ಪ್ರತಿಭೆಯನ್ನು ಯಾರೂ ಅಡಗಿಸಿಡುವುದಕ್ಕೆ ಆಗುವುದಿಲ್ಲ. ದೈಹಿಕವಾಗಿ ಏನೇ ಕೊರತೆಯಿದ್ದರೂ, ಅದು ಅನಾವರಣಗೊಂಡೇ ಬಿಡುತ್ತದೆ. ಇಲ್ಲೊಬ್ಬಳು ಕೊಲಂಬಿಯನ್ ಹುಡುಗಿಯನ್ನು ನೋಡಿ. 24 ವರ್ಷದ ಝೂಲಿ ಸಾಂಗ್ವಿನೋಗೆ ಹುಟ್ಟುತ್ತಲೇ ಎರಡೂ ಕೈಕಾಲುಗಳಿಲ್ಲ. ಯಾವುದೇ ಚಿತ್ರಕಾರನಿಗಿಂತ ಅದ್ಭುತವಾಗಿ ಪೇಂಟಿಂಗ್ ಮಾಡ್ತಾಳೆ. ಫೊಕೊಮೀಲಿಯಾ ಎಂಬ ರೋಗಕ್ಕೆ ತುತ್ತಾಗಿರುವ ಈಕೆ ಹುಟ್ಟಿನಿಂದಲೇ ವಿಕಲಾಂಗಿ. ವೈದ್ಯರು ಹೇಳಿದರು, 'ಅವಳು ಬದುಕಿರುವಷ್ಟು ದಿನ ಮಲಗಿಕೊಂಡೇ ಇರಬೇಕು. ಇಲ್ಲದಿದ್ದರೆ ಜೀವಕ್ಕೇ ಅಪಾಯ' ಅಂತ. ಆದರೆ, ಝೂಲಿ ಧೃತಿಗೆಡಲಿಲ್ಲ. ಮಂಡಿ ಮೇಲೆ ನಿಂತು, ಬಾಯಿಯಿಂದ ಕುಂಚವನ್ನು ಕಚ್ಚಿ ಹಿಡಿದು, ಪೇಂಟಿಂಗ್ ಮಾಡುವುದನ್ನು ಕಲಿತಳು. 15 ವರ್ಷದಿಂದ ಈ ಕಲೆಯನ್ನು ರೂಢಿಸಿಕೊಂಡ ಝೂಲಿ ಸದ್ಯ 100ಕ್ಕೂ ಅಧಿಕ ಚಿತ್ರಪ್ರದರ್ಶನ ನಡೆಸಿಕೊಟ್ಟಿದ್ದಾಳೆ. ನಾವು ಇದ್ದೇವಲ್ಲ... ನಮ್ಮ ಕೈಕಾಲುಗಳೆಲ್ಲ ಸರಿಯಾಗಿಯೇ ಇವೆ... ಆದರೆ, ಝೂಲಿಯಂಥ ಸಾಧನೆ ನಮ್ಮಿಂದೇಕೆ ಸಾಧ್ಯವಿಲ್ಲ?