ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ವ್ಯಕ್ತಿ ವಿಕಸನಕ್ಕೆ ಹದಿನಾರು ದಾರಿ

Vishwanath S
Updated On : 1 Mar 2014, 2:16 am

ಹುಟ್ಟುವುದು ಒಂದು ಪರಿಸರದಲ್ಲಿ, ಬೆಳೆಯುವುದು ಇನ್ನೊಂದು ಪರಿಸರದಲ್ಲಿ. ನಂತರ ವೃತ್ತಿ ಕೈಗೊಳ್ಳುವುದು ಬೇರೊಂದು ಪರಿಸರದಲ್ಲಿ. ಹೀಗೆ ಹಲವು ಪರಿಸರಗಳಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು ಸಾಮಾನ್ಯರಿಗೆ ಒಂದು ಸವಾಲೇ. ಈ ಸವಾಲನ್ನು ನಿಭಾಯಿಸಲು ನವಕರ್ನಾಟಕ ಪ್ರಕಾಶನ ಸಂಸ್ಥೆಯು 'ವ್ಯಕ್ತಿ ವಿಕಸನ ಮಾಲೆ' ಎಂಬ ಸರಣಿಯಲ್ಲಿ ಕೃತಿಗಳನ್ನು ಹೊರತಂದಿದೆ. ಡಾ.ಸಿ.ಆರ್. ಚಂದ್ರಶೇಖರ ಅವರು ಈ ಮಾಲೆಯ ಪ್ರಧಾನ ಸಂಪಾದಕರು. ಸದ್ಯ ಈ ಮಾಲೆಯಲ್ಲಿ ಹದಿನಾರು ಕೃತಿಗಳು ಬಂದಿವೆ.
ಡಾ.ಸಿ.ಆರ್. ಚಂದ್ರಶೇಖರ ಬರೆದಿರುವ 'ಮನೋಬಲ' ಕೃತಿಯೂ ಇದರಲ್ಲಿ ಸೇರಿದೆ. ಆಧುನಿಕ ಬದುಕಿನ ಶೈಲಿಯು ವಿವಿಧ ವಯೋವಾನದವರಲ್ಲಿ ಮನೋಬಲವನ್ನು ಕುಗ್ಗಿಸುತ್ತದೆ. ನಕಾರಾತ್ಮಕ ಧೋರಣೆಗಳಾದ ಅನುಮಾನ, ಸಂಬಂಧಗಳಿಂದ ವಿಮುಖತೆ, ದ್ವೇಷಸಾಧನೆ, ಭಾವೋದ್ವೇಗ, ಸಮಾಜಬಾಹಿರ ಆಸಕ್ತಿ ಇಂಥವುಗಳಿಂದ ಪಾರಾಗುವ ಉಪಾಯವನ್ನು ಇದರಲ್ಲಿ ಸೂಚಿಸಲಾಗಿದೆ. ಇವರದೇ ಇನ್ನೊಂದು ಕೃತಿ 'ನಿಮ್ಮದು ಸರಿಯಾದ ನಿರ್ಧಾರವೇ?' ಒತ್ತಡದ ಪರಿಸ್ಥಿತಿಯಲ್ಲಿ ನಾವು ಹೇಗೆ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂಬುದನ್ನು ಇದರಲ್ಲಿ ವಿವರಿಸಿದ್ದಾರೆ.
ಕಿರಣ್ ಪ್ರಸಾದ್ ರಾಜನಹಳ್ಳಿ ಬರೆದ 'ಗೆಲುವು ನನ್ನದೇ', ಡಾ.ಎಂ.ಸಿ.ಪ್ರಕಾಶ್ ಬರೆದಿರುವ 'ಕಾಲೇಜು ವಿದ್ಯಾರ್ಥಿಗಳ ಪೋಷಕರ ಜವಾಬ್ದಾರಿಗಳು', ಜಿ.ಎಸ್. ಜಯದೇವ ಅವರ 'ನೊಂದ ಮಹಿಳೆಯರು ಆತ್ಮವಿಶ್ವಾಸದೆಡೆಗೆ', ಡಾ.ಎನ್. ಗೋಪಾಲಕೃಷ್ಣ ಅವರ 'ನಿವೃತ್ತಿ ಜೀವನದ ಸಿದ್ಧತೆ ಹೇಗೆ?', ಎಂ. ಅಬ್ದುಲ್ ರೆಹಮಾನ್ ಪಾಷಾ ಅವರ 'ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ', ಗಾಯತ್ರಿ ಮೂರ್ತಿಯವರ 'ಉದ್ಯೋಗಸ್ಥ ಮಹಿಳೆ ಮತ್ತು ವ್ಯಕ್ತಿತ್ವ ವಿಕಸನ', ಡಾ.ಕೆ.ಎಸ್. ಶುಭ್ರತಾ ಅವರ 'ಹಿಂಸೆ ದೌರ್ಜನ್ಯಕ್ಕೊಳಗಾದ ಮಕ್ಕಳ ಮನೋವಿಕಾಸ', ಡಾ. ಮಹಾಬಲೇಶ್ವರ ರಾವ್ ಅವರ 'ಗುರಿಯತ್ತ ಹರಿಯಲಿ ಚಿತ್ತ', ಡಾ.ಕೆ.ಆರ್. ಶ್ರೀಧರ ಅವರ 'ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಅನುಭೂತಿ ಸಹಾನುಭೂತಿ', ಗಿರಿಮನೆ ಶ್ಯಾಮರಾವ್ ಅವರ 'ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ', ಪಿ.ಪಿ. ಉಪಾಧ್ಯ ಅವರ 'ಯಶಸ್ಸಿನ ಸೂತ್ರಗಳು', ಪುಷ್ಪಾ ವೆರ್ಣೇಕರ ಅವರ 'ಸಂಬಂಧಗಳ ನಿರ್ವಹಣೆ', ಡಾ.ಕೆ.ಎಸ್. ಚೈತ್ರಾ ಅವರ 'ಆಸೆ ಮತ್ತು ಅಗತ್ಯಗಳು ಹೇಗಿರಬೇಕು? ಎಷ್ಟಿರಬೇಕು?', ಡಾ.ಕೆ.ಎಸ್. ಪವಿತ್ರ ಅವರ 'ಸೌಂದರ್ಯ ಪ್ರಜ್ಞೆ ಮತ್ತು ವ್ಯಕ್ತಿತ್ವ ವಿಕಾಸ' ಸದ್ಯ ಬಂದಿರುವ ವ್ಯಕ್ತಿವಿಕಸನದ ಕೃತಿಗಳು.
ಈ ಎಲ್ಲ ಕೃತಿಗಳ ಒಂದು ಸಾಮಾನ್ಯ ಲಕ್ಷಣವೆಂದರೆ ವ್ಯಕ್ತಿ ತನ್ನ ಬದುಕನ್ನು ಯಾವುದೇ ಕಷ್ಟವಿಲ್ಲದೆ ನಿರಾಳವಾಗಿ ಅನುಭವಿಸಲು ಸುಲಭ ಮಾರ್ಗವನ್ನು ತೋರಿಸುವುದು. ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದಕ್ಕೆ ಪ್ರೇರಣೆಯನ್ನು ನೀಡುವುದು. ಆಸೆ ಪಡುವುದು ಸರಿ. ಆದರೆ ಆಸೆಯೆಂಬುದು ದುರಾಸೆ ಯಾವಾಗ ಆಗುತ್ತದೆ ಎಂಬುದನ್ನು ತಿಳಿಸಿಕೊಡುವುದು. ಬಾಹ್ಯ ಸೌಂದರ್ಯದ ಜೊತೆ ಆಂತರಿಕ ಸೌಂದರ್ಯವು ವ್ಯಕ್ತಿಗೆ ಮತ್ತು ಇಡೀ ಸಮಾಜಕ್ಕೆ ಹೇಗೆ ಸತ್ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ಮಿತ್ರಸಮ್ಮಿತವಾದ ಧಾಟಿಯಲ್ಲಿ ಹೇಳಿಕೊಡುವುದು. ಸಮಾಜ ಜೀವಿಯಾದ ಮನುಷ್ಯ ತನ್ನ ಸುತ್ತಲಿನವರ ಜೊತೆ ಒಂದು ಸಂಬಂಧವನ್ನು ಏರ್ಪಡಿಸಿಕೊಳ್ಳಲೇ ಬೇಕಾಗುತ್ತದೆ. ಈ ಸಂಬಂಧ ನಿರ್ವಹಣೆಯಲ್ಲೂ ಪ್ರೀತಿ ತುಂಬಿದ ಜವಾಬ್ದಾರಿ, ಕಾಳಜಿ ಮುಖ್ಯ ಎಂಬುದನ್ನೂ ಇವು ಹೇಳುತ್ತವೆ. ವ್ಯಕ್ತಿಯ ಬದುಕಿನಲ್ಲಿ ಯಶಸ್ಸು ಅಂದರೆ ಏನು? ಒಬ್ಬರ ಯಶಸ್ಸಿನ ಮಾನದಂಡದಲ್ಲಿ ಇನ್ನೊಬ್ಬರ ಸಾಧನೆಯನ್ನು ಅಳೆಯುವುದು ಎಷ್ಟರಮಟ್ಟಿಗೆ ಸರಿಯಾದುದು? ಯಶಸ್ಸು ಒಂದು ಸಾಪೇಕ್ಷ ಸ್ಥಿತಿ. ವ್ಯಕ್ತಿಯಿಂದ ವ್ಯಕ್ತಿಗೆ ಅದು ಭಿನ್ನವಾದದ್ದು ಎಂಬಂಥ ತಿಳಿವಳಿಕೆ ಇಲ್ಲಿದೆ.
ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ಹೇಗೆ ಎಂಬ ಜಿಜ್ಞಾಸೆಯನ್ನು ಒಬ್ಬರು ಮಾಡಿದರೆ, ಮಕ್ಕಳ ಮನೋವಿಕಾಸ ಹೇಗೆ, ಮಕ್ಕಳ ಹೂ ಮನ ಬಾಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಅರಿವು ಮೂಡಿಸುವವರು ಇನ್ನೊಬ್ಬರು. ಉದ್ಯೋಗಸ್ಥ ಮಹಿಳೆಯರ ವ್ಯಕ್ತಿತ್ವ ವಿಕಸನ ಹೇಗೆ, ಅವರು ಯಾವ ರೀತಿಯಲ್ಲಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳಿದವರು ಇನ್ನೊಬ್ಬರು.
ಇವನ್ನು ಓದುತ್ತಿದ್ದಂತೆ ನನ್ನದೂ ಇದೇ ಸಮಸ್ಯೆ ಅಲ್ಲವೆ ಎಂದು ಅನ್ನಿಸಿದರೆ ಆಶ್ಚರ್ಯವಿಲ್ಲ. ಅಲ್ಲಿಗೆ ನಿಮಗೆ ಪರಿಹಾರವೂ ಸಿಗುತ್ತದೆ.
ಪ್ರ: ನವಕರ್ನಾಟಕ ಪ್ರಕಾಶನ.,
ಬೆಂಗಳೂರು, ಬೆಲೆ ತಲಾ ರು. 50

ಬಿಳಿ ಹಂದಿಗೆ ಬಿದ್ದ ಕನಸು
ಆ ರಾತ್ರಿ ಮಿ. ಜೋನ್ಸ್ ಮಾನಾರ್ ಫಾರಂನ ಕೋಳಿಗಳ ಪಂಜರ ಕವುಚಿದ. ಅಂದು ಅವನು ಕುಡಿದು ಚಿತ್ತಾಗಿದ್ದ. ಹೀಗಾಗಿ ಇತರ ಪ್ರಾಣಿಗಳ ಬೋನು, ಪಂಜರಗಳ ಚಿಲಕ ಹಾಕುವುದನ್ನು ಮರೆತುಬಿಟ್ಟಿದ್ದ. ಅವನ ಕೈಲಿದ್ದ ಲಾಟೀನಿನ ಬೆಳಕು ಅತ್ತಿಂದಿತ್ತ-ಇತ್ತಿಂದತ್ತ ಬೆಳಕಿನ ಉಂಗುರಗಳನ್ನು ಸೃಷ್ಟಿಸುತ್ತಾ ನಾಟ್ಯವಾಡುತ್ತಿತ್ತು. ಫಾರಂನ ಉದ್ದಗಲಕ್ಕೂ ಅಮಲಿನಲ್ಲಿ ತೂರಾಡುತ್ತಿದ್ದ ಅವನು ಫಾರಂನ ಹಿಂಬಾಗಿಲಿನಲ್ಲಿ ತನ್ನ ಬೂಟುಗಳನ್ನು ಕಿತ್ತೆಸೆದು ಬಳಿಕ ಅಡುಗೆ ಮನೆಯಲ್ಲಿದ್ದ ಬ್ಯಾರೆಲ್ವೊಂದರಿಂದ ಒಂದು ಲೋಟ ಬೀರನ್ನು ಸುರಿದುಕೊಂಡು ಹಾಸಿಗೆಗೆ ಬಂದ. ಅಲ್ಲಿ ಅದಾಗಲೇ ಅವನ ಹೆಂಡತಿ ಗೊರಕೆ ಹೊಡೆಯುತ್ತಿದ್ದಳು.
ಇತ್ತ ಇವರ ಶಯನ ಕೊಠಡಿಯಲ್ಲಿ ಬೆಳಕು ನಂದುತ್ತಿದ್ದಂತೆ ಅತ್ತ ಇಡೀ ಫಾರಂನಲ್ಲಿ ಪ್ರಚೋದನೆ ಮತ್ತು ಗಡಿಬಿಡಿ ಗರಿಗೆದರಿತು. ಬಿಳಿ ಹಂದಿಗೆ ಅಂದು ವಿಶೇಷ ಕನಸೊಂದು ಬಿದ್ದಿತ್ತಂತೆ. ಅದನ್ನು ತನ್ನ ಸಹಚರರಿಗೆ ಹೇಳಬೇಕೆಂಬ ತವಕ ಅದಕ್ಕಿತ್ತು. ಅಂದು ರಾತ್ರಿ ಅದು ಎಲ್ಲರಿಗೂ ಅದನ್ನು ಹೇಳಲಿದೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹಬ್ಬಿತು. ಮಿ. ಜೋನ್ಸ್ ನಿದ್ರೆಗೆ ಜಾರಿದ ಕೂಡಲೇ ಎಲ್ಲ ಪ್ರಾಣಿಗಳು ಫಾರಂನ ವಿಶಾಲ ಹಜಾರದ ಬಳಿ ಆ ರಾತ್ರಿ ಕಳೆಯಬೇಕೆಂದು ಒಪ್ಪಂದವಾಯಿತು. ಹಿರಿಯ ಮೇಜರ್ (ಸದಾ ಅದನ್ನು ಹೀಗೆಂದು ಸಂಭೋದಿಸಲಾಗುತ್ತಿತ್ತು. ಜೊತೆಗೆ ವಿನೋದಕ್ಕಾಗಿ 'ವಿಲ್ಲಿಂಗ್ಡನ್ ಸುಂದರಿ' ಎಂಬ ಅಡ್ಡ ಹೆಸರಿನಿಂದಲೂ ಕರೆಯುತ್ತಿದ್ದರು) ಫಾರಂ ಬಗೆಗೆ ವಿನೀತ ಭಾವ ಬೆಳೆಸಿಕೊಂಡಿತ್ತು. ಹೀಗಾಗಿ ಅದರ ಮಾತಿಗೆ ಗೌರವ, ಆದರಣೆ ಇದ್ದ ಕಾರಣ ಇತರೆ ಪ್ರಾಣಿಗಳು ಅದರ ಮಾತನ್ನು ಆಲಿಸಲೆಂದೇ ಒಂದು ಗಂಟೆ ನಿದ್ರೆಗೆಡಲು ಸಿದ್ಧವಿದ್ದವು.  ಆ ವಿಶಾಲ ಫಾರಂನ ಒಂದು ತುದಿಯಲ್ಲಿ ಆಗಲೇ ಮೇಜರ್ ಹುಲ್ಲು ಹಾಸಿಗೆ ಮೇಲೆ ಆರಾಮವಾಗಿ ಪವಡಿಸಿತ್ತು. ಅಲ್ಲೊಂದು ಲಾಟೀನನ್ನು ತೊಲೆಯೊಂದಕ್ಕೆ ತೂಗು ಬಿಡಲಾಗಿತ್ತು. ಮೇಜರ್ ವಯಸ್ಸು ಹನ್ನೆರೆಡು. ಗಟ್ಟಿಮುಟ್ಟಾದ ಶರೀರ. ಗಾಂಭೀರ್ಯದ ಕಳೆ ಇತ್ತು ಮುಖದಲ್ಲಿ. ಚತುರತೆ, ದಯಾಪರತೆ ಹೊತ್ತಿದ್ದ ಅದರ ಕೋರೆ ಹಲ್ಲುಗಳನ್ನು ತುಂಡರಿಸಿರಲಿಲ್ಲ. ಇತರೆ ವಿವಿಧ ಬಗೆಯ ಪ್ರಾಣಿಗಳು ಆಗಮಿಸುವ ಮುನ್ನವೇ ಮೂರು ನಾಯಿಗಳು; ಬ್ಲೂಬೆಲ್, ಜೆಸ್ಸಿ ಮತ್ತು ಪಿಂಚರ್ ಬಂದು ವಿವಿಧ ಭಂಗಿಯಲ್ಲಿ ಕುಳಿತಿದ್ದವು. ಇವುಗಳನ್ನು ಹಿಂಬಾಲಿಸಿಕೊಂಡು ಹಂದಿಗಳು ಬಂದು ವೇದಿಕೆಯ ಮುಂಭಾಗದ ಹುಲ್ಲು ಹಾಸಿನ ಮೇಲೆ ಪವಡಿಸಿದವು. ಕೋಳಿಗಳು ಕಿಟಕಿಯ ಮೇಲೆ, ಪಾರಿವಾಳಗಳು ಸದ್ದು ಮಾಡುತ್ತ ಹೆಂಚಿನ ದೂಲದ ಮೇಲೆ ಬಂದು ಕುಳಿತವು. ಕುರಿಗಳು, ಹಂದಿಗಳು ಕುಳಿತಿದ್ದ ಹಿಂದಿನ ಸಾಲಿನಲ್ಲಿ ಹಸುಗಳು ಬಂದು ಕುಳಿತು ಮೆಲುಕು ಹಾಕಲಾರಂಭಿಸಿದವು.  ಬಾಕ್ಸರ್ ಮತ್ತು ಕ್ಲೋವರ್ ಹೆಸರಿನ ಗಾಡಿ ಎಳೆವ ಎರಡು ಕುದುರೆಗಳು ಜೊತೆಯಾಗಿ ತೀವ್ರ ಎಚ್ಚರಿಕೆಯಲ್ಲಿ ತಮ್ಮ ಗೊರಸನ್ನು ಬಹು ನಿಧಾನವಾಗಿ ಸದ್ದಾಗದಂತೆ ಇಡುತ್ತಾ ಒಳ ಬಂದು ಕುಳಿತವು.
ಪುಸ್ತಕ: ಮೃಗ ಪ್ರಭುತ್ವ, ಮೂಲ: ಎನಿಮಲ್ ಫಾರಂ
ಲೇಖಕ: ಜಾರ್ಜ್ ಆರ್ವೆಲ್, ಕನ್ನಡಕ್ಕೆ: ಸೊಂದಲಗೆರೆ ಲಕ್ಷ್ಮೀಪತಿ
ಪ್ರಕಾಶನ: ಕಾವ್ಯಕಲಾ ಪ್ರಕಾಶನ, ಪುಟ: 117, ಬೆಲೆ: 60 ರುಪಾಯಿ

ವ್ಯಂಗ್ಯ ಕಥೆಗಳು
ವಾಚ್ಯಾರ್ಥಕ್ಕಿಂತ ಮಿಗಿಲಾದ ಅರ್ಥವನ್ನು ಹೊರಡಿಸುವುದು ವ್ಯಂಗ್ಯಾರ್ಥ. ಅದರ ಅರ್ಥಪರಂಪರೆ ಮಿತಿಯಿಲ್ಲದ್ದು. ಹಿಂದಿಯಲ್ಲಿ ಜ್ಞಾನ್ ಚತುರ್ವೇದಿಯವರು ವ್ಯಂಗ್ಯಾರ್ಥವನ್ನು ಧ್ವನಿಸುವ ಹಲವು ಕತೆಗಳನ್ನು ಬರೆದಿದ್ದಾರೆ. ಸಮಕಾಲೀನ ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳು ಅವರ ಕತೆಗಳ ವಸ್ತು. ಇವು ಲಘು ಹಾಸ್ಯದಲ್ಲಿ ಕೊನೆಯಾಗದೆ ತೀವ್ರ ವಿಷಾದವನ್ನೂ ಮೂಡಿಸುತ್ತವೆ. ಕನ್ನಡದ ಹಿರಿಯ ಅನುವಾದಕರಾದ ಡಿ.ಎನ್. ಶ್ರೀನಾಥ್ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಪ್ರ: ಪ್ರಿಸಮ್ ಬುಕ್ಸ್ ಪ್ರೈ.ಲಿ., ಬೆಂಗಳೂರು, ಪುಟಗಳು 184, ಬೆಲೆ ರು. 170

ಸರಜೂ ಕಾಟ್ಕರ್
ಹಿರಿಯ ಪತ್ರಕರ್ತ ಮತ್ತು ಸಾಹಿತಿ ಡಾ. ಸರಜೂ ಕಾಟ್ಕರ್ ಅವರ ಬದುಕು ಬರೆಹಗಳನ್ನು 'ಕಾವ್ಯ ಕಾರ್ತಿಕ' ಹೆಸರಿನಲ್ಲಿ ಪ್ರಕಾಶ ಗಿರಿಮಲ್ಲನವರ ಕಟ್ಟಿಕೊಟ್ಟಿದ್ದಾರೆ. ಕವಿಯಾಗಿ, ಸಂಶೋಧಕರಾಗಿ, ಸಮರ್ಥ ಅನುವಾದಕರಾಗಿ, ಬಂಡಾಯ- ದಲಿತ ಚಳವಳಿಯ ಪ್ರಮುಖರಲ್ಲಿ ಒಬ್ಬರಾಗಿ, ಎಲ್ಲಕ್ಕೂ ಮುಖ್ಯವಾಗಿ ಜನಪರ ಕಾಳಜಿಯ ಪತ್ರಿಕೋದ್ಯಮಿಯಾಗಿ ಸರಜೂರನ್ನು ಲೇಖಕರು ಪರಿಚಯಿಸಿದ್ದಾರೆ. ಮರಾಠಿ ಮನೆಮಾತಿನ ಸರಜೂ ಕನ್ನಡದ ಪ್ರಮುಖ ಸಾಹಿತಿಯಾಗಿ ಬೆಳೆದದ್ದು ರೋಚಕ ಕಥನ.
ಪ್ರ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಬೆಳಗಾವಿ, ಪುಟಗಳು 124, ಬೆಲೆ ರು. 80

ನೀರಗುಂದರ ನಾಟಕ
ಮನುಷ್ಯ ಜೀವನ ಸಾರ್ಥಕವಾಗುವುದು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಸಮಪ್ರಮಾಣದಲ್ಲಿ ಅಳವಡಿಸಿಕೊಂಡಾಗ ಮಾತ್ರ. ಇವುಗಳಲ್ಲಿ ಯಾವುದೇ ಒಂದಕ್ಕೆ ಮಹತ್ವ ನೀಡಿದರೂ ಬದುಕು ಏರುಪೇರು. ನಾಗರಾಜ ನೀರಗುಂದ ಅವರ 'ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ' ನಾಟಕದ ನಾಯಕರು ಅರ್ಥಕ್ಕೆ ಮಹತ್ವ ನೀಡಿದಾಗ ಅವರ ಮನೆಯವರು ಕಾಮಕ್ಕೆ ಮುಖಮಾಡುತ್ತಾರೆ. ಪುರುಷಪ್ರಧಾನ ಸಮಾಜದ ರೀತಿ ನೀತಿಗಳನ್ನು ಧಿಕ್ಕರಿಸುವ ಮಹಿಳಾ ಪ್ರಜ್ಞೆಯ ಅನಾವರಣ ಇಲ್ಲಿದೆ.
ಪ್ರ: ಸಾಹಿತ್ಯ ಭಂಡಾರ, ಹುಬ್ಬಳ್ಳಿ, ಪುಟಗಳು 120, ಬೆಲೆ ರು. 100

ಪ್ರದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ದೇಶದಲ್ಲಿ ಹತ್ತು ದಿನಗಳ ಕಾಲ ಮಾಡಿದ ಪ್ರವಾಸದ ಅನುಭವಗಳನ್ನು ವಿಶ್ವೇಶ್ವರ ಭಟ್ ಅವರು 'ಪ್ರದಕ್ಷಿಣ ಆಫ್ರಿಕಾ' ಹೆಸರಿನಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾರೆ. ಯಾವುದೇ ದೇಶದ ಬಗ್ಗೆಯಾದರೂ ಚಿತ್ರವಿಚಿತ್ರ ಮಾಹಿತಿಗಳು, ಇತಿಹಾಸ, ಸಂಸ್ಕೃತಿಯ ವಿವರಗಳು ನಮಗೆ ಇದು ಬೆರಳ ತುದಿಯಲ್ಲಿ ಲಭ್ಯವಿವೆ. ಆದರೆ ಪ್ರವಾಸಿಗನೊಬ್ಬ ಸೂಕ್ಷ್ಮಗ್ರಾಹಿಯಾದರೆ ಹಲವು ಒಳನೋಟಗಳನ್ನು ಹಿಡಿದಿಡಲು ಸಾಧ್ಯ. ಅಂಥ ಒಳನೋಟಗಳು ಭಟ್ಟರ ಕೃತಿಯಲ್ಲಿವೆ. ಅತ್ಯುತ್ತಮ ಛಾಯಾಚಿತ್ರಗಳೂ ಇದರಲ್ಲಿವೆ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 204, ಬೆಲೆ ರು. 170


-ಡಾ. ವಾಸುದೇವ ಶೆಟ್ಟಿ
vasudevs@sify.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement