ಮಾರಾಟ ಹೋರಾಟ
ಪುಸ್ತಕ ಮಾರಾಟಗಾರ(ರಾಗಿದ್ದ) ಬರಹಗಾರ ಜಿ.ಎನ್.ಅಶೋಕವರ್ಧನ, ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿದ್ದ ತಮ್ಮ ಅತ್ರಿ ಬುಕ್ ಸೆಂಟರ್ ಮುಚ್ಚುತ್ತಿದ್ದಾಗ 'ಪ್ರಾಮಾಣಿಕ ಪುಸ್ತಕ- ಮಾತ್ರ- ವ್ಯಾಪಾರಿಗಳಿಗೆ ಇದು ಕಾಲವಲ್ಲ' ಎಂದಿದ್ದರು. ಅವರ ಅನಿಸಿಕೆ ಸಮರ್ಥಿಸುವಂತೆ, ಬ್ರಿಟನ್ನಿಂದ ಬಂದ ಸುದ್ದಿ- ಕಳೆದ ವರ್ಷ 67 ಪುಸ್ತಕದಂಗಡಿ ಮುಚ್ಚಿವೆ. 2005ರಿಂದೀಚೆಗೆ ಹೀಗೆ ಮುಚ್ಚಿದ ಅಂಗಡಿಗಳ ಸಂಖ್ಯೆ 500.
ಹಾಗೆಂದು ಪುಸ್ತಕ ಮಾರಾಟ ಕಡಿಮೆಯಾಗಿಲ್ಲ. ಆನ್ಲೈನ್ ಮೂಲಕ ಸಾಕಷ್ಟು ವ್ಯಾಪಾರವಾಗುತ್ತಿದೆ. ಅಮೆಜಾನ್ ಮುಂತಾದ ಅಂಗಡಿಗಳ ಮೂಲಕ ತರಿಸಿಕೊಳ್ಳುತ್ತಾರೆ. ಇ ಪುಸ್ತಕಗಳ ಮಾರಾಟವೂ ಸಾಕಷ್ಟಿದೆ. ಹಾಗಾಗಿ ಬರೀ ಪುಸ್ತಕ ವ್ಯಾಪಾರವನ್ನಷ್ಟೇ ನಂಬಿದವರು ಕಷ್ಟಕ್ಕೀಡಾಗಬೇಕಾಗಿದೆ. ಇದನ್ನು ಅಮೆರಿಕದ ಅಂಕಿಅಂಶ ಕೂಡ ಸಮರ್ಥಿಸಿದೆ.
ನಮ್ಮಲ್ಲೂ ಪರಿಸ್ಥಿತಿ ಭಿನ್ನವೇನಿಲ್ಲ. ಆದರೆ ಕನ್ನಡದ ಪುಸ್ತಕಗಳಿಗೆ ಆನ್ಲೈನ್ ಮಾರಾಟದ ಹೊಡೆತ ಅಷ್ಟಿಲ್ಲ. ಇತ್ತೀಚೆಗೆ ಸಂಗ್ರಹಿಸಿದ ಸುದ್ದಿಯ ಪ್ರಕಾರ, ಭಾರತದಲ್ಲಿ ಪುಸ್ತಕ ಆನ್ಲೈನ್ ಮಾರುತ್ತಿರುವ ಫ್ಲಿಪ್ಕಾರ್ಟ್, ಕನ್ನಡ ಪುಸ್ತಕಗಳನ್ನು ಕೊಳ್ಳುವುದನ್ನು ನಿಲ್ಲಿಸಿದೆ. ದೊಡ್ಡ ಸಂಖ್ಯೆಯ ಆರ್ಡರ್ ಬರುತ್ತಿಲ್ಲ ಎಂಬುದೇ ಇದಕ್ಕೆ ಕಾರಣ. ಹಾಗಾಗಿ ಕನ್ನಡ ಪುಸ್ತಕ ಬೇಕಾದವರು ಅಂಗಡಿಗೆ ಹೋಗುವುದು ಅನಿವಾರ್ಯ.
ಸಾಹಿತ್ಯ ಕೃತಿಗಳನ್ನಷ್ಟೇ ನೆಚ್ಚಿಕೊಂಡು ವ್ಯಾಪಾರದಲ್ಲಿ ಉಳಿಯಲಾಗದು ಎಂಬುದು ಈ ಉದ್ಯಮದಲ್ಲಿರುವವರಿಗೆ ಗೊತ್ತಾಗಿದೆ. ಸ್ವಪ್ನ ಬುಕ್ ಹೌಸ್ನಂಥ ದೊಡ್ಡ ಪುಸ್ತಕ ಮಳಿಗೆಗಳು ಇಂದು ಬರೀ ಪುಸ್ತಕಗಳ ಮೇಲೆ ನಿಂತಿಲ್ಲ. ಸಿಡಿ, ಗ್ರೀಟಿಂಗ್ ಕಾರ್ಡ್, ಗಿಫ್ಟ್ಗಳ ವ್ಯಾಪಾರ ಅವುಗಳನ್ನು ಉಳಿಸಿದೆ.
ಸಾಹಿತ್ಯ ರಚನೆಗೂ ಅದರ ಮಾರಾಟಕ್ಕೂ ಸಂಬಂಧವಿಲ್ಲ ಎಂಬುದು ಪದೇ ಪದೇ ರುಜುವಾತಾದ ಅಂಶ. ಒಳ್ಳೆಯ ಕೃತಿಗಳು ಇದ್ದಷ್ಟು ಕಾಲ ಅವನ್ನು ಪ್ರಕಟಿಸುವವರು, ಕೊಂಡು ಓದುವವರು ಇದ್ದೇ ಇರುತ್ತಾರೆ. ಇವರು ಬೃಹತ್ ಸಂಖ್ಯೆಯಲ್ಲಿ ಇಲ್ಲದಿರಬಹುದು. ಗಳಗನಾಥರು, ಜಿ.ಪಿ.ರಾಜರತ್ನಂ ಮುಂತಾದವರು ಪುಸ್ತಕ ತಲೆಹೊರೆಯಲ್ಲಿ ಹೊತ್ತು ಮಾರುತ್ತಿದ್ದರೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಕ್ಷರಗಳ ಸಹವಾಸ ಮನುಷ್ಯನನ್ನು ಬಿಡುವುದಿಲ್ಲ, ಆತ ದಿವಾಳಿಯಾದರೂ ಸಹ.
-ಹರೀಶ್ ಕೇರ
harishkera@gmail.com