ಪಿಚ್ಚಿಗೆ ಇವರೇ ಡಾಕ್ಟ್ರು ಇವರೇ ಬ್ಯೂಟಿಷಿಯನ್ನು!
ಕ್ರಿಕೆಟ್ ದಿಗ್ಗಜರಾದ ಕ್ಲೈವ್ ಲಾಯ್ಡ್, ಕಪಿಲ್‌ದೇವ್, ಸಚಿನ್ ತೆಂಡೂಲ್ಕರ್‌ರಿಂದ ಹಿಡಿದು ಹಲವು ಅದ್ಭುತ ಪ್ರತಿಭೆಗಳು ಆತನ ಬಳಿಯೇ...
ಕ್ರಿಕೆಟ್ ದಿಗ್ಗಜರಾದ ಕ್ಲೈವ್ ಲಾಯ್ಡ್, ಕಪಿಲ್‌ದೇವ್, ಸಚಿನ್ ತೆಂಡೂಲ್ಕರ್‌ರಿಂದ ಹಿಡಿದು ಹಲವು ಅದ್ಭುತ ಪ್ರತಿಭೆಗಳು ಆತನ ಬಳಿಯೇ ಸುಳಿಯುತ್ತಿದ್ದರು. ಆದರೆ, ಯಾವತ್ತೂ ಈತ ಅವರನ್ನು ತಾನಾಗಿಯೇ ಮಾತನಾಡಿಸಲು ಹೋಗಲಿಲ್ಲ. ಇದಕ್ಕೇನು ಅಹಂ ಅಡ್ಡಿ ಅಲ್ಲ. ಮಾತನಾಡಿಸಿದರೆ, ಎಲ್ಲಿ ತನ್ನನ್ನು ಕೆಳಮಟ್ಟದಲ್ಲಿ ನೋಡುತ್ತಾರೋ ಎಂಬ ಅಂಜಿಕೆ ಆತನಿಗೆ. ಕ್ರಿಕೆಟ್ ಹೀರೋಗಳನ್ನು ನೋಡಲು ಜನರು ಹಾತೊರೆಯುತ್ತಾರೆ. ಆದರೆ, ತಾನು ಅವರನ್ನು ಹತ್ತಿರದಿಂದಲೇ ನೋಡುತ್ತೇನಲ್ಲ ಎಂಬ ಸಮಾಧಾನವಂತೂ ಆತನ ಪಾಲಿಗೆ ಯಾವತ್ತೂ ಇದ್ದೇ ಇದೆ. ಅಷ್ಟೇ ಎಂದುಕೊಂಡರೆ ಸಾಲದು. ಕ್ರಿಕೆಟ್ ಆಟಗಾರರು ಎಲ್ಲರಿಗೂ ಹೀರೋಗಳಾದರೆ, ಆ ಆಟಗಾರರ ಪಾಲಿಗೆ ಈತನೇ ಹೀರೋ!
ನೀವು ಅವನ ಹುದ್ದೆಯನ್ನು 'ಗ್ರೌಂಡ್ಸ್‌ಮನ್' ಅಂತ ಕರೆಯಬಹುದು. ಪಿಚ್‌ನ ತಯಾರಿಯಿಂದ ಹಿಡಿದು ದುರಸ್ತಿ ಮಾಡುವುದೆಲ್ಲ ಈತನೇ. ಆಗ ಪಿಚ್‌ಗೆ ನೀರು ಹಾಕಲು ಕ್ಯಾನ್ ಬಳಸುತ್ತಿದ್ದರು. ರೂಲರ್ ಅನ್ನು ಕೈಯಿಂದಲೇ ದೂಡಬೇಕಾಗಿತ್ತು. ಕ್ರೀಡಾಂಗಣದಲ್ಲಿ ನೀರು ತುಂಬಿದರೆ, ಅದನ್ನು ತೆಗೆಯಲು ಗೋಣಿ ಚೀಲ ಮತ್ತು ತಟ್ಟೆ ಹಿಡಿದು ಹರಸಾಹಸಪಡಬೇಕಿತ್ತು. ಹುಲ್ಲನ್ನು ಕಟ್ ಮಾಡಲು ಕುಡುಗೋಲು ಬಳಸುತ್ತಿದ್ದರು. ಆದರೆ, ಇಂದು ಕ್ಯಾನ್ ಬದಲು ಸ್ಪಿಂಕ್ಲರ್ ಬಂದಿದೆ. ಗೋಣಿ ಚೀಲ ಮತ್ತು ತಟ್ಟೆಯ ಜಾಗಕ್ಕೆ ಸೂಪರ್ ಸಾಪರ್ ಬಂದಿದೆ. ಕುಡುಗೋಲು ಸ್ಥಾನದಲ್ಲಿ ಗ್ರಾಸ್ ಕಟರ್ ಅನ್ನು ಕಾಣಬಹುದು. ಒಂದರ್ಥದಲ್ಲಿ ಗ್ರೌಂಡ್ಸ್‌ಮನ್‌ಗಳ ಕಣ್ಣಲ್ಲಿ ಸಂತಸ ಅರಳಿದೆ.
ಮಹತ್ವದ ಅಂಶ
'ಗ್ರೌಂಡ್ಸ್‌ಮನ್‌ಗಳಿಗೆ ಕಠಿಣ ಕೆಲಸ ಎದುರಾಗುವುದು ಮಳೆ ಬಂದಾಗಲೇ. ಮಳೆ ಬರುತ್ತಿದ್ದಂತೆ, ಪಿಚ್ಚನ್ನು ಸರಿಯಾಗಿ ಮುಚ್ಚಿ ನೀರಿನಿಂದ ಒದ್ದೆಯಾಗದಂತೆ ನೋಡಿಕೊಳ್ಳಬೇಕು. ಇದರಲ್ಲಿ ಸ್ವಲ್ಪ ಹೆಚ್ಚೂಕಡಿಮೆಯಾದರೂ, ಪಂದ್ಯ ರದ್ದಾಗಲು ನಾವೇ ಕಾರಣ ಎಂದು ಪತ್ರಿಕೆಯಲ್ಲಿ ಬರೆಯುತ್ತಾರೆ. ಆದರೆ, ಗ್ರೌಂಡ್ಸ್‌ಮನ್ ಆಗಲು 30 ವರ್ಷಗಳ ಹಿಂದೆ ಮೈ ಮುರಿದು ದುಡಿಯಬೇಕಿತ್ತು. ಇಂದು ತಂತ್ರಜ್ಞಾನವೇ ಎಲ್ಲ ಕೆಲಸ ಮಾಡುತ್ತದೆ. ನಾವು ಮೆದುಳನ್ನಷ್ಟೇ ಬಳಸಿದರೆ ಸಾಕು' ಎನ್ನುತ್ತಾರೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂಗಣದಲ್ಲಿ 40 ವರ್ಷಗಳಿಂದ ಗ್ರೌಂಡ್ಸ್‌ಮನ್ ಆಗಿರುವ ರಾಮಣ್ಣ.
ಆಯ್ಕೆ ಹೇಗೆ?
ಆರಂಭದಲ್ಲಿ ಸಹಾಯಕರಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ ಅನುಭವ ಪಡೆದಂತೆ ಪಿಚ್ ಸಿದ್ಧತೆ ಮಾಡುವ ಪ್ರಮುಖ ಕೆಲಸಗಳನ್ನು ವಹಿಸುತ್ತಾರೆ. ಪ್ರಸ್ತುತ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ (ಕೆಎಸ್‌ಸಿಎ) 23 ಗ್ರೌಂಡ್ಸ್‌ಮನ್‌ಗಳಿದ್ದಾರೆ. ಇವರು ರಾಜ್ಯದ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಪಂದ್ಯ ನಡೆದರೆ ಹಾಜರ್. ಇವರೆಲ್ಲರಿಗೂ ಅವರವರ ಅನುಭವದ ಆಧಾರದ ಮೇಲೆ ಸಂಭಾವನೆ ನೀಡಲಾಗುತ್ತದೆ.
-ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com