ಒಗ್ಗಟ್ಟಿನ ಸಿಹಿ
ಮಾರ್ಚ್ 15, ವಿಶ್ವ ಕುಟುಂಬ ದಿನ. ಆಚರಿಸಲು ಕೂಡ ಬಂಧುಗಳು ಸಿಗುತ್ತಿಲ್ಲ. ಕಾರಣ ನಾವೆಲ್ಲ ಚದುರಿ ಹೋಗಿದ್ದೇವೆ. ನಮ್ಮ ಮನಸುಗಳು...
ಮಾರ್ಚ್ 15, ವಿಶ್ವ ಕುಟುಂಬ ದಿನ. ಆಚರಿಸಲು ಕೂಡ ಬಂಧುಗಳು ಸಿಗುತ್ತಿಲ್ಲ. ಕಾರಣ ನಾವೆಲ್ಲ ಚದುರಿ ಹೋಗಿದ್ದೇವೆ. ನಮ್ಮ ಮನಸುಗಳು ನೂರು ಹೋಳಾಗಿವೆ. ತಾನು, ತನ್ನವರು ಬಿಟ್ಟರೆ ಬೇರಾರೂ ಬೇಡ ಎಂಬ ಜಗತ್ತಿನಲ್ಲಿ ನಾವಿದ್ದೇವೆ. ಇದೇ ಭಾವವೇ ಅವಿಭಕ್ತ ಕುಟುಂಬ ಅವಸಾನಗೊಳ್ಳಲು ಮೊದಲ ಕಾರಣ. ನಗರದ ಆಕರ್ಷಣೆ ಮತ್ತೊಂದು ಕಾರಣ. ಹೀಗಾಗಿ, ಇಂದು ದುರ್ಬೀನು ಹಾಕಿ ಹುಡುಕಿದರೂ ಅವಿಭಕ್ತ ಕುಟುಂಬಗಳು ಕಾಣಸಿಗುವುದಿಲ್ಲ. ಸಂಬಂಧಗಳೂ ವ್ಯವಹಾರವಾಗಿರುವ ಈ ಹೊತ್ತಿನಲ್ಲಿ 'ಯಜಮಾನ', 'ಸಿಂಹಾದ್ರಿಯ ಸಿಂಹ', 'ಹಬ್ಬ'ದಂಥ ಚಿತ್ರಗಳಷ್ಟೇ ನಾವು ಕಳೆದುಕೊಂಡ ನೆಮ್ಮದಿಯನ್ನು ಮತ್ತೆ ನೆನಪಿಸುವ 'ಸಾಕ್ಷಿ'ಚಿತ್ರಗಳಾಗಿವೆ. ಇದೆಲ್ಲದರ ಹೊರತಾಗಿ ಕೆಲವು ಅವಿಭಕ್ತ ಕುಟುಂಬಗಳೂ ಅಲ್ಲಲ್ಲಿವೆ. ಅವು ಮಾನವ ಜೇನುಗೂಡು. ಅವರ ಒಗ್ಗಟ್ಟಿನ ಸಿಹಿಯನ್ನು ನಾವೂ ಕಣ್ದುಂಬಿಕೊಳ್ಳೋಣ...
ಬಿಗ್ ಫ್ಯಾಮಿಲಿ
ಒಂದು ಕಡೆಯಿಂದ ತಲೆ ಎಣಿಸಿದರೆ, ಕೊನೆ ಮುಟ್ಟುವ ಹೊತ್ತಿಗೆ ನೀವೇ ಸುಸ್ತಾಗಿಬಿಡುತ್ತೀರಿ. ಏಕೆಂದರೆ, ಈ ಕುಟುಂಬ ಅಷ್ಟು ದೊಡ್ಡದು. ಕೇವಲ ಐವತ್ತು, ನೂರು ಮಂದಿ ಇರೋ ಫ್ಯಾಮಿಲಿಯೂ ಇದೇನಲ್ಲ. ಬರೋಬ್ಬರಿ 650 ಜನ! ಅಂದರೆ, ಒಂದು ಮದುವೆ ಸಮಾರಂಭಕ್ಕೆ ಸೇರುತ್ತಾರೆ ನೋಡಿ... ಅಷ್ಟು ಜನ!
ಈ ಬಿಗ್ ಫ್ಯಾಮಿಲಿ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಕುಬೆವೂರಿನಲ್ಲಿ. ಕೊಲ್ನಾಡು ಪಾದೆಮನೆ ಕುಟುಂಬವೆಂದರೆ ಇಲ್ಲಿ ಸಖತ್ ಫೇಮಸ್ಸು. ಉದ್ಯೋಗ ನಿಮಿತ್ತ ಕುಟುಂಬದ ಸದಸ್ಯರೆಲ್ಲ ಚದುರಿಹೋಗಿದ್ದರೂ, ವರ್ಷಕ್ಕೊಮ್ಮೆ ಇವರೆಲ್ಲ ಒಂದಾಗುತ್ತಾರೆ. ಅಂದಹಾಗೆ, ಈ ಕುಟುಂಬಕ್ಕೊಂದು ಸಂಘವೂ ಇದೆ. ಇದು ಸ್ಥಾಪನೆಯಾಗಿದ್ದು 1963ರಲ್ಲಿ. ಸಂಘದ ಹೆಸರಿನಲ್ಲಿ ಒಟ್ಟಿಗೆ ಸೇರುವ ಇವರು, ಪ್ರತಿವರ್ಷ ಮೇ ತಿಂಗಳ ಪ್ರಥಮ ಶನಿವಾರ ಹಾಗೂ ರವಿವಾರದಂದು ಸೌಹಾರ್ದ ಕೂಟ ಏರ್ಪಡಿಸುತ್ತಾರೆ. ಏನಿಲ್ಲವೆಂದರೂ 400-450 ಮಂದಿ ಒಟ್ಟಿಗೆ ಸೇರುವ ಮೂಲಕ ಸಂಬಂಧವನ್ನು ಹಸಿರಾಗಿರಿಸಿಕೊಂಡಿದ್ದಾರೆ. ಹಲವರು ವಿದೇಶದಲ್ಲಿದ್ದಾರೆ.
ಮೂಲ್ಕಿಯ ಕಕ್ವ ಗುತ್ತಿಗೆ ಸೇರಿದ 19ನೇ ಶತಮಾನದ ಗಿರಿಯಮ್ಮ ಶೆಡ್ತಿ, ಹರಿಯಮ್ಮ ಶೆಡ್ತಿ ಮತ್ತು ಪದ್ಮಾವತಿ ಶೆಟ್ಟಿಯವರ ಸಂತಾನದ ಮೂರು ಅಕ್ಕ, ತಂಗಿಯರ ಕುಟುಂಬ ಇದು. 'ಪರಮವೀರ ಚಕ್ರ' ಗೌರವಕ್ಕೆ ಪ್ರಾಪ್ತಿಯಾದ ಗ್ರೂಪ್ ಕ್ಯಾಪ್ಟನ್ ದಿನೇಶ್ಚಂದ್ರ ಭಂಡಾರಿ, ಜೆಟ್ ಏರ್ವೇಸ್ನ ಪೈಲಟ್ ಅನುಷಾ ಶೆಟ್ಟಿ, ಟೆನ್ನಿಸ್ಪಟು ಐಸಿರಿ ರೈ, ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಈಜುಗಾರ್ತಿ ಪಲ್ಲವಿ ಶೆಟ್ಟಿ, ವಿಜಯ ಬ್ಯಾಂಕಿನ ಸ್ಥಾಪಕ ಮೂಲ್ಕಿ ಸುಂದರರಾಮ ಶೆಟ್ಟಿ... ಇವರೆಲ್ಲ ಇದೇ ಫ್ಯಾಮಿಲಿಗೆ ಸೇರಿದವರು. ಕುಟುಂಬದಲ್ಲಿ ಒಟ್ಟು 8 ತಲೆಮಾರಿದೆ.
- ಪ್ರಕಾಶ್ ಮೂಲ್ಕಿ
ಡಾಕ್ಟ್ರು, ಎಂಜಿನಿಯರು, ಲಾಯರ್ರು...
ಈ ಮನೆಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ!
ವೈದ್ಯರಿಗಾಗಿ ಆಸ್ಪತ್ರೆಗೆ ಹೋಗ್ಬೇಕು, ಎಂಜಿನಿಯರ್ಗಾಗಿ ಸಾಫ್ಟ್ವೇರ್ ಕಚೇರಿಗೆ ಹೋಗ್ಬೇಕು, ವಕೀಲರನ್ನು ಕಾಣಲು ಕೋರ್ಟಿಗೆ ಹೋಗ್ಬೇಕು, ಲೆಕ್ಚರರ್ ಕಾಣಲು ಯಾವುದೋ ಕಾಲೇಜಿಗೆ ಹೋಗ್ಬೇಕು, ಆರ್ಕಿಟೆಕ್ಟ್ ಕಾಣಲು ಇನ್ನ್ಯಾವುದೋ ಆಫೀಸಿಗೆ ಹೋಗ್ಬೇಕು... ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಗುಲ್ಬರ್ಗದ ಮಂದಿ ಇಲ್ಲಿನ ಶಿವಬಸಯ್ಯ ಹಿರೇಮಠರ ಮನೆಗೆ ಹೋದರೆ ಅಲ್ಲಿ ಎಲ್ಲರೂ ಸಿಗುತ್ತಾರೆ!
ಈ ಕುಟುಂಬದ ಟೋಟಲ್ ಸಂಖ್ಯೆ ಕೇವಲ 22. ಆದರೆ, ಸಮಾಜದ ಎಲ್ಲ ಸ್ತರದ ಹುದ್ದೆಯವರನ್ನೂ ಇಲ್ಲಿ ಕಾಣಬಹುದು. ಶಿವಬಸಯ್ಯರ ಪುತ್ರರಷ್ಟೇ ಅಲ್ಲ, ಪುತ್ರಿಯರೂ ಗಂಡ- ಮಕ್ಕಳ ಸಮೇತ ಇಲ್ಲಿಯೇ ಇದ್ದಾರೆ. ಶಿವಬಸಯ್ಯ ಅವರಿಗೀಗ 96 ವರ್ಷ. ಸ್ವಾತಂತ್ರ್ಯ ಹೋರಾಟದಲ್ಲಿ ಬಾವುಟ ಹಿಡಿದು ಹೆಜ್ಜೆಹಾಕಿದವರು ಇವರು. ಅಂದಹಾಗೆ, ಈ ಮನೆಯಲ್ಲಿರುವುದು ಒಟ್ಟು 32 ಕೋಣೆಗಳು. ಮೂರು ತಲೆಮಾರುಗಳು ಒಟ್ಟಿಗೆ ಜೀವಿಸುತ್ತಿವೆ. ಪ್ರಾರ್ಥನೆ, ಊಟದ ವೇಳೆಯಲ್ಲಿ ಸದಸ್ಯರೆಲ್ಲರೂ ಒಂದೆಡೆ ಸೇರುತ್ತಾರೆ.
- ಶೇಷಮೂರ್ತಿ ಅವಧಾನಿ
ಚಿತ್ರ: ಶಶಿಧರ ಹಿರೇಮಠ
ಈ ಮನೆಯಲ್ಲಿ ದಿನಕ್ಕೆ 650 ರೊಟ್ಟಿ ಬೇಕು!
ಇದು ರಿಯಲ್ಲಾಗಿ ಮಾನವ ಜೇನುಗೂಡು! ಗದಗ ಜಿಲ್ಲೆಯ ರೋಣದಲ್ಲಿರುವ ಮರಿಯವ್ವ ಭಜಂತ್ರಿ ಅವರ ಮನೆ ಇರುವುದು ಕೇವಲ 30್ಗ40 ವಿಸ್ತೀರ್ಣದ ನಿವೇಶನದ ಮೇಲೆ. ಈ ದಲಿತ ಕುಟುಂಬದಲ್ಲಿ ಒಟ್ಟು ನೆಲೆಸಿರುವುದು 74 ಜನ.
ಅಷ್ಟಕ್ಕೂ ಈ ಮನೆಯಲ್ಲಿ ಯಾರೂ ಹೈಫೈ ಉದ್ಯೋಗದಲ್ಲಿಲ್ಲ. ದಿನಾ ಟವೆಲ್ಲು ಹಿಡ್ಕೊಂಡು ಕೂಲಿಗೆ ಹೋದರಷ್ಟೇ ಇವರ ಹೊಟ್ಟೆ ತುಂಬುತ್ತದಷ್ಟೇ. 'ಮನೆಗಿಂತ ಮನಸ್ಸು ದೊಡ್ಡದು' ಎಂಬುದಕ್ಕೆ ಈ ಕುಟುಂಬ ಅತ್ಯುತ್ತಮ ಉದಾಹರಣೆ. ಈ ಅವಿಭಕ್ತ ಕುಟುಂಬಕ್ಕೆ 80ರ ವಯಸ್ಸಿನ ಅಜ್ಜಿ ಮರಿಯವ್ವ ಭಜಂತ್ರಿಯೇ ಕ್ಯಾಪ್ಟನ್. ಹನುಮಂತಪ್ಪ (15 ವರ್ಷದ ಹಿಂದೆ ನಿಧನ) ಮತ್ತು ಮರಿಯವ್ವ ದಂಪತಿಗೆ ಒಟ್ಟು 7 ಪುತ್ರರು (ಒಬ್ಬ ನಿಧನ), 6 ಹೆಣ್ಣು ಮಕ್ಕಳು. 6 ಸೊಸೆಯಂದಿರು, 5 ಅಳಿಯಂದಿರು, 36 ಮೊಮ್ಮಕ್ಕಳು, 7 ಮರಿಮೊಮ್ಮಕ್ಕಳು, 7 ಜನ ಮೊಮ್ಮಕ್ಕಳ ಹೆಂಡತಿಯರು ಸೇರಿದಂತೆ ಬರೋಬ್ಬರಿ 74 ಜನರಿರುವ ಈ ಫ್ಯಾಮಿಲಿಯಲ್ಲಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಬೇರೆಡೆ ಕೊಡದೇ ಇದ್ದೂರಲ್ಲಿ ಹತ್ತಿರದ ಸಂಬಂಧಿಗಳಿಗೆ ಕೊಡಲಾಗಿದೆ. ಸ್ಪೆಶೆಲ್ಲಾಗಿ ಸಿಹಿಯೂಟ, ಮಾಂಸಾಹಾರಿ ಊಟ ವಾರಕ್ಕೊಮ್ಮೆ ಇಲ್ಲಿ ಇದ್ದಿದ್ದೇ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಅಂತ ಇಲ್ಲಿ ಖರ್ಚಾಗೋ ಅಕ್ಕಿ ಒಟ್ಟು 25 ಕಿಲೋಗ್ರಾಂ. ತಿಂಗಳಿಗೆ 6 ಕ್ವಿಂಟಲ್ನಂತೆ ವರ್ಷಕ್ಕೆ 72 ಕ್ವಿಂಟಲ್ ಅಕ್ಕಿ ಬೇಕು. ದಿನಕ್ಕೆ 650 ರೊಟ್ಟಿ ಬೇಕೇ ಬೇಕು. ಪ್ರತಿವರ್ಷ ಕುಟುಂಬ ನಿರ್ವಹಣೆಗೆ 8- 12 ಲಕ್ಷ ರು.ಗಳನ್ನು ಎತ್ತಿಡಲೇಬೇಕು. ಇನ್ನೊಂದು ಮೆಚ್ಚಲೇಬೇಕಾದ ಸಂಗತಿಯೇನೆಂದರೆ, ಈ ಮನೆತನದಲ್ಲಿ ಕನಿಷ್ಠ ಎಸ್ಸೆಸ್ಸೆಲ್ಸಿವರೆಗೆ ಪ್ರತಿಯೊಬ್ಬರೂ ಓದಿದ್ದಾರೆ. ಅನೇಕರು ಬಿಎ, ಬಿಕಾಂ, ನರ್ಸಿಂಗ್ ಕೋರ್ಸ್, ಡಿಪ್ಲೊಮಾ, ಕಂಪ್ಯೂಟರ್ ಸೈನ್ಸ್ ಪೂರೈಸಿದವರೂ ಇದ್ದಾರೆ. ಇಲ್ಲಿ ಪ್ರತಿಯೊಬ್ಬರೂ ಯೋಗ್ಯತೆ ಅನುಸಾರ ಸ್ವಂತ ಉದ್ಯೋಗ ಕಂಡುಕೊಂಡವರು. ಕೆಲವರು ಗಾರೆ ಮೇಸ್ತ್ರಿ, ಕೆಲವರು ಟ್ರ್ಯಾಕ್ಟರ್, ಟ್ರ್ಯಾಕ್ಸ್ ಡ್ರೈವರ್, ಕೂಲಿ ಕೆಲಸ, ತರಕಾರಿ, ಕಾಯಿಪಲ್ಲೆ, ಹಣ್ಣು ಮಾರುವುದು, ಹೈನುಗಾರಿಕೆ, ಕುರಿ, ಆಡು ಸಾಕಾಣೆ ಮಾಡುತ್ತಾರೆ. 2 ಟ್ರ್ಯಾಕ್ಟರ್, 1 ಟಾಟಾ ಎಸಿ ಗಾಡಿ ಬಾಡಿಗೆಗೆ ದುಡಿಸುತ್ತಾರೆ. ಇದಲ್ಲದೇ ತಮ್ಮ ಪಾರಂಪರಿಕ ವೃತ್ತಿಯಾದ ಶುಭ ಕಾರ್ಯಗಳಲ್ಲಿ ಕೊಳಲು, ಬ್ಯಾಂಡ್ ಬಾಜಾ ಬಾರಿಸುವುದು ಈ ಫ್ಯಾಮಿಲಿಯಲ್ಲಿ ಕಾಮನ್.
-
- ಶಿವಕುಮಾರ ಕುಷ್ಟಗಿ
ಚಿತ್ರಗಳು. ಪಿ.ಎಸ್. ಪಾಟೀಲ ರೋಣ
ಬಟ್ಟೆ ಕುಟುಂಬದ ಸಂಖ್ಯೆ 70 ದಾಟಿದೆ...
ಈ ಮನೆಯ ಸದಸ್ಯರ ಸಂಖ್ಯೆ 70ಕ್ಕೂ ಅಧಿಕ. ತಮಿಳುನಾಡಿನ ಹೊಸೂರು ತಾಲೂಕಿನ ಹುಸ್ಕೂರಿನ ಬಿ.ಆರ್. ಮುನಿಯಪ್ಪ, ಮಾಲೂರಿನ ಅಣ್ಣಯ್ಯಪ್ಪನವರ ಬಳಿ ಸ್ವಾತಂತ್ರ್ಯ ಪೂರ್ವದಲ್ಲೇ ಬಟ್ಟೆ ವ್ಯಾಪಾರ ಕಲಿತು ನಂತರ ಕಾಯಂ ಆಗಿ ಕೋಲಾರದಲ್ಲೇ ನೆಲೆಸಿದವರು. ಬಟ್ಟೆ ವ್ಯಾಪಾರವಲ್ಲದೆ ಮುನಿಯಪ್ಪನವರು ಧಾನ- ಧರ್ಮಗಳಿಂದಲೂ ಹೆಸರುವಾಸಿ.
ಅಂದಹಾಗೆ, ಮುನಿಯಪ್ಪನವರು ಈಗಿಲ್ಲ. ಇವರಿಗೆ ಒಟ್ಟು 6 ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು. ಹಿರಿಯ ಮಗ ಬಿ.ಎಂ. ಚನ್ನಪ್ಪ ಹೆಸರಾಂತ ಜವಳಿ ಉದ್ಯಮಿ. ಶರಣ ಸಾಹಿತ್ಯ ಪರಿಷತ್ತಿನಲ್ಲೂ ಗುರುತಿಸಿಕೊಂಡವರು. ಎರಡನೇ ಮಗ ಬಿ.ಎಂ. ಬಸಪ್ಪ ಸರ್ಕಾರಿ ಸೇವೆಯಲ್ಲಿದ್ದರು. ಕೋಲಾರದಲ್ಲಿ ಕೆಲಕಾಲ ತಹಸೀಲ್ದಾರ್ ಆಗಿ ಕೆಲಸ ಮಾಡಿದ್ದರು. ನಂತರದ ಮರಿಯಪ್ಪ ಅವರೂ ಬಟ್ಟೆ ವ್ಯಾಪಾರಿ. ನಾಲ್ಕನೇ ಮಗ ಪರಮಶಿವಯ್ಯ ವ್ಯಾಪಾರದ ಜೊತೆಗೆ ದೇಗುಲಗಳ ಅಭಿವೃದ್ಧಿಗೆ ನೆರವು ನೀಡುತ್ತಾ ಬಂದವರು. ಐದನೆಯವರು ಶಿವಶಂಕರ್. ಎಸ್ಬಿಎಂ ನೌಕರಿ ಬಿಟ್ಟು, ಈಗ ಸ್ವಂತ ಉದ್ದಿಮೆ ಆರಂಭಿಸಿದ್ದಾರೆ. ಆರನೇ ಮಗ ಶಿವಕುಮಾರ್ ಕೂಡ ತಾತನ ಹಾದಿಯಲ್ಲೇ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಮನೆಯ ಸದಸ್ಯರಿಗೆ ಬಟ್ಟೆ ಮೇಲೆಯೇ ಹೆಚ್ಚು ನಂಟಿದೆ.
- ಪ.ಶ್ರೀ. ಅನಂತರಾಮ್
250 ಜನರ ಮಹಾಮನೆ!
ಇದು ಧಾರವಾಡ ತಾಲೂಕಿನ ಲೋಕೂರಿನ ಮಹಾಮನೆ! ಇಲ್ಲಿನ ನರಸಿಂಗನವರ ಮನೆತನ ಇಂದಿಗೂ 250 ಕುಟುಂಬ ಸದಸ್ಯರನ್ನೊಳಗೊಂಡ ಅವಿಭಕ್ತ ಕುಟುಂಬ. 1990ರಲ್ಲೇ ಈ ಕುಟುಂಬದ ಕುರಿತು 15 ನಿಮಿಷಗಳ ಸಾಕ್ಷ್ಯ ಚಿತ್ರ ಪ್ರಸಾರವಾಗಿತ್ತು!
90 ವರ್ಷದ ತಮ್ಮಣ್ಣ, 80 ವರ್ಷದ ಭೀಮಣ್ಣ ನರಸಿಂಗನವರ ಈ ಮನೆಯ ಹಿರೀತಲೆಗಳು. 1975ರಲ್ಲಿ ಈ ಬೃಹತ್ ಮನೆ ನಿರ್ಮಾಣವಾಯಿತು. ಇಡೀ ಕುಟುಂಬ ಕೃಷಿಯನ್ನೇ ನಂಬಿದ್ದು, 50 ಎಕರೆ ನೀರಾವರಿ ಸೇರಿದಂತೆ 270 ಎಕರೆ ಜಮೀನಿದೆ. 16ನೇ ಶತಮಾನದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ಜಿಲ್ಲೆಯ ಹತಕಲ್ ಅಂಗಡಾದಿಂದ ಕುಟುಂಬದ ಮೂಲಪುರುಷ ನರಸಿಂಗಪ್ಪ, ಲೋಕೂರಿಗೆ ಬಂದು ನೆಲೆಸಿದನೆಂಬುದು ಇವರು ಹೇಳುವ ಹಿಸ್ಟರಿ.
- ಬಸವರಾಜ ಹಿರೇಮಠ