ಸೆಕ್ಸ್ ಬಗ್ಗೆ ಹೆಚ್ಚು ಮಾತಾಡ್ತಾಳೆ....
ಸೆಕ್ಸ್ ಬಗ್ಗೆ ಹೆಚ್ಚು ಮಾತಾಡ್ತಾಳೆ....
ನಾನು ಪ್ರೀತಿಸುತ್ತಿರುವ ಹುಡುಗಿ ಇತ್ತೀಚೆಗೆ ತೀರಾ ಅನುಚಿತವಾಗಿ ವರ್ತಿಸುತ್ತಿದ್ದಾಳೆ. ಸೆಕ್ಸ್ ಬಗ್ಗೆ ನಿಸ್ಸಂಕೋಚವಾಗಿ ಮಾತನಾಡುತ್ತಾಳೆ. ಮುಜುಗರ ಎಂದೆನಿಸುತ್ತಿದೆ. ಏನುಮಾಡಲಿ?
- ಹೆಸರು ಬೇಡ. ತಾಳಿಕೋಟೆ
ಈಗ ಜಗತ್ತೇ ಸೆಕ್ಸ್ ಬಗ್ಗೆ ನಿಸ್ಸಂಕೋಚವಾಗಿ ಮಾತನಾಡುತ್ತಿದೆ. ಆಕೆ ನಿನ್ನೊಂದಿಗೆ ತಾನೆ ಹಾಗೆ ಮಾತನಾಡುತ್ತಿರುವುದು? ನಿನ್ನೊಂದಿಗಲ್ಲದೆ ಬೇರೆ ಯಾರೊಂದಿಗೆ ಆಕೆ ಅಂಥದ್ದನ್ನೆಲ್ಲ ಮಾತನಾಡಬೇಕು ಎಂದು ಬಯಸುತ್ತೀಯ? ಆರೋಗ್ಯಕರ ಸೆಕ್ಸ್ ಮಾತುಕತೆ ತಪ್ಪಲ್ಲ. ಚಿಂತೆ ಬಿಡು.
ಆಯ್ಕೆ ಕಷ್ಟವಾಗಿದೆ...
ಫೋಟೋಗ್ರಫಿಯಲ್ಲಿ ತುಂಬಾ ಆಸಕ್ತಿ ಇದೆ. ಕೃಷಿಯಲ್ಲೂ ಆಸಕ್ತಿ ಇದೆ. ಇವೆರಡರಲ್ಲಿ ಯಾವುದನ್ನು ಆಯ್ದುಕೊಳ್ಳಲಿ?
- ವೈ.ಎಂ. ಹರ್ಷ. ಮಂಡ್ಯ
ಕೃಷಿ ಮುಂದುವರಿಸು. ಫೋಟೋಗ್ರಫಿಯನ್ನು ಹವ್ಯಾಸವಾಗಿ ರೂಢಿಸಿಕೋ. ಕೃಷಿ ಪರಿಸರಕ್ಕೆ ಸನಿಹವಾಗಿರುವುದರಿಂದ ವೈವಿಧ್ಯ ರೀತಿಯ ಫೋಟೋಗ್ರಫಿ ಕಾನ್ಸೆಪ್ಟ್ಗಳು ಸಿಗುತ್ತವೆ. ಒಳ್ಳೆಯ ಕೃಷಿಕನಾಗುತ್ತಿಯ ಜೊತೆಗೆ ಹವ್ಯಾಸಿ ಫೋಟೋಗ್ರಾಫರ್ ಆಗುತ್ತೀಯ.
ಯಾರಿಗೆ ಮತ ಹಾಕಲಿ?
ನಮ್ಮ ಕುಟುಂಬ ಬಹಳ ಹಿಂದಿನಿಂದಲೂ ಕಾಂಗ್ರೆಸ್ಗೇ ಮತ ಹಾಕುತ್ತಾ ಬಂದಿದ್ದಾರೆ. ನಾನು ಈ ಸಲ ಬಿಜೆಪಿಗೆ ಮತ ಹಾಕಬೇಕೆಂದಿರುವೆ. ಅದಕ್ಕೆ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
- ವಿನೋದ್ ಪೂಜಾರಿ, ಪುತ್ತೂರು
ಮತ ಹಾಕುವುದು ವೈಯಕ್ತಿಕ ಹಕ್ಕು. ನಿನಗೆ ಇಷ್ಟವಾಗುವ ಪಕ್ಷಕ್ಕೇ ಮತ ನೀಡು. ಬೇರೆಯವರನ್ನು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಅಥವಾ ಹಾಕದಿರುವಂತೆ ಪ್ರೇರೇಪಿಸುವುದು ತಪ್ಪಾಗುತ್ತದೆ. ಮತದಾರನ ಹಕ್ಕು, ಮತ ಹಾಕುವುದಷ್ಟೇ. ಪ್ರಚಾರ ಮಾಡುವುದಲ್ಲ.
- ಡಾ. ನರೇಂದ್ರ ಗಾಂಧಿ
nemmadikendra4@gmail.com