ಖುಷಿ

ಬ್ರೈನ್ ಟ್ರಿಮ್

ಹಿಂದೆಲ್ಲ 60 ದಾಟಿದವರಿಗೆ ಅರಳು ಮರಳು ಎನ್ನುತ್ತಿದ್ದರು. ಆದರೀಗ? 40 ಆಗುತ್ತಿದ್ದಂತೆ ಇಂಥ ಸ್ಥಿತಿ! ತಮಾಷೆ ಗೊತ್ತಾ?...

ಹಿಂದೆಲ್ಲ 60 ದಾಟಿದವರಿಗೆ ಅರಳು ಮರಳು ಎನ್ನುತ್ತಿದ್ದರು. ಆದರೀಗ? 40 ಆಗುತ್ತಿದ್ದಂತೆ ಇಂಥ ಸ್ಥಿತಿ! ತಮಾಷೆ ಗೊತ್ತಾ? ತಮಗೆ ಹೀಗಾಗಿದೆ ಎನ್ನುವುದು ಖುದ್ದು ಅವರ ಅರಿವಿಗೂ ಬಂದಿರುವುದಿಲ್ಲ. ಅನೇಕರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲ. ವಯಸ್ಸಾದಂತೆಲ್ಲ ಮರೆಗುಳಿತನ ಮಾಮೂಲು ಎಂಬುದು ಅವರ ಧೋರಣೆ! ಹಲೋ ಯಂಗ್‌ಮೆನ್, ಸ್ವಲ್ಪ ನಿಲ್ಲಿ. ನೀವೇನೂ ಇದರಿಂದ ಬಚಾವು ಎಂದು ಉಸಿರುಬಿಡುವಂತಿಲ್ಲ. ವಯಸ್ಸು ನಾಲ್ಕು ದಶಕ ದಾಟಿದ ಬಳಿಕ ತೀವ್ರವಾಗಿ ಕಾಡುವ ಮರೆಗುಳಿತನ ಶುರುವಾಗುವುದು 20ರ ಆಜುಬಾಜಿನಲ್ಲೇ!
ಒಮ್ಮೆ ನಮ್ಮ ಬಾಲ್ಯದ ದಿನಗಳನ್ನು ರೀಕಾಲ್ ಮಾಡಿಕೊಳ್ಳಿ. ನಮ್ಮ ಆಟ, ಪಾಠ, ಸ್ನೇಹಿತರು, ಹರಟೆ, ಪ್ರವಾಸ, ಜಗಳ ಹೀಗೆ ಎಷ್ಟೆಲ್ಲ ವಿಷಯಗಳು ಕಣ್ಮುಂದೆ ಸುಳಿದು ಹೋಗುತ್ತವೆ. ಈಗ ಒಂದೊಂದನ್ನೇ ನೆನಪು ಮಾಡಿಕೊಳ್ಳಲು ಪ್ರಯತ್ನಿಸಿ. ಥತ್ತೇರಿಕೆ, ಅದೋ ಕಣ್ಣಾಮುಚ್ಚಾಲೆ ಆಡುವಾಗ ಯಾವಾಗಲೂ ನನ್ನನ್ನು ಸೋಲಿಸುತ್ತಿದ್ದನಲ್ಲ... ಅವನ ಹೆಸರು... ಉಹುಂ. ಎಷ್ಟು ತಲೆ ಕೆರೆದುಕೊಂಡರೂ ನೆನಪಿಗೇ ಬರುತ್ತಿಲ್ಲವಲ್ಲ. ಹೋಗಲಿ, ಅವನ ಮುಖವಾದರೂ ನೆನಪಾಗುತ್ತಿದೆಯಾ? ಅದೂ ಇಲ್ಲ.
ನಮ್ಮ ಬದುಕಿನಲ್ಲಿ ಎಷ್ಟೆಲ್ಲ ಘಟನೆಗಳು ನಡೆದಿರುತ್ತವೆ. ಎಷ್ಟೆಲ್ಲ ಮಂದಿಯೊಂದಿಗೆ ಒಡನಾಡಿರುತ್ತೇವೆ. ಆದರೂ ನಮ್ಮ ಭಿತ್ತಿಯಲ್ಲಿ ಉಳಿಯುವುದು, ಬೇಕೆಂದಾಗಲೆಲ್ಲ ಜ್ಞಾಪಕಕ್ಕೆ ಬರುವುದು ಕೆಲವೊಂದು ಘಟನೆಗಳು, ಕೆಲವೇ ಕೆಲವು ವ್ಯಕ್ತಿಗಳು ಮಾತ್ರ. ಯಾವುದು ವಿಶೇಷವಾಗಿರುತ್ತದೋ, ಯಾರು ನಮಗೆ ತುಂಬಾ ಆತ್ಮೀಯರಾಗಿದ್ದರೋ, ಅಂಥವಷ್ಟೆ ಜ್ಞಾಪಕಶಾಲೆಯಲ್ಲಿ ಉಳಿಯುವುದು. ಬಾಲ್ಯ ಸ್ನೇಹಿತನೇನಾದರೂ ಎಷ್ಟೋ ವರ್ಷಗಳ ನಂತರ ಸಿಕ್ಕರೆ, ಅವನ ಹೆಸರು ತಕ್ಷಣಕ್ಕೆ ನೆನಪಿಗೆ ಬಾರದಿದ್ದರೂ ಆತನ ಮುಖಚರ್ಯೆಯಿಂದ ಗುರುತಿಸಿ, ಮಾತನಾಡಲು ಪ್ರಾರಂಭಿಸುತ್ತೇವೆ. ಇನ್ನು ಕೆಲವು ಬಾರಿ ಎಲ್ಲೋ ನೋಡಿದ ಹಾಗೆ, ಆದರೆ, ಎಲ್ಲಿ ಅಂತ ಎಷ್ಟೇ ಜ್ಞಾಪಿಸಿಕೊಂಡರೂ ನೆನಪಿಗೆ ಬರುವುದಿಲ್ಲ. ಇಂತಹ ಅನುಭವ 60 - 70 ವರ್ಷ ವಯಸ್ಸು ದಾಟಿದ ನಂತರವಷ್ಟೇ ಬರುತ್ತದೆ ಎಂಬುದೆಲ್ಲ ಸುಳ್ಳು ಮಾರಾಯ್ರೆ. ಈಗೀಗ ಪ್ರಾಯ ಇಪ್ಪತ್ತಾಗುತ್ತಿದ್ದಂತೆ ಮರೆವೂ ಜಾಸ್ತಿ ಆಗುತ್ತಾ ಹೋಗುತ್ತದೆ.

ಇದರ ಅರ್ಥ-
ನಮ್ಮ ಮೆದುಳಿನ ಕಾರ್ಯ ಕ್ಷೀಣಿಸುತ್ತಿದೆ!

ಮೆದುಳಿನ ಕಾರ್ಯಶಕ್ತಿ ಬಗ್ಗೆ ಅಧ್ಯಯನ ನಡೆಸಿದ ವೈದ್ಯರನ್ನು ಗಾಬರಿ ಬೀಳಿಸಿದ ಸಂಗತಿ ಎಂದರೆ 20-30ರ ನಡುವಿನಲ್ಲಿರುವ ಬಹುತೇಕ ಮಂದಿಯ ಮೆದುಳಿನ ಕಾರ್ಯ ಚಟುವಟಿಕೆ ವೇಗ ಕುಗ್ಗಿದೆ. ಅವರಲ್ಲಿ ತುಲನೆ ಮಾಡುವ ಶಕ್ತಿ, ಲೆಕ್ಕ ಮಾಡುವ ಸಾಮರ್ಥ್ಯ, ಪಝಲ್‌ಗಳನ್ನು ಬಿಡಿಸುವ ಸಾಮರ್ಥ್ಯ ಕ್ಷೀಣಿಸುತ್ತದೆ. ಅಂದರೆ, ತಮ್ಮ ಸ್ವಂತದವರ ಹೆಸರುಗಳನ್ನು ಮರೆತಿರುತ್ತಾರೆ ಎಂದಲ್ಲ. ಆದರೆ, ಮೆದುಳು ಚುರುಕಾಗಿರುವುದಿಲ್ಲ. ಇದಕ್ಕೆ ಕಾರಣ ನಾವು ನಮ್ಮ ದೇಹದ ಬೇರೆ ಅಂಗಗಳ ಬಗ್ಗೆ ತೋರುವ ಕಾಳಜಿಯನ್ನು ನಮ್ಮ ಮೆದುಳಿನ ಬಗ್ಗೆ ತೋರದಿರುವುದು. ನಮ್ಮ ದೇಹವನ್ನು ಫಿಟ್ಟಾಗಿ ಇಟ್ಟುಕೊಳ್ಳುವಂತೆ ಮೆದುಳನ್ನೂ ಫಿಟ್ಟಾಗಿ ಇಟ್ಟುಕೊಳ್ಳದೇ ಇರುವುದು. ಇದು ತೀರಾ ಗಾಬರಿ ಬೀಳುವ ವಿಷಯವೇನಲ್ಲ. ನಿಮ್ಮ ಮೆದುಳನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳುವುದು ನಿಮ್ಮಿಂದಲೇ ಸಾಧ್ಯ.

ಹೃದಯದ ಬಡಿತ ಹೆಚ್ಚಾಗಬೇಕು
ದೈಹಿಕ ವ್ಯಾಯಾಮವು ನಮ್ಮಲ್ಲಿನ ಹಿಪುಕ್ಯಾಂಪಸ್ ಗಾತ್ರವನ್ನು ಹಿಗ್ಗಿಸುತ್ತದೆ. ಇದು ನೇರವಾಗಿ ಮೆದುಳಿಗೆ ಸಂಬಂಧಿಸಿದ್ದು. ಆದ್ದರಿಂದ ಹಳೆಯ ಘಟನೆಗನ್ನು ನೆನಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿ ದಿನ ನಿಯಮಿತ ವ್ಯಾಯಾಮ ಮಾಡುವುದರಿಂದ ಮೆದುಳಿನಲ್ಲಿ ನೆನಪಿನ ಶಕ್ತಿ ಪ್ರಚೋದಿಸುವ ರಾಸಾಯನಿಕ ಬಿಡಿಎನ್‌ಎಫ್ (ಬ್ರೈನ್ ಡಿರೈವ್ಡ್ ನ್ಯೂರೋಟ್ರಾಫಿಕ್ ಫ್ಯಾಕ್ಟರ್) ಉತ್ಪತ್ತಿಯಾಗುತ್ತದೆ. ವ್ಯಾಯಾಮ ಮಾಡಿದಾಗಲೆಲ್ಲ ಈ ಬಿಡಿಎನ್‌ಎಫ್ ಬಿಡುಗಡೆಯಾಗುತ್ತದೆ. ಇದು ನಮ್ಮ ಮೆದುಳಿನಲ್ಲಿನ ನೆನಪುಗಳನ್ನು ಮರುಕಳಿಸುವ ಸರ್ಕೀಟ್ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಬಿಡಿಎನ್‌ಎಫ್ ಪಡೆಯಬೇಕಾದರೆ ಪ್ರತಿದಿನ ಕನಿಷ್ಠ 30 ನಿಮಿಷದ ವ್ಯಾಯಾಮ ಅಗತ್ಯ. ವಾರದಲ್ಲಿ ಐದು ದಿನವಾದರೂ ವ್ಯಾಯಾಮ ಮಾಡಲೇಬೇಕು. ಇಂಥದ್ದೇ ವ್ಯಾಯಾಮ ಅಂತಿಲ್ಲ. ಜಾಗಿಂಗ್, ಜೋರಾಗಿ ನಡೆಯುವುದು, ಈಜುವುದು, ತೋಟದ ಕೆಲಸ, ಮನೆಗೆಲಸ... ಒಟ್ಟಿನಲ್ಲಿ ದೈಹಿಕ ಶ್ರಮ ಇರಬೇಕು, ದೇಹದಲ್ಲಿ ರಕ್ತಚಲನೆಯಾಗುತ್ತಿರಬೇಕು ಅಷ್ಟೆ.

ಸಿಕ್ಕಿದ್ದನ್ನೆಲ್ಲ ತಿನ್ನಬೇಡಿ
ಇತ್ತೀಚಿನ ದಿನಗಳಲ್ಲಿ ಆಹಾರ ಕಾಳಜಿ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ. ಆದರೂ ಎಷ್ಟೋ ಮಂದಿ ವ್ಯಾಯಾಮ ಮಾಡುತ್ತೇವಲ್ಲ ಎಂದು ಸಿಕ್ಕಿದ್ದನ್ನೆಲ್ಲ ತಿನ್ನುತ್ತಾರೆ. ಇಂತಹವರು ವ್ಯಾಯಾಮ ಮಾಡಿದರೂ  ಉಪಯೋಗವಿಲ್ಲ. ಸೇವಿಸುವ ಆಹಾರವು ದೇಹದ ಪ್ರತಿಯೊಂದು ಅಂಗದ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ಆದಷ್ಟು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಸಿ ತರಕಾರಿ, ಹಣ್ಣುಗಳನ್ನು  ಸೇವಿಸಬೇಕು. ಸತ್ವಯುತ ಆಹಾರದಿಂದ ಮೆದುಳು ಆರೋಗ್ಯವಾಗಿರುತ್ತದೆ, ಯೋಚನೆ ಮಾಡುವ ಶಕ್ತಿಯೂ ಹೆಚ್ಚುತ್ತದೆ.

ಒಟ್ಟುಗೂಡಿಸಿಕೊಳ್ಳಿ - ಕಲ್ಪಿಸಿಕೊಳ್ಳಿ
ನಾವು ಪ್ರತಿದಿನವೂ ಲಕ್ಷಾಂತರ ವಸ್ತುಗಳನ್ನು ನೋಡುತ್ತೇವೆ. ಆದರೆ, ಅಷ್ಟನ್ನೂ ಜ್ಞಾಪಕದಲ್ಲಿಟ್ಟುಕೊಳ್ಳಲು ಅಸಾಧ್ಯದ ಮಾತು. ಆದರೆ, ಅದೇ ವಸ್ತುಗಳನ್ನು ಚಿಕ್ಕಚಿಕ್ಕ ಗುಂಪುಗಳಾಗಿ ವಿಂಗಡಿಸಿಕೊಂಡರೆ ಬಹುತೇಕ ವಸ್ತುಗಳನ್ನು ನೆನಪಿನಲಿಡಲು ಸಾಧ್ಯ. ಉದಾ: ನಮ್ಮ ಡೆಬಿಟ್ ಕಾರ್ಡ್ ನಂಬರ್ ಅಥವಾ ಬ್ಯಾಂಕ್ ಅಕೌಂಟ್ ನಂಬರ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದರೆ ಮೂರೋ - ನಾಲ್ಕು ನಂಬರ್‌ಗಳನ್ನು ಗುಂಪುಗಳಾಗಿ ವಿಂಗಡಿಸಿ ಅಭ್ಯಾಸ ಮಾಡಿಕೊಳ್ಳುವುದರಿಂದ ಸುಲಭವಾಗಿ ಅದು ಮೆದುಳಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಎಲ್ಲವನ್ನೂ ತುರುಕಬೇಡಿ
ಪ್ರತಿಯೊಂದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಎಂಬುದು ಮೂರ್ಖತನ. ಮಾತ್ರವಲ್ಲ, ಅಸಾಧ್ಯ ಕೂಡ. ತುಂಬ ಅವಶ್ಯವಿರುವ ಆತ್ಮೀಯರ ಫೋನ್ ನಂಬರ್, ಹುಟ್ಟಿದ ದಿನಾಂಕ, ಹೆಸರು ಇಂತಹವನ್ನು ಜ್ಞಾಪಕದಲ್ಲಿ ಇಟ್ಟುಕೊಂಡರೆ ಸಾಕು. ಅದುಬಿಟ್ಟು ಅಗತ್ಯ ಇರುವುದು, ಅನಿವಾರ್ಯ ಅಲ್ಲದಿರುವುದು ಎಲ್ಲವನ್ನೂ ಜ್ಞಾಪಕದಲ್ಲಿಡಲು ಪ್ರಯತ್ನಿಸಿದರೆ, ಮೆದುಳಿಗೂ ಆಯಾಸವಾಗುತ್ತದೆ. ಪಾಪ, ಅದು ತಾನೆ ಎಷ್ಟು ಅಂತ ತಡೆದುಕೊಳ್ಳಲು ಸಾಧ್ಯ?

ನಿದ್ರಾ ಭಂಗ ಬೇಡ
ಸುಖ, ದುಃಖ, ನೋವು, ನಲಿವು ಪ್ರತಿಯೊಬ್ಬರಿಗೂ ಇರುತ್ತದೆ. ಏನೋ ತೊಂದರೆ ಬಂತು ಅಂತ ಹೇಳಿ ಅದೇ ಯೋಚನೆಯಲ್ಲಿ ನಿದ್ದೆ ಮಾಡುವುದನ್ನು ಕಡಿಮೆ ಮಾಡಿದರೆ, ಮೆದುಳು ಕೂಡ ಸೊರಗಲು ಪ್ರಾರಂಭಿಸುತ್ತದೆ. ಇದರಿಂದ ನೆನಪಿನ ಶಕ್ತಿಯೂ ಕುಂದುತ್ತದೆ. ದಿನದಲ್ಲಿ ಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು ಎಂಬುದು ತಜ್ಞರ, ವೈದ್ಯರ ಅಭಿಪ್ರಾಯ. ಆರೋಗ್ಯವಂತ ದೇಹ, ಮೆದುಳು, ನೆನಪಿನ ಶಕ್ತಿ, ದೇಹದ ಪ್ರತಿಯೊಂದು ಅಂಗವೂ ಸದೃಢವಾಗಿ ಕೆಲಸ ಮಾಡಬೇಕೆಂದರೆ ನೆಮ್ಮದಿಯ ನಿದ್ದೆ ಪ್ರಮುಖ ಪಾತ್ರ ವಹಿಸುತ್ತದೆ. ಗಾಢ ನಿದ್ದೆಯಲ್ಲಿದ್ದಾಗಲಷ್ಟೇ ಮೆದುಳಿನಲ್ಲಿನ ಕಲ್ಮಶಗಳು ಕರಗುತ್ತವೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಎಡಬಿಡದೆ ಮೆದುಳಿಗೆ ಕೆಲಸ ಕೊಡುತ್ತೇವೆ. ರಾತ್ರಿ ವೇಳೆಯಾದರೂ ಅದಕ್ಕೆ ವಿಶ್ರಾಂತಿ ಬೇಡವೆ? ನಿರಂತರ ಕೆಲಸ ಕೊಟ್ಟರೆ ಅದರ ಶಕ್ತಿಯೂ ಕುಂದುತ್ತಾ ಸಾಗುತ್ತದೆ. ಅದಕ್ಕಾಗಿ 'ಬಂದದ್ದು ಬರಲಿ ಭಗವಂತನ ದಯೆವೊಂದಿರಲಿ' ಅಂತ ಯಾವ ಯೋಚನೆಯನ್ನೂ ಮಾಡದೆ ನೆಮ್ಮದಿಯಿಂದ ಮಲಗುವುದನ್ನು ರೂಢಿಸಿಕೊಳ್ಳಬೇಕು.

ಮನಸಾರೆ ನಕ್ಕುಬಿಡಿ

ತುಂಬಾ ಜನರು ನಗುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ. ನಕ್ಕರೆ ಎಲ್ಲಿ ಮುತ್ತು ಉದುರಿಹೋಗುತ್ತದೋ ಅಂತ ಮುಖ ಗಂಟಿಕ್ಕಿಕೊಂಡೇ ಇರುತ್ತಾರೆ. ಪ್ರತಿ ರೋಗಕ್ಕೂ ನಗುವೇ ಮದ್ದು ಎನ್ನುತ್ತಾರೆ ಹಲವರು. ಇದು ನಿಜ ಕೂಡ. ನಗುವುದರಿಂದ ನಮ್ಮ ದೇಹದಲ್ಲಿನ ಪ್ರತಿಯೊಂದು ನರನಾಡಿಗಳೂ ಕಾರ್ಯಾಚರಿಸುತ್ತವೆ. ಇದರಿಂದ ಮೆದುಳೂ ಹೊರತಲ್ಲ. ಅದೂ ಕೂಡ ಚುರುಕಾಗಿ ಕೆಲಸ ಮಾಡುತ್ತದೆ. ಇದು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು, ಹೊಸತನವನ್ನು ಯೋಚಿಸಲು ಸಹಾಯ ಮಾಡುತ್ತದೆ. ಸದಾ ಕಾಲ ಮುಖ ಗಂಟಿಕ್ಕಿಕೊಂಡರೆ ಮೆದುಳಿಗೂ, ದೇಹದ ಅಂಗಗಳಿಗೂ ಯಾವುದೇ ಕೆಲಸವಿರುವುದಿಲ್ಲ. ಹೀಗಾಗಿ ಪ್ರತಿಯೊಂದೂ ಸೊರಗುತ್ತಾ ಹೋಗುತ್ತದೆ. ಹಾಗೆಯೇ ಮನುಷ್ಯನನ್ನು ಮಂಕಾಗಿಸುತ್ತದೆ. ಆದ್ದರಿಂದ ಮನಸಾರೆ ಅನುಭವಿಸುತ್ತ ನಗುವುದು ದೇಹಕ್ಕೂ ಆರೋಗಕ್ಕೂ, ಮೆದುಳಿಗೂ ಒಳ್ಳೆಯದು.

ಆಟವಾಡಿ

ಪ್ರತಿದಿನದ ಚಟುವಟಿಕೆಗಳೊಂದಿಗೆ ಓದುವುದು, ಬರೆಯುವುದರಿಂದ ಕೆಲವೊಂದಷ್ಟನ್ನು ನೆನಪಿನಲ್ಲಿಟ್ಟುಕೊಳ್ಳಬಹುದಷ್ಟೆ. ಓದುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಉದಾಹರಣೆಗೆ ಪ್ರತಿದಿನದ ನ್ಯೂಸ್ ಅನ್ನು ಟಿವಿಯಲ್ಲಿ ನೋಡುವುದರಿಂದ ಹೆಚ್ಚು ದಿನ ನೆನಪಿನಲ್ಲಿಟ್ಟುಕೊಳ್ಳಲು ಕಷ್ಟ.  ಟಿವಿ ನೋಡುವುದರ ಜತೆಗೆ ದಿನಪತ್ರಿಕೆಗಳನ್ನು ಓದುವುದರಿಂದ ಓದಿದ ನೆನಪು  ಹೆಚ್ಚು ದಿನ ಮೆದುಳಿನಲ್ಲಿ ಉಳಿಯುತ್ತದೆ. ಇದರ ಜತೆಗೆ ಮೆದುಳಿಗೆ ಕೆಲಸ ಕೊಡುವ ಚಟುವಟಿಕೆಗಳಾದ ಸುಡೊಕು, ಪದಬಂಧ ಬಿಡಿಸುವುದನ್ನು ಪ್ರತಿದಿನದ ಚಟುವಟಿಕೆಯಾಗಿ ಮಾಡಿಕೊಳ್ಳಬೇಕು. ಹಾಗಂತ ಮಕ್ಕಳಿಗೆ ಅಟವಾಡುವುದಕ್ಕೆ ಬಿಡದೆ ಓದಿನ ಕಡೆಗಷ್ಟೇ ಗಮನಹರಿಸಲು ಹೇಳುವುದು ಅಪಾಯ. ಓದಿನ ಜೊತೆಗೆ ಅಟವೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಟವಾಡುವುದರಿಂದ ದೇಹವಲ್ಲದೆ ಮೆದುಳೂ ತೊಡಗುವುದರಿಂದ ಮೆದುಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಆಟವೂ  ಒಂದು ರೀತಿ ವ್ಯಾಯಾಮವೇ.

ಸವಾಲೊಡ್ಡಿ
ಮನುಷ್ಯ ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಆತನ ಮೆದುಳಿನಲ್ಲಿ ಕೋಟ್ಯಂತರ ನ್ಯೂರಲ್ ಪಾಥ್‌ವೇಗಳು ಅಭಿವೃದ್ಧಿಗೊಳ್ಳುತ್ತವೆ. ಇದು ವಿಷಯಗಳನ್ನು ಬೇಗ ಗ್ರಹಿಸಲು ಸಹಾಯ ಮಾಡುತ್ತದೆ. ಹಾಗೆಯೇ ಕ್ಲಿಷ್ಟ ಪರಿಸ್ಥಿತಿಯಲ್ಲೂ ಮೆದುಳು ಒತ್ತಡಕ್ಕೆ ಒಳಗಾಗದೆ, ಅಂತಹ ಪರಿಸ್ಥಿತಿಯಿಂದ ಪಾರಾಗಲು ದಾರಿ ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದೆಲ್ಲ ಆರೋಗ್ಯವಂತ ಮೆದುಳಿನಿಂದ ಮಾತ್ರ ಸಾಧ್ಯ. ಮೆದುಳಿಗೆ ಜಾಸ್ತಿ ಕೆಲಸಕೊಟ್ಟಷ್ಟೂ ಮೆದುಳು ಚುರುಕಾಗಿರುತ್ತದೆ. ಹಾಗೆಯೇ ಘಟನೆಗಳನ್ನು ತನ್ನಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಶಕ್ತವಾಗಿರುತ್ತದೆ. ಮೆದುಳಿಗೆ ಸಂಬಂಧಿಸಿದ ವ್ಯಾಯಾಮ ಮಾಡಿದರೆ ಎಂದಿನ ಯೋಚನಾಲಹರಿಯನ್ನು ಬಿಟ್ಟು ಬೇರೆ ರೀತಿಯಲ್ಲಿ ಯೋಚಿಸುವಂತೆ ನಮ್ಮನ್ನು ಮೆದುಳು ಪ್ರೇರೇಪಿಸುತ್ತದೆ. ಉದಾ: ಹಾಡು ಕೇಳುವುದು, ಸಂಗೀತ ನುಡಿಸುವುದು, ಟೇಬಲ್ ಟೆನ್ನಿಸ್ ಆಟ, ನೃತ್ಯ, ಬರವಣಿಗೆ ಇಂತಹ ಕೆಲಸಗಳಿಂದಾಗಿ ಮೆದುಳು ಸೃಜನಾತ್ಮಕವಾಗಿ ಆಲೋಚಿಸುವಂತೆ ಮಾಡುತ್ತದೆ.

ಸಂಘಜೀವಿಯಾಗಿರಿ
ಬಹುತೇಕರು ಒಂಟಿಯಾಗಿರಲು ಇಷ್ಟಪಡುವುದೂ ಇಲ್ಲ. ಹಾಗಿರಲು ಸಾಧ್ಯವೂ ಇಲ್ಲ. ಹೆಚ್ಚುಹೆಚ್ಚು ಜನರೊಂದಿಗೆ ಬೆರತಷ್ಟೂ ಮೆದುಳು ಹೆಚ್ಚು ಆ್ಯಕ್ಟಿವ್ ಆಗಿರುತ್ತದೆ. ಜನರ ಜೊತೆ ಹೆಚ್ಚು ಮಾತಾಡಿದಷ್ಟೂ ಮೆದುಳಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು. ಸಂಘಜೀವಿ ಆದಾಷ್ಟೂ ಜ್ಞಾಪಕಶಕ್ತಿಯೂ ಚೆನ್ನಾಗಿರುತ್ತದೆ. ಅಷ್ಟು ಸುಲಭವಾಗಿ ಮರೆಯುವುದಕ್ಕಾಗುವುದಿಲ್ಲ. ಇದರ ಜೊತೆಗೆ ಒಳ್ಳೆಯ ಸ್ನೇಹಿತರನ್ನು ಸಂಪಾದಿಸುವುದರಿಂದ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳುವುದಲ್ಲದೆ, ಮೆದುಳು ಸದಾ ಕಾಲ ಕ್ರಿಯಾಶೀಲವಾಗಿರುತ್ತದೆ.

ವಿಶ್ರಮಿಸಿ
ಮನುಷ್ಯನಿಗೆ ಕಡು ವೈರಿ ಅಂದರೆ ಅದು ಒತ್ತಡ. ಅದರಿಂದ ಹೊರಬರದಿದ್ದರೆ, ಮೆದುಳು ಸ್ತಬ್ಧಗೊಳ್ಳುವುದರಲ್ಲಿ ಅನುಮಾನವಿಲ್ಲ. ಒತ್ತಡ ಹೆಚ್ಚಾದಷ್ಚೂ ನಮ್ಮ ಮೆದುಳಿನ ಕೋಶಗಳಿಗೆ ಧಕ್ಕೆಯಾಗಿ ನೆನಪಿನ ಶಕ್ತಿಯೂ ಕುಂದುತ್ತದೆ. ಅಲ್ಲದೆ, ಹೊಸ ವಿಷಯಗಳನ್ನು ಹಿಡಿದಿಟ್ಟುಕೊಳ್ಳಲು ಅಸಾಧ್ಯ. ಒತ್ತಡಮುಕ್ತ ಜೀವನ ನಡೆಸಬೇಕೆಂದರೆ ಧ್ಯಾನದ ಮೊರೆ ಹೋಗಬೇಕು. ಧ್ಯಾನ ಮಾಡುವುದರಿಂದ ಒತ್ತಡಗಳಿಂದ ರಿಲ್ಯಾಕ್ಸ್ ಆಗಬಹುದು. ಜೊತೆಗೆ ಖಿನ್ನತೆ, ಆತಂಕ, ಮಧುಮೇಹ, ಒತ್ತಡದಂತಹ ಸಮಸ್ಯೆಗಳಿಂದಲೂ ದೂರವಾಗಬಹುದು. ಹಾಗೆಯೇ ಏಕಾಗ್ರತೆ, ಸೃಜನಾತ್ಮಕವಾಗಿ ಚಿಂತಿಸಲು, ಕಲಿಕೆ ಹಾಗೂ ತಾರ್ಕಿಕ ಕೌಶಲಗಳನ್ನು ಉತ್ತಮಗೊಳಿಸಿಕೊಳ್ಳಬಹುದು. ಮೆಡಿಟೇಷನ್ ಮಾಡುವವರ ಮೆದುಳಿನ ಎಡ ಭಾಗದ ಪ್ರಿಫ್ರಂಟಲ್ ಕಾರ್ಟೆಕ್ಸ್ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. ಇದು ಸಂತೋಷ ಭಾವನೆ ಉಂಟುಮಾಡಲು ಹಾಗೂ ಸಮಚಿತ್ತ ಬೆಳೆಸಿಕೊಳ್ಳಲು ನೆರವಾಗುತ್ತದೆ.




-ಶಿವಕುಮಾರ್ ಆರ್.
shivar2611@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು