ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ನಾವೂ ಬುದ್ಧಿವಂತ್ರು ಸಾರ್ !

'ಅಬ್ಬಾ! ಎಷ್ಟು ಬುದ್ಧಿವಂತಿಕೆ ಇದೆ ಇದಕ್ಕೆ. ಪ್ರತಿಸಲ ಎಷ್ಟೇ ಪ್ರಯತ್ನಿಸಿದರೂ ನನಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತದೆ. ಆದರೆ, ನನಗೆ...

Rashmi Kasaragodu
Updated On : 8 Mar 2014, 2:19 am

ಖ್ಯಾತ ಬೇಟೆಗಾರ, ಕಾದಂಬರಿಕಾರ ಜಿಮ್ ಕಾರ್ಬೆಟ್ ಚಿರತೆಗಳಿಗಷ್ಟೇ ಚಾಣಾಕ್ಷತನದ ಪಟ್ಟ ಕಟ್ಟಿ ಹೋದರು. ಆದರೆ, ಅಂಥ ಬುದ್ಧಿಶಕ್ತಿ ಇತರೆ ಪ್ರಾಣಿಗಳಲ್ಲೂ ಇದೆ...

'ಅಬ್ಬಾ! ಎಷ್ಟು ಬುದ್ಧಿವಂತಿಕೆ ಇದೆ ಇದಕ್ಕೆ. ಪ್ರತಿಸಲ ಎಷ್ಟೇ ಪ್ರಯತ್ನಿಸಿದರೂ ನನಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತದೆ. ಆದರೆ, ನನಗೆ ನಂಬಿಕೆ ಇದೆ. ಒಂದು ದಿನ ನಾನು ಹಿಡಿದೇ ಹಿಡಿಯುತ್ತೇನೆ' ಅಂತ ಹೇಳಿದವರು ಯಾರು ಗೊತ್ತೇ?
ಖ್ಯಾತ ಬೇಟೆಗಾರ, ಕಾದಂಬರಿಕಾರ ಜಿಮ್ ಕಾರ್ಬೆಟ್ ಅಲ್ಲದೆ ಇನ್ನ್ಯಾರು ಇರಲಿಕ್ಕೆ ಸಾಧ್ಯ? ಅಷ್ಟಕ್ಕೂ ಯಾರ ಬಗ್ಗೆ ಅಂಥ ಹೇಳಿಕೆ ನೀಡಿದ್ದು ಅಂತ ನಿಮಗೆ ಗೊತ್ತಾ? ಸುಮಾರು ಎಂಟು ವರ್ಷಗಳ ಅಂತರದಲ್ಲಿ ರುದ್ರಪ್ರಯಾಗದ ಐದು ನೂರು ಮೈಲಿ ಪ್ರದೇಶದಲ್ಲಿ ನೂರಾರು ಜನರ ಕಗ್ಗೊಲೆ ನಡೆಸಿ, ಯಾವ ಬೇಟೆಗಾರನ ಕೋವಿಗೂ ಬಲಿಯಾಗದೆ ತನ್ನ ಶಿಕಾರಿಯನ್ನು ನಿರ್ಭಯವಾಗಿ ಬೇಟೆಯಾಡುತ್ತ ಚಾಣಾಕ್ಷತನ ತೋರಿದ ಚಿರತೆಯ ಬಗ್ಗೆ.
ನಾಳೆ ಎಂಬುದು ಎಲ್ಲರಿಗೂ ಇರುತ್ತದೆ. ಆದರೆ, ನಾಳೆ ಎಂಬ ಭವಿಷ್ಯದ ದರ್ಶನವೇ ಅನುಮಾನವಾಗಿರುವ ಸಂದರ್ಭದಲ್ಲಿ ಜೀವದ ಹಂಗು ತೊರೆದು ಆ ಜಾಣ ಚಿರತೆಯನ್ನು ಕಟ್ಟಕಡೆಗೆ ಮಟ್ಟಹಾಕುವ ಜಿಮ್ ಕಾರ್ಬೆಟ್ ಅವರ ಸಾಹಸ ಹಾಗೂ ಪ್ರತಿತಂತ್ರವನ್ನು ವಿಫಲಗೊಳಿಸುವ ಚಾಣಾಕ್ಷ ನರಭಕ್ಷಕದ ಅಪರಿಮಿತ ಬುದ್ಧಿ 'ರುದ್ರಪ್ರಯಾಗದ ನರಭಕ್ಷಕ' ಕೃತಿಯನ್ನು ಓದಿದವರಿಗಷ್ಟೇ ತಿಳಿಯುತ್ತದೆ.
ಬುದ್ಧಿಶಕ್ತಿ ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ. ಅದು ಪ್ರಾಣಿ ಪಕ್ಷಿಗಳಿಗೂ ಇದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮನ್ನೇ ಬೆರಗುಗೊಳಿಸುವಂಥ ಸನ್ನಿವೇಶಗಳನ್ನು ಒಮ್ಮೆ ನೋಡೋಣ ಬನ್ನಿ...

ಕ್ರಿಮಿನಲ್ ಇಲಿ
ವಿದ್ಯಾದೇವತೆ ಗಣೇಶನ ವಾಹನ ಹೀಗೆ ಬೀಗುತ್ತದೆ; 'ನನ್ನೊಡೆಯ ನನಗೂ ಬುದ್ಧಿ ಕೊಟ್ಟಿದ್ದಾನೆ'. ಅದರ ವಿಶಿಷ್ಟ ಐಡಿಯಾಗಳನ್ನು ನೀವೂ ಕಣ್ಣಾರೆ ಕಂಡಿರುತ್ತೀರಿ. ಟಾಮ್ ಆ್ಯಂಡ್ ಜೆರ್ರಿ ನೋಡಿದವರಿಗೆ ಸ್ಮಾರ್ಟ್ ಜೆರ್ರಿ ತನ್ನ ಬುದ್ಧಿವಂತಿಕೆಯಿಂದ ಟಾಮ್‌ಗೆ ಹೇಗೆ ಚಳ್ಳೆಹಣ್ಣು ತಿನಿಸುತ್ತದೆ ಎಂಬುದು ಗೊತ್ತೇ ಇರುತ್ತದೆ. ವಿಜ್ಞಾನವೂ ಒಪ್ಪುತ್ತದೆ, ಇಲಿಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳು ಅಂತ. ಬೇರೆ ಇಲಿಗಳು ಅಪಾಯದಲ್ಲಿ ಸಿಲುಕಿದರೆ ಅವುಗಳನ್ನು ಬಿಡಿಸುವ ಯತ್ನ ಮಾಡುತ್ತವೆ. ಇದಲ್ಲದೆ ಸುಲಭದ ಮಾರ್ಗವನ್ನು (ಶಾರ್ಟ್‌ಕಟ್), ತಪ್ಪುಗಳನ್ನು ಹುಡುಕುವ ಬುದ್ಧಿ ಇಲಿಗಳಿಗಿವೆ.
'ತಂತ್ರಜ್ಞಾನಿ' ಕಾಗೆ
ಬಾಲ್ಯದಲ್ಲಿ ನೀವೆಲ್ಲರೂ ಬಾಯಾರಿದ ಕಾಗೆಯ ಕಥೆಯನ್ನು ಕೇಳಿರುತ್ತಿರ. ಕಾಗೆ ತನ್ನ ಕೊಕ್ಕನ್ನು ಸಾಧನವನ್ನಾಗಿ ಬಳಸುವ ಕುಶಲತೆಯನ್ನು ಮೈಗೂಡಿಸಿಕೊಂಡಿದೆ. ಬಹಳ ಸಲ ಮಾನವನೇ ಕಾಗೆಯ ಈ ತಂತ್ರವನ್ನು ಕಾಪಿ ಮಾಡುತ್ತಾನೆ.

ಹಂದಿಗಳು ತುಂಬಾ ಕ್ಲೀನು
ಗಲೀಜು ಅಂತ ಹೇಳಿದರೆ ಮೊದಲು ನೆನಪಿಗೆ ಬರುವ ಪ್ರಾಣಿ ಹಂದಿನೇ. ಆದರೆ, ನಿಮ್ಮ ಊಹೆ ತಪ್ಪು. ಹಂದಿಗಳು ಸದಾ ಸ್ವಚ್ಛತೆಗೆ ಆದ್ಯತೆ ಕೊಡುತ್ತವೆ. ಹಂದಿಗಳಲ್ಲಿ ಬೆವರು ಗ್ರಂಥಿಗಳು ಇಲ್ಲದಿರುವುದರಿಂದ ಅವು ತಮ್ಮ ದೇಹವನ್ನು ತಂಪಾಗಿಡಲು ಬಯಸುತ್ತವೆ. ಈ ಕಾರಣ ತೇವಾಂಶವಿರುವ ಮಣ್ಣಿನಲ್ಲಿ ಹೊರಳಾಡುತ್ತವಷ್ಟೇ. ನೀವು ಅಪ್ಪಿ, ಪಪ್ಪಿ ಕೊಡುವ ನಾಯಿ- ಬೆಕ್ಕುಗಳಿಗಿಂತ ಹಂದಿ ಅತ್ಯಂತ ಶುಚಿಯಾದ ಪ್ರಾಣಿ.
ಬೆರಗಿನ ಬೆಕ್ಕು
ಬುದ್ಧಿವಂತಿಕೆ ಅನ್ನೋದು ಇಲಿಗೆ ಮಾತ್ರವಲ್ಲ, ಬೆಕ್ಕಿಗೂ ಇದೆ. ಬೆಕ್ಕು ಕೇವಲ ಅನುಕರಣೆ ಮತ್ತು ನೋಟದಿಂದ ಎಲ್ಲವನ್ನೂ ಕಲಿಯುವಷ್ಟು ಜಾಣ. ಆದರೆ, ನಾಯಿಯಷ್ಟು ಟಾಲೆಂಟ್ ಇದಕ್ಕಿಲ್ಲ. ನೀವು ನಾಯಿ ಮತ್ತು ಬೆಕ್ಕಿಗೆ ಒಂದೇ ಸಮಯದಲ್ಲಿ ಒಟ್ಟಿಗೆ ತರಬೇತಿ ಕೊಟ್ಟರೆ ನಾಯಿ ಬೇಗ ಕಲಿಯುತ್ತದೆ. ಬೆಕ್ಕಿನ ಗ್ರಹಿಕೆ ಸ್ವಲ್ಪ ಸ್ಲೋ.

ಅಳಿಲಿನ ಅಡಗುತಾಣ
ಅಳಿಲುಗಳು ತಮ್ಮ ಆಹಾರವನ್ನು ಸಂರಕ್ಷಿಸುವ ವಿಧಾನದಲ್ಲಿ ಬುದ್ಧಿವಂತಿಕೆ ಮೆರೆಯುತ್ತವೆ. ಅದು ತನ್ನ ಆಹಾರವನ್ನು ಒಂದೇ ಜಾಗದಲ್ಲಿ ಬಚ್ಚಿಡುವುದಿಲ್ಲ. ಅಳಿಲಿನ ಆಹಾರ ಎಲ್ಲಿದೆ ಎಂದು ಬೆನ್ನುಹತ್ತುವ ಅನೇಕ ಜೀವಿತಜ್ಞರಿಗೆ ಅದರ ಆಹಾರ ಸಿಕ್ಕೇ ಇಲ್ಲ.

ಇರುವೆಗಳ ಮುನ್ಸೂಚನೆ
ಇವುಗಳಿಗೆ ಅಪಾಯದ ಮುನ್ಸೂಚನೆ ಬೇಗನೆ ಸಿಗುತ್ತದೆ. ಆ ಕೂಡಲೇ ಅವು ಸಂಗ್ರಹಿಸಿದ ಆಹಾರವನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸುತ್ತವೆ. ಆಹಾರವನ್ನು ಸಂಸ್ಕರಿಸಿ, ಕೆಡದಂತೆ ಇಡುವುದರಲ್ಲೂ ಇವು ಎಕ್ಸ್‌ಪರ್ಟ್. ಅವಕ್ಕೇನು ಫ್ರಿಡ್ಜು, ಹಾಟ್‌ಬಾಕ್ಸ್‌ಗಳ ಪರಿಚಯವಿಲ್ಲ.

ಸಂಖ್ಯಾಶಾಸ್ತ್ರ ಪಂಡಿತ ಚಿಂಪಾಂಜಿ

ಮನುಷ್ಯನಿಗೂ ಚಿಂಪಾಂಜಿಗಳ ಜೀನ್‌ಗಳಲ್ಲಿನ ವ್ಯತ್ಯಾಸ ಕೇವಲ '1 ಪರ್ಸೆಂಟ್‌' ಎಂದು ನಿಮಗೆ ತಿಳಿದೇ ಇದೆ. ಮಾನವ ಮಾಡುವ ಎಲ್ಲ ಕೆಲಸಗಳನ್ನೂ ಚಿಂಪಾಂಜಿಗಳು ಮಾಡುತ್ತವೆ. ಕೈಗೆ ಸಿಕ್ಕ ವಸ್ತುಗಳಿಂದ ಕಲಾಕೃತಿ ನಿರ್ಮಿಸುತ್ತವೆ ಇವು. ಸಂಜ್ಞೆಗಳ ಮೂಲಕ ಸಂಭಾಷಿಸಿಕೊಳ್ಳುವ ಟಾಲೆಂಟೂ ಇವಕ್ಕಿದೆ. ಅತ್ಯಂತ ಕ್ಲಿಷ್ಟ ಸಮಸ್ಯೆಯನ್ನೂ ಇವು ಬಿಡಿಸುತ್ತವೆ. ಸಂಖ್ಯಾಶಾಸ್ತ್ರದ ಪರೀಕ್ಷೆಯಲ್ಲಿ ಮಾನವನನ್ನು ಚಿಂಪಾಂಜಿ ಸೋಲಿಸಿದ ನಿದರ್ಶನವಿದೆ.

ಆಪತ್ಬಾಂಧವ ಡಾಲ್ಫಿನ್
ಡಾಲ್ಫಿನ್‌ಗಳು ತಮ್ಮದೇ ಭಾಷೆಗಳಲ್ಲಿ ಮಾತಾಡಿಕೊಳ್ಳುತ್ತವೆ. ಸಮುದ್ರದಲ್ಲಿ ನಾವೆಗಳು ಸಾಗುವ ದಾರಿಯಲ್ಲಿ ಅಪಾಯವಿದ್ದರೆ, ನಾವಿಕರಿಗೆ ಅದನ್ನು ತಮ್ಮದೇ ಭಾಷೆ ಮೂಲಕ ವ್ಯಕ್ತಪಡಿಸುತ್ತವೆ.


ಅನೆಗಳ ಬುದ್ಧಿವಂತಿಕೆ
ಈ ಪ್ರಾಣಿಗೆ ದೊಡ್ಡ ಗಾತ್ರದ ಮೆದುಳಿದೆ. ಅದಲ್ಲದೆ ನಮ್ಮ 'ವಿದ್ಯಾಧಿಪತಿ' ಗಣೇಶನಿಗೆ ನಮ್ಮ ಪುರಾಣವು ತೊಡಿಸಿದ್ದು ಆನೆಯ ಮುಖವನ್ನೇ. ಶಕ್ತಿ, ಬುದ್ಧಿವಂತಿಕೆಗೆ ಹೆಸರಾಗಿದ್ದರಿಂದಲೇ ಇದನ್ನು ಯುದ್ಧಗಳಲ್ಲಿ ಬಳಸುತ್ತಿದ್ದರು. ಶಿವಮೊಗ್ಗದ ಸಕ್ರೇಬೈಲು ಅನೆ ಬಿಡಾರಕ್ಕೆ ಹೋದರೆ, ನಿಮಗೆ ಇವುಗಳ ಬುದ್ಧಿವಂತಿಕೆ ಅರ್ಥವಾಗುತ್ತದೆ. ಇವು ನಮಗಿಂತಲೂ ತುಂಬಾ ಕ್ಲೀನು. ಆಹಾರವನ್ನು ತಿನ್ನುವ ಮೊದಲು ಶುದ್ಧಪಡಿಸುತ್ತವೆ. ಇದಲ್ಲದೆ, ಉಪಕರಣಗಳನ್ನು ಬಳಸುವ ಕಲೆಯೂ ಆನೆಗೆ ಗೊತ್ತು.

ಪಾರಿವಾಳದ ಬ್ರೈನ್‌ಪವರ್



ಹಿಂದೆ ರಾಜಮಹಾರಾಜರ ಕಾಲದಲ್ಲಿ ಪಾರಿವಾಳಗಳನ್ನು ಸಂದೇಶ ಪತ್ರ ರವಾನಿಸಲು ಬಳಸುತ್ತಿದ್ದರು. 1989ರಲ್ಲಿ ಬಿಡುಗಡೆಯಾದ ಸಲ್ಮಾನ್‌ಖಾನ್ ಮತ್ತು ಭಾಗ್ಯಶ್ರೀ ನಟಿಸಿದ 'ಮೈನೆ ಪ್ಯಾರ್ ಕಿಯಾ'ದಲ್ಲೂ ಇವು ಪೋಸ್ಟ್‌ಮ್ಯಾನ್ ಪಾತ್ರವನ್ನು ನಿರ್ವಹಿಸಿದವು. ಪಾರಿವಾಳಗಳಿಗೆ ನೂರಾರು ವರ್ಷಗಳ ಹಳೇ ಚಿತ್ರಗಳನ್ನೂ ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಇದೆ. ಅವು ಒಮ್ಮೆ ಸಾಗಿದ ಆಕಾಶಮಾರ್ಗವನ್ನು ಎಂದಿಗೂ ಮರೆಯುವುದಿಲ್ಲ.  ಇಂಗ್ಲೆಂಡಿನಲ್ಲಿ ಒಬ್ಬ ಹುಡುಗ ಪಾರಿವಾಳವನ್ನು ಬಹಳ ಮುದ್ದಿಸುತ್ತಿದ್ದ. ಒಮ್ಮೆ ಆತನಿಗೆ ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದ. ತಾನು ದಾಖಲಾದ ಕೊಠಡಿಯ ಕಿಟಕಿಯ ಗಾಜನ್ನು ಯಾರೋ ಕುಕ್ಕುವ ಸದ್ದು ಅವನಿಗೆ ಕೇಳಿಸಿತು. ಕಿಟಕಿ ತೆರೆದಾಗ ಕಂಡದ್ದು ತಾನು ಮುದ್ದಿಸುತ್ತಿದ್ದ ಪಾರಿವಾಳ!

- ಮಧುಚಂದ್ರ
madhu.hb@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments