ಹೆಣಗಳಲ್ಲ
ಮನುಷ್ಯರೇ ನಾರುತ್ತಿದ್ದಾರೆ
ಈಗ ಅಥವಾ ಸಂಜೆ... ಬೇಡ ನಾಳೆ
ಹೆಣ ಹೂಳಬಹುದು
ಹಾಳು ಮನುಷ್ಯರನ್ನು ಏನುಮಾಡೋಣ?
ಜಾತಿ, ಧರ್ಮ, ದೇವರೆಂಬ ಹುಳಿ ಹುಳಿ ವಾಸನೆ
ಹೆಣ್ಣು- ಹೊನ್ನು- ಮಣ್ಣುಗಳೆಂಬ ಹಸಿ ಹಸಿ ಮಾಂಸದ ನಾತ
ಮೂಗು ಮುಚ್ಚಿದರೂ
ಮತ್ತೆ ಮತ್ತೆ ಆಘ್ರಾಣ ಗೋಡೆಯೊಡೆಯುವಂತೆ ನಾರುತ್ತಿದ್ದಾರೆ
ಸತ್ಯದ ಸೋಪಿದ್ದರೂ
ಧರ್ಮದ ನೀರಿದ್ದರೂ
ನೀರ ಕಂಡ ಪೋರರಂತೆ ಎರೆಯದೇ ಓಡುತ್ತಿದ್ದಾರೆ
ನಾಳೆಯ ಮಣ್ಣು
ಇಂದು ಜೀವ-
ವಾದರೂ ನಾಳೆಗೆ ಮಸಣವೆ!
ಮನುಷ್ಯರು ಹೆಣಗಳು
ಹೆಣಗಳೇ ಮನುಷ್ಯರು!
ಕಡೇ ಪಕ್ಷ ಪ್ರೀತಿಯ ಅತ್ತರಾದರೂ ಪೂಸಿದರೆ
ನಾಲ್ಕು ಕಾಲ
ಸಹಿಸಬಹುದೇನೋ!?
ಬರುವುದಾದರೆ ಬರ ಬರಲಿ
ಎಲ್ಲದಕೂ
ನಾಳೆ- ನನ್ನದೆನ್ನುವ
ನಂಬಿಕೆ,
ಹಂಚಿಕೊಳ್ಳುವ ಒಲವು
ಆ ಬರಕ್ಕೆ ತುತ್ತಾಗದಿರಲಿ!
- ಸಂತೆಬೆನ್ನೂರು ಫೈಜ್ನಟ್ರಾಜ್
faiznatraj@gmail.com