ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಕಂಡಿದ್ದೀರಾ ಮೀನಿನ ಮಳೆ?

Rashmi Kasaragodu
Updated On : 8 Mar 2014, 2:17 am

IT RAINED CATS AND DOGS ಎಂದು ಇಂಗ್ಲಿಷಿನಲ್ಲಿ ಹೇಳುವ ಪರಿಪಾಠವಿದೆ. ಅಂದರೆ, 'ಬೆಕ್ಕು-ನಾಯಿಗಳ ಮಳೆ ಸುರಿಯಿತು'; ಮಳೆಯಲ್ಲಿ ನೀರಿನ ಹನಿಗಳ ಬದಲು ಬೆಕ್ಕು- ನಾಯಿಗಳು ಬಿದ್ದವು! ಆದರೆ, ಇದರ ನಿಜವಾದ ಅರ್ಥವೇ ಬೇರೆ. 'ಭಯಂಕರವಾದ ಮಳೆ ಸುರಿಯಿತು' ಎನ್ನುವ ಅರ್ಥದಲ್ಲಿ ಈ ಮಾತನ್ನು ಹೇಳಲಾಗುತ್ತದೆ. ಆದ್ದರಿಂದ 'ಇಟ್ ರೈನ್ಡ್ ಕ್ಯಾಟ್ಸ್ ಆ್ಯಂಡ್ ಡಾಗ್ಸ್‌'  ಎಂದಾಗ ಯಾರೂ ಅಚ್ಚರಿಪಡುವುದಿಲ್ಲ. ಅದು ಉತ್ಪ್ರೇಕ್ಷೆಯ ಮಾತು ಎಂಬುದು ಎಲ್ಲರಿಗೂ ಗೊತ್ತಾಗಿಬಿಟ್ಟಿದೆ. ಆದರೆ, 'ಮೀನು-ಕಪ್ಪೆ-ಏಡಿಗಳ ಮಳೆ ಸುರಿಯಿತು' ಎಂದು ಯಾರಾದರೂ ಹೇಳಿದ್ದನ್ನು ಕೇಳಿದ್ದೀರಾ?
ಭಾರೀ ಮಳೆ ಬಂದ ಮಾರನೇ ದಿನ ಹಳ್ಳಿಗಳ ಹೊರವಲಯಗಳಲ್ಲಿ ನೀರು ತುಂಬಿಕೊಂಡ ದೊಡ್ಡ ದೊಡ್ಡ ತಗ್ಗುಗಳಲ್ಲಿ ಹುಡುಗರು ಮೀನು ಹಿಡಿಯುವುದನ್ನು ಕಂಡಿರಬಹುದು. ಮಳೆಗೆ ಮುಂಚೆ ಆ ತಗ್ಗಿನಲ್ಲಿ ಹನಿಯೂ ನೀರಿರುವುದಿಲ್ಲ. ರಾತ್ರಿ ಪ್ರಚಂಡ ಮಳೆಯಾದ ಕೂಡಲೇ ಅಲ್ಲಿ ಮೀನುಗಳೂ ಆಗಿವೆ! ಕೆಲವು ಹೆಬ್ಬೆರಳುಗಳಷ್ಟು ದೊಡ್ಡ ಮೀನುಗಳಿರುತ್ತವೆ! ಅವು ಎಲ್ಲಿಂದ ಬಂದವು? ರಾತ್ರೋರಾತ್ರಿ ಸೃಷ್ಟಿಯಾದವೇ? ಇನ್ನೊಂದು ಸಂದರ್ಭದಲ್ಲಿ ರಾತ್ರಿ ಮಳೆ ಸುರಿಯುತ್ತಿರುತ್ತದೆ. ರಸ್ತೆಯಲ್ಲಿ ಸಣ್ಣ- ದೊಡ್ಡ ಏಡಿಗಳು ಅಡ್ಡಾದಿಡ್ಡಿಯಾಗಿ ಹರಿದಾಡುತ್ತಿರುತ್ತವೆ. ಅವು ಎಲ್ಲಿಂದ ಬಂದವು?
ಒಂದೊಂದು ಸಲ ಮಳೆಯಾದ ಮಾರನೇ ದಿನ ಬೆಳಗ್ಗೆ ನೀರು ತುಂಬಿಕೊಂಡ ತಗ್ಗುಗಳಲ್ಲಿ ದೊಡ್ಡ ದೊಡ್ಡ ಕಪ್ಪೆಗಳ ಸೇನೆಯಿಂದ 'ವಟರ್ ವಟರ್‌' ಸದ್ದು ಕಿವಿಗಡಚಿಕ್ಕುವಂತೆ ಕೇಳಿಬರುತ್ತದೆ. ಅವು ಎಲ್ಲಿಂದ ಬಂದವು? ಅವು ಕೂಡ ರಾತ್ರೋರಾತ್ರಿ ಸೃಷ್ಟಿಯಾಗಿರುತ್ತವೆಯೇ? ಈ ಮೇಲಿನ ಪ್ರಶ್ನೆಗಳನ್ನು ನಾವು ವಿಮರ್ಶಾತ್ಮಕವಾಗಿ ಆಲೋಚಿಸಿ ನೋಡೋಣ. 'ಅವು ಎಲ್ಲಿಂದ ಬಂದವು?' ಎಂದು ಊರಲ್ಲಿನ ಹಿರಿಯರಿಗೆ, ವಯಸ್ಸಾದವರಿಗೆ ಕೇಳಿದರೆ, 'ಅವು ಮಳೆಯಲ್ಲಿ ಬಿದ್ದಿವೆ' ಎನ್ನುತ್ತಾರೆ. 'ಅವು ಮಳೆಯಲ್ಲಿ ಬೀಳುವುದನ್ನು ಕಣ್ಣಾರೆ ಕಂಡಿದ್ದೀರಾ?' ಎಂದು ಕೇಳಿದರೆ 'ಇಲ್ಲ' ಎನ್ನುತ್ತಾರೆ. ಹಾಗಾದರೆ ಅವು ಮಳೆಯಲ್ಲಿ ಬಿದ್ದವೂ ಅಲ್ಲ ಎಂದು ನಾವು ತೀರ್ಮಾನಿಸಬಹುದೇ? ಹಾಗೇನಾದರೂ ತೀರ್ಮಾನಕ್ಕೆ ಬಂದರೆ ಅವು ರಾತ್ರೋರಾತ್ರಿ ಸೃಷ್ಟಿಯಾದುವೇ? ಎಂಬ ಪ್ರಶ್ನೆಗೆ ಏನೆಂದು ಉತ್ತರಿಸಬೇಕು. ಕಪ್ಪೆಗಳು, ಏಡಿಗಳು ಮಳೆಯಲ್ಲಿ ಬೀಳುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ, ಮೀನುಗಳು ಮಳೆಯಲ್ಲಿ ಬೀಳುತ್ತವೆ!ಕೆಲವರು ಕಂಡಂತೆ ಅದು ಮೀನಿನ ಮಳೆ!
1859 ಫೆಬ್ರವರಿ 9ರಂದು ವೇಲ್ಸ್‌ನಲ್ಲಿ ಗ್ಯಾಮರ್ಗಾನ್ ಪ್ರದೇಶದ 'ಆಷ್‌' ಎಂಬ ಪರ್ವತದ ಭಾಗದಲ್ಲಿ ಮರಮುಟ್ಟು ಕೆಲಸಗಾರ ಜಾನ್ ಲೆವಿಸ್ ಮತ್ತು ಆತನ ಸಂಗಡಿಗರು ಮಳೆಯಿಂದ ರಕ್ಷಣೆ ಪಡೆಯಲು ಶೆಡ್ಡಿನ ಕಡೆಗೆ ಓಡುತ್ತಿದ್ದಾಗ ಅವರ ಮೇಲೆ ಆಕಾಶದಿಂದ ಯಾವುದೋ ವಸ್ತುಗಳು ಜೋರಾಗಿ ಬೀಳುತ್ತಿರುವಂತೆ ತೋರಿತು. ಜಾನ್ ಲೆವಿಸ್ ತನ್ನ ಹ್ಯಾಟನ್ನು ತೆಗೆದಾಗ ಅದರಲ್ಲಿ ಮೀನುಗಳು ಕಂಡವು! ಶೆಡ್ಡಿನ ಮೇಲೆ ಮತ್ತು ಕೆಳಗೆ ಕೂಡ ಮೀನುಗಳ ರಾಶಿ ಕಂಡವು! ಒಡನೆಯೇ ಆತ ಸಂಗಡಿಗರೊಂದಿಗೆ ಬುಟ್ಟಿಗಳಲ್ಲಿ ಮೀನುಗಳನ್ನು ಹೆಕ್ಕಿ ಹೆಕ್ಕಿ ತುಂಬಿಕೊಂಡ. ಹತ್ತು ನಿಮಿಷಗಳ ನಂತರ ಮತ್ತೊಮ್ಮೆ ಜೀವಂತ ಮೀನುಗಳ ಮಳೆ ಸುರಿಯಿತು!
ಈ ಘಟನೆಯನ್ನು ಜೆರಿ ಬ್ರೌನ್ ತನ್ನ 'ದಿ ವರ್ಲ್ಡ್ಸ್ ಗ್ರೇಟೆಸ್ಟ್ ಮಿಸ್ಟರೀಸ್‌' ಪುಸ್ತಕದಲ್ಲಿ ವಿವರಿಸಿದ್ದಾನೆ. ಮರಮುಟ್ಟು ಕೆಲಸಗಾರ ಜಾನ್ ಲೆವಿಸ್ ತನ್ನ ಅನುಭವಗಳನ್ನು 'ವೇಲ್ಸ್‌' ಪತ್ರಿಕೆಗಳಲ್ಲಿ ಹೇಗೆ ವಿವರಿಸಿದ್ದ ಎಂಬುದನ್ನೂ ಲೇಖಕ ತಿಳಿಸಿದ್ದಾನೆ. 1861ರ ಫೆಬ್ರವರಿಯಲ್ಲಿ ಸಿಂಗಾಪುರದ ದ್ವೀಪದಲ್ಲಿ ಫ್ರೆಂಚ್ ನಿಸರ್ಗ ವಿಜ್ಞಾನಿ ಫ್ರ್ಯಾಂಕೊಯಿಸ್ ಕ್ಯಾಸಲ್‌ನಾವ್ ಎಂಬವರು ಮಲಯನ್ನರು ಮತ್ತು ಚೀನಿಗಳು ತಮ್ಮ ಬುಟ್ಟಿಗಳಲ್ಲಿ ಒಣ ಬಯಲಿನಲ್ಲಿ ಮೀನುಗಳನ್ನು ತುಂಬಿಕೊಳ್ಳುತ್ತಿದ್ದುದ್ದನ್ನು ಕಂಡಿದ್ದರು. ಅವು ಆಕಾಶದಿಂದ ಬಿದ್ದ ಮೀನುಗಳೆಂದು ಆ ಜನ ಆತನಿಗೆ ತಿಳಿಸಿದ್ದರು.
1830ರ ವರ್ಷಗಳಲ್ಲಿ ಫತೇಪೂರ್ ಮತ್ತು ಅಲಹಾಬಾದ್‌ಗಳಲ್ಲೂ, 1836ರಲ್ಲಿ ಜರ್ಮನಿಯ ಎಸ್ಸೆನ್ನಲ್ಲೂ ಮೀನುಗಳ ಮಳೆ ಸುರಿದಿತ್ತೆಂದು ಜೆರಿ ಬ್ರೌನ್ ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದಾನೆ. ಮೀನುಗಳನ್ನು ಸಮುದ್ರದಿಂದ ಮೋಡಗಳ ಕಡೆಗೆ ಯಾವ ಶಕ್ತಿ ಸೆಳೆಯುತ್ತದೆಂಬುದು ಇನ್ನೂ ನಿಗೂಢ ಸಂಗತಿ. ಇನ್ನು ಕಪ್ಪೆಗಳು, ಏಡಿಗಳು ಆಕಾಶದಿಂದ ಬೀಳುತ್ತವೆಯೆ? ಎಂಬ ಪ್ರಶ್ನೆಯಷ್ಟೇ ಅನುಮಾನಾಸ್ಪದ.



- -ವಿರೇಶ ಮಾಶೆಟ್ಟಿ ವಂದಾಲ
   veereshmashetti@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments