ಅಡುಗೆಮನೆಯೆಂಬ ಕೆಮಿಸ್ಟ್ರಿ ಲ್ಯಾಬು!
ಅಂದು ಶನಿವಾರ, ಸಂಜೆ 5 ಗಂಟೆ. ಕಾತರ ಮತ್ತು ಆತುರ ಎರಡೂ ಬೆರಕೆಯಾದ ಧ್ವನಿಯಲ್ಲಿ 'ಅಮ್ಮ, ಸಂಜೆ ಆಯ್ತು!' ಎಂದೆ...
ಅಂದು ಶನಿವಾರ, ಸಂಜೆ 5 ಗಂಟೆ. ಕಾತರ ಮತ್ತು ಆತುರ ಎರಡೂ ಬೆರಕೆಯಾದ ಧ್ವನಿಯಲ್ಲಿ 'ಅಮ್ಮ, ಸಂಜೆ ಆಯ್ತು!' ಎಂದೆ. ಬೆಳಗ್ಗಿನಿಂದ ಕೂತಲ್ಲಿ ಕೂರಲು ಆಗುತ್ತಿರಲಿಲ್ಲ. ಮನದಲ್ಲಿ ಏನೋ ಒಂಥರ ಖುಷಿ. ಹುಮ್ಮಸ್ಸು ಮನೆಮಾಡಿತ್ತು. ತಾಕಲಾಟವೂ ತೂಗಾಡುತ್ತಿತ್ತು. ಕಾರಣ, ಅಡುಗೆ ಮಾಡೋಕೆ ಪರ್ಮಿಷನ್ ಸಿಕ್ಕಿತ್ತು!
8ನೇ ತರಗತಿಯಲ್ಲಿ ಓದ್ತಾ ಇದ್ದೆ. ಚಹಾ ಮಾಡಲು ಬರುತ್ತಿರಲಿಲ್ಲ. ಅಡುಗೆಮನೆಗೆ ಕಾಲಿಟ್ಟವಳೇ ಅಲ್ಲ. ದಿನವೂ ಅಮ್ಮ ಬಡಿಸುತ್ತಿದ್ದನ್ನು ಮೆಲ್ಲುವುದಷ್ಟೇ ನನ್ನ ಕೆಲಸ. ಎಲ್ಲೋ ಒಂದು ಕಡೆ ನಾನೂ ಅಡುಗೆ ಮಾಡಬೇಕು, 'ನಿನ್ನಮ್ಮ ಮಾಡುವ ಅಡುಗೆಗಿಂತ ತುಂಬಾ ಚೆನ್ನಾಗಿದೆ' ಎಂದು ಅಪ್ಪನ ಕೈಯಲ್ಲಿ ಸರ್ಟಿಫಿಕೆಟ್ ಗಿಟ್ಟಿಸಬೇಕು ಎಂಬಾಸೆ ಕಾಡುತ್ತಿತ್ತು. ಸಾಕಷ್ಟು ಬಾರಿ ಅಪ್ಲಿಕೇಶನ್ ಹಾಕಿದ್ದೂ ಇದೆ. ಅಮ್ಮನೇನೋ ಒಪ್ಪಿಕೊಳ್ಳುತ್ತಿದ್ದರು. ಆದರೆ ಅಜ್ಜಿಯದೇ ತಕರಾರು. 'ಸಾಕು ನೋಡಿದ್ದೇನೆ ನಿನ್ನ ಆರಂಭದ ಶೂರತನ. ನೀನು ಅಡುಗೆ ಮನೆಗೆ ಬಂದ್ರೆ ಒಂದಕ್ಕೆ ಎರಡು ಕೆಲಸ ಮಾಡಬೇಕಾಗುತ್ತೆ, ಹೋಗ್ಹೋಗು ಸುಮ್ನೆ ಓದ್ಕೊ!' ಅನ್ನುತ್ತಿದ್ದರು. ಮೊದಮೊದಲು 'ಅಜ್ಜಿಯೇ ನನಗೆ ಆ ಜನ್ಮ ವೈರಿ' ಎಂದು ಮನಸ್ಸಲ್ಲೇ ಹಳಿದು ಸುಮ್ಮನಾಗುತ್ತಿದ್ದೆ. ಅಂದು ಮಾತ್ರ ಹಠಕ್ಕೆ ಬಿದ್ದವಳಂತೆ 'ಏನಾದರು ಮಾಡಲೇಬೇಕು' ಎಂದು ಪಣತೊಟ್ಟೆ. ಅದಕ್ಕೆ ಕಾರಣವೂ ಇದೆ, ಶಾಲೆಯಲ್ಲಿ ಆಟೋಗ್ರಾಫ್ ಬರೆಸಿಕೊಳ್ಳೋ ಸಮಯದಲ್ಲಿ "cuisine' ಕಾಲಂ ಕೆಳಗೆ ಸ್ನೇಹಿತರೆಲ್ಲ ಉಪ್ಪಿಟ್ಟು, ಲಡ್ಡು, ಹೋಳಿಗೆ, ಗೋಬಿಮಂಚೂರಿ ಇತ್ಯಾದಿ ಬರೆದಿದ್ದರು. ನಾಚಿಕೆಯಾಗಿ ಹೊಟ್ಟೆ ಉರಿಯುತಿತ್ತು. 'ಮ್ಯಾಗಿ!' ಎಂದು ಬರೆದು ಜಿದ್ದಿನಿಂದ ಮನೆಗೆ ಬಂದಿದ್ದೆ.
ಮೊದಲ ಪ್ರಯೋಗ, ಉತ್ಸಾಹದಲ್ಲಿ, ಕೊಬ್ಬಿನಲ್ಲಿ ಎಂದರೂ ಅರ್ಥಬರುತ್ತದೆ! 'ಅಮ್ಮ, ನೀನು ಸಹಾಯ ಮಾಡೋದು ಬೇಡ, ಅಲ್ಲೇ ದೂರದಲ್ಲಿ ಕುರ್ಚಿ ಹಾಕಿ ಕುಳಿತುಕೋ. ನಾನ್ ಕೇಳಿದ್ದಕ್ಕಷ್ಟೇ ಉತ್ತರ ಕೊಡು' ಎಂದು ಆಜ್ಞೆ ವಿಧಿಸಿದ್ದೆ. ಅಮ್ಮ ಒಪ್ಪಿದರು. ಉತ್ಸಾಹದ ಭರದಲ್ಲಿ ಅಜ್ಜಿಯ ವಿರೋಧವನ್ನು ಮೂಲೆಗೊತ್ತಿದ್ದೆ ಎಂದೂ ಹೇಳಬಹುದು.
ಅಪ್ಪನ ಇಷ್ಟದಂತೆ 'ಗುಲಾಬ್ ಜಾಮೂನ್' ಮೂಲಕ ಶುಭಾರಂಭ ಮಾಡಲು ತೀರ್ಮಾನಿಸಿದೆ. ಹತ್ತಿರದ ಅಂಗಡಿಯಿಂದ 200 ಗ್ರಾಂ ಗುಲಾಬ್ ಜಾಮೂನ್ ಪ್ಯಾಕೆಟ್ ಖರೀದಿಸಿ ತಂದಾಯ್ತು. ಪ್ಯಾಕೆಟ್ ಮೇಲಿನ ಚಿತ್ರದ ಥರಾನೇ ಜಾಮೂನ್ ತಯಾರು ಮಾಡೋದು ಗುರಿ. ಶಸ್ತ್ರಾಭ್ಯಾಸ ಇಲ್ಲದೇ ರಣರಂಗಕ್ಕೆ ಇಳಿದ ಅನುಭವ. ಯಾವ ಅಸ್ತ್ರ ಹಿಡಿಯಬೇಕು ಎಂಬುದೂ ಗೊತ್ತಿರಲಿಲ್ಲ. 'ಅಮ್ಮ, ಯಾವ್ ಪಾತ್ರೆ ತಗೊಳ್ಲಿ?' ಅಂದೆ. ಅಮ್ಮ ಸೂಚಿಸಿದ ಬುಟ್ಟಿಯಲ್ಲಿ ಹಿಟ್ಟು ಹಾಕಿದೆ. 'ನೆಕ್ಸ್ಟ್' ಎಂದಾಗ 'ಡ್ರಮ್ನಲ್ಲಿರೋ ನೀರು ತಗೊಂಡು ಹಿಟ್ಟಿಗೆ ಹಾಕಿ ಹದವಾಗಿ ಕಲ್ಸು' ಅಂದ್ರು. 'ಹದ' ಅಂದ್ರೆ? ಮತ್ತೆ ಮತ್ತೆ ಕೇಳೋದು ಬೇಡ. ಏನಾದ್ರೂ ಆಗಲಿ ಹಾಕಿಯೇ ಬಿಡೋಣ ಅಂದ್ಕೊಂಡು ಬರೋಬ್ಬರಿ ಒಂದು ಲೋಟ ನೀರು ಸುರಿದುಬಿಟ್ಟೆ. ಹಿಟ್ಟೆಲ್ಲ ಜಾಳು ಜಾಳಾಗಿ ಬಿಡ್ತು. ಅಮ್ಮ 'ಅಯ್ಯೋ...!' ಅಂದ್ರು. ಅಷ್ಟರಲ್ಲೇ ಅಜ್ಜಿಯ ಆಗಮನ! 'ಗೋವಿಂದಾ... ಗೋ... ವಿಂದಾ...' ವಾಚಾಮಗೋಚರ ಬೈಗುಳಗಳು ಹರಿದುಬಿಟ್ಟವು. ಅಷ್ಟೆಲ್ಲ ಬಯ್ಸಿಕೊಂಡ್ರೂ ಗುಲಾಬ್ ಜಾಮೂನ್ ಮಾಡಿ ತಿನ್ನಬೇಕು ಎಂಬ ಆಸೆ ಮಾತ್ರ ಮುರುಟಲಿಲ್ಲ.
'ಅಮ್ಮಾ ಪ್ಲೀಸ್, ಇನ್ನೊಂದು ಸಲ ಪ್ರಯತ್ನ ಮಾಡ್ತೀನಿ' ಅಂತ ಮಲಗೋ ಮುನ್ನ ಅವಲತ್ತುಕೊಂಡಿದ್ದೂ ಆಯ್ತು. ಅಮ್ಮ ಒಪ್ಪಿದರು. ಸಕ್ಕರೆ ಪಾಕ ತಾನೇ ಮಾಡಿಕೊಡುವುದು, ಹಾಗಾದರೆ ಮಾತ್ರ ಒಪ್ಪಿಗೆ ನೀಡುವುದು ಎಂಬ ಅಜ್ಜಿಯ ವರಾತ ಇತ್ತು. ಮರುದಿನ ಮಧ್ಯಾಹ್ನ ಚಪಾತಿ ಹಿಟ್ಟನ್ನು 'ಹದ'ವಾಗಿ ಕಲಸುವ ಮೂಲಕ ರಿಹರ್ಸಲ್ ಮಾಡಿಕೊಂಡೆ. 'ಏನ್ ತಿನ್ನೋ ಚಪಲಾನೋ, ಇವ್ರದ್ದು ಹೊಟ್ಟೆಯೋ ಪಟ್ಟಣಶೆಟ್ಟಿ ಹಡಗೋ' ಅಂತ ಅಜ್ಜಿಯ ಗೊಣಗಾಟ ಸಾಗಿತ್ತು.
'ಅಂಕಲ್, 200 ಗ್ರಾಂ ಗುಲಾಬ್ ಜಾಮೂನ್ ಪ್ಯಾಕೆಟ್ ಕೊಡಿ' ಅಂದಾಗ ಅಂಗಡಿಯವರು 'ಏನೇ ಕೂಸೇ, ನಿಮ್ಮನೇಲಿ ದಿನಾ ಗುಲಾಬ್ ಜಾಮೂನ್ ಮಾಡ್ತ್ವ?' ಎಂದು ಕೇಳಿಬಿಟ್ಟರು. ಅಡುಗೆ ಪ್ರಸಂಗ ಸುತ್ತಮುತ್ತಲ ಮನೆಯವರಿಗೆ ಪಸರಿಸಿತ್ತು. ನಿನ್ನೆಯ 'ಅನ್ಲಕ್ಕಿ' ಬುಟ್ಟಿ ಬದಿಗಿಟ್ಟು ಬೇರೆ ಬುಟ್ಟಿಯಲ್ಲಿ ಹಿಟ್ಟು ಹಾಕಿ 'ಹದ'ವಾಗಿ ಕಲಸಿದೆ. ಉಂಡೆ ಮಾಡುವಾಗಲೂ ಇಂಚಿಂಚೂ ಅಳತೆ ಮಾಡಿ, ಗೋಲ ಗೋಲವಾಗಿ, ಗಾತ್ರ ಹೆಚ್ಚು ಕಡಿಮೆ ಆಗದಂತೆ ನೋಡಿಕೊಳ್ಳುತ್ತಾ ಜಾಗ್ರತೆ ವಹಿಸಿದೆ. ಎಣ್ಣೆಯಲ್ಲಿ ಕರಿದು ಅಜ್ಜಿ ಮಾಡಿದ ಸಕ್ಕರೆ ಪಾಕಕ್ಕೆ ಹಾಕಿದೆ. ಗುಲಾಬ್ ಜಾಮೂನ್ ರೆಡಿ! ಖುಷಿಗೆ ಪಾರವೇ ಇರಲಿಲ್ಲ. ಮೆಲ್ಲಗೆ ಮೆಲ್ಲುತ್ತಾ 'ನಾನು ಮಾಡಿದ ಜಾಮೂನು' ಎಂದು ಒಳಗೊಳಗೇ ಅಹಂ ಪಡುತ್ತಿದ್ದೆ. ಅಪ್ಪ ಮಾತ್ರ ಮೀಸೆ ಕೆಳಗೆ ಮುಸಿಮುಸಿ ನಗುತ್ತಿದ್ದರು!
ಈಗ "cuisine' ನಲ್ಲಿ ಒಂದಷ್ಟು ಪಟ್ಟಿಯನ್ನೇ ಬರೆಯುತ್ತೇನೆ. ಪ್ರತಿ ಸಲ 'ರಸಾಯನ ಶಾಸ್ತ್ರ ಪ್ರಯೋಗಾಲಯ' ಹೊಕ್ಕಾಗೆಲ್ಲ ಈ ನೆನಪು ಕಾಡುತ್ತದೆ. ಕೆಮಿಸ್ಟ್ರಿ ಲ್ಯಾಬ್ ನಮ್ಮ ಮನೆಯ ಅಡುಗೆ ಕೋಣೆಯಂತಿರಲೂ ಇರಬಹುದು!ಟಿ
-ಸೀಮಾ ಹೆಗಡೆ
seemahegdekabbe@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.