ನೋಬೆಲ್ ಕೈ ತಪ್ಪಿದ ಕ್ಷಣ
ವಿಜ್ಞಾನಿಗಳ ಫೋಟೋ, ನಾವಿಕರ ಅನ್ವೇಷಣಾ ಸಾಹಸಗಳನ್ನು ಕಂಡು, ಗಣಿತಜ್ಞರ ಪ್ರಮೇಯ- ಸೂತ್ರಗಳನ್ನು ಲೆಕ್ಕಕ್ಕೆ...
ವಿಜ್ಞಾನಿಗಳ ಫೋಟೋ, ನಾವಿಕರ ಅನ್ವೇಷಣಾ ಸಾಹಸಗಳನ್ನು ಕಂಡು, ಗಣಿತಜ್ಞರ ಪ್ರಮೇಯ- ಸೂತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಂಡ ನನಗೆ ಏನನ್ನಾದರೂ ಶೋಧಿಸಬೇಕೆಂಬ ಹಠ ಉಕ್ಕಿತು. ಆಕಾಶ ನೋಡಿದೆ, ಭೂಮಿ ಅಗೆದು ಇಣುಕಿದೆ, ಬೊಗಸೆ ನೀರಿಗೆ ಸೂಕ್ಷ್ಮದರ್ಶಕ ಹಿಡಿದೆ... ಹೊಸದೇನೂ ಕಾಣಲಿಲ್ಲ. ಆಗ ಎದುರು ಕಂಡಿದ್ದು ಅವಳ ಮುಖ. ಆ ಕ್ಷಣಕ್ಕೆ ನನ್ನ ಶೋಧನೆ ಇದೇ ಎಂಬ ಹರಕು- ಮುರುಕು ಅರ್ಥವಾಗದ ಯಾವುದೋ ಒಂದು ಭಾವನೆ ಹೇಳಿತು. ಆ ಮೊಗದಲ್ಲಿ ಏನಿರಬಹುದು ಎಂಬ ಪ್ರಶ್ನೆ ಎದ್ದರೂ, ಕೂಡಲೇ ಉತ್ತರ ಗೊತ್ತಾಗಲಿಲ್ಲ.
ಕೊಂಚ ಕಣ್ಣು ಸಡಿಲಿಸಿದರೆ ಎಲ್ಲಿ ಮುಖ ಮರೆಯಾಗಿ ಬಿಡುತ್ತದೆ ಎಂಬ ಸಣ್ಣ ದುಗುಡವಿದ್ದರೂ, ಒಳಗಿಂದೊಳಗೆ ಎಂದೂ ಮರೆಯದ ಧೈರ್ಯ ಹಿಮ್ಮೆಟ್ಟಿ ಬರುತ್ತಿತ್ತು. 'ನಾನು ನೋಡುತ್ತಿದ್ದೇನೆ, ನೋಡಬೇಕು' ಎಂಬ ದೃಢವಾದ ನಿಶ್ಚಯ ನಿಟಾರನೆ ನಿಂತಾಗಲೇ ಹಠಾತ್ತಾಗಿ ನನಗರಿವಿಲ್ಲದೆ ಕೇಳಿದ ಮಾತು ಸೂಕ್ಷ್ಮವಾಗಿತ್ತು; 'ಅದೇನಿದೇರಿ ನಿಮ್ಮುಖದಲ್ಲಿ?'.
ಕೇಳಿಸಿಕೊಂಡ ಅವಳು ಯಾವ ಉತ್ತರ ನೀಡಬೇಕೋ ತಿಳಿಯದೆ, ತಬ್ಬಿಬ್ಬಾಗಿ ನಿಲ್ಲದೆ ಮುಂದೆ ಹೋಗಿಯೇಬಿಟ್ಟಳು. 'ನಿಂತ್ಕಳಿ' ಅಂದೆ. ಏನೂ ಹೇಳದೆ, ಹಾಗೆ ಹಿಂದಿರುಗಿ ನೋಡಿದ ಆ ರೀತಿಗೆ ಇನ್ನೆಂದೂ ಇವಳ ಸಹವಾಸಕ್ಕೇ ಹೋಗುವುದು ಬೇಡ ಅಂತನ್ನಿಸಿತು. 'ಏನ್ರೀ, ನಾನ್ಯಾಕೆ ನಿಂತ್ಕೋಬೇಕು?' ಎಂಬ ಅವಳ ಮಾತಿಗೆ ನಾನು ನಿಂತಲ್ಲೇ ಕಂಪಿಸಿದೆ. ನನ್ನ ಆಲೋಚನೆಗಳು ಆಗ ಶೋಧನೆಯ ಜಾಡು ಹಿಡಿದವು.ಇದಕ್ಕೂ ಮುಂಚೆ ಅವಳದ್ದೇ ಮುಖದಲ್ಲಿ ಮುಗ್ಧ ಭಾವ ಎದ್ದು ಕಂಡಿತ್ತು. ಈಗ ಅದೇ ಮುಖದಲ್ಲಿ ಕೋಪದ ಸಿಡಿಲು ಟಿಸಿಲೊಡೆಯುತ್ತಿದೆ. ಮುಖದಲ್ಲೇ ಯಾಕೆ ಆ ರೀತಿಯ ಸೌಂದರ್ಯ ಅಡಗಿರುತ್ತದೆ? ಅದೇ ಸೌಂದರ್ಯ ಯಾಕೆ ತನ್ನ ರೂಪ ಬದಲಿಸುತ್ತದೆ? ಗೊತ್ತಾಗಲಿಲ್ಲ. ಆದರೆ, ಆಕೆಯ ರೂಪದಲ್ಲಂತೂ ಈ ಸಂಗತಿಗಳು ಪ್ರಕಟಗೊಳ್ಳುತ್ತಿದ್ದವು...
ಮನಸ್ಸಿನ ಆಳವನ್ನು ಇಣುಕಿ ತೋರಿಸುವ ಆ ಕಣ್ಣುಗಳು ಮುಂದಿರುವ ಸಾಧನೆಯ ಬಗ್ಗೆ ಎಚ್ಚೆತ್ತುಕೊಳ್ಳಲು ಪ್ರಚೋದಿಸುತ್ತಿತ್ತು, ಕಣ್ಣಿನ ರೆಪ್ಪೆಗಳು ನೀನು ನಿಶ್ಚಿಂತೆಯಿಂದ ನಿನ್ನ ಸಾಧನೆಯ ಹಾದಿಯಲ್ಲಿ ಮುನ್ನಡೆ, ಅದಕ್ಕೆ ನಾನು ನಿನ್ನ ಬೆಂಗಾವಲಿನಂತಿರುವೆ ಎನ್ನುತ್ತಿತ್ತು; ಸಾಧನೆಗೆ ಬೇಕಿರುವುದು ಒಂದೇ ದಾರಿ. ಆದರೆ, ಮುನ್ನಡೆಯುವಾಗ ಹಲವು ದಾರಿಗಳು ಅಡ್ಡಬಂದರೂ ತಿಳಿದು ಮುಂದೆ ನಡೆ ಎಂದು ಹೇಳುತ್ತಿದ್ದವು ಹುಬ್ಬುಗಳು; ಪ್ರಪಂಚ ವಿಶಾಲವಾಗಿದೆ, ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹಣೆಯು ಸಾರಿ ಹೇಳುತ್ತಿತ್ತು; ಗುಣಗಳನ್ನು ಎತ್ತಿ ತೋರಿಸುವ ಮೊನಚಾದ ಮೂಗು, 'ನೀನು ಗೆದ್ದೇ ಗೆಲ್ಲುತ್ತೀಯ ಮುಂದೆ ಸಾಗು' ಎಂದು ಹೃದಯಕ್ಕೆ ತಾಗುವಂತೆ ಹೇಳುತ್ತಿತ್ತು; ತೊಂಡೆ ಹಣ್ಣಿನಂತಿರುವ ತುಟಿಗಳು ಹೀಗೆ ಪಿಸುಗುಟ್ಟಿದವು, 'ಹಾದಿಯಲ್ಲಿ ಅಡೆತಡೆಗಳು ಬಂದೇ ಬರುತ್ತವೆ. ಅವುಗಳನ್ನೆಲ್ಲ ಮೃದುವಾಗಿ ಮುತ್ತಿಕ್ಕಿ ಪಕ್ಕಕ್ಕೆ ಸರಿಸಿ ಮುನ್ನಡೆಯಬೇಕು'; 'ಪ್ರಪಂಚದಲ್ಲಿ ಮಾತೇ ಮಾಣಿಕ್ಯ. ಆ ಮಾಣಿಕ್ಯವನ್ನೇ ನಿನ್ನ ಹಾದಿಗೆ ದೀಪವಾಗಿ ಬಳಸಿಕೋ' ಎಂದು ಸಂಜ್ಞೆ ರವಾನಿಸಿತು ಬಾಯಿ; ಬದುಕಿನಲ್ಲಿ ಬರುವ ರುಚಿಗಳನ್ನು ನೋಡದೆ ಮುಂದೆ ಹೋಗಬೇಡೆಂದು ಹೇಳುತ್ತಿತ್ತು ನಾಲಗೆ; 'ಎಲ್ಲವನ್ನೂ ಕೇಳಿಸಿಕೊ, ಕೆಟ್ಟದ್ದು ಅಥವಾ ಒಳ್ಳೆಯದು. ಆದರೆ ನಿನಗೆ ತೋಚಿದ್ದನ್ನು ನೀನು ಮಾಡು, ಅದು ಎಂದಿಗೂ ಯಾರಿಗೂ ಹಾನಿ ಮಾಡದಂತಿರಲಿ' ಎನ್ನುತ್ತಿದ್ದವು ಕಿವಿಗಳು.
ಒಟ್ಟಾರೆ ಆ ನೀಲವರ್ಣದ ಮುಖ ಇಷ್ಟೆಲ್ಲ ಸಂಗತಿಗಳನ್ನ ಗುಟ್ಟಾಗಿ ಹೇಳುತ್ತಿರುವಾಗ, ನಾನು ಯಾವುದನ್ನು ಮೊದಲು ಚುಂಬಿಸಲಿ ಎಂಬ ಯೋಚನೆ ನನ್ನ ತಲೆಗೆ ಬಂತು. ಅಷ್ಟರಲ್ಲೇ ಅವಳು ದೂರ ಸರಿದಳು.
ಅವಳ ಮುಖದಲ್ಲಿ ನನಗೆ ವಿದ್ಯುಚ್ಛಕ್ತಿ ಕಂಡಿತು. ಹೀಗಾಗಿ, ನಾನು ಮೈಕೆಲ್ ಫ್ಯಾರಡೆಯಾಗಿದ್ದೆ. ಅವಳ ಮುಖವೇನೋ ತೊದಲಿದ ಹಾಗನ್ನಿಸಿತು, ನಾನಾಗ ಥಾಮಸ್ ಆಲ್ವಾ ಎಡಿಸನ್ ಆಗಿದ್ದೆ. ಅವಳ ಮೋರೆ ಅದೇನೋ ಗುನುಗುತ್ತಿತ್ತು; ನಾನಾಗ ಮಾರ್ಕೋನಿಯಾಗಿದ್ದೆ. ಆ ಮೊಗದಲ್ಲಿ ಅನೇಕಾನೇಕ ನಕ್ಷತ್ರಗಳು ಮಿನುಗುವುದು ಕಾಣಿಸಿತು; ನಾನಾಗ ಗೆಲಿಲಿಯೋ ಆಗಿದ್ದೆ. ದೂರದರ್ಶಕವಿಲ್ಲದೆ ನಾನು ಆ ಸಾಧನೆ ಮಾಡಿದ್ದೆ. ಯಾರೋ 'ನೋಬೆಲ್ ಕೊಡ್ತೀನಿ ಬಾ' ಅಂತ ಕರೆದಾಗ ವಿಜ್ಞಾನಿಯಾಗಿ ನನಗಾದ ಖುಷಿ ಅಷ್ಟಿಷ್ಟಲ್ಲ. ಅಷ್ಟರಲ್ಲೇ ಅವಳಂದಳು, 'ನಿನ್ನೆಲ್ಲ ಸಾಧನೆ ಮೇಲೆ ಪೇಟೆಂಟ್ ಮಾಡಿಸಿದ್ದೇನೆ'!
- ರವಿಚಂದ್ರ ಜಿ.ಎಂ
gmravichandra1234@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.