ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಹತ್ತು ವರುಷದ ಹಿಂದೆ... ಆ ಮೀಸೆ ಬಿತ್ತು!

Vishwanath S
Updated On : 1 Mar 2014, 1:57 am

ಊರಿಗೊಬ್ಬ 'ದೊಣ್ಣೆ' ನಾಯಕನಿರುತ್ತಾನಂತೆ. ಆದರೆ, ಈ ಊರಿನ ನಾಯಕನ ಕೈಯಲ್ಲಿ ದೊಣ್ಣೆಯ ಬದಲಾಗಿ ಬಂದೂಕಿರುತ್ತಿತ್ತು. ಅವನು ನಾಯಕನೋ, ವಿಲನ್ನೋ ಅನ್ನೋ ಅನುಮಾನ ಈಗಲೂ ಇಲ್ಲಿನವರಿಗೆ ಮಧ್ಯರಾತ್ರಿ ಎಚ್ಚರವಾದಾಗಲೂ ಕಾಡುತ್ತದೆ. ಆಗ ಇವರೆಲ್ಲ ಎದುರಿನ ಪ್ರಶಾಂತ ಕಾಡನ್ನು ನೋಡುತ್ತಾರೆ. ಇಲ್ಲೇನು ಆ ನಾಯಕ ಕಾಣಿಸುತ್ತಿಲ್ಲ. ಅವನ ಆರ್ಭಟಗಳೂ ಕೇಳಿಸುತ್ತಿಲ್ಲ. ಇದೇ ನಿಶ್ಶಬ್ದ ಅವರಿಗೆ ಹತ್ತು ವರುಷದಿಂದ ನೆಮ್ಮದಿಯ ನಿದ್ದೆ ತಂದಿದೆ.
ವೀರಪ್ಪನ್ ಸತ್ತಿದ್ದಾನೆ! ಹಾಗಂತ ಬಿದ್ದ ಕನಸೂ ಖಾತ್ರಿಪಡಿಸುತ್ತದೆ. ಅದಕ್ಕೇ 'ಗೋಪಿನಾಥಂ' ಊರಿನವರು ಖುಷಿಯಾಗಿದ್ದಾರೆ. ವೀರಪ್ಪನ್ ಎಂಬ ನೈಜಲೋಕದ ವಿಲನ್ಗೆ ಜನ್ಮ ಕೊಟ್ಟ ಊರು ಈ 'ಗೋಪಿನಾಥಂ'. ಹಾಗಂತ ಆತನಿಗೇನು ಈ ಊರಿನ ಮೇಲೆ ವಿಶೇಷ ಅನುಕಂಪ ಇತ್ತು ಅಂತ ಏನಿಲ್ಲ. ಕೆಲವು ಬಾರಿ ಊರಿನವರಿಗೆ ಕಾಟ ಕೊಟ್ಟಿದ್ದ ಈ ಕಾಡುಗಳ್ಳ. ಇಲ್ಲೀಗ ಮೀಸೆಯ ನೆರಳಿಲ್ಲದ ಕಾರಣ, ತಮ್ಮೂರಿನ ಹೆಸರನ್ನು ಮುಜುಗರವಿಲ್ಲದೆ ಹೇಳಿಕೊಳ್ಳುತ್ತಾರೆ. ವೀರಪ್ಪನ್ ಬದುಕಿದ್ದ ತನಕ ಅಪಖ್ಯಾತಿಯೊಂದನ್ನೇ ಹಾರವನ್ನಾಗಿಸಿಕೊಂಡಿದ್ದ ಈ ಊರಿನ ಕೊರಳಿಗೀಗ ಅಭಿವೃದ್ಧಿಯೇ ಮಾಲೆ. ಟೂರಿಸಂ ಡಿಪಾರ್ಟ್ಮೆಂಟು ಈ ಊರಿನ ನಕಾಶೆಯನ್ನು ಝೂಮಿನಲ್ಲಿ ಬಿಂಬಿಸುತ್ತಿದೆ. ಇದಕ್ಕೆ ವೀರಪ್ಪನ್ ಸಹ ಕಾರಣನೇ. ಆದರೂ ಇಲ್ಲಿನ ಪ್ರಕೃತಿ ಸೊಬಗು ಎಲ್ಲರನ್ನೂ ಆಕರ್ಷಿಸುವಂಥದ್ದು.
ಕರ್ನಾಟಕ- ತಮಿಳುನಾಡಿನ ಗಡಿಗೆ ಫೆವಿಕಲ್ ಹಾಕಿ ಅಂಟಿಸುವಷ್ಟು ಸ್ಥಳದಲ್ಲಿ ಈ ಊರಿದೆ. ಬಹುತೇಕರು ತಮಿಳು ಮಾತನಾಡುವವರು. ಕನ್ನಡಿಗರೂ ಇದ್ದಾರೆನ್ನಿ. ತಮಿಳಿಗರೂ ನಾಜೂಕಾಗಿ ಕನ್ನಡ ಮಾತಾಡುತ್ತಾರೆ. ವ್ಯಾಪಾರ, ವ್ಯವಹಾರಕ್ಕೆ ಇಲ್ಲಿ ಎರಡೂ ಭಾಷೆಗಳು ಬೇಕು. ಬೆಟ್ಟದಡಿಯ ಫಲವತ್ತಾದ ಮಣ್ಣಿನಲ್ಲಿ ಹತ್ತಿ, ಅರಿಶಿನ, ಬಾಳೆ ಎದ್ದು ನಿಲ್ಲುತ್ತವೆ.
ಜನಗಣತಿಯ ಒಂದು ರಿಪೋರ್ಟಿನಂತೆ ಇಲ್ಲಿನ ಸಂಖ್ಯೆ 5 ಸಾವಿರ. ಕೃಷಿಯೇ ಇಲ್ಲಿನವರ ಉಸಿರು. ಸುತ್ತ ದಟ್ಟವಾಗಿ ಹಬ್ಬಿ ನಿಂತ ಬೆಟ್ಟ- ಕಾಡು. ಪಕ್ಕದಲ್ಲೇ ಹರಿಯುತ್ತಾಳೆ ಕಾವೇರಿ. ಕೆಲವೇ ಕೆಲವು ಅಡಿ ಕೊರೆದರೆ, ಇಲ್ಲಿ ಕಾರಂಜಿಯನ್ನೇ ಕಾಣಬಹುದು. ಮಳೆಗಾಲದಲ್ಲಿ 'ಅಯ್ಯೋ ಸಾಕಪ್ಪಾ ಮಳೆ' ಎನ್ನುತ್ತಾನೆ ರೈತ. ಒಂದಿಷ್ಟು ಜನ ವ್ಯಾಪಾರ ಮಾಡುತ್ತಾರೆ. ಇನ್ನೊಂದಿಷ್ಟು ಜನ ಕೂಲಿಗೆ ಹೋಗುತ್ತಾರೆ.
ವೀರಪ್ಪನ್ ಇದ್ದ ಕಾಲದಲ್ಲಿ ಇಲ್ಲಿ ಜನಸಂಖ್ಯೆಯ ಅರ್ಧದಷ್ಟು ಪೊಲೀಸರೇ ಇದ್ದರು. ಈಗ ಅವರ ಬೂಟಿನ ಸಪ್ಪಳವಿಲ್ಲ. ಬದಲಿಗೆ ಪ್ರವಾಸಿಗರನ್ನು ಕಾಣಬಹುದು. ವೀರಪ್ಪನ್ ಇದ್ದಾಗ ಶಾಲೆಯನ್ನು ಮಕ್ಕಳಿಗಿಂತ ಹೆಚ್ಚಾಗಿ
ಎಸ್ಟಿಎಫ್ನವರೇ ಆವರಿಸಿಕೊಂಡಿದ್ದರು. ಇದೀಗ ಅಲ್ಲಿ ಮಕ್ಕಳು ತುಂಬಿದ್ದಾರೆ. ಆ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳ್ಳೆಯ ಫಲಿತಾಂಶ ಪಡೆಯುತ್ತಿದೆ. ಪ್ರೌಢಶಾಲೆಯೂ ಅಷ್ಟೇ ಶೈಕ್ಷಣಿಕ ಕ್ರಾಂತಿ ಮಾಡಿದೆ. ಇಲ್ಲಿನ ಅನೇಕರು ಫಾರೆಸ್ಟ್ ಡಿಪಾರ್ಟ್ಮೆಂಟಿಗೆ ಸೇರಿ ಖಾಕಿ ಕೊಟ್ಟಿದ್ದಾರೆ. ಸೀಮೆಸುಣ್ಣ ಹಿಡಿದು ಶಿಕ್ಷಕರಾಗಿದ್ದಾರೆ. ಪತ್ರಕರ್ತರಾಗಿ ಪೇಪರುಗಳಲ್ಲಿ ಬೈಲೈನ್ಗಳನ್ನು ಮೂಡಿಸಿಕೊಂಡಿದ್ದಾರೆ.
ಜಲಪಾತಕ್ಕೂ ಹುಮ್ಮಸ್ಸು ಬಂತು!
ಆ ಕಾಡುಗಳ್ಳ ಸತ್ತ ನಂತರ ಇಲ್ಲಿ ಪ್ರವಾಸೋದ್ಯಮ ಬಾಗಿಲು ತೆರೆಯಿತು! ಆತ ಬದುಕಿದ್ದಾಗ ಹೊಗೇನಕಲ್ ಜಲಪಾತ ಯಾರಿಗೂ ಅಷ್ಟೊಂದು ಗೊತ್ತಿರಲಿಲ್ಲ. ಬಹುಶಃ ವೀರಪ್ಪನ್ ಅಲ್ಲೇ ಇದ್ದಿದ್ದರೆ ಕೋಮಲಾಂಗಿ ಐಶ್ವರ್ಯಾ ರೈ 'ರಾವಣ್'ನಂಥ ಚಿತ್ರದ ಶೂಟಿಂಗಿಗೆ ಇಲ್ಲಿಗೆ ಬರುತ್ತಿರಲಿಲ್ಲ. ಆಗೆಲ್ಲ ಜನ ಮಹದೇಶ್ವರ ಬೆಟ್ಟದಿಂದ ಮುಂದಕ್ಕೆ ಹೋಗಲು ಹೆದರುತ್ತಿದ್ದರು. ಗೈಡ್ಗಳು ದೂರದತ್ತ ಎಲ್ಲೋ ಕೈತೋರಿಸಿ,'ಅಲ್ಲೊಂದು ಜಲಪಾತವುಂಟು' ಅಂತ ಹೊಗೇನಕಲ್ಲನ್ನು ಪರಿಚಯಿಸುತ್ತಿದ್ದರು. ಯಾವಾಗ ನರಹಂತಕ ಗುಂಡೇಟಿಗೆ ಬಲಿಯಾದನೋ, ಪ್ರವಾಸಿಗರು ಹೆಜ್ಜೆಗಳನ್ನು ಮುಂದುವರಿಸಿದರು. ಕಾಡಿನ ಹಾದಿ ಬೆಳೆಯಿತು. ಆ ಪ್ರವಾಸಿತಾಣದ ಫೋಟೋಗಳು ಫೇಸ್ಬುಕ್ಕಿನಲ್ಲೂ ರಾರಾಜಿಸಲು ಶುರುಮಾಡಿದವು.
ಹೊಗೇನಕಲ್ಗೆ ಗೋಪಿನಾಥಂ ಮೂಲಕವೇ ಹೋಗಬೇಕಾಗಿರುವುದರಿಂದ, ಈತನ ಹುಟ್ಟೂರು ಪ್ರವಾಸಿಗರಿಗೆ ಇನ್ನಷ್ಟು ಹತ್ತಿರವಾಯಿತು. ಅನೇಕ ಪ್ರವಾಸಿಗರು ಇಲ್ಲೊಂದು ಸ್ಟಾಪ್ ಕೊಟ್ಟುಕೊಂಡು, ಕಾಡುಗಳ್ಳನ ರೋಚಕ ಸ್ಟೋರಿಗಳನ್ನು ಕೇಳಿ, ಚಹಾ ಕುಡಿದು ಪ್ರಯಾಣ ಬೆಳೆಸುತ್ತಾರೆ. ಈಗ ರಾಜ್ಯ ಪ್ರವಾಸೋದ್ಯಮ ಇಲಾಖೆಯೂ ಗೋಪಿನಾಥಂ ಜಲಾಶಯದ ಪಕ್ಕದಲ್ಲಿನ ಬ್ರಿಟಿಷರ ಕಾಲದ ಬಂಗಲೆಯ ನವೀಕರಣಕ್ಕೆ ಕೋಟಿ ರುಪಾಯಿ ಚೆಲ್ಲಿದೆ.
ಅದೊಂದು ವಿಚಿತ್ರ ಮೌನ
ಯಾಕೋ ಗೊತ್ತಿಲ್ಲ, 'ವೀರಪ್ಪನ್' ಎಂಬ ಹೆಸರು ಕೇಳಿದಾಕ್ಷಣ ಇಲ್ಲಿನವರು ಮೌನಿಯಾಗುತ್ತಾರೆ. ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಅರಣ್ಯದಲ್ಲಿ ಕಳ್ಳ ಸಾಗಣೆ ಆರಂಭಿಸಿ ನಂತರ ಸಾಲುಸಾಲಾಗಿ ಆನೆಗಳ ಹತ್ಯೆಗೈದು, ಕರ್ನಾಟಕ ಮತ್ತು ತಮಿಳುನಾಡುಗಳೆರಡು ರಾಜ್ಯಗಳಿಗೂ ತಲೆನೋವು ತಂದಿಟ್ಟವ ಆತ. ತನ್ನ ಹದಿನೆಂಟನೇ ವರ್ಷಕ್ಕೆ ಕಾಡಿನ ಹಾದಿ ಹಿಡಿದು ಕಳ್ಳನಾಗಿದ್ದ. ನಂತರ ಇವರೆಲ್ಲ ಅನುಭವಸಿದ್ದು ಬರೀ ಕಷ್ಟಗಳನ್ನೇ. ಹಾಗಾಗಿ, ಈತನ ಬಗ್ಗೆ
ಮಾತನಾಡಲು ಬೆಚ್ಚಿ ಬೀಳುತ್ತಾರೆ. ಆತ ನರಹಂತಕನಾಗಿದ್ದರಿಂದಲೇ ಊರಿನ ಪ್ರಗತಿ ಕುಂಠಿತವಾಯಿತು ಎಂಬ ನೋವು ಅವರ ಎದೆಯಾಳದಲ್ಲಿ ಸಿಕ್ಕಿಹಾಕಿಕೊಂಡಿದೆ.
ಲಾಭ ಆಗಿದ್ದೂ ಕಮ್ಮಿಯೇ...
ಅನೇಕರು ಮಾತಾಡಿಕೊಳ್ಳುತ್ತಾರೆ, ವೀರಪ್ಪನ್ ಉದಾರಿಯಾಗಿದ್ದನೆಂದು. ಆದರೆ, ಎಲ್ಲರಿಗಲ್ಲ. ತನ್ನ ತಂಡದಲ್ಲಿ ಯಾರಿದ್ದರೋ, ತನ್ನ ಕೃತ್ಯಗಳಿಗೆ ಯಾರ್ಯಾರು ಸಹಕರಿಸುತ್ತಿದ್ದರೋ ಅವರ ಪಾಲಿಗೆಲ್ಲ ಈತ ದೇವರು. ಮದುವೆ- ಮುಂಜಿ ಬಂದರೆ, ಅವರೆಲ್ಲರ ಜೀವನ ನಿರ್ವಹಣೆಗೆ ನೋಟಿನ ಕಟ್ಟುಗಳನ್ನೇ ಕೈಗಿಡುತ್ತಿದ್ದ. ತನ್ನ ತಂಡಕ್ಕೆ ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದವರಿಗೆ ಅಗತ್ಯಕ್ಕಿಂತ ಹೆಚ್ಚಿನ ಹಣ ನೀಡುತ್ತಿದ್ದ. ಇದನ್ನು ಬಿಟ್ಟರೆ ಈ ಭಾಗದ ಹೆಚ್ಚಿನವರಿಗೆ ವೀರಪ್ಪನ್ನಿಂದ ಹೆಚ್ಚೇನೂ ಲಾಭ ಆಗಲಿಲ್ಲ.
ಅಂದು ಹಾಗೆ ಸಹಾಯ ಪಡೆದವವರೆಲ್ಲ ಇಂದಿಗೂ ಆತನನ್ನು ಪೂಜ್ಯತೆಯಿಂದ ನೆನೆಯುತ್ತಾರೆ. 'ವೀರಪ್ಪನ್ ಬದುಕಿದ್ದಾಗ ನಮಗೆ ನೆರವಾಗುತ್ತಿದ್ದ' ಎಂದು ಮಾತು ಆರಂಭಿಸಿ, ಕಾನೂನಿನ ದಾಳಿಗೆ ಎಚ್ಚೆತ್ತುಕೊಂಡು ಹಾಗೆಯೇ ಬಾಯಿಮುಚ್ಚಿಕೊಳ್ಳುತ್ತಾರೆ. ಉಳಿದವರು ಇಲ್ಲಿನ ಜನ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ವೀರಪ್ಪನ್ ಬಗ್ಗೆ ಕೇಳಲು ಹೋದರೆ ಮಾತ್ರ ಮೌನಿಯಾಗುತ್ತಾರಷ್ಟೇ. 'ವೀರಪ್ಪನ್ ಇದೇ ಊರಿನವನಂತೆ ಹೌದಾ?' ಅಂತಂದರೆ 'ಹೌದು' ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ. ಹೆಚ್ಚಿಗೆ ಮಾತನಾಡಿದರೆ ತಮ್ಮನ್ನೇ ಅನುಮಾನದ ದೃಷ್ಟಿಯಿಂದ ನೋಡುತ್ತಾರೆಂಬ ಹೆದರಿಕೆ ಒಳಗಿನಿಂದಲೇ ಎಚ್ಚೆತ್ತುಕೊಳ್ಳುತ್ತದೆ. ಅವನ ಬಗ್ಗೆ ಪ್ರಶ್ನಿಸಿದಷ್ಟು ದೂರ ಸರಿಯುತ್ತಾರೆ.
ಹಾಗಾದರೆ, ನಾವು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಕೇ? ಇಲ್ಲಾ... ಅವರೇ ಮೌನ ಮುರಿಯಬೇಕೇ? ಅಥವಾ ವೀರಪ್ಪನ್ 'ಪ್ರಶ್ನಾತೀತ'ನೆಂದು ಒಪ್ಪಿಕೊಳ್ಳಬೇಕೇ?


- ಚಿತ್ರ, ಲೇಖನ: ದೇವರಾಜು ಕಪ್ಪಸೋಗೆ
kpchn1@yahoo.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement