ಭರವಸೆಯ
ಎದೆಯೊಳಗೆ ಕುದಿದ ಹಾಲು ಒಡೆಯಲು ಕಲಿಸಿದೆ ನೀ ಮೌನಹುಣಸೆಯ
ಗಿಣಿ ಕಚ್ಚಿದ ಕೆಂಪು ಪ್ಯಾರಲ ಹಣ್ಣಿನ ಸವಿಯೋ ಸವಿಯು
ನಿನಗಿದ ಅನ್ನದ ತುತ್ತಿನ ಎಂಜಲು ಅಮೃತಧಾರೆಯ ಮೀರೆ ರುಚಿಯು
ನನದೆಲ್ಲವೂ ನಿನದೇ ಎನುವ ನಿನ ಮುಗ್ಧ ಒಲುಮೆಯಲಿ ತೇಲಿದೆ
ಹುಚ್ಚುಮನದ ಆಸೆಗೆದರಿ ದಾಹದಿ ಭರಗುಡುತ ಶೋಧಿಸಿ ಸೋಲಿದೆ
ಸಾಲು ಸಾಲಾಗಿ ಹರಿವ ಇರುವೆಗಳ ಹೆಜ್ಜೆನಾದಕ್ಕೆ ಮರುಳಾದೆ
ನಿನ ಮನದಾಳದ ಇಂಗಿತ ಅರಿವ ಹೆಜ್ಜೆ ಸಪ್ಪುಳ ಕೇಳದೆ ಮಳ್ಳಾದೆ.
- ಡಿ.ಎಸ್. ಚೌಗಲೆ