ಜೈಲ್ ಹೋ
ಜೈಲಿಗೆ ಹೋದಾಗಿನಿಂದ ಅವನೊಬ್ಬ ಕೂಗುತ್ತಲೇ ಇದ್ದಾನೆ... 'ಹೆಂಡ್ತೀನ್ ನೋಡ್ಬೇಕು. ಪೆರೋಲ್ ಕೊಡಿ'; 'ಹೆಂಡ್ತೀನ್ ನೋಡ್ಕೋಬೇಕು...
ಜೈಲಿಗೆ ಹೋದಾಗಿನಿಂದ ಅವನೊಬ್ಬ ಕೂಗುತ್ತಲೇ ಇದ್ದಾನೆ... 'ಹೆಂಡ್ತೀನ್ ನೋಡ್ಬೇಕು. ಪೆರೋಲ್ ಕೊಡಿ'; 'ಹೆಂಡ್ತೀನ್ ನೋಡ್ಕೋಬೇಕು, ಪೆರೋಲ್ ವಿಸ್ತರಿಸಿ'!
ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸುವುದು ಬಿಟ್ಟು ಹೆಂಡತಿಯ ಸೆರಗಿನಲ್ಲಿ ಅಡಗಿ ಕೂರಲು ಪ್ರಯತ್ನಿಸುತ್ತಿರುವ ಆ ಹೆಸರು ನಿಮಗೂ ಗೊತ್ತಿರಬಹುದು. ನೀವವರ ಫ್ಯಾನೂ ಇರಬಹುದು. ಆದರೆ, ಮುಕ್ತವಾಗಿ ನೀವೂ ಹೇಳಲೇಬೇಕು... ಸಂಜಯ್‌ದತ್ ಮಾಡುತ್ತಿರುವುದು ಶುದ್ಧ ತಪ್ಪು. 'ಮುನ್ನಾಭಾಯಿ'ಯ ಇಂಥ ವರಾತಗಳಿಗೆ ಮಾತೃಪಕ್ಷ ಕಾಂಗ್ರೆಸೂ ಸೋತುಹೋಗಿದೆ, ಕೋರ್ಟಿಗೂ ದೊಡ್ಡ ಮುಜುಗರವೇ ಆಗುತ್ತಿದೆ. ಕಾಂಗ್ರೆಸ್ ಏನೋ ಅಧಿಕಾರ ಬಳಸಿ ಕಳೆದ ವರ್ಷ ಡಿಸೆಂಬರ್ 21ರಿಂದ ಫೆಬ್ರವರಿ 21ರವರೆಗೆ ಪೆರೋಲ್ ನೀಡಿ ಮನೆಗೆ ಕಳುಹಿಸಿತ್ತು. ಮತ್ತೆ ಪೆರೋಲ್ ಮೇಲೆ ಮಾರ್ಚ್ 21ರವರೆಗೆ ರಜೆ ವಿಸ್ತರಿಸಿಕೊಂಡಿದ್ದರು ದತ್. ಸುಪ್ರೀಂ ಕೋರ್ಟ್ ಇದನ್ನು ಬಲವಾಗಿ ಖಂಡಿಸಿದ ಮೇಲೆ ಕೇಂದ್ರ ಸರ್ಕಾರಕ್ಕೂ ತಲೆನೋವಾಗಿದೆ. 'ಮಹಾರಾಷ್ಟ್ರ ಸರ್ಕಾರಕ್ಕೆ ಸ್ಪಷ್ಟನೆ ಕೊಡಿ' ಎಂದಿದೆ. ಇನ್ನು ಅದೇನು ಪುಂಖಾನುಪುಂಖ ವರದಿ ಊದಲಿಕ್ಕಿದೆಯೋ ಗೊತ್ತಿಲ್ಲ.
ಸ್ಟಾರ್ ನಟರು ತಮ್ಮ ಸ್ಟಾರಿನ ಅಮಲಿನಲ್ಲಿ ಮಾಡಬಾರದ ತಪ್ಪು ಮಾಡುತ್ತಾರೆ. ಸ್ಟಾರ್‌ನ ಮೇಲೆ ತಪ್ಪಿಸಿಕೊಳ್ಳಲೂ ನೋಡುತ್ತಾರೆ. ಇಂಥ ದಶ 'ಖಳ'ನಾಯಕರ ದರುಶನ ನಿಮಗಾಗಿ!
ಸಂಜಯ್ ದತ್
1993ರ ಮುಂಬೈ ಸ್ಫೋಟದ ಸಂದರ್ಭ ಅಕ್ರಮ ಬಂದೂಕು ಹೊಂದಿದ ಅಪರಾಧದ ಹಿನ್ನೆಲೆಯಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾದವರು ಇವರು. ಇನ್ನೂ ಶಿಕ್ಷೆ ಪೂರ್ಣಗೊಂಡಿಲ್ಲ. ನಾಲ್ಕೂವರೆ ವರ್ಷ ಬಾಕಿ ಇದೆ. ಆದರೆ, ಸಂಜುಗೆ ಮಾತ್ರ ಜೈಲು ಒಂಥರಾ ನೆಂಟರ ಮನೆ ಇದ್ದ ಹಾಗೆ. ಆಗಾಗ್ಗೆ ಹೆಂಡ್ತಿ ನೋಡೋಕೆ ಓಡೋಡಿ ಬರ್ತಿದ್ದಾರೆ. ಅವರ ಉದ್ಧಟತನದ ಪ್ರದರ್ಶನಕ್ಕೆ ಈ ಸಾಲು ಸಾಲು ಪೆರೋಲ್‌ಗಳೇ ಸಾಕ್ಷಿ!
ಸಲ್ಮಾನ್ ಖಾನ್
'ಬ್ಯಾಡ್‌ಬಾಯ್' ಎಂದೇ ಪೋಸು ಕೊಡುವ ಸಲ್ಮಾನ್, ಅಪರಾಧಗಳೇ ಆಟ ಎಂದುಕೊಂಡಿರುವ ಆಸಾಮಿ. ತನ್ನನ್ನು ಅನುಕರಿಸುವವರು ಲಕ್ಷಾಂತರ ಮಂದಿ ಇದ್ದಾರೆ ಎಂಬುದನ್ನು ಮರೆತೂ ಸೊಕ್ಕಿನಿಂದ ವರ್ತಿಸುವುದೇ ಸ್ಟಾರ್‌ಗಿರಿ ಎಂದುಕೊಂಡಿರುವಾತ. 1998ರಲ್ಲಿ 'ಹಮ್ ಸಾತ್ ಸಾತ್ ಹೈನ್' ಚಿತ್ರೀಕರಣದ ಬಿಡುವಿನ ವೇಳೆ ಸಹ ನಟರೊಂದಿಗೆ ಜಬರ್‌ದಸ್ತಿನಲ್ಲಿ 2 ಕೃಷ್ಣಮೃಗಳನ್ನು ಬೇಟೆಯಾಡಿದ್ದ. ಅನಧಿಕೃತವಾಗಿ, ಅಳಿವಿನಂಚಿನಲ್ಲಿದ್ದ ಪ್ರಾಣಿಗಳನ್ನು ಕೊಂದು ಅಪರಾಧಿ ಎನಿಸಿಕೊಂಡ. 2002ರಲ್ಲಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ, ಒಬ್ಬನ ಬಲಿಪಡೆದುಕೊಂಡ. ಕೆಲವರನ್ನು ಗಾಯಗೊಳಿಸಿದ. ಈ ಕೇಸು ಈಗಲೂ ಈತನ ಮೇಲಿದೆ.
ಸೈಫ್ ಅಲಿ ಖಾನ್
ಜೋಧ್‌ಪುರದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಪ್ರಕರಣದ ಅಪರಾಧಿಗಳ ಸಾಲಲ್ಲಿ ಸೈಫ್ ಕೂಡ ಸೇರಿದ್ದರು. ದಿ ತಾಜ್‌ಮಹಲ್ ಹೋಟೆಲ್‌ನಲ್ಲಿ ಎನ್‌ಆರ್‌ಐ ಉದ್ಯಮಿಗೆ ಹೊಡೆದು ಅಪರಾಧವನ್ನೆಸಗಿದ್ದರು. ಈ ಪ್ರಕರಣ ಇನ್ನೂ ಬಗೆಹರಿದಿಲ್ಲ.
ಶಾರುಖ್ ಖಾನ್
ಬಾಡಿಗೆತಾಯಿ ಮೂಲಕ ಪಡೆದ ಮಗುವಿನ 'ಜನನ ಪೂರ್ವ ಲಿಂಗ ಪತ್ತೆ ಪ್ರಕರಣ', ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ್ದು... ಹೀಗೆ ಒಂದೇ ಎರಡೇ? ಕೋಲ್ಕತಾ ನೈಟ್ ರೈಡರ್ಸ್‌ನ ಒಡೆಯರಾದ ಮೇಲೆ ಮತ್ತಷ್ಟು ಕಿರಿಕ್ ಮಾಡಿಕೊಂಡರು. ಐಪಿಎಲ್ ಗೆದ್ದ ಸಂದರ್ಭದಲ್ಲಿ ಮಾಡಿದ ಹುಡುಗಾಟಕ್ಕೆ ವಾಂಖೇಡೆ ಸ್ಟೇಡಿಯಂನಿಂದ 5 ವರ್ಷ ನಿಷೇಧಕ್ಕೆ ಗುರಿಯಾದರು.
ಶೈನಿ ಅಹುಜಾ
2009ರಲ್ಲಿ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣ ನಡೆಸಿ ಬಾಲಿವುಡ್ಡನ್ನೇ ಬೆಚ್ಚಿಬೀಳಿಸಿದ ನಟನೀತ. ಯುವತಿಯ ಗುಪ್ತಾಂಗದ ಮೇಲೆ ಗಾಯದ ಗುರುತುಗಳಿರುವುದನ್ನು ವೈದ್ಯಕೀಯ ದಾಖಲೆಗಳೇ ಹೇಳಿದ್ದವು. ಆದರೂ ಬೇಲ್ ಮೇಲೆ ಶಿಕ್ಷೆಯಿಂದ ಪಾರಾದ. ಸದ್ಯ ಮುಂಬೈನಿಂದ ಈತನನ್ನು ಗಡಿಪಾರು ಮಾಡಲಾಗಿದೆ. ಯಾವುದೇ ಉದ್ಯೋಗವಿಲ್ಲದೆ ಅಬ್ಬೇಪಾರಿಯಾಗಿ ಎಲ್ಲೋ ಸುತ್ತುತ್ತಿರಬೇಕು!
ಜಾನ್ ಅಬ್ರಹಾಂ
ಬಾಲಿವುಡ್‌ನ 'ಹಾಟ್ ಬಾಯ್' ಜಾನ್ ಕೂಡ ಒಮ್ಮೆ ಶಿಕ್ಷೆಗೆ ಗುರಿಯಾಗಿದ್ದರು. 2006ರಲ್ಲಿ ರಸ್ತೆ ನಿಯಮವನ್ನು ಉಲ್ಲಂಘಿಸಿ ಕಾರು ಚಲಾಯಿಸಿ ಜೈಲು ಸೇರಿದ್ದರು. ಆದರೆ, ತಕ್ಷಣ ಜಾಮೀನು ಮೇಲೆ ಹೊರಬಂದರು.
ಮಧುರ್ ಭಂಡಾರ್ಕರ್
ಪ್ರೀತಿ ಜೈನ್ ಎಂಬ ನಟಿಯನ್ನು ತನ್ನ 'ಬಿಕಾವೋ ಆನ್ ಸಾಲೆ' ಚಿತ್ರದ ನಾಯಕಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದರು ಮಧುರ್ ಭಂಡಾರ್ಕರ್. ಪ್ರೀತಿ ಜೈನ್ ಆರೋಪಿಸಿರುವಂತೆ 16 ಬಾರಿ ಅತ್ಯಾಚಾರ ಎಸಗಿದ್ದ ಎಂದು ಪ್ರಕರಣ ದಾಖಲಾಗಿತ್ತು. ಸುಮಾರು 9 ವರ್ಷ ಕೋರ್ಟ್‌ನಲ್ಲಿ ಪ್ರಕರಣ ಕೊಳೆಯಿತು. ಕೊನೆಗೆ ಪ್ರಕರಣವನ್ನು ವಜಾಗೊಳಿಸಿತು.
ಟಬು, ನೀಲಂ, ಸೊನಾಲಿ ಬೇಂದ್ರೆ
ಕೃಷ್ಣ ಮೃಗ ಬೇಟೆಯಾಡಲು ಸಲ್ಮಾನ್ ಜೊತೆ ಹೋಗಿ ಸಿಕ್ಕಿಬಿದ್ದವರು ಇವರು. 9/51, 9/52 ಮತ್ತು ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್‌ನಡಿಯಲ್ಲಿ ಇವರ ಮೇಲೆ ಕೇಸು ಜಡಿಯಲಾಯಿತು.
ಗೋವಿಂದ
'ಮನಿ ಹೈ ತೋ ಹನಿ ಹೈ' ಸಿನಿಮಾ ಚಿತ್ರೀಕರಣ ವೇಳೆ ವೀಕ್ಷಕನೊಬ್ಬ ನಟಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಇವರು ಕಪಾಳಮೋಕ್ಷ ಮಾಡಿದ್ದರು. ಸಂತೋಷ್ ರೈ ಹೆಸರಿನ ಆತ ಇವರ ಮೇಲೆ ಕೇಸು ದಾಖಲಿಸಿದ್ದ. ಐಪಿಸಿ ಸೆಕ್ಷನ್ 323, 352, 506ರ ಅಡಿಯಲ್ಲಿ ಇವರು ಪ್ರಕರಣ ಎದುರಿಸಿದರು.
ಮೋನಿಕಾ ಬೇಡಿ
ಭೂಗತ ಜಗತ್ತಿನ ಪಾತಕಿ ಅಬು ಸಲೇಂ ಜೊತೆ ಸಂಬಂಧ ಇಟ್ಟುಕೊಂಡಿದ್ದ ಈ 'ಸ್ಪೈಸಿ ನಟಿ'ಗೆ ಈಗಲೂ ಬಾಲಿವುಡ್ ನಿರ್ದೇಶಕರು ಇವಳಿಗೆ ಸ್ವಾಗತಿಸಲು ಸಿದ್ಧರಿಲ್ಲ. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಬು ಸಲೇಂ ಸಿಕ್ಕಿಬಿದ್ದಿದ್ದ. ಈ ಟೈಮಿನಲ್ಲಿ ಪೋರ್ಚುಗಲ್‌ಗೆ ಅನಧಿಕೃತ ದಾಖಲೆಗಳೊಂದಿಗೆ ಎಸ್ಕೇಪ್ ಆಗುವಾಗ ಸಲೇಂ ಜೊತೆ ಇವಳೂ ಸಿಕ್ಕಿಬಿದ್ದದ್ದಳು. ಸಲೇಂ ಈಗಲೂ ಜೈಲಿನಲ್ಲಿದ್ದಾನೆ. ಮೋನಿಕಾ ಎಲ್ಲ ಪ್ರಕರಣಗಳಿಂದ ಮುಕ್ತಳಾಗಿದ್ದಾಳೆ.
- ಮಂಜುನಾಥ ಎಲ್.ಕೆ.
mhk963@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.