ಬಹುಶಃ ಪ್ರಧಾನಿಗೂ ನನ್ನಷ್ಟು ಸೆಕ್ಯೂರಿಟಿ ಕೊಟ್ಟಿಲ್ಲ...
ರಾಜ್ ಅಪಹರಣ ಪ್ರಕರಣದ ಸಂಧಾನವನ್ನು ಹೇಗೆ ಹ್ಯಾಂಡ್ಲ್ ಮಾಡಿದ್ರಿ?
ವೀರಪ್ಪನ್ ಅಪಹರಣಗೊಂಡ ತಕ್ಷಣ ಸಂಧಾನಕ್ಕೆ ಅಂತಲೇ ಮೊದಲು ನನ್ನ ಹೆಸರು ಕೇಳಿಬಂತು. ಮೊದಲು ಭಯದಿಂದ ತಲೆಮರೆಸಿಕೊಂಡೆ. ಯಾಕಂದರೆ, ಡಾ. ರಾಜ್ ಎನ್ನುವ ವ್ಯಕ್ತಿ ಸಾಮಾನ್ಯ ಮನುಷ್ಯ ಆಗಿರಲಿಲ್ಲ. ದೊಡ್ಡ ನಟ. ಅಂತ ನಟನನ್ನು ಬಿಡಿಸಿಕೊಂಡು ಬರಲಿಕ್ಕೆ ನನ್ನಿಂದ ಸಾಧ್ಯವಾಗಬಹುದೇ? ಎಂಬ ಪ್ರಶ್ನೆ ನನ್ನ ಕಾಡಿತ್ತು. ಅದೇ ವೇಳೆ ನನ್ನ ಕಚೇರಿಗೆ ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ. ಕೃಷ್ಣ, ಪಾರ್ವತಮ್ಮ ರಾಜ್ಕುಮಾರ್ ಒಂದೇಸಮನೆ ಫೋನ್ ಮಾಡುತ್ತಿದ್ದರು. ಫೋನ್ ತೆಗೆಯದೇ ಇದ್ದಾಗ ಆ ಮೂವರೂ ಚೆನ್ನೈಗೆ ಬಂದಿದ್ದರು. ಅವರು ಕೈಗೆ ಸಿಗದೆ ತಪ್ಪಿಸಿಕೊಂಡು ಹೋಗಿದ್ದೆ. ಆಗ ನನ್ನನ್ನು ಸಂಪರ್ಕಿಸಿದ್ದು ರಜನೀಕಾಂತ್. 15 ಬಾರಿ ಕರೆಮಾಡಿದ ಮೇಲೆ ಅವರಿಗೆ ಸ್ಪಂದಿಸಿದೆ. 'ಎಲ್ಲಿದ್ದೀಯ ಹೇಳು. ನಾನೇ ಬರ್ತೀನಿ' ಅಂದ್ರು. ಅವರಾದ ಮೇಲೆ ಶಿವಾಜಿ ಗಣೇಶನ್ ಫೋನ್ ಮಾಡಿ, 'ಡಾ. ರಾಜ್ ಕನ್ನಡಿಗ ಮಾತ್ರವಲ್ಲ, ನನ್ನ ಸ್ನೇಹಿತ. ನೀನವರನ್ನು ಬಿಡಿಸ್ಕೊಂಡ್ ಬರಲೇಬೇಕು' ಎಂದರು.
ರಾಜ್ಕುಮಾರ್ ಅವರನ್ನು ಬಿಡಿಸಿಕೊಂಡು ಬರುವ ನಿಟ್ಟಿನಲ್ಲಿ ಕನ್ನಡಿಗನಿಗೆ ನಾನೇಕೆ ಬೆಂಬಲವಾಗಿ ನಿಲ್ಲಬೇಕು ಅಂತ ಅನ್ನಿಸಲಿಲ್ಲವೇ?
ನಾನ್ಯಾವತ್ತೂ ಕನ್ನಡಿಗರು, ತಮಿಳರು ಅಂತ ತಾರತಮ್ಯ ಮಾಡಿಲ್ಲ. ನಾನು ತಮಿಳುನಾಡಿನವ ಎನ್ನುವುದಕ್ಕಿಂತ ಮೊದಲು ನಾನೊಬ್ಬ ಪತ್ರಕರ್ತ. ಎರಡೂ ರಾಜ್ಯಗಳು ನನಗೆ ವಹಿಸುವ ಜವಾಬ್ದಾರಿ ಅಂದುಕೊಂಡು ಸಂಧಾನಕ್ಕೆ ರಾಯಭಾರಿಯಾದೆ.
ಹಾಗಾದ್ರೆ ಕರ್ನಾಟಕದಲ್ಲಿ ಆರಾಧ್ಯದೈವ ಅನ್ನಿಸಿಕೊಂಡಿರುವ ಡಾ. ರಾಜ್ಕುಮಾರ್ ಬಗ್ಗೆ ಒಬ್ಬ ಕಾಮನ್ಮ್ಯಾನ್ ಆಗಿ ನಿಮ್ಮ ಪ್ರತಿಕ್ರಿಯೆ ಏನು?
ರಾಜ್ಕುಮಾರ್ ಬಗ್ಗೆ ಮಾತಾಡೊಕ್ಕೆ ನನಗೆ ಅರ್ಹತೆ ಇದೆಯೋ, ಇಲ್ವೋ ಗೊತ್ತಿಲ್ಲ. ಮೊದಲ ಬಾರಿಗೆ ಕಾಡಿಗೆ ಹೋದಾಗ ರಾಜ್ರನ್ನು ನೋಡಲಿಕ್ಕೇ ಹೋಗ್ತಿದ್ದೀನಿ ಅಂದ್ಕೊಂಡೆ. ಆದರೆ, ಹತ್ತು ದಿನ ರಾಜ್ರನ್ನು ನನಗೆ ತೋರಿಸಲೇ ಇಲ್ಲ. ಜೊತೆಗೆ ವೀರಪ್ಪನ್ನೂ ಕಾಣಲಿಲ್ಲ. ಆಗ ನನಗೆ ಬಂದ ಅನುಮಾನ, ಇದು ವೀರಪ್ಪನ್ ಕೆಲ್ಸ ಅಲ್ಲ; ತಮಿಳು ತೀವ್ರವಾದಿಗಳು ಮಾಡಿರೋ ಕೆಲ್ಸ ಅಂದ್ಕೊಂಡೆ. ಜೊತೆಗೆ ರಾಜ್ರನ್ನು ನೋಡದೆ ವಾಪಸ್ ಬಂದರೆ ಎರಡೂ ರಾಜ್ಯದಲ್ಲಿ ನನಗೆ ನೆಮ್ಮದಿ ಸಿಗಲ್ಲ ಅಂದುಕೊಂಡು ಪಟ್ಟು ಹಿಡಿದಾಗ ದೂರದಿಂದ ರಾಜ್ಕುಮಾರ್ ಅವರನ್ನು ತೋರಿಸಿದ್ರು. ಮತ್ತಷ್ಟು ಹಠ ಮಾಡಿ, ಅವರ ಬಳಿ ಹೋಗಿ, ಕಾಲು ಮುಟ್ಟಿ ನಮಸ್ಕರಿಸಿದೆ. ನನಗವರು ದೇವರು ಥರ ಕಂಡರು. ಆ ಕಾಡಿನಲ್ಲೂ ಮುಕ್ಕಾಲು ತಾಸು ಯೋಗಾಸನ ಮಾಡಿದ್ದು ನನಗೆ ಅಚ್ಚರಿಯಾಗಿ ಕಂಡಿತ್ತು.
ರಾಜ್ರನ್ನು ಬಿಡಿಸಿಕೊಂಡು ಬಂದಮೇಲೆ ಕರ್ನಾಟಕ ಸರ್ಕಾರ ನಿಮಗೆ ಅಂಥ ಇಂಪಾರ್ಟೆನ್ಸ್ ಕೊಡ್ತಾ?
ನಿಮ್ಮ ಹಾಗೆ ನಾನೊಬ್ಬ ಸಾಮಾನ್ಯ ಪತ್ರಕರ್ತ. ಇಂಥವ್ನು ರಾಜ್ಕುಮಾರ್ರನ್ನು ಬಿಡಿಸ್ಕೊಂಡು ಬರಬಹುದು ಎಂದು ಭರವಸೆಯಿಟ್ಟು ಎರಡೂ ರಾಜ್ಯಸರ್ಕಾರಗಳು ನನ್ನನ್ನು ನೋಡಿದ ರೀತಿ, ಬಹುಶಃ ಇಂಡಿಯಾದಲ್ಲಿ ಬೇರಾವ ಪತ್ರಕರ್ತನಿಗೂ ಸಿಗಲಿಕ್ಕಿಲ್ಲ. ಮೊದಲ ಬಾರಿಗೆ ರಜನೀಕಾಂತ್ ಜೊತೆ ನಾನು ಬೆಂಗಳೂರಿಗೆ ಬಂದಾಗ ಏರ್ಪೋರ್ಟ್ ಮುಂದೆ 50ಕ್ಕೂ ಹೆಚ್ಚು ಕಾರುಗಳು ನಿಂತಿದ್ದವು. ದೇಶದ ಪ್ರಧಾನಿಗೂ ಅಂಥ ಸೆಕ್ಯೂರಿಟಿ ಕೊಡಲ್ಲ.
ವೀರಪ್ಪನ್ ಏನೇ ಆಗಿರಲಿ, ರಾಜ್ಕುಮಾರ್ರಂಥ ಮೇರು ಪ್ರತಿಭೆಯನ್ನು ಅಪಹರಿಸಿದ್ದು ಮತ್ತು ಅವನಿಂದ ದುಡ್ಡುಕೊಟ್ಟು ಅವರನ್ನು ಬಿಡಿಸಿಕೊಂಡು ಬಂದಿದ್ದರ ಬಗ್ಗೆ ...
ನಾನೊಬ್ಬ ಪತ್ರಕರ್ತನಾಗಿ ಕ್ರಿಮಿನಲ್ಲೊಬ್ಬನಿಗೆ ಹಣ ಕೊಟ್ಟು, ಒಳ್ಳೆಯ ವ್ಯಕ್ತಿಯನ್ನು ಬಿಡಿಸ್ಕೊಂಡು ಬರುವುದಕ್ಕೆ ನನ್ನ ವಿರೋಧವಿದೆ. ಆದರೆ, ಎರಡೂ ರಾಜ್ಯ ಸರ್ಕಾರಗಳು ಕೂಡ ವೀರಪ್ಪನ್ಗೆ ಹಣ ಕೊಟ್ಟಿದ್ದೇವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ರಾಜ್ ಕುಟುಂಬ ಕೂಡ ಹೇಳಿಲ್ಲ. ಹಾಗಿದ್ದಾಗ, ವೀರಪ್ಪನ್ಗೆ ಹಣ ಕೊಟ್ಟಿದ್ದಾರೆ ಅಂತ ಹೇಳ್ತಿರೋದು ಯಾರು? ಅವರಿಗೆ ಈ ಪ್ರಶ್ನೆ ಕೇಳಿ.
ವೀರಪ್ಪನ್ ಕುಟುಂಬಕ್ಕೇನಾದರೂ ನೆರವಾದಿರಾ?
ಮೊದಲು ಅವನು ನನ್ನ ಸ್ನೇಹಿತನಲ್ಲ. ಆದರೆ, ಸಾಕಷ್ಟು ಸಲ ಅವನನ್ನು ಭೇಟಿ ಮಾಡುತ್ತಿದ್ದಾಗ ನನ್ನ ಸಹಾಯ ಕೇಳಿದ್ದ. ಅವನ ಅಣ್ಣನ ಮಗನನ್ನು ಓದಿಸುವುದಕ್ಕೆ ಹಣಕಾಸಿನ ನೆರವು ನೀಡಿದ್ದೆ. ಹಾಗೆಯೇ ವೀರಪ್ಪನ್ನ ಇಬ್ಬರು ಹೆಣ್ಣುಮಕ್ಕಳನ್ನು ಡಾಕ್ಟ್ರು ಓದಿಸುವಂತೆ ಮನವಿ ಮಾಡಿಕೊಂಡಿ ದ್ದ. 'ನೋಡೋಣ' ಅಂತ ಹೇಳಿದ್ದೆ. ಈ ಮಾತುಕತೆ ನಡೆದಿದ್ದು ರಾಜ್ ಸಮ್ಮುಖದಲ್ಲೇ. ಮಾತಿನ ನಡುವೆ ನಾನು 'ಐಎಎಸ್ ಓದಿಸು' ಅಂತ ಹೇಳಿದ್ದೆ. ಅದಕ್ಕೆ ಅವನು 'ಬ್ಯಾಡ' ಅಂದ. ಆಗ ರಾಜ್ಕುಮಾರ್, 'ಯಾಕೋ ವೀರಪ್ಪ, ಐಎಎಸ್ ಅಂದ್ರೆ ದೊಡ್ ಪೋಸ್ಟ್ ಕಣೋ. ಆಡಳಿತ ಎಲ್ಲ ಅವರೇ ನೋಡ್ಕೊಳ್ಳೋದು' ಅಂದ್ರು. ಪ್ರತಿಯಾಗಿ ವೀರಪ್ಪನ್, 'ಅಯ್ಯೋ ಬಿಡಿ ಸ್ವಾಮಿ, ಏನ್ ದೊಡ್ ಪೋಸ್ಟು. ಎಂತೆಂಥೋರೋ ರಾಜಕಾರಣಿಗಳಾಗಿಬಿಡ್ತಾರೆ. ಅವರ ಹಿಂದ್ಗಡೆ ಇವರು ಕೈಕಟ್ಕೊಂಡ್ ನಿಂತ್ಕೋಬೇಕು. ಅದನ್ನು ನೀವು ದೊಡ್ ಪೋಸ್ಟು ಅಂತೀರಿ' ಅಂತ ವ್ಯಂಗ್ಯಮಾಡಿದ್ದ.
ವೀರಪ್ಪನ್ ಎಂಬ ಕ್ಯಾರೆಕ್ಟರ್ ವ್ಯವಸ್ಥೆಯಲ್ಲಿ ಇರಬೇಕಿತ್ತಾ?
ವೀರಪ್ಪನ್ ಮಾತ್ರ ಅಲ್ಲ. ಇದೇ ಚೆನ್ನೈನಲ್ಲಿ 6 ಮಂದಿಯನ್ನು ಸರಣಿ ಕೊಲೆ ಮಾಡಿದಂಥ ಆಟೋಶಂಕರ್ ಎಂಬ ವ್ಯಕ್ತಿಯೂ ಇದ್ದ. ಇಂಥ ಕ್ರಿಮಿನಲ್ಗಳು ಸಮಾಜದಲ್ಲಿ ಹೇಗೆ ಹುಟ್ಟಿಕೊಳ್ಳುತ್ತಾರೆಂಬುದು ನಿಮಗೂ ಗೊತ್ತಿದೆ. ಒಬ್ಬ ಸಾಧಾರಣ ಮರಗಳ್ಳನನ್ನು ಎರಡು ರಾಜ್ಯಗಳ ನಡುವೆ ನಿಲ್ಲಿಸಿ ವಿಲನ್ ಅಥವಾ ಹೀರೋ ಮಾಡಿದ್ದು ಯಾರು? ಅವನಿಂದ ಮೊದಲ ಬಾರಿಗೆ ಅವನದ್ದೇ ಊರಿನ ನಾಲ್ಕು ಮಂದಿಯನ್ನು ಕೊಲ್ಲಿಸಿದ ಇದೇ ಪೊಲೀಸ್ ವ್ಯವಸ್ಥೆ. ಅವನನ್ನೊಬ್ಬ ಕ್ರಿಮಿನಲ್ ಆಗಿ ಟ್ರೀಟ್ ಮಾಡಬೇಕಿತ್ತು. ಆದರೆ, ಆತ ಕಾಡು ಸೇರಿಕೊಂಡ ಮೇಲೆ ಅವರ ಕುಟುಂಬದವರಿಗೆ ಕಷ್ಟ ಕೊಡಲಾರಂಭಿಸಿದರು. ಇದರಿಂದ ಆತ ಮತ್ತಷ್ಟು ರೊಚ್ಚಿಗೆದ್ದ. ಸರ್ಕಾರದ ವಿರುದ್ಧ ಕತ್ತಿಮಸೆದ. ಹೀಗಾಗಿ, ಇಂಥ ಕ್ಯಾರೆಕ್ಟರ್ ಇರಬೇಕಿತ್ತಾ, ಬೇಡವಾ ಎನ್ನುವುದಕ್ಕಿಂತ ಮೊದಲು ಇಂಥ ಕ್ಯಾರೆಕ್ಟರ್ಗಳನ್ನು ಹುಟ್ಟುಹಾಕುವ ವ್ಯವಸ್ಥೆಯನ್ನು ರಿಪೇರಿ ಮಾಡಬೇಕಿದೆ.
- ಸಂದರ್ಶನ: ಆರ್. ಕೇಶವಮೂರ್ತಿ
keshavarkm1@gmail.com