ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂಬ ಮಾತು ಈಗ ಹಳಸಲಾಗುತ್ತಿದೆ. ಹಾಗೆಂದು ಅದರ ಸ್ಥಾನವೇನು ಕುಂದಿಲ್ಲ. ಆಧುನಿಕ ತಂತ್ರಜ್ಞಾನ, ಪ್ರಸಾರ ಸ್ವರೂಪದಲ್ಲಿ ಆಗಿರುವ ಪರಿವರ್ತನೆಗಳು ಮಾಧ್ಯಮವನ್ನು ಇನ್ನಷ್ಟು ಬಲಶಾಲಿಯನ್ನಾಗಿ ಮಾಡಿವೆ. ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮವೆಂದು ಶಾಖೆಗಳಾಗಿವೆ. ಇವಕ್ಕೆ ರೇಡಿಯೋ, ಛಾಯಾಚಿತ್ರ, ವ್ಯಂಗ್ಯಚಿತ್ರ, ಚಲನಚಿತ್ರಗಳೂ, ಅಂತರ್ಜಾಲವೂ ಸೇರಿಕೊಂಡಿದೆ. ಟೆಲಿಪ್ರಿಂಟರ್ ಯಂತ್ರಗಳ ಬದಲಿಗೆ ಹೊಸಹೊಸ ಸಂಪರ್ಕ ಸಾಧನಗಳು ಸೇರಿಕೊಂಡಿವೆ. ಸ್ಮಾರ್ಟ್‌ಫೋನ್‌ಗಳು ವರದಿಗಾರಿಕೆಯನ್ನು ಸುಲಭಗೊಳಿಸಿವೆ. ಕುಟುಕು ಕಾರ್ಯಾಚರಣೆಯಂಥ ಸಾಹಸಗಳಿಗೆ ಆಧುನಿಕ ಸಲಕರಣೆಗಳೇ ಪ್ರಚೋದಕಗಳು. ದಶಕದ ಹಿಂದಿನ ಮಾಧ್ಯಮ ಪ್ರಪಂಚಕ್ಕೂ ಇವತ್ತಿನ ಮಾಧ್ಯಮ ಪ್ರಪಂಚಕ್ಕೂ ಅಜಗಜಾಂತರವಿದೆ.
ಮುದ್ರಣ ಮಾಧ್ಯಮವು ಸುದ್ದಿಯನ್ನು ಪ್ರಕಟಿಸುವ ರೀತಿಗೂ ದೃಶ್ಯ ಮಾಧ್ಯಮ ಅದನ್ನು ಬಿತ್ತರಿಸುವುದಕ್ಕೂ ವ್ಯತ್ಯಾಸವಿದೆ. ಎರಡರ ವರದಿಗಾರಿಕೆಯ ರೀತಿಯೂ ಭಿನ್ನವಾಗಿವೆ. ತಾವು ಯಾರನ್ನು ತಲುಪಬೇಕು ಎಂಬ ವಿಷಯದಲ್ಲೂ ಅವುಗಳಿಗೆ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಲಾಗುತ್ತಿದೆ. ಮಾಧ್ಯಮದ ಶಕ್ತಿ ಇತ್ತೀಚಿನ ಲೋಕಸಭೆ ಚುನಾವಣೆಯ ಕಾಲದಲ್ಲಿ ಸ್ಪಷ್ಟಗೊಂಡಿದೆ.
ಇಂಥ ಮಾಧ್ಯಮದ ಕುರಿತು ಡಾ. ನಾಗೇಂದ್ರ ಅವರು ಮೂರು ಕೃತಿಗಳನ್ನು ಹೊರತಂದಿದ್ದಾರೆ. 1. ಮಾಧ್ಯಮ ಲೋಕ, 2. ದೈನಿಕ ವರದಿಗಾರಿಕೆ, 3. ಟೆಲಿವಿಷನ್ ವರದಿಗಾರಿಕೆ- ಎಂಬ ಈ ಕೃತಿಗಳು ಮಾಧ್ಯಮದ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ಮಾಧ್ಯಮದ ವಿದ್ಯಾರ್ಥಿಗಳಿಗಂತೂ ಇವು ತುಂಬ ಉಪಯುಕ್ತವಾಗಿವೆ. 'ಮಾಧ್ಯಮ ಲೋಕ'ದಲ್ಲಿ ಭಾರತದ ಹಾಗೂ ಕನ್ನಡದ ಪತ್ರಿಕೋದ್ಯಮದ ಇತಿಹಾಸದ ಮೇಲೆ ನಾಗೇಂದ್ರ ಕಿರು ನೋಟವನ್ನು ಹರಿಸಿದ್ದಾರೆ. ಮುದ್ರಣ ಕಲೆಯ ಆರಂಭ, ರೇಡಿಯೋ ಮಾಧ್ಯಮದ ವೈಶಿಷ್ಟ್ಯ, ಮೈಸೂರು, ಬೆಂಗಳೂರು ಆಕಾಶವಾಣಿಯ ಇತಿಹಾಸ, ಹೊಸ ಖಾಸಗಿ ಎಫ್.ಎಂ. ರೇಡಿಯೋ, ಟೆಲಿವಿಷನ್, ಚಲನಚಿತ್ರಗಳ ಕ್ಯಾಮೆರಾ ಹುಟ್ಟು ಮತ್ತು ಬೆಳೆವಣಿಗೆ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಚಲನಚಿತ್ರವನ್ನೂ ಅವರು ಮಾಧ್ಯಮದಲ್ಲಿ ಸೇರಿಸಿದ್ದಾರೆ. ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಭಾರತೀಯ ಪತ್ರಿಕಾ ಮಂಡಳಿಯ ಕಾರ್ಯವ್ಯಾಪ್ತಿ, ಅದರ ಜವಾಬ್ದಾರಿಗಳ ಬಗ್ಗೆಯೂ ವಿವರ ನೀಡಿದ್ದಾರೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ರಾಜ್ಯಾಂಗದ 19ನೇ ವಿಧಿಯನ್ನು ಪ್ರಸ್ತಾಪಿಸಬೇಕಿತ್ತು ಎಂದು ಎನ್. ಅರ್ಜುನದೇವ ಹೇಳಿರುವುದು ಸೂಕ್ತವಾಗಿದೆ. ಪತ್ರಕರ್ತರು ಸಂವಿಧಾನದ ಬಗ್ಗೆ, ಅದರಲ್ಲೂ ಪತ್ರಿಕಾ ಸ್ವಾತಂತ್ರ್ಯದ ಎಲ್ಲೆಗಳ ಬಗ್ಗೆ ತಿಳಿದುಕೊಂಡಿರಬೇಕಾದುದು ಅಗತ್ಯವಾಗಿದೆ. ಮಾಧ್ಯಮ ಎನ್ನುವುದು ಹರಿತ ಅಲಗಿನ ಕತ್ತಿ ಇದ್ದಂತೆ. ಅದನ್ನು ಒಳ್ಳೆಯದಕ್ಕೂ ಬಳಸಬಹುದು ಕೆಟ್ಟದ್ದಕ್ಕೂ ಬಳಸಬಹುದು. ಸಂಯಮ ಪತ್ರಕರ್ತನ ಧರ್ಮವಾಗಬೇಕು. ನಾಗೇಂದ್ರ ಅವರು ಈ ಕೃತಿಯಲ್ಲಿ ಬಹಳಷ್ಟು ವಿಷಯಗಳನ್ನು ಶ್ರಮವಹಿಸಿ ಸಂಗ್ರಹಿಸಿ ಕೊಟ್ಟಿದ್ದಾರೆ.
'ದೈನಿಕ ವರದಿಗಾರಿಕೆ' ಕೃತಿಯಲ್ಲಿ ನಾಲ್ಕು ಅಧ್ಯಾಯಗಳಿವೆ. ಪತ್ರಿಕೆಗೆ ವರದಿಗಾರರೇ ಜೀವಾಳ. ವರದಿಗಾರಿಕೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಇದರಲ್ಲಿ ನಾಗೇಂದ್ರ ಮಾಹಿತಿಯನ್ನು ನೀಡಿದ್ದಾರೆ. ಶಾಸನಸಭೆ, ಸಂಸತ್ತಿನ ಕಲಾಪದ ವರದಿಯನ್ನು ಹೇಗೆ ಮಾಡಬೇಕು, ನ್ಯಾಯಾಲಯದ ಕಲಾಪದ ವರದಿಯನ್ನು ಹೇಗೆ ಸಿದ್ಧಪಡಿಸಬೇಕು, ಕೃಷಿ, ಆರೋಗ್ಯ, ವೈದ್ಯಕೀಯ, ಸಾರಿಗೆ, ಶೈಕ್ಷಣಿಕ, ಕೈಗಾರಿಕೆ ಇತ್ಯಾದಿಗಳ ವರದಿಯನ್ನು ಹೇಗೆ ಮಾಡಬೇಕು, ಮಾನವೀಯ ಮುಖಗಳಿರುವ ವರದಿಯನ್ನು ಹೇಗೆ ಮಾಡಬೇಕು ಎಂಬಿತ್ಯಾದಿ ಮಾಹಿತಿ ಇದರಲ್ಲಿದೆ. ಪುರವಣಿಗಳು ಹೇಗಿರಬೇಕು, ಅದರಲ್ಲಿಯ ಲೇಖನಗಳ ಸ್ವರೂಪವೇನು, ಶೀರ್ಷಿಕೆಗಳು ಹೇಗಿರಬೇಕು ಎಂಬ ಬಗ್ಗೆಯೂ ಇಲ್ಲಿ ಚರ್ಚಿಸಲಾಗಿದೆ. 'ಟೆಲಿವಿಷನ್ ವರದಿಗಾರಿಕೆ' ಕೃತಿಯಲ್ಲಿ ಟಿವಿ ಮಾಧ್ಯಮದವರು ಹೇಗೆ ವರದಿಗಾರಿಕೆಯನ್ನು ಮಾಡಬೇಕು ಎಂಬ ಮಾಹಿತಿಯನ್ನು ನೀಡಿದ್ದಾರೆ. ಟಿವಿ ವರದಿಗಾರಿಕೆಯಿಂದ ಎಷ್ಟೋ ಜನೋಪಕಾರಿ ಸಂಗತಿಗಳು ಜರುಗಿದರೂ ಅದರಿಂದ ತೇಜೋವಧೆಯಾಗುವ ಅಪಾಯಗಳೂ ಇವೆ. ಪತ್ರಿಕೆಯವರಿಗೆ ಸುದ್ದಿಯನ್ನು ಪರಿಶೀಲಿಸುವುದಕ್ಕೆ ಪರಿಷ್ಕರಿಸುವುದಕ್ಕೆ ಸ್ವಲ್ಪ ಸಮಯಾವಕಾಶವಾದರೂ ಇರುತ್ತದೆ. ಆದರೆ ಟಿವಿಯವರಿಗೆ ಅದಿರುವುದಿಲ್ಲ. ಹಸಿಬಿಸಿ ಸುದ್ದಿಯನ್ನೇ ನೀಡಬೇಕಾಗುತ್ತದೆ. ಜೊತೆಗೆ ಟಿಆರ್‌ಪಿ ಒತ್ತಡ. ಇದರಿಂದಾಗಿ ಟಿವಿ ಪತ್ರಕರ್ತ ದಾರಿ ತಪ್ಪಲೂಬಹುದು. ಹೀಗಾಗಿ ಮಾಧ್ಯಮ ಸ್ವಯಂನಿಯಂತ್ರಣವನ್ನು ಹೇರಿಕೊಳ್ಳಬೇಕು.
ವರದಿಗಾರಿಕೆಯನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನಾಗೇಂದ್ರ ಕೊಟ್ಟಿದ್ದಾರೆ. ಮಾಧ್ಯಮದಲ್ಲಿ ಕೆಲಸ ಮಾಡಿರುವ ಅವರು ಈಗ ಮಾಧ್ಯಮದ ಬೋಧಕರು. ಹೀಗಾಗಿ ಅವರಿಗೆ ಮಾಧ್ಯಮ ವಿದ್ಯಾರ್ಥಿಗಳ ಅಗತ್ಯ ಚೆನ್ನಾಗಿ ಗೊತ್ತಿದೆ. ವಿದ್ಯಾರ್ಥಿಗಳಷ್ಟೇ ಅಲ್ಲ ವೃತ್ತಿಯಲ್ಲಿರುವವರೂ ಇದನ್ನು ಓದಬೇಕು.
ಪ್ರ: ಶ್ರೀಚನ್ನಕೇಸವ ಪ್ರಕಾಶನ, ತುಮಕೂರು, ಪುಟಗಳು 202/154/160, ಬೆಲೆ ರು. 176/140/140
-ಡಾ. ವಾಸುದೇವ ಶೆಟ್ಟಿ