ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಕುಟುಂಬವೇ ನಮ್ಮ ಬಲ

ಜಗತ್ತಿನ ಬೇರಾವುದೇ ದೇಶಗಳಲ್ಲಿ ಇಂಥದ್ದೊಂದು ಕಲ್ಪನೆಯನ್ನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನಮ್ಮ ಬಲ ...

Rashmi Kasaragodu
Updated On : 8 Mar 2014, 2:11 am

ಜಗತ್ತಿನ ಬೇರಾವುದೇ ದೇಶಗಳಲ್ಲಿ ಇಂಥದ್ದೊಂದು ಕಲ್ಪನೆಯನ್ನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನಮ್ಮ ಬಲ ಎಂದಾದರೂ ಕರೆಯಿರಿ, ಹೆಗ್ಗಳಿಕೆ ಎಂದಾದರೂ ವ್ಯಾಖ್ಯಾನಿಸಿ, ವೈಶಿಷ್ಟ್ಯ, ಪರಂಪರೆ, ಸಂಸ್ಕೃತಿ, ಮನೋಭಾವ ಇನ್ನಾವುದೇ ಹೆಸರಿನಲ್ಲಿ ನಾವದನ್ನು ಕರೆದರೂ ಒಂದೇ ಸೂರಿನಡಿ ಸಮಸ್ತರೂ ಕೂಡಿ ಬಾಳುವ ಭಾರತೀಯರ ರೀತಿಯಿದೆಯಲ್ಲಾ, ಅದಕ್ಕದೇ ಸಾಟಿ ಬಿಡಿ. ಮೂವರು ಒಂದೇ ಸ್ಥಳದಲ್ಲಿದ್ದಾಗ ನಾಲ್ಕು ಅಭಿಪ್ರಾಯಗಳು ಹೊರಹೊಮ್ಮುವುದು ಸಹಜ ಎಂಬುದು ಅತ್ಯಂತ ಹಳೆಯ ಮಾತು. ಹಾಗಿರುವಾಗ ಐವತ್ತು, ಅರವತ್ತು, ನೂರು, ನೂರಕ್ಕೂ ಹೆಚ್ಚು ಮಂದಿ ಒಂದೇ ಕುಟುಂಬದಲ್ಲಿ ಒತ್ತೊಟ್ಟಿಗೆ ಎಲ್ಲ ಭಿನ್ನಾಭಿಪ್ರಾಯವನ್ನೂ ಮರೆತು ಒಗ್ಗಟ್ಟಿನಿಂದ ಬಾಳುವ `ಅವಿಭಕ್ತ ಕುಟುಂಬ'ದ ಪರಿಕಲ್ಪನೆಯಿದೆಯಲ್ಲಾ ಇದು ನಮ್ಮ ಹಿರಿಮೆ ಎನ್ನದೇ ಬೇರಿನ್ನೇನು ಹೇಳಲು ಸಾಧ್ಯ? ಇದು ಕೇವಲ ಪರಿಕಲ್ಪನೆಯಷ್ಟೇ ಅಲ್ಲ. ಈ ನೆಲದ ವಾಸ್ತವ, ಸತ್ಯ. ಇಲ್ಲಿನ ಕುಟುಂಬಗಳೆಂದರೆ ಕೇವಲ ಅಪ್ಪ-ಅಮ್ಮ ಅವರಿಗಿಬ್ಬರು ಮಕ್ಕಳು ಎಂದಷ್ಟೇ ಅಲ್ಲ. ಪುಟ್ಟ ಸಂಸಾರ ಸುಖದ ಸಾಗರ ಎಂಬ ಸ್ವಾರ್ಥ, ಸಣ್ಣತನ ನಮ್ಮನ್ನು ಎಂದಿಗೂ ಕಾಡಿಲ್ಲ. `ನಾವಿಬ್ಬರು ನಮಗಿಬ್ಬರೇ' ಎಂಬುದು ಸರಕಾರದ ಕುಟುಂಬ ಯೋಜನೆಯ ಘೋಷಣೆಯಾಗಿ ಜನಪ್ರಿಯವಾದಾಗಲೂ ಎಲ್ಲರ ಮಕ್ಕಳನ್ನೂ ನಮ್ಮವೇ ಎಂದುಕೊಂಡ ವಿಚಾರ ವೈಶಾಲ್ಯವನ್ನು ನಾವು ಮುಂದುವರಿಸಿಕೊಂಡೇ ಬಂದವರು. ಏಕೆಂದರೆ ನಮ್ಮ ಸಂಬಂಧದ ಪರಿಧಿ ಅತ್ಯಂತ ವಿಸ್ತಾರ. ಎಲ್ಲರನ್ನೂ ನಮ್ಮವರೇ ಎಂದು ಪ್ರೀತಿ, ಅಕ್ಕರೆಯ ಬಾಹುಗಳಲ್ಲಿ ಬಂಧಿಸಿಡುವ ತುಂಬು ಹೃದಯ, ಶ್ರೇಷ್ಠ ಮನಸ್ಸು ನಮ್ಮಗೆ ಜನ್ಮಜಾತ ಬಳುವಳಿ.
ಅತ್ಯಂತ ಬಲಶಾಲಿ ಭಾರತೀಯ ಮನಸ್ಸು ಬೆಳೆದು ಬಂದದ್ದೇ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ. ಈ ಕಾರಣಕ್ಕೇ ನಮ್ಮ ಸ್ವಾಭಿಮಾನವೂ ಅನ್ಯದೇಶೀಯರಿಗೆ ಆದರ್ಶವಾಗಿ ಕಂಡಿತ್ತು. ಸಾಮರಸ್ಯದ ಜತೆಜತೆಗೇ ವ್ಯಕ್ತಿಗತ ನೆಲೆಯ ಸ್ವಂತಿಕೆಯನ್ನು, ಸ್ವಾತಂತ್ರ್ಯವನ್ನೂ ಅದರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕಾದ್ದು ನಮ್ಮ ಕುಟುಂಬ ವ್ಯವಸ್ಥೆಯ ತುತರ್ು.
ಭಾರತೀಯತೆಯ ಹಿಂದಿನ ಮುಖ್ಯ ಬೇರುಗಳಿರುವುದೇ ಸಂಬಂಧಗಳ ನೆಲೆಯಲ್ಲಿ. ಅದು ಅಡಗಿರುವುದು ನಮ್ಮ ಸದೃಢ ಕುಟುಂಬ ವ್ಯವಸ್ಥೆಯಲ್ಲಿ. ಇಲ್ಲಿ ವ್ಯಕ್ತಿ ಯಾವತ್ತೂ ಮುಖ್ಯವಾಗುವುದೇ ಇಲ್ಲ. ಹಾಗೆಂದು ಅವನ ಹಿತಾಸಕ್ತಿಗೆ ಯಾವುದೇ ರೀತಿಯಿಂದಲೂ ಧಕ್ಕೆ ಬರುವುದಿಲ್ಲ. ನಮ್ಮದು ಕಟ್ಟುವ ಮನಸ್ಸು. ವ್ಯಕ್ತಿಗತ ತ್ಯಾಗ, ವೈಶಾಲ್ಯಗಳ ಆಧಾರದಲ್ಲಿ ಇಡೀ ಕುಟುಂಬವನ್ನು ಬಲಗೊಳಿಸುವುದು ನಮ್ಮ ಮನೊಭಾವ. ವಸಾಹತುಗಳ ಆಗಮನ ಇದರ ಮೂಲವನ್ನೇ ಕತ್ತರಿಸಲು ಪ್ರಯತ್ನಿಸಿತು. ಇಡೀ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ನಮ್ಮ ಸದೃಢ ಕುಟುಂಬ ವ್ಯವಸ್ಥೆ ಮಹತ್ವದ ಪಾತ್ರವನ್ನು ವಹಿಸಿತ್ತು ಎಂಬುದು ಸತ್ಯ. ಆ ಸಂದರ್ಭದಲ್ಲಿಯೂ ತನ್ನ ಸಿಕ್ಕು ಬಿಟ್ಟುಕೊಳ್ಳದ ನಮ್ಮತನ ಇದೀಗ ಜಾಗತೀಕರಣದ ದಾಳಿಗೆ ಸಿಲುಕಿ ಜಾಳುಜಾಳಾಗುತ್ತಿದೆ. ಸಂಬಂಧಗಳ ಗಾಢತೆಯ ನಡುವೆ ಶೀತಲಗಾಳಿ ಸುಳಿದಾಡತೊಡಗಿದೆ. ಗ್ರಾಮೀಣ, ದೇಸಿ ಸಂಸ್ಕೃತಿಯ ಮೇಲೆ ನಗರೀಕರಣ ಪ್ರಕ್ರಿಯೆ ಪ್ರಬಲವಾದ ಪ್ರಹಾರ ಮಾಡುತ್ತಿದೆ. ಮನುಷ್ಯ ಮತ್ತು ಸಮಾಜ ಬೇರೆ ಬೇರೆಯಾಗಿ ಕಾಣತೊಡಗಿದೆ. ಪ್ರಗತಿಯತ್ತ ಮುಖ ಮಾಡುವ ಭರದಲ್ಲಿ ನಮ್ಮ ಕೌಟುಂಬಿಕ ಸಾಮರಸ್ಯ ನಶಿಸಿಹೋಗುತ್ತಿದೆ. ಅನ್ಯ ದೇಶೀಯ ಸಂಸ್ಕೃತಿಯ ಆಗಮನಕ್ಕೆ ಸಹಜವಾಗಿಯೇ ನಾವು ಉತ್ಕಟವಾಗಿ ಪ್ರತಿಸ್ಪಂದಿಸುತ್ತಿದ್ದೇವೆ. ಇದು ಆಧುನಿಕ ಶಿಕ್ಷಣ ಕ್ರಮದಲ್ಲೂ ಧ್ವನಿಸಿದ ಪರಿಣಾಮ ಕುಟುಂಬ ಅದರೊಂದಿಗೆ ಸಮಾಜ ತನ್ನ ಚಾರಿತ್ರಿಕ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ. ನಾನು ನನ್ನದಷ್ಟೇ ಎಂಬ ಸ್ವಾರ್ಥಕ್ಕೆ ಬಿದ್ದು ಸಂಕುಚಿತವಾಗಿ ಯೋಚಿಸಲಾರಂಭಿಸಿದ್ದೇವೆ. ಪರಿಣಾಮ ವೃದ್ಧ ಪೋಷಕರು ನಮಗೆ ಭಾರವಾಗಿ, ನಮ್ಮ ಸ್ವಾತಂತ್ರ್ಯ, ಸ್ವೇಚ್ಛೆಗೆ ಅಡ್ಡಿಯಾಗಿ ಕಾಣತೊಡಗಿದ್ದಾರೆ. ಅಶಕ್ತರಿಗಾಗಿ ಸಾಮೂಹಿಕ ಸಂಸ್ಥೆಗಳು, ಅಬಲಾಶ್ರಮ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚತೊಡಗಿರುವುದು ಮಾತ್ರವಲ್ಲ, ಅವೂ ಕಾಪರ್ೊರೇಟ್ ಸ್ವರೂಪ ಪಡೆದುಕೊಳ್ಳುತ್ತಿವೆ.
ಅಂತರಂಗ ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದರೆ ಪ್ರತಿಫಲವಾಗಿ ಆರೋಗ್ಯಕರ, ಅವಿಭಕ್ತ ಕುಟುಂಬ ಎನ್ನುವುದು ಕಥೆಯಾಗಿ ತೋರುತ್ತಿದೆ. ಸುತ್ತಣ ಸಮಾಜದಲ್ಲಿ ಸಮುದಾಯದಲ್ಲಿ ಮನುಷ್ಯ ಸಂಬಂಧಗಳು ನಾಶವಾಗಿ, ಬದುಕಿನಲ್ಲಿ ಅಸ್ಥಿರತೆ ಇಣುಕುತ್ತಿದೆ. ಇದು ಸಮಾಜ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವ್ಯಕ್ತಿಯ ವೈಯಕ್ತಿಕ ಬದುಕಿನ ಆಥರ್ಿಕತೆಯ ಮೇಲೂ ಪ್ರಭಾವ ಬೀರಿದುದರಿಂದ ಗುಲಾಮಗಿರಿಯನ್ನು ಆತ ಅರಿವಿಲ್ಲದೇ ಒಪ್ಪಿಕೊಂಡು ಬಿಡುತ್ತಿದ್ದಾನೆ. ದುರದೃಷ್ಟವಶಾತ್ ಇಂದಿನ ಎಲ್ಲ ವ್ಯವಸ್ಥೆಯೂ ನಮ್ಮನ್ನು ಅತಿ ವಿಧೇಯರಾಗಿ, ಯಂತ್ರಜಡರಾಗಿ, ಮತಿಶೂನ್ಯರಾಗಿ ಪರಿವತರ್ಿಸುತ್ತಿದೆ. ಆಂತರಂಗಿಕವಾಗಿ ನಾವು ವಿಕಲಾಂಗರಾಗುತ್ತಿದ್ದೇವೆ. ಇದರಿಂದ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿವೆ. ಸಹಜವಾಗಿ ಅನಾಥ ಭಾವ ಕಾಡಲಾರಂಭಿಸಿ ಜೀವನ ಭದ್ರತೆಯೆಂಬುದು ಶಾಶ್ವತವಾಗಿ ಮರೆಯಾಗುತ್ತಿದೆ. ನಿಜಕ್ಕೂ ಇದು ಅತಂಕಕಾರಿ.
ಒಂದಂತೂ ಸತ್ಯ, ಇಂದಿಗೂ ನಮ್ಮ ಬಲ ಅಡಗಿರುವುದು ನಮ್ಮ ಕುಟುಂಬ ವ್ಯವಸ್ಥೆಯಲ್ಲಿಯೇ. ಸದೃಢ, ಸಶಕ್ತ ಅವಿಭಕ್ತ ಕುಟುಂಬವೇ ಎಲ್ಲ ದೃಷ್ಟಿಯಿಂದಲೂ ಈ ದೇಶದ ನೈಜ ಆಸ್ತಿ, ಸಂಪತ್ತು. ಅದನ್ನು ಉಳಿಸಿಕೊಳ್ಳಲಾಗದಿದ್ದಲ್ಲಿ ನಮ್ಮ ಯಾವ ಪ್ರಗತಿಗೂ ಅರ್ಥವೇ ಇಲ್ಲ. ವಿಸ್ಮೃತಿಗೆ ಸರಿದ ಹೋಗಿರುವ ಇಂಥ ಪ್ರಜ್ಞೆ, ವಿವೇಕ ಮತ್ತೆ ನಮ್ಮಲ್ಲಿ ಮೊಳೆಯಲಿ ಎಂಬ ಸದಾಶಯದೊಂದಿಗೆ ನಮ್ಮ ನಾಡಿನ ಅಪರೂಪದ ಮಾದರಿ ಅವಿಭಕ್ತ ಕುಟುಂಬಗಳಲ್ಲಿ ಕೆಲವನ್ನು ಈ ಸಂಚಿಕೆಯಲ್ಲಿ ಓದುಗರಿಗೆ ಹೆಮ್ಮೆಯಿಂದ ಪರಿಚಯಿಸುತ್ತಿದ್ದೇವೆ. ಇಂಥ ಕುಟುಂಬಗಳ ಸಂಖ್ಯೆ ಹೆಚ್ಚಲಿ, ಕುಟುಂಬಗಳ ಬಲ ವೃದ್ಧಿಸಲಿ ಎಂದು ಹಾರೈಸೋಣ.


- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement