ಶ್ರೀನಿವಾಸ ಕಲ್ಯಾಣ
ಗೋಪಿನಾಥಂನಲ್ಲಿ ವೀರಪ್ಪನ್ನ ಮನೆ, ಜಮೀನು ಇದ್ದರೂ 'ವೀರಪ್ಪನ್'ನ ಹೆಸರು ಆ ಊರಿನಲ್ಲಿ ನಿಧಾನ ಕರಗುತ್ತಿದೆ. ಆದರೆ, ಈತನನ್ನು ಹಿಡಿಯಲು ಬಂದು ಗ್ರಾಮವನ್ನು ಸುಧಾರಿಸಲು ಹೊರಟಿದ್ದ ಡಿಸಿಎಫ್ ಪಿ. ಶ್ರೀನಿವಾಸ್ ಮಾತ್ರ ಇಂದಿಗೂ ಜನಮಾನಸದಲ್ಲಿ ಹಸಿರಾಗಿಯೇ ಉಳಿದಿದ್ದಾರೆ. ಅಷ್ಟೇಅಲ್ಲ, ಅವರಿಗಾಗಿ ಇಲ್ಲಿ ದೇವಾಲಯವನ್ನೇ ಕಟ್ಟಿಸಲಾಗಿದೆ.
ಇಡೀ ಮಲೆ ಮಹದೇಶ್ವರ ಕಾಡನ್ನೇ ಸಾಮ್ರಾಜ್ಯ ಮಾಡಿಕೊಂಡಿದ್ದ ವೀರಪ್ಪನ್ ಸತ್ತು ಹತ್ತು ವರ್ಷಗಳೇ ಆಗಿವೆ. ಆದರೆ, ಈತನಿಂದ ಶ್ರೀನಿವಾಸ್ ಹತ್ಯೆಯಾಗಿ 23 ವರ್ಷಗಳಾಗಿವೆ. 'ವೀರಪ್ಪನ್ ನಮಗೆಲ್ಲ ಕೆಟ್ಟ ನೆನಪು' ಎಂಬ ಭಾವ ಇಲ್ಲಿನವರಿಗಿದೆ. ಆದರೆ, ಶ್ರೀನಿವಾಸ್ ಅವರ ತ್ಯಾಗ ಬಗ್ಗೆ ಕೇಳಿದವರು ಅವರಿಗೊಂದು ಸಲ್ಯೂಟ್ ಹೊಡೆದು ಮುಂದೆ ಸಾಗುತ್ತಾರೆ.
ವೀರಪ್ಪನ್ ಸಾಯುವುದಕ್ಕಿಂತ ಮುಂಚೆಯೇ ಆತನ ತಮ್ಮ ಅರ್ಜುನ ಸಾವನಪ್ಪಿದ್ದ. ಹಿರಿಯಣ್ಣ ಕೂಸೆ ಮಾದಯ್ಯ ಕೊಯಮತ್ತೂರು ಜೈಲಿನಲ್ಲಿದ್ದಾನೆ. ಇದೀಗ ಅವರ ಕುಟುಂಬ ಇಲ್ಲಿನ ಜಮೀನಲ್ಲಿ ಬೆಳೆ ತೆಗೆದು ಜೀವನ ಸಾಗಿಸುತ್ತಿದೆ. ಮುತ್ತುಲಕ್ಷ್ಮಿಯೂ ಇದೇ ಜಮೀನಿನಲ್ಲಿ ಬಂದ ಆದಾಯವನ್ನೇ ಆಶ್ರಯಿಸಿದ್ದಾಳೆ. ಆಗಾಗ್ಗೆ ಗೋಪಿನಾಥಂಗೆ ಬಂದು ಹೋಗುತ್ತಿದ್ದಾಳೆ.
ಗ್ರಾಮಸ್ಧರ ಮನ ಗೆದ್ದಿದ್ದರು
ಚಾಮರಾಜನಗರ ಡಿಸಿಎಫ್ ಆಗಿದ್ದ ಶ್ರೀನಿವಾಸ್ 1986ರಲ್ಲಿ ಬೆಂಗಳೂರಿನಲ್ಲಿ ವೀರಪ್ಪನ್ನನ್ನು ಸೆರೆಹಿಡಿದರು. ಆತನ ವಿಚಾರಣೆಗಾಗಿ ಚಾಮರಾಜನಗರ ಬೂದಿಪಡಗದಲ್ಲಿ ಇರಿಸಿದ್ದಾಗ ಅಲ್ಲಿಂದ ಆತ ತಪ್ಪಿಸಿಕೊಂಡ ಹೋದ ನಂತರ ಮತ್ತೆ ಕಾಡು ಸೇರಿದ. ಅಟ್ಟಹಾಸ ಮಿತಿ ಮೀರಿದ್ದರಿಂದ ಆತನ ಚಲನವಲನಗಳನ್ನು ತಿಳಿದಿದ್ದ, ಚಿಕ್ಕಮಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿ. ಶ್ರೀನಿವಾಸ್ರನ್ನು ವಿಶೇಷ ಕಾರ್ಯಾಚರಣೆಗಾಗಿ ಮಹದೇಶ್ವರ ಬೆಟ್ಟಕ್ಕೆ ವಾಪಸ್ ಕರೆಸಿಕೊಳ್ಳಲಾಯಿತು.
ವೀರಪ್ಪನ್ ಉಪಟಳ ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಗ್ರಾಮ ತೊರೆದಿದ್ದ ಗ್ರಾಮಸ್ಧರನ್ನು ಮತ್ತೆ ಕರೆತಂದು ನೆಲೆಸುವಂತೆ ಮಾಡಿದರು ಶ್ರೀನಿವಾಸ್. ಈ ಮೂಲಕ ಗ್ರಾಮಸ್ಧರಲ್ಲಿ ವಿಶ್ವಾಸ ಮೂಡಿಸಿ ಮಹಾತ್ಮಗಾಂಧಿ ಅವರ ಮಾರ್ಗದಲ್ಲಿ ಹಳ್ಳಿಯ ಅಭಿವೃದ್ಧಿಗೆ ಒತ್ತು ನೀಡಿದರು. ಗೋಪಿನಾಥಂನಲ್ಲೇ ನೆಲೆಸಿ, ಗ್ರಾಮಸ್ಥರ ಮನವನ್ನೂ ಗೆದ್ದರು. ಗ್ರಾಮಸ್ಧರ ಆರಾಧ್ಯ ದೈವವಾಗಿದ್ದ 'ಶ್ರೀ ಸತ್ಯಮರಿಯಾಮ್ಮನ್'ಗೆ ದೇಗುಲ ನಿರ್ಮಿಸಿಕೊಟ್ಟರು. ಬಡವರಿಗೆ ಮನೆಗಳನ್ನು ಕಟ್ಟಿಕೊಟ್ಟರು. ಇಂದಿಗೂ ಹೊಗೇನಕಲ್ಗೆ ಹೋಗುವ ದಾರಿಯಲ್ಲಿ ಅವರು ಕಟ್ಟಿಸಿಕೊಟ್ಟ ಸಾಲು ಮನೆಗಳನ್ನು ಕಾಣಬಹುದು. ಅಲ್ಲದೆ, ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗಿದ್ದ ಕಾಡಂಚಿನ ಗ್ರಾಮಸ್ಧರೇ ಸ್ವತಃ ವೈದ್ಯರಾದರು. ಹಲವು ಔಷಧಗಳ ಬಗ್ಗೆ ತಿಳಿದು, ಚಿಕಿತ್ಸೆ ನೀಡಲಾರಂಭಿಸಿದರು. ಇವರ ಜೊತೆಗೆ ವೀರಪ್ಪನ್ನ ತಂಗಿ ಮಾರಿಯಮ್ಮ ದಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ನಡುವೆ ಆಕೆ ಜೊತೆ ಅಕ್ರಮ ಸಂಬಂಧ ಇದೆ ಗಾಳಿ ಸುದ್ದಿ ಹರಡಿದ್ದರಿಂದ ಕೆರಳಿದ ವೀರಪ್ಪನ್, ತಂಗಿಯನ್ನು ಭೇಟಿ ಮಾಡಿ 'ನೀನು ಈ ರೀತಿ ಇರುವ ಬದಲು ಸತ್ತುಹೋದರೆ ನೆಮ್ಮದಿ ಆಗುತ್ತಿತ್ತು' ಎಂದು ಹೇಳಿದ್ದ. ಇದರಿಂದ ರೋಸಿದ ಆಕೆ ಆತ್ಮಹತ್ಯೆಯನ್ನೇ ಮಾಡಿಕೊಂಡಳು.
ಎರಕೆಹಳ್ಳದಲ್ಲಿ ಹತ್ಯೆ
ತಂಗಿಯ ಸಾವಿನಿಂದ ಕುದಿಯುತ್ತಿದ್ದ ವೀರಪ್ಪನ್ ರಣತಂತ್ರ ರೂಪಿಸಿದ. 'ನಾನು ಶ್ರೀನಿವಾಸ್ ಮುಂದೆ ಶರಣಾಗುತ್ತೇನೆ. ನೀನು ಶ್ರೀನಿವಾಸ್ ಅವರನ್ನು ಕರೆದುಕೊಂಡು ಬಾ' ಎಂದು ತಮ್ಮ ಅರ್ಜುನನ ಬಳಿ ಶರಣಾಗತಿಯ ಸಂದೇಶ ಕಳುಹಿಸಿದ್ದ. ಇಂಥ ಅವಕಾಶ ಬಳಸಿಕೊಂಡು ಹತ್ಯೆ ಮಾಡುವಲ್ಲಿ ವೀರಪ್ಪನ್ ನಿಷ್ಣಾತ. ಇದರೊಂದಿಗೆ ವೀರಪ್ಪನ್ ಸರ್ಕಾರಕ್ಕೆ ಕಂಡೀಶನ್ ಕೂಡ ಹಾಕಿದ್ದ. 'ನನ್ನ ಬಳಿಗೆ ಶ್ರೀನಿವಾಸ್ ಒಬ್ಬರೇ ಬರಬೇಕು. ಬೇರೆ ಯಾರೂ ಅವರೊಂದಿಗೆ ಇರಬಾರದು' ಎಂದು. ಇದನ್ನು ನಂಬಿದ ಶ್ರೀನಿವಾಸ್ 1991ರ ನವೆಂಬರ್ 10ರ ಬೆಳಗ್ಗೆ ಗೋಪಿನಾಥಂ ಹತ್ತಿರದ ಎರಕೆಹಳ್ಳ ಬಳಿ ಆತನನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ ಪೊದೆಯಲ್ಲಿ ಅವಿತು ಕುಳಿತಿದ್ದ ಆತ, ಶ್ರೀನಿವಾಸ್ಗೆ ಗುಂಡಿಟ್ಟೇಬಿಟ್ಟ. ಜೀವವಿರುವಾಗಲೇ ಅವರ ರುಂಡ- ಮುಂಡವನ್ನು ಬೇರ್ಪಡಿಸಿ ಭಯಾನಕವಾಗಿ ಹತ್ಯೆಮಾಡಿದ. ಮುಂಡವನ್ನು ಎಕರೆಹಳ್ಳದ ಬಳಿ ಬಿಸಾಡಿ ರುಂಡವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ.
ಸ್ಮಾರಕ ನಿರ್ಮಾಣ
ಶ್ರೀನಿವಾಸ್ರನ್ನು ಹತ್ಯೆಗೈದ ಸ್ಧಳದಲ್ಲಿ ಅರಣ್ಯ ಇಲಾಖೆ ಸ್ಮಾರಕ ನಿರ್ಮಿಸಿದೆ. ಜೊತೆಗೆ ಗೋಪಿನಾಥಂ ಜಂಗಲ್ ರೆಸಾರ್ಟ್ಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಇಲಾಖೆ, ಎರಕೆಹಳ್ಳದವರೆಗೆ ಚಾರಣ ವ್ಯವಸ್ಥೆ ಕಲ್ಪಿಸಿದೆ. ಶ್ರೀನಿವಾಸ್ ಅವರ ಸ್ಮರಣೆಗಾಗಿ ಚಾಮರಾಜನಗರದ ಅರಣ್ಯ ಭವನದಲ್ಲಿ ಸ್ಮಾರಕ ನಿರ್ಮಿಸಿದೆ. ಪ್ರತಿ ವರ್ಷ ನವೆಂಬರ್ 10ರಂದು 'ಅರಣ್ಯ ಹುತಾತ್ಮರ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಇದೇ ಸ್ಧಳದಲ್ಲಿ ಶ್ರೀನಿವಾಸ್ ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ.