ನಿಮ್ಮ ಅಕ್ಕನಿಗೂ ಪಾಲಿದೆ
ಹೆಸರು ಬೇಡ, ಊರು ಬೇಡ
ನನ್ನ ತಾತನವರು ನನ್ನ ತಂದೆಗೆ 1956ರಲ್ಲೇ ಒಂದು ಮನೆಯನ್ನು ಬರೆದು ಕೊಟ್ಟಿದ್ದಾರೆ. ಆ ಬಗ್ಗೆ ವಿಲ್ ಕೂಡ ಮಾಡಿದ್ದಾರೆ. ನನ್ನ ತಂದೆಯವರೂ ಆ ಮನೆಯನ್ನು ವಿಲ್ ಮೂಲಕ ನನಗೆ ಕೊಟ್ಟಿದ್ದಾರೆ. ಅಲ್ಲದೇ ನನ್ನ ತಾಯಿ ಬದುಕಿರುವವರೆಗೆ ಆ ಮನೆಯ ಬಾಡಿಗೆ ಹಣವು ನನ್ನ ತಾಯಿಯವರಿಗೆ ಸೇರಬೇಕೆಂದು ಬರೆದಿದ್ದಾರೆ. ನನಗೆ ಒಬ್ಬಳು ಅಕ್ಕ ಇದ್ದು, ಆಕೆಗೆ ಆ ಮನೆಯಲ್ಲಿ ಯಾವ ಪಾಲನ್ನೂ ಕೊಟ್ಟಿಲ್ಲ. ಮಹತ್ವದ ವಿಷಯವೆಂದರೆ, ಈ ವಿಲ್ ನೋಂದಣಿಯಾಗಿಲ್ಲ. ಇಪ್ಪತ್ತು ವರ್ಷಗಳ ನಂತರ ಈಗ ನನ್ನ ಅಕ್ಕ ಈ ಮನೆಯಲ್ಲಿ ಪಾಲು ಕೇಳುತ್ತಿದ್ದಾಳೆ. ಏನು ಮಾಡಬೇಕು? ಆಕೆಗೂ ಪಾಲಿದೆಯೇ?
- ತಂದೆಗೆ ಬಂದ ಆಸ್ತಿ ಪಿತ್ರಾರ್ಜಿತ. ಆದ್ದರಿಂದ ನಿಮ್ಮ ಸಹೋದರಿಗೂ ಈ ಆಸ್ತಿಯಲ್ಲಿ ಹಕ್ಕಿದೆ. ವಿಲ್ ನೋಂದಣಿಯಾಗಿಲ್ಲದೇ ಇರುವುದರಿಂದ ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಕಲಂ 6(5)ರ ವಿವರಣೆಯ ಪ್ರಕಾರ ಅದು ಸಿಂಧುವಾಗುವುದಿಲ್ಲ. ಆದ್ದರಿಂದ ನಿಮ್ಮ ಸಹೋದರಿಗೆ ಪಾಲು ಕೊಡಲೇಬೇಕಾಗುತ್ತದೆ.
ಎಲ್ಲ ಮಕ್ಕಳಿಗೂ ಸಮಪಾಲಿದೆ
- ಹೆಸರು ಬೇಡ, ಊರು ಬೇಡ
ತಂದೆಯವರ ಪಿತ್ರಾರ್ಜಿತ ತೋಟದ ಆದಾಯದಲ್ಲಿ ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು. ಮಗಳ ಮದುವೆ ಮಾಡಿ, ಗಂಡುಮಕ್ಕಳಿಗೆ ಎರಡು ಎಕರೆ ತೋಟವನ್ನು ಸ್ವಯಾರ್ಜಿತವೆಂದು ಹೇಳಿ ಭಾಗ ಮಾಡಿಕೊಟ್ಟಿರುತ್ತಾರೆ. ನಾನು ಕಿರಿಯ ಮಗನಾಗಿದು, ಅಂತರ್ಜಾತಿ ವಿವಾಹವಾಗಿದ್ದೇನೆ. ನನಗೆ ತಂದೆಯ ಆಸ್ತಿಯಲ್ಲಿ ಕೇವಲ 32 ಗುಂಟೆ ಭಾಗ ಕೊಟ್ಟಿರುತ್ತಾರೆ. ಈಗ ನಾನು ಕೋರ್ಟಿನಲ್ಲಿ ದಾವಾ ಹಾಕಬಹುದೇ?
- ನಿಮ್ಮ ತಂದೆ ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯ ಆದಾಯದಿಂದ ಎಂದು ಪರಿಗಣಿಸಿದರೂ ಒಟ್ಟು ಆಸ್ತಿಯಲ್ಲಿ ನಿಮ್ಮ ತಂದೆ ತಾಯಿ (ಇದ್ದರೆ), ಅಕ್ಕ ಹಾಗೂ ಸಹೋದರರಿಗೂ ನಿಮ್ಮಷ್ಟೇ ಸಮಪಾಲಿದೆ. ಅಂದರೆ ನಿಮಗೆ ಒಟ್ಟು ಆಸ್ತಿಯ 1/6 ಭಾಗ ಬರುತ್ತದೆ.
ಇಲಾಖೆಗೆ ದೂರು ನೀಡಿ
- ಹೆಸರು, ಊರು ಬೇಡ
ಗಂಡ ಸರ್ಕಾರಿ ನೌಕರಿಯಲ್ಲಿದ್ದು ಈಗ ಇನ್ನೊಂದು ಮದುವೆಯಾಗುತ್ತೇನೆಂದು ಹೇಳುತ್ತಿದ್ದಾನೆ. ನಮಗೆ ಇಬ್ಬರು ಸಣ್ಣ ಮಕ್ಕಳಿವೆ. ಪರಿಹಾರವೇನು?
- ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳಡಿ ನಿಯಮ 28ರಂತೆ ನಿಮ್ಮ ಪತಿ ಎರಡನೇ ಮದುವೆಯಾಗುವಹಾಗಿಲ್ಲ. ಅಲ್ಲದೆ ಭಾರತೀಯ ದಂಡಸಂಹಿತೆ(ಐಪಿಸಿ)ಯ ಕಲಂ 494ರಂತೆ ಒಬ್ಬ ಹೆಂಡತಿ ಬದುಕಿರುವಾಗ ಇನ್ನೊಂದು ಮದುವೆ ಮಾಡಿಕೊಳ್ಳುವುದು ಅಪರಾಧವಾಗುತ್ತದೆ. ಬೇಕಾದರೆ ನೀವು ಇಲಾಖೆಗೆ ದೂರು ನೀಡಬಹುದು ಅಥವಾ ನಿಮ್ಮ ಹಿತೈಷಿಗಳ ಮೂಲಕ ಗಂಡನಿಗೆ ತಿಳಿವಳಿಕೆ ಹೇಳಬಹುದು.
- ಎಚ್.ಆರ್. ಕಸ್ತೂರಿರಂಗನ್