ಅಂಕಿತಾಳಿಗೊಂದು ಪುಟ್ಟ ಸಲಹೆ
'ಪರೀಕ್ಷೆ ಸಮಯ ಸಮೀಪಿಸುತ್ತಿದೆ. ನನಗೆ ವಿಚಿತ್ರ ಟೆನ್ಶನ್. ಊಟ ಸೇರೊಲ್ಲ. ನಿದ್ದೆ ಸುಳಿಯೊಲ್ಲ. ಇಂಥ ಸಂದರ್ಭದಲ್ಲಿ ನಾನು ಏನು...
'ಪರೀಕ್ಷೆ ಸಮಯ ಸಮೀಪಿಸುತ್ತಿದೆ. ನನಗೆ ವಿಚಿತ್ರ ಟೆನ್ಶನ್. ಊಟ ಸೇರೊಲ್ಲ. ನಿದ್ದೆ ಸುಳಿಯೊಲ್ಲ. ಇಂಥ ಸಂದರ್ಭದಲ್ಲಿ ನಾನು ಏನು ಮಾಡಬೇಕು? ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ನನ್ನಂಥ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ ಏನು?' ಎಂದು ಮೈಸೂರಿನಲ್ಲಿ ಎರಡನೆಯ ಪಿಯುಸಿ ಓದುತ್ತಿರುವ ಅಂಕಿತಾ ಕೇಳಿದ್ದಾಳೆ. ಇಂಥ ಪ್ರಶ್ನೆಗಳಿಗೆ ಸಮರ್ಪಕ ಅಥವಾ ಪರಿಪೂರ್ಣ ಉತ್ತರ ನೀಡಲು ನಾನು ಶಿಕ್ಷಣ ತಜ್ಞನೂ ಅಲ್ಲ, ಮನಶ್ಶಾಸ್ತ್ರಜ್ಞನೂ ಅಲ್ಲ. ನಾನು ಇವ್ಯಾವನೂ ಅಲ್ಲ ಎಂಬುದು ಗೊತ್ತಿದ್ದೇ ಅಂಕಿತಾ ಈ ಪ್ರಶ್ನೆಗೆ ಸಲಹೆ ಬಯಸಿದ್ದಾಳೆ.
ಪರೀಕ್ಷೆ ಸಮೀಪಿಸುತ್ತಿದೆ ಎಂದಾಗ ಎಲ್ಲರೂ ಕಂಗಾಲಾಗುವುದು, ಕಲ್ಲವಿಲಗೊಳ್ಳುವುದು ಸಾಮಾನ್ಯ. ಇನ್ನಿಲ್ಲದ ಉದ್ವೇಗ, ಆತಂಕ, ಭಯ, ದುಗುಡ, ತಹತಹ ಒಂದೇ ಸಮನೆ ಆವರಿಸಿಕೊಳ್ಳುತ್ತದೆ. ಎಲ್ಲ ಓದಿದ್ದರೂ ಎಲ್ಲವೂ ಮರೆತು ಹೋದಂತೆನಿಸುತ್ತದೆ. ವರ್ಷವಿಡೀ ಪುಂಡು ಅಲೆದು ಸಮಯ ವ್ಯರ್ಥ ಮಾಡಿದ್ದರ ಬದಲು ಚೆನ್ನಾಗಿ ಓದಿದ್ದರೆ, ಈಗ ಕಂಗಾಲಾಗುವ ಪ್ರಮಯವೇ ಬರುತ್ತಿರಲಿಲ್ಲ ಎಂದು ನಮ್ಮನ್ನು ಹಳಿದುಕೊಳ್ಳುತ್ತೇವೆ. ಕೊನೆ ಗಳಿಗೆಯಲ್ಲಿ ಎಷ್ಟು ಓದಿದರೂ ಅಷ್ಟೇನಾ, ನನ್ನಿಂದ ಎಲ್ಲ ವಿಷಯಗಳನ್ನು ಓದುವುದು, ಅರ್ಥ ಮಾಡಿಕೊಳ್ಳುವುದು ಅಸಾಧ್ಯವೇನೋ ಎಂಬ ನಿರ್ಧಾರಕ್ಕೆ ಬಂದು ಕೈ ಚೆಲ್ಲಿಬಿಡುತ್ತೇವೆ.
ಇದು ಚೆನ್ನಾಗಿ ಓದದವರ ಸಮಸ್ಯೆಯಾಯಿತು. ವರ್ಷವಿಡೀ ವ್ಯವಸ್ಥಿತವಾಗಿ ಓದಿಕೊಂಡು ಬಂದವರು ಸಹ ಇದೇ ರೀತಿಯ ಕಳವಳಕ್ಕೊಳಗಾಗುತ್ತಾರೆ. ಪರೀಕ್ಷೆ ಹಾಲ್ನಲ್ಲಿ ಕುಳಿತಾಗ ಉತ್ತರಗಳು ನೆನಪಾಗದೇ ಮರೆತು ಹೋದರೆ? ನನಗೆ ಗೊತ್ತಿಲ್ಲದ ಪ್ರಶ್ನೆಗಳನ್ನು ಕೇಳಿದರೆ? ನನಗೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಸಾಕಾಗದಿದ್ದರೆ? ಪ್ರಶ್ನೆ ಪತ್ರಿಕೆ ಬಹಿರಂಗವಾದರೆ? ನನ್ನ ಉತ್ತರ ಪತ್ರಿಕೆಯನ್ನು ಮೌಲ್ಯಮಾಪಕರು ಸರಿಯಾಗಿ ನೋಡದಿದ್ದರೆ? ಪರೀಕ್ಷೆ ದಿನ ನಾನು ಕಾಯಿಲೆ ಬಿದ್ದರೆ?... ಹೀಗೆ ಇಲ್ಲದ ಸಮಸ್ಯೆಗಳನ್ನು ಕಲ್ಪಿಸಿಕೊಂಡು ಅನಗತ್ಯವಾಗಿ ಭಯ ಬೀಳುತ್ತಾರೆ.
ಪರೀಕ್ಷೆ ಅಂದ್ರೆ ಬಹುಪಾಲು ವಿದ್ಯಾರ್ಥಿಗಳಿಗೆ ಭೂತ ಸದೃಶ. ಹೀಗಾಗಿ ಎಲ್ಲರೂ ನಡುಗುತ್ತಾರೆ. ಇದಕ್ಕೆ ಪಾಲಕರ ಕೊಡುಗೆ ಕಮ್ಮಿಯೇನಲ್ಲ. ಮಕ್ಕಳ ಮೇಲೆ ನಿರಂತರ ಒತ್ತಡ ಹೇರುತ್ತಾರೆ. ಗಣಿತದಲ್ಲಿ ನೂರಕ್ಕೆ ನೂರೇ ಗಳಿಸಬೇಕು. ಶೇಕಡಾ ತೊಂಬತ್ತೈದಕ್ಕಿಂತ ಕಡಿಮೆ ಅಂಕ ಬಂದರೆ ಬಯಸಿದ ಕೋರ್ಸು, ಕಾಲೇಜು ಸಿಗುವುದಿಲ್ಲ, ಹೆಚ್ಚಿನ ಫೀಸು ತೆತ್ತು ಓದಿಸಬೇಕಾಗುತ್ತದೆ. ಅಷ್ಟೊಂದು ಹಣವನ್ನು ಎಲ್ಲಿಂದ ತರಲಿ ಎಂದು ಮಕ್ಕಳ ಮೇಲೆ ನಿರಂತರ ಒತ್ತಡ ಹೇರುತ್ತಲೇ ಇರುತ್ತಾರೆ. ಮಕ್ಕಳು ಎಷ್ಟು ಓದಿದರೂ ಸಮಾಧಾನವಿಲ್ಲ. ಕೋಚಿಂಗ್, ಟ್ಯೂಶನ್ ಜತೆಗೆ ಮನೆಯಲ್ಲಿ ಹತ್ತಾರು ದಬಾವಣೆ, ನಿಬಂಧನೆ. ಆ ಮಕ್ಕಳ ಪಾಡು ಕಾದಕಾವಲಿಯಾಗಿರುತ್ತದೆ. ಇದು ಎಲ್ಲರ ಮನೆಯ ಮಕ್ಕಳ ಸ್ಥಿತಿಗತಿ. ಅವರನ್ನು ನೋಡಿದರೆ ಎಂಥವರಿಗಾದರೂ ಅಯ್ಯೋ ಪಾಪ ಅನಿಸದೇ ಇರದು.
ಇದು ಒಂದು ರೀತಿಯಲ್ಲಿ ನಮ್ಮ ಮಕ್ಕಳಿಗೆ ನಾವು ನೀಡಬಹುದಾದ ಅತ್ಯುಗ್ರ ಶಿಕ್ಷೆ. ಪ್ರತಿದಿನ 14-16 ತಾಸು ಓದುವ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿದ್ದಿರಬಹುದು? ಊಹಿಸಲೂ ಕಷ್ಟ. ಅಕ್ಷರಶಃ ಒಂದು ರೀತಿಯಲ್ಲಿ ಕಣಿವೆಯ ತುತ್ತತುದಿ ಮಕ್ಕಳನ್ನು ನಿಲ್ಲಿಸಿ ನೂರಕ್ಕೆ ನೂರು ಅಂಕ ತೆಗೀತೀಯಾ ಅಥವಾ ಇಲ್ಲಿಂದ ತಳ್ಳಲಾ ಎಂದು ಅವರ ಮೇಲೆ ತೀವ್ರ ಒತ್ತಡ ಹೇರುವ ರೀತಿಯಲ್ಲಿ ಪಾಲಕರು ವರ್ತಿಸುತ್ತಾರೆ. ಪರೀಕ್ಷೆಯಲ್ಲಿ ಫೇಲಾದರೆ, ನಿರೀಕ್ಷಿತ ಅಂಕ ಗಳಿಸದಿದ್ದರೆ ಜೀವನದಲ್ಲಿಯೇ ಫೇಲು ಎಂಬ ಧೋರಣೆ ಪಾಲಕರದು.
ಈ ಎಲ್ಲ ಹೊರೆಯನ್ನು ಮಕ್ಕಳು ಹೊರಬೇಕು. ಜತೆಗೆ ರೇಸಿನ ಕುದುರೆಗಳಂತೆ ಓಡಲು ಸಜ್ಜಾಗಬೇಕು. ಕುದುರೆಗಳ ಮೇಲೆ ಬಾಜಿ ಕಟ್ಟುತ್ತಾರಲ್ಲ, ಅದೇ ರೀತಿಯಲ್ಲಿ ಪಾಲಕರೂ ತಮ್ಮ ಮಕ್ಕಳನ್ನು ರೂಪಿಸುತ್ತಾರೆ. ಕುದುರೆ ಜಾಕಿಗಳಂತೆ ಪಾಲಕರು ವರ್ತಿಸುತ್ತಾರೆ. ಇನ್ನೂ ಓದು, ಮತ್ತಷ್ಟು ಓದು, ಜಾಸ್ತಿ ಅಂಕ ತೆಗೆ, ಇನ್ನಷ್ಟು ಅಂಕ ತೆಗೆ, ನೂರಕ್ಕೆ ನೂರು ಅಂಕ ತೆಗೆ, ಪರೀಕ್ಷೆ ಟೈಮಿನಲ್ಲಿ ಮಲಗಿದರೆ ಹೇಗೆ, ರಿವಿಷನ್ ಮಾಡು, ಉರು ಹೊಡೆ... ಎಂದು ಮಕ್ಕಳನ್ನು ತಿವಿಯುತ್ತಾರೆ. ಅವರ ಪಾಲಿಗೆ ಮಕ್ಕಳ ಪರೀಕ್ಷೆಯೆಂದರೆ ರೇಸು. ಮಕ್ಕಳೆಂದರೆ ಕುದುರೆಗಳು. ಅವರ ಜೀವನದ ಮೇಲೆ ಝಝ್ಜ ಡಡಿಛ್ಞಜಡ ಕಟ್ಟುತ್ತಾರೆ. ಆದ್ದರಿಂದ ನಾನು ಅಂಕಿತಾಗೆ ಸಲಹೆ ನೀಡುವ ಮುನ್ನ ಅವಳ ತಂದೆ ತಾಯಿಗೆ ಮೊದಲು ಕೆಲ ಮಾತುಗಳು ಹೇಳಲಿಚ್ಛಿಸುತ್ತೇನೆ. ನಿಮ್ಮ ಮಗಳು ಕುದುರೆಯಲ್ಲ, ಅವರ ಪರೀಕ್ಷೆಯೆಂದರೆ ರೇಸೂ ಅಲ್ಲ. ನಿಮ್ಮ ಮಗಳು ಹೆಚ್ಚು ಅಂಕ ಗಳಿಸಬೇಕು ಎಂದು ನಿರೀಕ್ಷಿಸುವುದು ತಪ್ಪಲ್ಲ. ಆದರೆ ಅದೇ ನಿಮ್ಮ ಅಂತಿಮ ಗುರಿಯಾಗಿರಬಾರದು. ಪರೀಕ್ಷೆಯೆಂದರೆ ಜೀವನ ಅಲ್ಲ. ನೀವೂ ಅವಳ ಹಂತವನ್ನು ದಾಟಿ ಬಂದಿದ್ದೀರಿ. ನೀವೆಷ್ಟು ಬ್ರಿಲಿಯೆಂಟ್ ಆಗಿದ್ದಿರಿ? ನಿಮ್ಮ ನಡೆ- ವರ್ತನೆಯಿಂದ ಅವಳಲ್ಲಿ ಭರವಸೆ ತುಂಬಿ ಹೊರತು ಭಯವನ್ನಲ್ಲ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದೇ ಜೀವನದ ಪರಮ ಗುರಿ ಎಂಬಂತೆ ನೀವು ಅವಳಲ್ಲಿ ಬಿಂಬಿಸಿದರೆ, ಕಾರಣಾಂತರಗಳಿಂದ ಆಕೆ ಆ ಗುರಿ ತಲುಪದೇ ಹತಾಶಳಾಗಬಹುದು. ನಿಮ್ಮ ಮಗುವಿನ ಭವಿಷ್ಯ ನೀವೇ ಹಾಳು ಮಾಡಿದಂತಾದೀತು. ಅನೇಕ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿರಬಹುದು. ಪರೀಕ್ಷೆಗಿಂತ ಮಿಗಿಲಾದುದು ಜೀವನ ಎಂಬ ವಿವೇಕವನ್ನು ಮಕ್ಕಳಲ್ಲಿ ತುಂಬದಿದ್ದರೆ ಪಾಲಕರಾಗಿ ನೀವು ಸೋಲುತ್ತೀರಿ.
ಅಂಕಿತಾ, ಪರೀಕ್ಷೆ ಸಮೀಪಿಸುತ್ತಿದೆ ಎನ್ನುವಾಗ ಕಡಿಮೆ ಓದು, ಹೆಚ್ಚು ರಿಲ್ಯಾಕ್ಸ್ ಆಗಿರು. ಓದಿದ್ದನ್ನು ಮನನ ಮಾಡಿಕೋ. ಚೆನ್ನಾಗಿ ನಿದ್ದೆ ಮಾಡು. ಪರೀಕ್ಷೆಯೆಂಬ ಗುಮ್ಮಕ್ಕೆ ನಿನ್ನ ತಲೆಯಲ್ಲಿ ಗೂಡು ಕಟ್ಟಿಕೊಳ್ಳಲು ಬಿಡಬೇಡ. ಗುರಿ ಪರೀಕ್ಷೆ ಮೇಲಿರಲಿ, ಗಮನ ನೀನು ಓದಿದ್ದರ ಮೇಲಿರಲಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸು. ಮೊದಲ ಪರೀಕ್ಷೆ ಚೆನ್ನಾಗಿ ಆಗದಿದ್ದರೆ ಹತಾಶಳಾಗಬೇಡ. ಅಷ್ಟಕ್ಕೂ ಕಡಿಮೆ ಅಂಕ ಬಂದರೆ ನೇಣಿಗೆ ಗೋಣು ಚೆಲ್ಲಬೇಕಿಲ್ಲ. ಜೀವನ ವಿಶಾಲವಾಗಿದೆ. ಸಾಧ್ಯತೆಗಳು ಅನಂತವಾಗಿವೆ. ಅಂಕದ ಆಟಕ್ಕಿಂತ ಜೀವನದ ಆಟ ಮುಖ್ಯ.
ಬೆಸ್ಟ್ ಆಫ್ ಲಕ್!
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ