ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಕೊಳವೆ ಬಾವಿ

Lingaraj Badiger
Updated On : 28 Jun 2014, 4:32 am

ಅಕ್ಷತಾ ಎಂಬ ಇನ್ನೂ ನಾಲ್ಕರ ಬಾಲೆ ಕೊಳವೆಯ ಪಾತಾಳಕ್ಕೆ ಬಿದ್ದು ಎಲ್ಲರ ಎದೆ ನಡುಗಿಸಿದಳು. ತೆಲುಗಿನ ಹೆಸರಾಂತ ಕಥೆಗಾರರೊಬ್ಬರು ಇಂಥದ್ದೇ ಘಟನೆಗೆ ಕಲ್ಪನೆಯ ಬೊಟ್ಟಿಟ್ಟಿದ್ದಾರೆ. ಆ 'ನಾನಿ' ಎಂಬ ಕಥೆಯ ಅನುವಾದ ಇಲ್ಲಿ...
ಮಂದ ಮಾರುತವು ತಂಗಾಳಿ ಜತೆ ಸೇರಿ ಮೃದುವಾಗಿ ಮೈಸೋಕಿದಾಗ ನಾನಿಗೆ ಎಚ್ಚರವಾಯಿತು. ದಟ್ಟವಾಗಿ ಕವಿದಿರುವ ಕತ್ತಲಿನಲ್ಲಿ ಕಾಣಬಂದ ತನ್ನ ಪರಿಸ್ಥಿತಿ ನೆನಪಿಗೆ ಬಂದು ಮತ್ತೆ ದುಃಖ ಒತ್ತರಿಸಿತು. ಬಹಳ ಹೊತ್ತಿನಿಂದಲೂ ಅಳುತ್ತಿದ್ದುದರಿಂದ ಅವನ ಗಂಟಲು ಒಣಗಿ ಹೋಗಿತ್ತು. ಕಣ್ಣೀರ ಕೋಡಿ ಹರಿದು ಒಣಗಿ ಕರೆಕಟ್ಟಿದ ಕೆನ್ನೆಯ ಮೇಲೆ ಹೊಸದಾಗಿ ಸುರಿದ ಕಣ್ಣೀರು ಜಲಪಾತವಾಯಿತು. ಆಗಾಗ್ಗೆ ಬೀಳುತ್ತಿರುವ ಮಣ್ಣ ಹೆಂಟೆಗಳು ಕಣ್ಣೀರಿನೊಂದಿಗೆ ಸೇರಿ, ಕೆಸರಾಗಿ ಶರೀರದ ಮೇಲೆ ಕರೆಗಟ್ಟುತ್ತಿವೆ. ಆ ಕಣ್ಣೀರನ್ನು ಒರೆಸಬೇಕೆಂದೆನಿಸಿದರೂ ತನ್ನ ನಿಸ್ಸಹಾಯಕ ಸ್ಥಿತಿಗೆ ಕಾರಣ ತಿಳಿದುಕೊಳ್ಳಲೂ ಕೂಡ ಆಗದ ಆ ಪುಟ್ಟ ಕಂದನಿಗೆ ಆಗ ಉಳಿದಿದ್ದುದು ಅಳುವುದೊಂದೇ. ಆದ್ದರಿಂದ ಅದಕ್ಕೇ ಶರಣಾದ.
ಆಗಾಗ ಏನಾದರೂ ತಂಟೆ ಮಾಡಿದರೆ ಕೋಪದಿಂದ ಅಮ್ಮ ಹೊಡೆದು, ಬಯ್ದು, ಗದರಿಸಿದರೆ ನಾನು ಅಳುತ್ತಿದ್ದೆ. ಆದರೆ ಸ್ವಲ್ಪ ಸಮಯ ಬಿಟ್ಟು ಅಮ್ಮನೇ ತನ್ನನ್ನು ಬರಸೆಳೆದು ಕಣ್ಣೀರು ಒರೆಸಿ, ತಲೆಸವರಿ ಮುದ್ದಾಡುತ್ತಿದ್ದಳು. ಆ ಪ್ರಸಂಗಗಳೆಲ್ಲ ನೆನಪಿಗೆ ಬಂದು ಅಮ್ಮ ಬೇಕಂತನಿಸಿತು. 'ಅಮ್ಮಾ... ಅಮ್ಮಾ...'. ಈ ಕ್ಷಣದಲ್ಲೇ ಅಮ್ಮ ಬೇಕು. ಯಾರನ್ನು ಕೇಳಬೇಕು? ಹೇಗೆ ಕೇಳಬೇಕು?

ಅಮ್ಮನಿಗೆ ನನ್ನ ಕೂಗು ಕೇಳಿಸುವುದಿಲ್ಲವೆಂದು ಜೋರಾಗಿ ಕಿರುಚಿದನು. ಆ ದನಿ ಅಲ್ಲೇ ಪ್ರತಿಧ್ವನಿಸಿ ತನ್ನ ಕಿವಿಗೇ ವಾಪಸು ಬಂತು. 'ಅಯ್ಯೋ ದೇವರೇ, ನನ್ನ ಅಮ್ಮನನ್ನು ಇಲ್ಲಿಗೆ ಬರಹೇಳು, ಇಲ್ಲವೇ ನನ್ನನ್ನೇ ಅಮ್ಮನ ಬಳಿಗೆ ಕರೆದೊಯ್ಯಿ..'. ದೇವರು ಖಂಡಿತವಾಗಿ ತನಗೆ ಸಹಾಯ ಮಾಡುತ್ತಾನೆಂಬ ಆಶಾಕಿರಣವು ಅಂಥ ಅಂಧಕಾರದಲ್ಲೂ ಆ ಎಳೆಯ ಕಂದನಿಗೆ ಸಮಾಧಾನಿಸುತ್ತಿತ್ತು. ಕೆಲ ಕ್ಷಣ ಕಳೆದ ಮೇಲೆ ಆ ಕೊಳವೆ ಬಾವಿಯೊಳಕ್ಕೆ ಬಿದ್ದ ನಾನಿಗೆ ಕದಲಲೂ ಆಗದ ಪರಿಸ್ಥಿತಿ ಮತ್ತೆ ನೆನಪಿಗೆ ತಂದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.

ನಾನಿ ತಂದೆ ಶಂಕರರಾವ್‌ಗೆ ವ್ಯಾಪಾರ ಕೈ ಹತ್ತಲಿಲ್ಲ. ಪಿತ್ರಾರ್ಜಿತ ಆಸ್ತಿಯ ಉಳಿಕೆಯ ಹಣದಿಂದ ಚಿಕ್ಕ ಹೊಲ ಖರೀದಿಸಿ ಹೆಂಡತಿ ಕಾವೇರಿ, ನಾನಿ ಮತ್ತು ಅತ್ತೆ-ಮಾವನವರೊಂದಿಗೆ ಹೊಲದಲ್ಲೇ ಸಣ್ಣ ಗುಡಿಸಲಿನಲ್ಲಿದ್ದರು. ತರಕಾರಿ ಬೆಳೆದು ಮಾರಿ, ಜೀವನ ಸಾಗಿಸುತ್ತಿದ್ದರು.
ಮಗ ನಾನಿಗೆ ಐದಾರು ವರ್ಷ ತುಂಬುವಷ್ಟರಲ್ಲಿ ಕಾವೇರಿಗೆ ಚಿಂತೆ ಶುರು. ಈ ಹೊಲದ ಮಧ್ಯ ಇದ್ದು ಹೊಟ್ಟೆ ಹೊರೆಯುತ್ತಿದ್ದರೆ ಮಗನ ಓದಿನ ಕಡೆಗೆ ಗಮನ ಕೊಡಲಾಗದು. ಸಂಸಾರವನ್ನು ಬಾಲಾನಗರಕ್ಕೆ ವರ್ಗಾಯಿಸಿ ನಾನಿಯ ಓದಿಗೆ ಒತ್ತು ಕೊಡಬೇಕೆಂದು ಒತ್ತಾಯಿಸಿದಳು. ಶಂಕರರಾವ್‌ಗೂ ಇದು ಸರಿ ಎನಿಸಿ ಬಾಲಾನಗರದಲ್ಲಿ  ಚಿಕ್ಕ ಮನೆಯನ್ನು ಬಾಡಿಗೆ ಪಡೆದು, ಸಂಸಾರದ ಹೂಡಿದರು. ಆದರೆ, ಶಂಕರರಾವ್ ಮಾತ್ರ ಪಟ್ಟಣದಿಂದ ಹೊಲಕ್ಕೆ ದಿನವೂ ಹೋಗಿಬಂದು ಮಾಡುತ್ತಿದ್ದರು. ಮೊದಲೇ ನಿರ್ಧರಿಸಿದಂತೆ ಅತ್ತೆಮಾವ ಹೊಲದ ಕಾವಲಿಗೆ ಇಲ್ಲೇ ಉಳಿದಿದ್ದರು.

ನಾನಿಯನ್ನು ಸಾಯಿನಿಕೇತನ್ ಸ್ಕೂಲಿಗೆ ಸೇರಿಸಿ ಯುನಿಫಾರಂನಲ್ಲಿ ಮಗನನ್ನು ಕಣ್ತುಂಬಾ ನೋಡುತ್ತಾ ಕಾವೇರಿ ಬೆರಗಾಗುತ್ತಿದ್ದಳು. ಹೊಲದ ಹತ್ತಿರ ಮಕ್ಕಳ ಜೊತೆ ಸೇರಿ ಆಟವಾಡುತ್ತ ಆನಂದವಾಗಿ ತಾತನೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಹೊತ್ತು ಕಳೆಯುವುದನ್ನು ಬಿಟ್ಟು ಸ್ಕೂಲು, ಓದು ಎಂಬ ಹೊಸಬಗೆಯ ಜೀವನಕ್ಕೆ ಹೊಂದಿಕೊಳ್ಳುವುದು ನಾನಿಗೆ ಕಷ್ಟವೆನಿಸಿತು. ಆದರೆ, ಅಮ್ಮ ಹೇಳುವ ಒಳ್ಳೆಯ ಮಾತುಗಳೂ, ಕಥೆಗಳೂ ಅವನ್ನೆಲ್ಲ ಮರೆಸುತ್ತಿದ್ದವು.

ವರುಣದೇವನಿಗೆ ಏಕೆ ಈ ಭೇದ ಬುದ್ಧಿ, ಪಟ್ಟಣಗಳಲ್ಲಾದರೂ ಕುಂಭದ್ರೋಣ ಮಳೆ. ಬೆಳೆ ಇಟ್ಟಿರುವ ಹೊಲಗಳ ಬಳಿಗೆ ಬರುಬರುತ್ತಾ ಎರಡು ಹನಿ ಸೋನೆಯೂ ಕಾಣೆ. ದೇವತೆಗಳಿಗೂ ರಾಕ್ಷಸ ಬುದ್ಧಿಯೇ ಬಿರುಕು ಬಿಟ್ಟ ಭೂಮಿಯನ್ನು ನೋಡಿ ರೈತನೆದೆ ಬಿರಿಯುತ್ತಿದೆ. ಎರಡು ವರ್ಷಗಳಿಂದಲೂ ನಡು ಬೇಸಿಗೆಯಲ್ಲೂ ಬೆಳೆಗೆ ನೀರುಣಿಸಿದ ಬಾವಿ ಈ ಸಲ ಒಣಗಿದೆ. ತರಕಾರಿಯ ಗಿಡಗಳು ಬಾಡಿ, ಬಾಗಿವೆ. ಅವುಗಳನ್ನು ನೋಡಿದ ಶಂಕರರಾವ್‌ಗೆ ಹುಚ್ಚು ಹಿಡಿದಂತಾಗಿದೆ. ಬಾವಿಯಲ್ಲಿ ಹೂಳು ತೆಗೆಸಿದರೂ ನೀರು ಬರುವ ಲಕ್ಷಣ ಕಾಣಲಿಲ್ಲ.
ಗಂಡನ ಪರಿತಾಪ ಅರಿತು ಕಾವೇರಿ ತನ್ನ ಕೊರಳೊಳಗಿನ ಮಾಂಗಲ್ಯ, ಕಿವಿಯೋಲೆ ತೆಗೆದು ಗಂಡನ ಕೈಗಿಟ್ಟು 'ಮೈಮೇಲೆ ಬಂಗಾರವಿಲ್ಲದಿದ್ದರೆ ಏನು? ಬೆಳೆ ಬಂಗಾರವನ್ನು ಕೊಡಬೇಕು. ಬದುಕು ಸರಿ ಹೋದರೆ ಬಂಗಾರ ತನ್ನಿಂತಾನೇ ಬರುತ್ತದೆ. ತನ್ನ ಮಾತು ಕೇಳಿ ಬೋರು ಕೊರೆಸಿ ನೀರಿಗೆ ಒಂದು ವ್ಯವಸ್ಥೆ ಮಾಡಿ' ಎಂದಳು. ತನಗೆ ಒಳಿತನ್ನು ಕೋರುವ ಅವರೆಲ್ಲರ ಅಭಿಪ್ರಾಯವನ್ನು ಕೇಳಿ ಬೋರು ಕೊರೆಸಲು ಅವನೂ ಸಿದ್ಧನಾದ.
ವಾರ ಕಳೆದ ಮೇಲೆ ರಾತ್ರಿ ಊಟದ ವೇಳೆಯಲ್ಲಿ ಕಾವೇರಿಗೆ ಬೋರಿನ ಬಗ್ಗೆ ತಿಳಿಸುತ್ತಾ, 'ನಾಳೆ ಬೋರು ಕೊರೆಯುವವರು ಬರಲಿದ್ದಾರೆ. ಬೆಳಗ್ಗೆ 9ಕ್ಕೆ ಕೆಲಸ ಶುರು. ಆ ಕೆಲಸಕ್ಕೆ ಬರುವವರಿಗೆ ಊಟದ ವ್ಯವಸ್ಥೆಯಾಗಬೇಕು. ನೀನು ಅಲ್ಲಿಗೆ ಬೆಳಗ್ಗೆ 8ಕ್ಕೇ ಬಂದು ಬಿಡು' ಎಂದ. ತಾಯಿ ಪಕ್ಕದಲ್ಲಿ ಕುಳಿತಿದ್ದ ನಾನಿಗೆ ಎಲ್ಲಿಲ್ಲದ ಆನಂದ. ಅಮ್ಮ ಹೊಲದ ಹತ್ತಿರ ಹೋಗುತ್ತಿದ್ದಾಳೆಂದರೆ ತನ್ನನ್ನೂ ಕರೆದೊಯ್ಯುತ್ತಾಳೆ. ತನ್ನ ಹಳೇ ಗೆಳೆಯರೊಂದಿಗೆ ಹಾಗೂ ತಾತನೊಂದಿಗೆ ಆಡಿಕೊಳ್ಳಬಹುದು.

'ನಾನಿಯನ್ನು ಸ್ಕೂಲಿಗೆ ಕಳುಹಿಸಿದ ಮೇಲೆ ಹೊಲದ ಬಳಿಗೆ ಬೇಗ ಬರುತ್ತೇನೆ' ಎಂದ ಅಮ್ಮನ ಮಾತು ನಾನಿಯ ಆನಂದಕ್ಕೆ ತಣ್ಣೀರೆರಚಿತು. ನಾನಿಗೆ ದುಃಖ ಒತ್ತರಿಸಿ ಬಂತು. 'ನಾನೂ ಬರ್ತೀನಿ, ನನ್ನನ್ನೂ ಕರಕೊಂಡು ಹೋಗು' ಎಂದು ಹೇಳಿ, ಬರೆಯುತ್ತಿದ್ದ ಸ್ಲೇಟನ್ನು ದೂರಕ್ಕೆಸೆದು ಅಳತೊಡಗಿದ. ಅಳು ನಿಲ್ಲದಿರುವುದನ್ನು ಕಂಡ ಕಾವೇರಿ ನಾನಿಗೆ ಒಂದೇಟು ಕೊಟ್ಟಳು. ಆತ ಅಳು ನಿಲ್ಲಿಸಲೇ ಇಲ್ಲ. ಇದನ್ನೆಲ್ಲ ನೋಡುತ್ತಿದ್ದ ಶಂಕರರಾವ್ 'ಹೋಗಲಿ ಅವನನ್ನೂ ಕರಕೊಂಡು ಬಾ. ಮಾವ ಹಾಗೂ ವೀರರಾಜು ನೋಡಿಕೊಳ್ಳುತ್ತಾರೆ' ಎಂದನು. ಸಲಹೆಗೆ ಸಮ್ಮತಿಸಿ ಮಗನನ್ನು ವಾಡಿಕೆಯಂತೆ ಮುದ್ದು ಮಾಡಿ ತಿನ್ನಲು ತಿಂಡಿ ಕೊಟ್ಟು ಸಮಾಧಾನಿಸಿದಳು.

ಮರುದಿನ ಬೆಳಗ್ಗೆ ಎಂಟೂವರೆಗೆ ಕಾವೇರಿ, ನಾನಿಯನ್ನು ಹೊಲಕ್ಕೆ ಕರೆದೊಯ್ದಳು. ಅಲ್ಲಿಗೆ ಹೋದ ಮೇಲೆ ನಾನಿ ಕೂಲಿಯವರ ಮಕ್ಕಳೊಂದಿಗೆ ಆಟದ ಜೊತೆ ಬೆರೆತ. ಅದಾಗಲೇ ಪೂಜೆ ಮುಗಿದು, ಬೋರು ಕೊರೆಯಲು ಶುರು. ಮಧ್ಯಾಹ್ನ 80 ಅಡಿಗಳವರೆಗೂ ಬೋರು ಕೊರೆದು ಊಟದ ನಂತರ ಮತ್ತೆ ಕೆಲಸ ಚಾಲ್ತಿ ಆಯಿತು. ಸಂಜೆಯಾಗುತ್ತಾ ಕಾವೇರಿಗೆ ಚಿಂತೆ. ಯಂತ್ರವು ಕಲ್ಲನ್ನೇ ಪುಡಿಪುಡಿ ಮಾಡಿ ಕೊರೆಯುತ್ತಿದ್ದ ಹಾಗೆಲ್ಲ ಕಪ್ಪು ಕಲ್ಲಿನ ಪುಡಿ ಮೇಲಕ್ಕೆ ಚಿಮ್ಮುತ್ತಿತ್ತಾದರೂ ಅದರಲ್ಲಿ ನೀರಿನಂಶವಿಲ್ಲ. ಆ ಕಲ್ಲು ಕರಗಿ ನೀರು ಕಾಣಿಸುವಂತೆ ಆ ಕಲ್ಲಿನ ರೂಪದ ದೇವರಿಗೆ ಕಾವೇರಿ ಮನಸ್ಸಿನಲ್ಲೇ ಹರಕೆ ಹೊತ್ತು ಕೈಮುಗಿದಳು.
'ಏನೂ ಭಯ ಬೇಡ ಸ್ವಾಮಿ, ನೀರು ಖಂಡಿತ ಸಿಗುತ್ತದೆ. ಈ ಸುತ್ತಮುತ್ತ ಬಾವಿ ತೋಡುವಾಗ ಕಲ್ಲು ಸಿಕ್ಕಿದರೆ ಅದರ ಕೆಳಗೆ ನೀರು ಇದ್ದೇ ಇರುತ್ತೆ. ಭಯಬೇಡ' ಎಂದು ಮೇಸ್ತ್ರಿ ಶಂಕರರಾವ್‌ಗೆ ಧೈರ್ಯ ಹೇಳಿದ. ಶಂಕರರಾವ್‌ಗೆ ಶಂಕೆಯಿದ್ದರೂ ಅದನ್ನು ತೋರಗೊಡದೆ ಕಾವೇರಿಗೆ ಧೈರ್ಯ ಹೇಳುತ್ತಿದ್ದನು. ಸಂಜೆ 150 ಅಡಿಯವರೆಗೂ ಕೊರೆದಿದ್ದಾಯಿತಾದರೂ ಯಾವ ಕ್ಷಣದಲ್ಲಾದರೂ ನೀರು ಬೀಳಬಹುದೆಂಬ ಆಸೆ ಆಸೆಯಾಗಿಯೇ ಉಳಿಯಿತು. ಆಗ ಕಾವೇರಿಯು ಕಣ್ಣೀರಾದಳು. 'ಕತ್ತಲಾದರೆ ಕೆಲಸ ನಡೆಯುವುದು ಕಷ್ಟ, ನಾಳೆ ಬೆಳಗ್ಗೆ 8ಕ್ಕೆ ಪ್ರಾರಂಭಿಸೋಣ' ಎಂದು ಮೇಸ್ತ್ರಿ, ಆಳುಗಳಿಗೆ ಹೇಳಿದ. ಆ ಮಾತಿಗಾಗಿಯೇ ಕಾಯುತ್ತಿದ್ದ ಕೆಲಸಗಾರರು ಮಿಷನ್ನನ್ನು ಆಫ್ ಮಾಡಿದ್ದಲ್ಲದೆ, ಪಕ್ಕಕ್ಕೆ ನಿಲ್ಲಿಸಿ ಬಿಡಿಭಾಗಗಳನ್ನು ಕಳಚಿಟ್ಟು ನಡೆದರು.
ಕತ್ತಲಾಗುತ್ತಿದ್ದರಿಂದ ಆಟ ಮುಗಿಸಿ ಮಕ್ಕಳೆಲ್ಲರೂ ತಮ್ಮ ತಮ್ಮ ಮನೆಯ ಕಡೆ ಹೊರಟರೆ ನಾನಿಯು ಮಾತ್ರ ಹೊಲದ ಕಡೆಗೆ ಚೆಂಡನ್ನು ಮೇಲಕ್ಕೆಸೆದು ಅದು ಕೆಳಗೆ ಬೀಳುವುದಕ್ಕೆ ಮುಂಚೆಯೇ ಕೈಯಲ್ಲಿ ಹಿಡಿಯುತ್ತ ಗುಡಿಸಲಿನ ಹತ್ತಿರಕ್ಕೆ ಬರುತ್ತಿದ್ದ. ಹೀಗೆ ನಾನಿ ದಿನವೆಲ್ಲ ಆಡುತ್ತಿದ್ದರಿಂದ ಬಾಲು ಕೆಳಗೆ ಬೀಳಿಸದೆ ಆಕಾಶದಲ್ಲೇ ಹಿಡಿದು ಬಿಡುವ ವಿದ್ಯೆಯಲ್ಲಿ ಪ್ರಾವಿಣ್ಯ ಸಾಧಿಸಿದ್ದ. ಈ ಸಲ ಚೆಂಡು ತುಂಬ ಎತ್ತರಕ್ಕೆ ಹೋಯಿತು. ನಾನಿ ಹಿಡಿಯಲು ಓಡಿದ. ಇದ್ದಕ್ಕಿದ್ದ ಹಾಗೆ ಕೊಳವೆ ಬಾವಿಯ ಮೇಲೆ ಮುಚ್ಚಿದ್ದ ಹೆಂಚುಗಳು ಪಳ ಪಳ ಎಂದು ಸದ್ದುಮಾಡುತ್ತಾ ಒಡೆದು ಹೋದವು. ಕೂಡಲೇ ನಾನಿಯು ಹೆಂಚಿನ ಕೆಳಗಿದ್ದ ಬಾವಿಯೊಳಕ್ಕೆ ಕುಸಿದು ಬಿದ್ದೇಬಿಟ್ಟ.

ಅರ್ಧ ತೋಡಿದ್ದ ಕೊಳವೆ ಬಾವಿಯಲ್ಲಿ ಬಿದ್ದ ನಾನಿಗೆ ಏನಾಯಿತೆಂದು ಅರ್ಥವಾಗುವ ಮೊದಲೇ ಹರಿತವಾದ ಅಲಗಿನಂತಿದ್ದ ನೆಲದೊಳಗಿದ್ದ ಕಲ್ಲಿನ ಅಂಚುಗಳು ಮಾಡಿದ ಗಾಯಗಳಿಂದ ರಕ್ತದ ಕೋಡಿ ಹರಿಯಿತು. ಆ ನೋವನ್ನು ತಾಳಲಾರದೆ ಹೃದಯ ವಿದ್ರಾವಕವಾಗಿ ಕಿರುಚಿಕೊಂಡ.

ಇಕ್ಕಟ್ಟಾದ ಆ ಕೊರಕಲಿನಲ್ಲಿನ ತನ್ನ ಶರೀರದ ಅವಯವಗಳನ್ನು ಅಲುಗಾಡಿಸಲೂ ಆಗದ ಸ್ಥಿತಿಯಲ್ಲಿ ಗಾಯಗಳಿಗಿಂತಲೂ ಹೆಚ್ಚಾಗಿ ಆ ಪರಿಸ್ಥಿತಿಯೇ ಅವನಿಗೆ ಹೆಚ್ಚು ನೋವು ಕೊಡುತ್ತಿತ್ತು. ಮೇಲಿನಿಂದ ಉದುರುತ್ತಿರುವ ಧೂಳಿನ ಕಣಗಳು ಕಣ್ಣಿಗೆ ಬಿದ್ದು ಕಣ್ಣುರಿಯುತ್ತಿದೆ. ಧಾರಾಕಾರವಾಗಿ ಕಣ್ಣೀರು ಹರಿಯುತ್ತಿದೆ. ಧೂಳು ಬಾಯಿಯೊಳಕ್ಕೆ ಹೋಗಿ ನಾಲಗೆಯ ಮೇಲೆಲ್ಲ ಮಣ್ಣಿನ ಪೊರೆ ಕಟ್ಟಿದೆ.

ಮೇಲಿನಿಂದ ಕ್ಷೀಣ ದನಿಯಲ್ಲಿ ಅಮ್ಮನ ಮಾತು ಕೇಳಿಸಿತು, 'ನಾನಿ ಬಂದು ಬಿಡೋ... ನೀನಿಲ್ಲದೇ ನಾನೂ ಬದುಕಲಾರೆ... ನಿನ್ನನ್ನು ನನ್ನ ಬಳಿಯೇ ಇರಿಸಿಕೊಂಡಿದ್ದರೆ ಹೀಗಾಗುತ್ತಿರಲಿಲ್ಲ. ಕಂದಾ... ಅಪ್ಪಾ... ನನ್ನ ಗ್ರಹಚಾರಕ್ಕೆ ಬಾವಿ ತೆಗೆಸೆಂದು ಹಾಳು ಸಲಹೆ ಕೊಟ್ಟವಳು ನಾನೇ. ನನ್ನ ಮಗನನ್ನು ನಾನೇ ಕೈಯಾರೆ ಸಾಯಿಸಿದ ಹಾಗಾಯಿತಲ್ಲಾ...' ಎಂದು ತಲೆ ಚಚ್ಚಿಕೊಂಡು ಎದೆ ಒಡೆದು ಹೋಗುವ ಹಾಗೆ ವಿಲಪಿಸುತ್ತಿದ್ದಳು ಕಾವೇರಿ.
'ಅಮ್ಮಾ.. ಅಳಬೇಡ ಸುಮ್ಮನಿರು' ಎಂದು ಅಳುತ್ತಿರುವ ತಾಯಿಯನ್ನು ಸಮಾಧಾನಿಸಬೇಕೆಂದು ಮನಸ್ಸಿಗೆ ಬಂದರೂ ಅಲುಗಾಡಲಾಗದ ತನ್ನ ಮೇಲೆ ತನಗೇ ಕೋಪ ಬಂತು. ಆದರೆ, ಏನೂ ಮಾಡಲಾಗದೆ ದುಃಖಿಸುತ್ತಿದ್ದನು. ನಾನಿ ಅಳುತ್ತಿರುವುದು ತಾಯಿಯ ಕಿವಿಗೆ ಕೇಳಿಸಿತು.
'ಏನು ಹಾಳು ಬದುಕು? ಯಾರಿಗಾಗಿ ಬದುಕಬೇಕು? ಕಣ್ಣು ರೆಪ್ಪೆಯಂತೆ ಕಾಪಾಡಬೇಕಾಗಿದ್ದ ಮಗುವನ್ನು ಭೂಮಿಪಾಲು ಮಾಡುತ್ತಿದ್ದೇನೆ. ಮಗುವನ್ನು ಸ್ಕೂಲಿಗೆ ಕಳುಹಿಸುತ್ತೇನೆಂದು ಹೇಳಿದ ಹೆಂಡತಿಯ ತಿರಸ್ಕರಿಸಿ ನಾನೇ ಹೊಲದ ಬಳಿಗೆ ಕರೆದುಕೊಂಡು ಬರಲು ಹೇಳಿದೆ' ಅಂತನ್ನುತ್ತಾ ಅಪ್ಪ ಅಳುತ್ತಿದ್ದ.

'ತಾತ, ಅಪ್ಪ, ಅಮ್ಮ. ಕೂಲಿ ಆಳುಗಳು ಎಲ್ಲರೂ ಆಡುತ್ತಿರುವ ಮಾತುಗಳನ್ನು ನಾನಿ ಬಾವಿಯ ಒಳಗೇ ಇದ್ದು ಕೇಳಿಸಿಕೊಳ್ಳುತ್ತಿದ್ದಾನೆ. ತನಗಾಗಿ ಎಲ್ಲರೂ ದುಃಖಿಸುತ್ತಿದ್ದಾರೆ. ಎಲ್ಲರಿಗೂ ನಾನೇ ದುಃಖ ಕೊಟ್ಟ ಹಾಗಾಯಿತು. ಆದರೆ ಏನು ಪ್ರಯೋಜನ? ನನಗೆ ಒಂದು ವೇಳೆ ರೆಕ್ಕೆ ಮೂಡಿ ಮೇಲಕ್ಕೆ ಹಾರಿ ಹೋಗಿ ಎಲ್ಲರಿಗೂ ಸಮಾಧಾನಿಸುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು' ಎಂದು ನಾನಿ ಕಲ್ಪಿಸಿಕೊಳ್ಳತೊಡಗಿದ.

ಕಲ್ಪನೆ ಕ್ಷಣಾರ್ಧದಲ್ಲಿ ಎಲ್ಲಿಯೋ ಮರೆಯಾಗಿ ಹೋಯಿತು. ಈ ನರಕ ಯಾತನೆ ಸಹಿಸಿಕೊಳ್ಳಲು ಸ್ವಲ್ಪ ಮಾನಸಿಕ ಶಕ್ತಿಯಾದರೂ ಬರಬಹುದು ಎಂಬ ಹಿರಿಯ ಆಲೋಚನೆ ಆ ಚಿಕ್ಕ ಪ್ರಾಯದ ಕಂದಮ್ಮನಲ್ಲಿ ಉಂಟಾಯಿತು. ನಾನು ಇಷ್ಟು ತೊಂದರೆ ಪಡುತ್ತಿದ್ದರೂ ಕಾಪಾಡದ ಆ ದೇವರ ಮೇಲೆ ನಾನಿಗೆ ಅಪಾರ ಕೋಪ ಬಂತು. ಕಷ್ಟದಲ್ಲಿರುವವರು ಒಂದು ಸಲ ಮೊರೆ ಇಟ್ಟರೆ ಸಾಕು ದೇವರು ಮಾತಾಡುತ್ತಾನೆ, ಕಾಪಾಡುತ್ತಾನೆ ಎಂದು ಅಮ್ಮ ಹೇಳಿದ್ದು ನೆನಪಿಗೆ ಬಂತು.
ನಾನು ಅದೇ ಉದ್ದೇಶದಿಂದ ಕರೆಯುತ್ತಿದ್ದರೂ ಏಕೆ ಬರಲಿಲ್ಲ? ಏಕೆ ತನ್ನನ್ನು ಕಾಪಾಡುತ್ತಿಲ್ಲ? ತನ್ನ ಕೂಗಿನಲ್ಲಿ ಲೋಪವಿದೆಯೆ? ಹೇಗೆ ಕೂಗಬೇಕು? ಹೇಗೆ ಕರೆದರೆ ನೀನು ಬರುತ್ತೀಯೋ ಅದನ್ನಾದರೂ ತಿಳಿಸು ದೇವರೇ...
ಅಮ್ಮ ಪೂಜೆ ಮಾಡಿ ಸ್ತ್ರೋತ್ರಗಳನ್ನು ಹೇಳುತ್ತಿದ್ದುದ್ದನ್ನು ನೆನೆದು ತನಗೆ ಗೊತ್ತಿದ್ದ ದೇವರ ಹೆಸರುಗಳನ್ನು ಹೇಳತೊಡಗಿದ.

ಅಮ್ಮ ಹೇಳಿದ ಗಜೇಂದ್ರ ಮೋಕ್ಷ ಕಥೆಯಲ್ಲಿ ಆನೆಯು ಕಷ್ಟದಲ್ಲಿರುವಾಗ ದೇವರು ಓಡೋಡಿ ಬಂದು ಆನೆಯನ್ನು ರಕ್ಷಿಸಿದಂತೆ ಈಗಲೂ ಬರುತ್ತಾನೆಯೋ? ಆನೆಯನ್ನು ಜ್ಞಾಪಿಸಿಕೊಂಡೊಡನೆ ವಿನಾಯಕ ಚೌತಿಯಂದು ಪೂಜಿಸಿದ್ದ ಗಣಪನನ್ನು ಗೆಳೆಯರ ಜೊತೆಗೂಡಿ ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡಿ ಕೊನೆಗೆ ಸ್ವಲ್ಪವೇ ನೀರಿದ್ದ ಬಾವಿಯಲ್ಲಿ ಬಿಟ್ಟು ಬರುತ್ತಿದ್ದದ್ದು ನೆನಪಾಯಿತು.

ನೀರಿಲ್ಲದ ಬಾವಿಯಲ್ಲಿ ಹಾಗೆ ಗಣೇಶನ ವಿಸರ್ಜನೆ ತಪ್ಪೆಂದು ಅಮ್ಮ ಹೇಳಿದ್ದಳು. ಪ್ರಾಯಶಃ ನಾನು ಹಾಗೆ ಮಾಡಿದ್ದರಿಂದ ದೇವರಿಗೆ ಕೋಪ ಬಂದು ನನ್ನನ್ನು ಕಾಪಾಡಲಿಲ್ಲವೇನೋ? ಅಪ್ಪಾ ಗಣಪಾ, ನಾನು ಹೊರಗೆ ಬಂದೊಡನೆ ನಿನಗೆ 21 ನಮಸ್ಕಾರ ಹಾಕಿ ಕೆನ್ನೆಗೆ ಹೊಡೆದುಕೊಂಡು ತಪ್ಪಾಯಿತೆಂದು ಕೇಳುತ್ತೇನೆ. ಆದರೆ ಈಗ ಕೋಪ ಬೇಡ...!
ಆಸೆಗಳು ಕೊನೆಗಳ್ಳುತ್ತಲೇ ದುಃಖ ಮತ್ತೆ ಮರುಕಳಿಸಿತು. ತಾತನ ಮಾತು ಜೋರಾಗಿ ಕೇಳಿಸಿತು. 'ಅಯ್ಯಾ.... ಭಯವಿಲ್ಲ ಮಗೂ ಮಾವ ಬರುತ್ತಿದ್ದಾನೆ ಹಳೆಯ ಬಾವಿಯೊಳಗಿಂದ ದಾರಿ ಮಾಡಿಕೊಂಡು ನೀನಿರುವ ಜಾಗಕ್ಕೆ ಬಂದು ನಿನ್ನನ್ನು ಹೊರಕ್ಕೆ ಕರೆದೊಯ್ಯುತ್ತಾನೆ. ಧೈರ್ಯ ಕಳೆದುಕೊಳ್ಳಬೇಡ ಮಗೂ..' ತಾತನ ಮಾತಿನಿಂದ ನಾನಿಗೆ ಸ್ವಲ್ಪ ಸಮಾಧಾನ. ಸ್ಪಲ್ಪ ಹೊತ್ತಿನೊಳಗೆ ನನ್ನ ವೀರರಾಜು ಮಾವ ಬಂದು ತನ್ನನ್ನು ಹೊರಗೆ ಕರೆದೊಯ್ಯುತ್ತಾನೆ. ಹೊರಗೆ ಹೋದ ಮೇಲೆ ಅಮ್ಮನ ಹತ್ತಿರ ಹೋಗಿ ಮುದ್ದು ಕೊಡಬೇಕು. ಅಪ್ಪನನ್ನು ಬಾಚಿ ಗಟ್ಟಿಯಾಗಿ ತಬ್ಬಿಕೊಳ್ಳಬೇಕು. ತಾತನ ಮೀಸೆಯನ್ನು ಎಳೆಯಬೇಕು. ಗೆಳೆಯ ಶೀನುವಿನೊಟ್ಟಿಗೆ ಮುಟ್ಟಿಸುವ ಆಟ ಆಡಬೇಕು. ತನ್ನ ಮಾವನ ಬರುವಿಕೆಯನ್ನು ಎದುರು ನೋಡುತ್ತಿದ್ದ ನಾನಿ ಕ್ಷಣ ಕ್ಷಣಕ್ಕೂ ಕುಗ್ಗುತ್ತಿದ್ದಾನೆ. ಪ್ರಜ್ಞೆ ತಪ್ಪುತ್ತಿದೆ.
ಭೂಮಿಯ ಹಿಡಿತದಿಂದ ಬಿಡುಗಡೆ ಪಡೆಯಲು ಮಾಡುವ ಪ್ರಯತ್ನಗಳಿಗೆ ಶರೀರ ಸಹಕರಿಸುವುದನ್ನು ನಿಲ್ಲಿಸಿದೆ. ಕಣ್ರೆಪ್ಪೆಗಳು ಮುಚ್ಚಿಕೊಳ್ಳುತ್ತಿವೆ. ನಾಲಗೆ ಒಣಗುತ್ತಿದೆ. ಉಸಿರಾಟ ಭಾರವೆನಿಸುತ್ತಿದೆ. ಶರೀರ ಕ್ರಮವಾಗಿ ಹಗುರವಾಗುತ್ತಿದೆ. ಕಾಲುಗಳು ಸ್ವಾಧೀನ ತಪ್ಪುತ್ತಿವೆ. ಸ್ಪರ್ಶಜ್ಞಾನ ಇಲ್ಲವಾಗುತ್ತಿದೆ. ಬಿಕ್ಕಳಿಕೆ ಶುರುವಾಗಿ ಸ್ಪಲ್ಪ ಸಮಯದ ನಂತರ ನಿಂತಿತು. ಶರೀರದ ನೋವು ಒಂದೊಂದಾಗಿ ಮಾಯವಾಗುತ್ತಿದೆ. ನಿಜವಾಗಿ ರೆಕ್ಕೆಗಳು ಬಂದು ಗಾಳಿಯಲ್ಲಿ ತೇಲಾಡುತ್ತಿರುವಂತನ್ನಿಸುತ್ತಿದೆ.

ನೆಲವನ್ನು ತೋಡಿಕೊಂಡು ಬಂದ ವೀರರಾಜು ನಾನಿಯನ್ನು ಎತ್ತಿಕೊಂಡ. ಅಚೇತನಾವಸ್ಥೆಯಲ್ಲಿದ್ದ ಅವನನ್ನು ತಬ್ಬಿಕೊಂಡು ವೀರರಾಜು ಅತ್ತುಬಿಟ್ಟ. ನಂತರ ಮಗುವನ್ನು ಗುಡಿಸಿಲಿಗೆ ತಂದನು. ಮಗು ಉಳಿಯಬಹುದೆಂದು ಅಂದುಕೊಂಡಿದ್ದ ಎಲ್ಲರಿಗೂ ಕಠೋರ ಸತ್ಯದ ದರ್ಶನ. ನಾನಿಯ ಸುತ್ತ ಎಲ್ಲರೂ ಸೇರಿ ಅಳತೊಡಗಿದರು. ಎಲ್ಲರ ಅಳುವಿನ ಮಧ್ಯ ನಿರ್ಲಿಪ್ತನಾಗಿ ನಾನಿ ಮಲಗಿದ್ದ.

ವಿಚಿತ್ರವೆಂದರೆ ನಾನಿಗೀಗ ತನ್ನನ್ನೇ ತಾನು ನೋಡುವ ಅವಕಾಶ. ತನ್ನಲ್ಲಿ ತಾನು ಇಲ್ಲದಾಗ ಮಾತ್ರ ಸಾಧ್ಯವಾಗುತ್ತದೆ ಇದು ಎಂಬ ಸತ್ಯ ಅವನಿಗೀಗ ಗೋಚರ. ಆದ್ದರಿಂದಲೇ ಅಪ್ಪ- ಅಮ್ಮ, ಬಂಧು- ಬಳಗದವರ ಅಳುವಿಗೆ ಅವನು ಸ್ಪಂದಿಸುತ್ತಿಲ್ಲ. ನಿರ್ಲಿಪ್ತನಾಗಿ ನೋಡುತ್ತಿದ್ದಾನೆ. ಸ್ವಲ್ಪ ಹೊತ್ತಿನ ಒಳಗಾಗಿ ಅವನ ಕಣ್ಣಿಗೆ ಕಾಣಿಸುತ್ತಿದ್ದ ದೃಶ್ಯ ಕ್ರಮೇಣ ಮಾಯ. ಈಗ ಧವಳ ಕಾಂತಿ ಮಾತ್ರ ಸುತ್ತಲೂ ವ್ಯಾಪಿಸಿದೆ. ಗಣಪತಿಯ ಚಿತ್ರಲೀಲಾ ಮಾತ್ರವಾಗಿ ಕಾಣಿಸಿಕೊಂಡು ಸಪ್ತವರ್ಣ ಕಾಂತಿಯನ್ನು ಸರ್ವತ್ರ ಹರಡುತ್ತಾ, ತನ್ನನ್ನು ಯಾವುದೋ ಶಕ್ತಿ ನಿರ್ದೇಶಿಸುತ್ತಿರುವಂತೆ ನಾನಿಗೆ ಕಾಣಿಸುತ್ತಿತ್ತು. ಈಗ ಅವನ ಗಮನವೆಲ್ಲ ಆಕಡೆ ಹೋಗಿದೆ.

ತೆಲುಗು ಮೂಲ- ಆಕುಂಡಿ ಸಾಯಿರಾಮ್
ಕನ್ನಡಕ್ಕೆ- ಶಿವರಾಮಯ್ಯ ಎನ್.

    gurudattans@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement