ಕಪ್ಪುಹಣ! 'ಮೇಲ್ನೋಟಕ್ಕೆ ನೋಟಿನಲ್ಲೂ ವರ್ಣಭೇದ' ಅಂತ ಮಂಡೇಲಾಗೆ ಕೇಳಿಸದಷ್ಟು ಮೆತ್ತನೆ ಚಕಾರ ತೆಗೆಯಬಹುದು. ಆದರೀ ಹಣ ದೌರ್ಜನ್ಯದ ಹೊಗೆಗೆ ಸಿಲುಕಿ ಕಪ್ಪಾದದ್ದಲ್ಲ. 'ಕರ'ದಿಂದ ತಪ್ಪಿಸಿಕೊಳ್ಳಲು ಹೋಗಿ ಕಾಣದ ಪ್ರದೇಶವನ್ನು ಹೊಕ್ಕು ಕಪ್ಪಾದದ್ದು. ಅಲ್ಲೆಲ್ಲೋ ಸ್ವಿಸ್ಬ್ಯಾಂಕಿನ ಲಾಕರ್ ಒಳಗೆ ಉಸಿರು ಕಟ್ಟಿಕೊಂಡಿರುವ ಈ ಕಪ್ಪುನೋಟಿನ ಬಿಡುಗಡೆಯ ಕೂಗು ಇವತ್ತು ನಿಮ್ಮ- ನಮ್ಮ ಕಿವಿಗೂ ತೀವ್ರವಾಗಿ ತಟ್ಟುತ್ತಿದೆ.
ಇದು ಮೋದಿ ಸರ್ಕಾರದ ಮೊದಲ ಆಪರೇಶನ್. 'ಕರಸೇವಕನಾಗದ ಹೊರತು ರಾಮರಾಜ್ಯ ಕಟ್ಟಲು ಸಾಧ್ಯವೇ ಇಲ್ಲ' ಎಂಬ ಧ್ಯೇಯಗೀತೆ ಹಾಡುತ್ತಿರುವ ಎನ್ಡಿಎ ಸರ್ಕಾರಕ್ಕೆ ಕಪ್ಪಿಟ್ಟಿರುವ ಮುಖಗಳ ಬಣ್ಣ ಬಯಲು ಮಾಡುವ ಬಯಕೆ. ಇಲ್ಲಿನ ಅರ್ಥವ್ಯವಸ್ಥೆಗೆ ಅಡಿಪೆಟ್ಟಿಟ್ಟು, ದೂರದ ದೇಶದ 'ಬೆಳ್ಳಿ'ಬೆಟ್ಟವನ್ನು ಬಡ್ಡಿಯಲ್ಲೇ ಬಂಗಾರ ಮಾಡಿಸಿರುವ ನೋಟಿಗೆ ಚಿಕಿತ್ಸೆ ಕೊಡಿಸುವ ಹಠ ಸರ್ಕಾರದ್ದು. ಆ 'ಕಪ್ಪು' ಈ ನೆಲಕ್ಕೆ ಬಿದ್ದು 'ಬಿಳಿ'ಯಾದರೆ, ಭಾರತ ಬೆಳಗುತ್ತದೆಂಬ ಕನಸು ಮೋದಿಯವರದು.
ಕರಿಮುಖವಾಡ ಕಳಚುವುದೇ?
ಸ್ವಿಜರ್ಲೆಂಡ್ ಸರ್ಕಾರ ಯಾರ ಒತ್ತಡಕ್ಕೆ ಮಣಿದಿದೆಯೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ತಮ್ಮ ದೇಶದ ಕಳ್ಳಬ್ಯಾಂಕುಗಳ ಕಪಾಟುಗಳಲ್ಲಿರುವ ಅಕೌಂಟುಧಾರಿಗಳ ಮಾಹಿತಿ ಕೇಳಿದೆ. ಇದು ಒಂದು ರೀತಿಯಲ್ಲಿ ಸುಳಿವು ಕೊಡದೇ ಅಪ್ಪಳಿಸುವ ಮುಂಗಾರಿನಂತೆ. 'ಹೆಚ್ಚು ತಕರಾರೇನೂ ಬೇಡ, ಮಾಹಿತಿ ಕೊಡ್ತೇವೆ, ಇಟ್ಟುಕೊಳ್ಳಿ, ಇವರ ಚಾಳಿ ಬಿಡಿಸಿಕೊಳ್ಳಿ' ಎಂದಿರುವ ಸ್ವಿಸ್, ಮೋದಿ ಸರ್ಕಾರದ ಜೊತೆ ಹೊಸ ದೋಸ್ತಿ ಕಟ್ಟಿಕೊಳ್ಳುವ ಮನಸ್ಸು ಮಾಡುತ್ತಿದೆ. ಹಿಂದಿನ ಸರ್ಕಾರವೇ ಕೇಳಿದ್ದರೆ ಕೊಡುತ್ತಿತ್ತೇನೋ, ಆದರೆ ಆಗ ಆ ಸರ್ಕಾರಕ್ಕೆ ಮಾಹಿತಿ ಏಕೆ ಬೇಕು ಎಂದು ಅರಿವು ಮೂಡಿಸುವ ಜರೂರತ್ತು ಇರಲಿಲ್ಲವೇನೋ! ಹೀಗಾಗಿ ಆಗ ಸಿಗದ ಮಾಹಿತಿ ಈಗ ಸಿಗುವ ಕಾಲ ಬಂದಿದೆ. ಹೀಗಾಗಿ ಇದೊಂದು ರೀತಿ ದೇಶದ ಸಂಪತ್ತಿನ ಇಮ್ಮಡಿಗೆ ಸಂಕ್ರಮಣ ಕಾಲ.
ಕರಾಳ ದಂಧೆ
'ಕಪ್ಪುಹಣ'ವೆಂದರೆ ಬೇರೇನೋ ಅಲ್ಲ, ಪಕ್ಕಾ ಕರಾಳ ದಂಧೆ. ಸೋಫೆಸ್ಟಿಕೇಟೆಡ್ ಭಾಷೆಯಲ್ಲಿ 'ಬ್ಲ್ಯಾಕ್ಮನಿ' ಎಂಬ ಗೌರವ. ಇದರಲ್ಲಿ ಶಾಮೀಲಾದವರ ಮನಸ್ಸೆಲ್ಲ ಕಪ್ಪಿಟ್ಟಿರುತ್ತದೆ. ಕಾರಣ ಅವರು 'ಕರ'ಗಳ್ಳರು. ದೇಶದ ಸಕಲ ಸೌಲಭ್ಯಗಳನ್ನೂ ಉಂಡು, ತೇಗಿ, ತೆರಿಗೆ ಕಟ್ಟದೆ ಉಡಾಫೆಯಿಂದ ಬದುಕುತ್ತಿರುವವರು. ಇವರನ್ನು ಕಳ್ಳರೆಂದೋ, ದರೋಡೆಕೋರರೆಂದೋ ಅಂದರೆ ತಪ್ಪಾದೀತು. ಇವರಿಗೆ ದೇಶದ್ರೋಹಿಗಳು ಎಂದರೆ ಸರಿ ಆದೀತೇನೋ! ಇವರ ಬಳಿ ಭಾರಿ ಅನ್ನುವಷ್ಟೇ ದುಡ್ಡಿರುತ್ತದೆ. ಆದರೂ ಕರ ಕಟ್ಟಲ್ಲ. ಸರ್ಕಾರಕ್ಕೆ ಏಕೆ ಟ್ಯಾಕ್ಸ್ ಕಟ್ಟಬೇಕು ಎಂಬ ಮನೋಭಾವ ಇವರದ್ದು.
ಹೀಗಾಗಿಯೇ ಇವರು ಕರಗಳ್ಳರಾಗೋದು ಎಂಬ ಬಗ್ಗೆ ಯೋಚಿಸಿ, ಕೊಳ್ಳೆ ದೇಶಗಳತ್ತ ಕಣ್ಣು ಹಾಯಿಸುತ್ತಾರೆ. ಇವರ ಪಾಲಿಗೆ ಸ್ವರ್ಗವಾಗಿ ಕಾಣುವುದೇ ಸ್ವಿಸ್ ಅಥವಾ ಸ್ವಿಜರ್ಲೆಂಡ್ ಬ್ಯಾಂಕುಗಳು.
ಅದು 'ಕರ'ಗಳ್ಳರ ಸ್ವರ್ಗ
ವಿಮಾನ ನಿಲ್ದಾಣದಿಂದ ಚೀಲ ಕೊಡುವುದರಿಂದ ಹಿಡಿದು, ಬ್ಯಾಂಕಿನಲ್ಲಿ ಹಣ ಇಡೋದಿಕ್ಕಾಗಿಯೇ ಏಜೆಂಟ್ಗಳು ಇರುವ ದೇಶವದು. ಇಲ್ಲಿ ಹಣವನ್ನು ಚೀಲದಲ್ಲಿ ಸಾಗಿಸುತ್ತಾರೆ. ನಮ್ಮಲ್ಲಿ ರೈತರು ಅಕ್ಕಿಯನ್ನೋ, ರಾಗಿ, ಜೋಳವನ್ನೋ ಮೂಟೆಯಲ್ಲಿ ಸಾಗಿಸುತ್ತಾರಲ್ಲ ಹಾಗೆ. ಅಲ್ಲಿಗೆ ಹೋದ ಮೇಲೆ ಹಣದ ಬೆಲೆಯೇ ಅಷ್ಟು. ಹೀಗಾಗಿ ಇಲ್ಲಿಂದ ಹೋಗುವಾಗ ಸೂಟ್ಕೇಸ್ನಲ್ಲಿ ಹೋದ ಹಣ, ಅಲ್ಲಿ ಗೋಣಿಚೀಲದ ಪಾಲಾಗುತ್ತೆ. 'ಕರ'ಗಳ್ಳರ ಅಕೌಂಟ್ ತೀರಾ ಸೀಕ್ರೆಟ್. ಯಾರು ಬಂದು ಕೇಳಿದರೂ ಕೊಡಲ್ಲ. ಒಂದು ವೇಳೆ ಬ್ಯಾಂಕ್ನ ಅಧಿಕಾರಿಗಳು ಶಾಮೀಲಾಗಿ ಬೇರೆಯವರಿಗೆ ಕೊಟ್ಟರು ಅಂತಿಟ್ಟುಕೊಳ್ಳಿ, ಅವರಿಗೆ ಜೈಲು ಗ್ಯಾರಂಟಿ. ಅಷ್ಟು ಮಟ್ಟದ ಕರಾಳ ಭದ್ರತೆ ಇರುತ್ತೆ ಅಲ್ಲಿ.
1,0000000000....
ಅದೊಂದು ರೀತಿಯ ಅಂದಾಜಿನ ಯುಗ. ಸ್ವಿಸ್ ಬ್ಯಾಂಕಿನಲ್ಲಿ ಭಾರತದವರ ಕಪ್ಪಿಟ್ಟ ಹಣ ಎಷ್ಟಿದೆ ಎಂದು ಕೇಳಿದರೆ ಯಾರೂ ಸರಿಯಾಗಿ ಹೇಳಲ್ಲ. ಅದು ಕಳ್ಳ ಹಣವೇ ಆಗಿರುವುದರಿಂದ ಯಾರಿಗೂ ಪಕ್ಕಾ ಲೆಕ್ಕ ಗೊತ್ತಿಲ್ಲ. ಹೀಗಾಗಿಯೇ ಒಂದರ ಮುಂದೆ 10 ಸೊನ್ನೆ ಹಾಕಿ, ಮೂರು ಡಾಟ್ ಹಾಕಿರುವುದು. ಬೇಕಿದ್ದರೆ ನೀವು ಇದಕ್ಕೆ ಇನ್ನೂ ಸೊನ್ನೆ ಸೇರಿಸಿಕೊಂಡು ಹೋಗಬಹುದು ಅಥವಾ ಬಿಟ್ಟರೂ ಬಿಡಬಹುದು. ಒಂದು ಅಂದಾಜಿನ ಪ್ರಕಾರ, ಅಲ್ಲಿ 9 ಸಾವಿರ ಕೋಟಿ ಇದೆಯಂತೆ. ಹೀಗೆಂದರೆ ಕಡಿಮೆ ಅನ್ನಿಸುವುದು ಸತ್ಯ. ಆದರೆ, ಇನ್ನೊಂದು ಮೂಲಗಳ ಪ್ರಕಾರ, 25 ಲಕ್ಷ ಕೋಟಿ ಇರಬಹುದಂತೆ. 25 ಲಕ್ಷ ಕೋಟಿ ಎಂದರೆ ಎಷ್ಟಾಗುತ್ತೆ ಗೊತ್ತಾ? ದೇಶದಲ್ಲಿರುವ ಎಲ್ಲ ಜಿಲ್ಲೆಗಳಲ್ಲೂ 2000 ಬೆಡ್ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಬಹುದು ಆ ಹಣದಲ್ಲಿ. ಇದಷ್ಟೇ ಅಲ್ಲ, ಇಡೀ ಒಂದು ವರ್ಷ ದೇಶದ ಎಲ್ಲ ಜನರಿಂದ ತೆರಿಗೆಯನ್ನೂ ಸಂಗ್ರಹಿಸದೇ ಉಳಿಸಿಬಿಡಬಹುದು.
ವಿದೇಶಗಳಲ್ಲಿ ಕಪ್ಪು ಹಣ(ಎಲ್ಲವೂ ಅಂದಾಜೇ)
1. ಬಿಜೆಪಿ ಚುನಾವಣೆಗೂ ಮೊದಲು ಹೇಳಿದ ಪ್ರಕಾರ, ಸರಿಸುಮಾರು 500 ಬಿಲಿಯನ್ ಡಾಲರ್ನಿಂದ 1.4 ಟ್ರಿಲಿಯನ್ ಡಾಲರ್ವರೆಗೂ ಇದೆ. ಅಂದರೆ ಭಾರತೀಯ ಹಣದ ಪ್ರಕಾರ, ಸುಮಾರು 22.5 ಲಕ್ಷ ಕೋಟಿಯಿಂದ 63 ಲಕ್ಷ ಕೋಟಿ. 2. ವಾಷಿಂಗ್ಟನ್ ಮೂಲದ ಗ್ಲೋಬಲ್ ಫೈನಾನ್ಷಿಯಲ್ ಇಂಟಿಗ್ರಿಟಿ ಹೇಳಿರುವ ಪ್ರಕಾರ, ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುವ ಹಣ 462 ಬಿಲಿಯನ್ ಡಾಲರ್. ಅಂದರೆ 20,79,00 ಕೋಟಿ ರು. ಇದು 1948ರಿಂದ 2008ರವರೆಗೆ ಇಟ್ಟಿರುವ ಹಣವಷ್ಟೇ.
ಇನ್ನೊಂದು ವಿಷಯ...
ಇಷ್ಟೆಲ್ಲ ಹಣವನ್ನು ಭಾರತೀಯರು ವಿದೇಶಗಳಿಗೆ ಕೊಂಡೊಯ್ದಿದ್ದಾದರೂ ಹೇಗೆ ಎಂಬ ಸಂದೇಹ ಎಲ್ಲರಿಗೂ ಬರಬಹುದಲ್ಲವೇ? ಹೌದು, ಸ್ವಾತಂತ್ರ್ಯಾನಂತರದಲ್ಲಿ ದೇಶವನ್ನು ಕೊಳ್ಳೆ ಹೊಡೆಯುವುದರಲ್ಲೇ ನಿರತವಾಗಿದ್ದ ರಾಜಕಾರಣಿಗಳು ಮತ್ತು ಭಾರಿ ಉದ್ಯಮಿಗಳು ತೆರಿಗೆ ತಪ್ಪಿಸುವ ಸಲುವಾಗಿ ಹಲವಾರು ಮಾರ್ಗಗಳನ್ನೇ ಕಂಡುಕೊಂಡಿದ್ದರು. ರಾಜಕಾರಣಿಗಳದ್ದು ಕಳ್ಳಹಣವೇ ಆದದ್ದರಿಂದ ಇಲ್ಲಿನ ಬ್ಯಾಂಕುಗಳಲ್ಲಿ ಇಡುವಂತಿರಲಿಲ್ಲ. ಹೀಗಾಗಿಯೇ ಅವರು ಹುಡುಕಿಕೊಂಡದ್ದು ಸ್ವಿಸ್ಬ್ಯಾಂಕುಗಳನ್ನ. ಹವಾಲಾ ಮೂಲಕ ಈ ಹಣವನ್ನೆಲ್ಲ ಸಾಗಿಸಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಭಾರಿ ಭದ್ರತೆ ಇರುವುದರಿಂದ ಹವಾಲಾ ಮೂಲಕ ಸಾಗಾಟ ಕಷ್ಟವಾಗುತ್ತಿದೆ. ಹೀಗಾಗಿಯೇ ಬರುಬರುತ್ತಾ ವಿದೇಶಗಳಿಗೆ ಹೋಗುವ ಕಪ್ಪುಹಣ ಇಲ್ಲಿ ರಿಯಲ್ ಎಸ್ಟೇಟ್ಗಳಲ್ಲಿ ಚಲಾವಣೆಯಾಗುತ್ತಿದೆ. ಹೀಗಂತ ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ.
ನಾವಷ್ಟೇ ಅಲ್ಲ...
ಕಪ್ಪಿಗರು ನಾವಷ್ಟೇ ಅಲ್ಲ, ಜಗತ್ತಿನ ಎಲ್ಲ ದೇಶಗಳು ಇದರ ಫಲಾನುಭವಿಗಳೇ. ಅಂದಾಜಿನ ಪ್ರಕಾರ ಜಾಗತಿಕವಾಗಿ 1.6 ಟ್ರಿಲಿಯನ್ ಡಾಲರ್ನಷ್ಟು ಹಣನ್ನು ಸ್ವಿಸ್ ಬ್ಯಾಂಕ್ಗಳಲ್ಲಿ ಇಡಲಾಗಿದೆ. ಸ್ವಿಸ್ಬ್ಯಾಂಕಿನಲ್ಲಿ ಕಪ್ಪುಹಣ ಇಟ್ಟಿರುವ ದೇಶಗಳ ಮೊದಲ ಸಾಲಿನಲ್ಲಿ ಇರುವುದು ಬ್ರಿಟನ್. ಭಾರತ 58ನೇ ಸ್ಥಾನದಲ್ಲಿ ಇದೆ. ಚೀನಾ 30ನೇ ಸ್ಥಾನದಲ್ಲಿದೆ. ಅಮೆರಿಕ ಗಟ್ಟಿ ಕಾನೂನು ಮಾಡಿದ್ದರಿಂದ ಸ್ವಿಸ್ ಬ್ಯಾಂಕುಗಳೇ ಅಮೆರಿಕದವರ ಬಳಿ ಹಣವನ್ನು ಹಾಕಿಸಿಕೊಳ್ಳೋದಿಲ್ಲ.
ಹಣ ಹೇಗಿಡಬಹುದು?
ಸ್ವಿಸ್ಬ್ಯಾಂಕುಗಳಲ್ಲಿ ಹಣವಿಟ್ಟು ನೀವು ಸತ್ತು ಹೋದರೂ ಅದು ಅಲ್ಲೇ ಭದ್ರವಾಗಿರುತ್ತೆ. ಅಂದರೆ ಹಣ ಇಟ್ಟು ಸತ್ತುಹೋಗಬೇಕು ಅಂತೇನಿಲ್ಲ, ಅದರ ಸುರಕ್ಷತೆಯ ಒಂದು ಉಪಮೇಯವಷ್ಟೇ. ಇದಷ್ಟೇ ಅಲ್ಲ, ನೀವು ಸ್ವಿಸ್ ಬ್ಯಾಂಕಿನಲ್ಲಿ ಅಕೌಂಟ್ ಓಪನ್ ಮಾಡಿದ್ದೀರಿ ಅನ್ನೋದೂ ನಿಮ್ಮ ಎಡಗೈಗೇ ತಿಳಿಯಲ್ಲ. ಅಷ್ಟು ಗೌಪ್ಯವಿದೆ ಅಲ್ಲಿ. ಇಲ್ಲಿ ಎರಡು ರೀತಿಯ ಅಕೌಂಟ್ ಓಪನ್ ಮಾಡಲು ಅವಕಾಶ ಇರುತ್ತೆ. 1. ಪ್ರೈವೇಟ್ 2. ರಿಟೇಲ್. ಪ್ರೈವೇಟ್ ಅಕೌಂಟ್ ಓಪನ್ ಮಾಡಬೇಕಾದರೆ 3,00,000 ಅಮೆರಿಕನ್ ಡಾಲರ್ ಅನ್ನು ಠೇವಣಿಯಾಗಿಡಬೇಕು. ಕೆಲವೊಂದು ಬ್ಯಾಂಕುಗಳು ಒಂದು ಮಿಲಿಯನ್ ಅಮೆರಿಕನ್ ಡಾಲರ್ ಇಟ್ಟರಷ್ಟೇ ಅಕೌಂಟ್ ಓಪನ್ ಆಗೋದು.
ನೇಮ್ಗಿಂತ ನಂಬರ್ಗೇ ಮೌಲ್ಯ
ಹೆಸರಲ್ಲೇನಿದೆ, ಎಲ್ಲವೂ ನಂಬರ್ನಲ್ಲೇ ಇದೆ ಎಂಬ ಮಾತು ಸ್ವಿಸ್ಬ್ಯಾಂಕುಗಳಲ್ಲಿ ಹೆಚ್ಚು ಚಲಾವಣೆ. ಈ ಬ್ಯಾಂಕುಗಳು ಖಾತಾದಾರರ ಹೆಸರಲ್ಲಿ ಅಕೌಂಟ್ ಮಾಡುವುದಕ್ಕಿಂತ ಹೆಚ್ಚಾಗಿ ನಂಬರ್ಗಳನ್ನು ನೀಡಿ ಅಕೌಂಟ್ ಮಾಡಿಸಿಕೊಳ್ಳುತ್ತವೆ. ಇದು ಖಾತಾದಾರರ ರಹಸ್ಯ ಬದಲಾಗದಂತೆ ನೋಡಿಕೊಳ್ಳಲು ಇರುವ ಅತ್ಯಂತ ಉತ್ತಮ ಮಾರ್ಗ.
ಅಷ್ಟೇ ಅಲ್ಲದೆ, ನಿಮ್ಮ ವಿವರ ಯಾವುದೇ ಕಾರಣಕ್ಕೂ ಬಹಿರಂಗ ಮಾಡಲ್ಲ ಎಂದೂ ಸ್ವಿಸ್ ಬ್ಯಾಂಕ್ ಖಾತಾದಾರರ ಬಳಿ ಒಪ್ಪಂದ ಮಾಡಿಕೊಳ್ಳುತ್ತದೆ. ಒಂದು ವೇಳೆ ಯಾವೊಬ್ಬ ಬ್ಯಾಂಕ್ ಉದ್ಯೋಗಿ ವಿವರ ಹೊರ ಹಾಕಿದಲ್ಲಿ ಆತನಿಗೆ ಆರು ತಿಂಗಳು ಜೈಲು ಮತ್ತು 50 ಸಾವಿರ ಸ್ವಿಸ್ ಫ್ರಾಂಕ್ಸ್ ದಂಡ ವಿಧಿಸಲಾಗುತ್ತದೆ. ಇಲ್ಲಿ ಹಣ ಇಡಲು ಗೂಡುಗಳ (ವೋಲ್ಟ್ಸ್) ವ್ಯವಸ್ಥೆ ಇದೆ. ಒಂದು ರೀತಿ ಲಾಕರ್ಗಳಿದ್ದ ಹಾಗೆ. ಇಲ್ಲಿ ನಿಮ್ಮ ಹಣವಿಟ್ಟರೆ ಆಯ್ತು, ಅದು ಸೇಫ್. ಇದನ್ನು ತೆಗೆಯಲು ಎರಡು ಕೀ ಬೇಕು. ಇದಕ್ಕೆ ಕ್ಯಾಮೆರಾ ಸೇರಿದಂತೆ ಸಕಲ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳೂ ಇವೆ.
ಡಾರ್ಮೆಟ್ ಅಕೌಂಟ್
ಅಕೌಂಟ್ನಲ್ಲಿ ಹಣವಿಟ್ಟು ಒಂದಷ್ಟು ದಿನವಾದ ಮೇಲೆ ಅಕೌಂಟ್ಧಾರಿ ಸತ್ತುಹೋದಲ್ಲಿ ಬ್ಯಾಂಕು ಇಂಥ ಅಕೌಂಟ್ಗಳ ಮೇಲೆ ಕಣ್ಣಿಡುತ್ತದೆ. ಟ್ರಾನ್ಸಾಕ್ಷನ್ ಇಲ್ಲದೇ ಹೋದಲ್ಲಿ ಆ ವ್ಯಕ್ತಿಯ ಹುಡುಕಿಸುವ ಕೆಲಸ ಮಾಡುತ್ತೆ. ಒಂದ್ಹತ್ತು ವರ್ಷವಾದ ಮೇಲೂ ಆತ ಬರದೇ ಹೋದಲ್ಲಿ ಅಲ್ಲಿನ ಓಂಬುಡ್ಸ್ಮನ್ಗೆ ಹೇಳುತ್ತೆ. ಅವರು ವ್ಯಕ್ತಿ ಸೂಚಿಸಿರುವ ನಾಮಿನೀ ಯಾರಾದರೂ ಇರಬಹುದೇ ಎಂದು ಓಂಬುಡ್ಸ್ಮನ್ ನೋಡುತ್ತಾರೆ. ಸಿಕ್ಕರೆ ಕೊಡುತ್ತಾರೆ, ಇಲ್ಲದಿದ್ದರೆ ಇಲ್ಲ.
ಈಗ ಅದೆಷ್ಟು ಜನರ ಹಣ ಅಲ್ಲಿ ಆ ಬ್ಯಾಂಕಿನ ಅಧಿಕಾರಿಗಳ ಹೊಟ್ಟೆ ಸೇರಿರಬಹುದೋ! ಒಟ್ಟಿನಲ್ಲಿ ಸ್ವಿಜರ್ಲೆಂಡ್ ಭೂಮಿ ಮೇಲಿನ ಸ್ವರ್ಗ ಖಂಡಿತಾ ಹೌದು. ಅದು ಪರ್ವತಗಳ ರಮಣೀಯತೆಗಷ್ಟೇ ಅಲ್ಲ, ಪರ್ವತದಷ್ಟು ಅಕ್ರಮ ಹಣ ಇಟ್ಟುಕೊಂಡಿರುವುದಕ್ಕಾಗಿಯೂ..!
ಅಕೌಂಟ್ ಹೇಗೆ ತೆರೆಯೋದು?
ಸ್ವಿಜರ್ಲೆಂಡ್ನಲ್ಲಿ ಸುಮಾರು 312 ಬ್ಯಾಂಕುಗಳು ಮತ್ತು ಇವುಗಳ 3,382 ಬ್ರಾಂಚುಗಳಿವೆ. ಯುಬಿಎಸ್ ಎಜಿ ಮತ್ತು ಕ್ರೆಡಿಟ್ ಸ್ಯೂಸ್ಸಿ ಗ್ರೂಪ್ ಅತಿದೊಡ್ಡ ಬ್ಯಾಂಕುಗಳು. ಇವು ದೇಶದ 1200 ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿವೆ. ಇವೆಲ್ಲವೂ ಸ್ಟಾಂಡರ್ಡ್ ಅಕೌಂಟ್ಗಳನ್ನು ಓಪನ್ ಮಾಡಲು ಅವಕಾಶ ಕಲ್ಪಿಸಿವೆ. ಅಕೌಂಟುಗಳ ಸ್ವರೂಪ ಹೀಗಿದೆ...
ಪರ್ಸನಲ್: ಸ್ಯಾಲರಿ ಸೇರಿದಂತೆ ಇತರೆ ರೂಪದ ಅಕೌಂಟ್ಗಳು. ಅಲ್ಲಿನವರಿಗೇ ಸೀಮಿತವಾಗಬಹುದು.
ಸೇವಿಂಗ್: ಹಣವಿಟ್ಟು ಬಡ್ಡಿ ಬರುವಂಥ ಅಕೌಂಟ್ ಇದು. ಇವುಗಳಿಗೆ ಹೆಚ್ಚಿನ ಸುರಕ್ಷತೆ ಇರುತ್ತೆ.
ನಂಬರೀಕೃತ ಅಕೌಂಟ್: ಸ್ವಿಸ್ ಬ್ಯಾಂಕುಗಳಲ್ಲಿ ನಂಬರ್ಗಳ ಮೇಲೆಯೇ ಅಕೌಂಟ್ ಮಾಡುವುದು ಎಂಬುದು ಗೊತ್ತಿರೋ ವಿಚಾರ. ಆದ್ರೆ ನಂಬರ್ ಕೊಟ್ಟ ಮಾತ್ರಕ್ಕೆ ಅಕೌಂಟ್ಧಾರಿ ಅಪರಿಚಿತ ಎಂದರ್ಥವಲ್ಲ. ಈ ಬ್ಯಾಂಕುಗಳು ಆತನ ಎಲ್ಲ ವಿವರ ಪಡೆದೇ ಹಣ ಹಾಕಿಸಿಕೊಳ್ಳುತ್ತವೆ. ಹಣ ಇಟ್ಟ ನಂತರದಲ್ಲಿ ಟ್ರಾನ್ಸಾಕ್ಷನ್ ಮಾಡಬೇಕಾದಲ್ಲಿ ಹೆಸರಿಂದ ಹಿಡಿದು ಎಲ್ಲ ಅಡ್ರೆಸ್ ಪ್ರೂಫ್ ಒದಗಿಸಲೇಬೇಕು.
ಬೇರೆಯ ಮಾರ್ಗವೂ ಇದೆ... ಅಲ್ಲಿನ ಕಾನೂನಿನ ಪ್ರಕಾರ ಪ್ರೂಫ್ ಪಡೆದೇ ಅಕೌಂಟ್ ಓಪನ್ ಮಾಡಬೇಕು. ಆದರೂ ಹೆಸರಲ್ಲಿ ಅಕೌಂಟ್ ಓಪನ್ ಮಾಡಿಸಲು ಹೆದರಿಕೆಯಾದರೆ ಅದಕ್ಕೂ ಒಂದು ಮಾರ್ಗವಿದೆ. ಬ್ಯಾಂಕುಗಳು ಕೆಲ ಕರೆಸ್ಪಾಂಡೆಂಟ್ಗಳನ್ನು ನೇಮಿಸಿರುತ್ತದೆ. ಇವರ ಮುಖಾಂತರ ಹಣವನ್ನು ಅಪರಿಚಿತನಾಗಿಯೇ ಇಡಬಹುದು. ಆದರೆ ಈ ಅಕೌಂಟ್ಗಳ ಅವಧಿ ಬಲು ಕಡಿಮೆ.
ಇತ್ತೀಚಿನ ದಿನಗಳಲ್ಲಿ ಸ್ವಿಸ್ ಬ್ಯಾಂಕುಗಳು ಒಂದಷ್ಟು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತಿವೆ. ಬ್ಯಾಂಕುಗಳಲ್ಲಿ ಹಣ ಇಡುವವರ ಹಿನ್ನೆಲೆ ತಿಳಿದುಕೊಳ್ಳಲು ಅವು ಬಯಸುತ್ತಿವೆ. ದೇಶದ್ರೋಹಿಗಳ ಹಣವೇ ಅಥವಾ ಹಗರಣಗಳ ಹಣವೇ ಎಂಬ ಬಗ್ಗೆ ಪರಿಶೀಲಿಸುತ್ತವೆ. ಒಂದು ವೇಳೆ ಇಂಥ ಹಣವಾದರೆ ತಿರಸ್ಕರಿಸಲೂ ಬಹುದು.
ಅಕೌಂಟ್ ಓಪನ್ಗ್ಗೆ ಪಾಸ್ಪೋರ್ಟ್ ಬೇಕೇಬೇಕು. ಇದು ಕನಿಷ್ಠ ಐಡೆಂಟಿಟಿಗಾಗಿ ಮಾತ್ರ.
ಇಂಟರ್ನೆಟ್ ಮೂಲಕ ಅಕೌಂಟ್ ಮಾಡಿಸಬಹುದು ಎಂಬ ತಪ್ಪು ತಿಳಿವಳಿಕೆ ಇದೆ. ಆದರೆ ಇದು ಸತ್ಯವಲ್ಲ. ಸ್ವತಃ ವ್ಯಕ್ತಿಯೇ ಅಲ್ಲಿಗೆ ಹೋಗಿ ಅಕೌಂಟ್ ಮಾಡಿಸಬೇಕು.
-ಸಿ.ಜೆ. ಸೋಮಶೇಖರ
sompreethi@gmail.com