ಅಂದು ಏನೂ ಅರಿಯದ ಅಬ್ಬೇಪಾರಿಯ ಹಾಗೆ ನೂರೈವತ್ತು ಕೇಜಿ ಲಗೇಜನ್ನು ಆಟೋದಲ್ಲಿ ಸ್ಕೂಲು ಮಕ್ಕಳನ್ನು ತುಂಬಿದ ಹಾಗೆ ತುಂಬಿಕೊಂಡು ವಿಮಾನ ಹತ್ತಿದಾಗ ಅದು ಇಷ್ಟು ಸುದೀರ್ಘ ಪಯಣವಾಗಲಿದೆಯೆಂಬ ಅರಿವೇ ಇರಲಿಲ್ಲ. ಮದುವೆಯಾದ ಹೊಸತು, ಪ್ರಾಜೆಕ್ಟಿನ ಲೆಕ್ಕಾಚಾರದಲ್ಲಿ ಒಂದೆರಡು ವರ್ಷ ವಿದೇಶ ಸುತ್ತಿ ಬರುವ ಹುರುಪು ಮತ್ತು ಏನಿರಬಹುದೀ ವಿದೇಶದ ಗಮ್ಮತ್ತು ಎಂಬ ಕುತೂಹಲ ಬಿಟ್ಟರೆ ನಮ್ಮ ಪದಾರ್ಥಗಳು, ಊಟಾತಿಂಡಿಗಳು ಅಲ್ಲಿ ಸಿಗುವುದಿಲ್ಲವಂತೆ ಎಂಬ ಅಂತೆಕಂತೆಗಳಷ್ಟೆ ಕೆಲಸ ಮಾಡಿ ಕೇಜಿ ಕೇಜಿಗೂ ಲೆಕ್ಕ ಹಾಕುವ ವಿಮಾನದ ಲಗೇಜನ್ನು ನೂರೈವತ್ತಕ್ಕೆ ಏರಿಸಿಬಿಟ್ಟಿತ್ತು- ಹುಣಸೆಹಣ್ಣು, ಬೇಳೆ, ಖಾರದ ಪುಡಿ, ಹಿಟ್ಟುಗಳಿಂದ ಹಿಡಿದು ಹಪ್ಪಳ ಸಂಡಿಗೆಗಳ ಪೊಟ್ಟಣಗಳ ತನಕ. ನಾನು ಹೋಗುತ್ತಿರುವ ಸಿಂಗಾಪುರವೆಂಬ ಜಾಗದಲ್ಲಿ ಒಂದು ಪುಟ್ಟ ಭಾರತವೇ ನೆಲೆಸಿದೆಯೆಂಬ ಸತ್ಯದ ಅರಿವನ್ನು ಯಾರಾದರೂ ಮನವರಿಕೆ ಮಾಡಿಕೊಟ್ಟಿದ್ದರೆ ಕನಿಷ್ಠ ಅದರ ಅರ್ಧದಷ್ಟಾದರೂ ತೂಕ ಕಡಿಮೆಯಾಗುತ್ತಿತ್ತೇನೋ? ಆದರೆ, ತೊಂಭತ್ತೆಂಟರ ಆಸುಪಾಸಿನ ಆ ವರ್ಷದಲ್ಲಿ ನಮ್ಮ ಕಂಪನಿಯಿಂದ ಅಲ್ಲಿಗೆ ಹೋದವರ ಸಂಖ್ಯೆ ಅಷ್ಟು ಹೆಚ್ಚಿರಲಿಲ್ಲ; ಜೊತೆಗೆ ಈಗಿನ ಹಾಗೆ ಆಗ ಇನ್ನು ಇಂಟರ್ನೆಟ್ಟಲ್ಲೇ ಎದ್ದು, ಉಸಿರಾಡಿ, ಮಲಗಿ ನಿದ್ದೆ ಮಾಡುವಷ್ಟು ಸೌಕರ್ಯಗಳೂ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ವಿದೇಶಿ ಪ್ರಯಾಣ- ಆದದ್ದಾಗಲಿ ಎಂಬ ಹುಂಬು ಧೈರ್ಯ. ನಮ್ಮೂರಿನ ಹಾಗೆ ದಾರಿಯಲ್ಲಿ ಸಿಕ್ಕವರನ್ನು ಕೇಳಿ ಅಡ್ರೆಸ್ ಪತ್ತೆ ಹಚ್ಚುವ ಹಾಗೆ, ಬೇಕಾದ್ದೆಲ್ಲ ಒಂದೊಂದಾಗಿ ಅವರಿವರನ್ನು ಕೇಳಿ ತಿಳಿದುಕೊಂಡರಾಯ್ತು ಎನ್ನುವ ಉಡಾಫೆ ಬೇರೆ.
ಪುಣ್ಯಕ್ಕೆ, ನಾನು ಹೊರಟಿದ್ದ ದೇಶ ಸಿಂಗಾಪುರವಾಗಿದ್ದ ಕಾರಣ, ಜೊತೆಗೆ ಇಲ್ಲಾಗಲೇ ತಳವೂರಿದ ಸಾಕಷ್ಟು ದೊಡ್ಡ ಭಾರತೀಯ ಸಮುದಾಯದ ಕೃಪೆಯಿಂದಾಗಿ ಆ ಹುಂಬತನವಾಗಲಿ, ಉಢಾಫೆಯಾಗಲಿ ಬಲವಾಗಿ ಕೈ ಕಚ್ಚಲಿಲ್ಲ. ಅಲ್ಲದೆ, ಸಿಕ್ಕ ಅಷ್ಟಿಷ್ಟು ಗೆಳೆಯರು ಆಘಾತಗಳ ಅರಿವೆ ಆಗದಂತೆ ಸುತ್ತ ಮೆತ್ತೆಯಾಗಿ ನಮ್ಮ ವಿದೇಶಿ ಬದುಕಿಗೆ ಶುಭಕರ ನಾಂದಿ ಹಾಡುವ ರೂವಾರಿಗಳಾದರು.
ಹಾಗೆಂದು ಎಲ್ಲ ಹೂವಿನ ಹಾಸಿಗೆಯೆ ಆಗಿತ್ತೆಂದಲ್ಲ; ಜೀವನದಲ್ಲಿ ಮೊದಲ ಶಾಕ್ ಆಗಿದ್ದು ಅಲ್ಲಿನ ಮನೆಗಳ ಬಾಡಿಗೆಯ ದರ ನೋಡಿದಾಗ! ಚಿಕ್ಕ ಊರೇ ದೇಶವಾಗಿ, ಇರುವ ಜಾಗದಲ್ಲೇ ಸಾವರಿಸಿಕೊಂಡಿರುವ ಬದುಕಿಗೆ ಇಲ್ಲಿನ ಜನ ತೆರುವ ಬೆಲೆ- ದುಬಾರಿ ಮನೆ ಮತ್ತು ದುಬಾರಿ ಕಾರು. ಆದರೆ ಇಲ್ಲಿನ ಸಾರ್ವಜನಿಕ ಸಾಗಾಣಿಕೆ ವ್ಯವಸ್ಥೆ ಅದೆಷ್ಟು ಅದ್ಭುತವಾಗಿದೆಯೆಂದರೆ, ನಾವು ಇಂದಿಗೂ ಕಾರಿನ ಬಗ್ಗೆ ಕಿಂಚಿತ್ತೂ ಚಿಂತಿಸದೆ ಬಸ್ಸು, ಟ್ರೈನೂ, ಟ್ಯಾಕ್ಸಿಗಳಲ್ಲೇ ಆರಾಮಾಗಿ ಓಡಾಡಿಕೊಂಡಿದ್ದೇವೆ. ಇನ್ನು ಮನೆ ಬಾಡಿಗೆ- ಬೇರೆ ದಾರಿಯೇ ಇಲ್ಲ. ಅದೃಷ್ಟಕ್ಕೆ ಇಲ್ಲಿನ ಸಂಬಳದ ಲೆಕ್ಕಾಚಾರ ಈ ವೆಚ್ಚವನ್ನು ಪರಿಗಣಿಸಿಯೇ ನಿರ್ಧಾರವಾಗುವುದರಿಂದ, ಮಿಕ್ಕ ನಿತ್ಯ ಜೀವನದ ಪರಿ ಈ ಆಘಾತವನ್ನು ತುಸು ತುಸುವೆ ಮೆದುವಾಗಿಸುತ್ತದೆ. ಆದರೂ ಮೊದಮೊದಲ ಶಾಕಿನಿಂದ ಹೊರಬರುವುದು ಅಷ್ಟು ಸುಲಭವೇನಲ್ಲ. ದೊಡ್ಡ ಶಾಕುಗಳ ಪರಿಣಾಮ ಚಿಕ್ಕ ಪುಟ್ಟ ವಿಷಯಗಳಲ್ಲೂ ತಲೆ ತೂರಿಸದೆ ಬಿಡುವುದಿಲ್ಲ. ಅದರಲ್ಲಿ ಪ್ರಮುಖವಾದದ್ದು ವಿನಿಮಯ ದರ. ತರಕಾರಿಯಿಂದ ಹಿಡಿದು ರೆಸ್ಟೋರೆಂಟಿನ ಇಡ್ಲಿ ದೋಸೆಯವರೆಗೂ ಕೊಳ್ಳುವ, ಆರ್ಡರ್ ಮಾಡುವ ಮುನ್ನ ಆಯಾಚಿತವಾಗಿ ಬಂದು ಗುನುಗಿ ಹೋಗುವ ಅಂಶವೆಂದರೆ ಅದೆಲ್ಲದರ ರುಪಾಯಿಯ ಅಳತೆ. 'ಅಬ್ಬಾ! ಒಂದು ಪ್ಲೇಟು ಊಟಕ್ಕೆ ಐನೂರು ರುಪಾಯಿಯೇ?', 'ಒಂದು ಕಂತೆ ಕೊತ್ತಂಬರಿ ಸೊಪ್ಪಿಗೆ ನಲವತ್ತು ರುಪಾಯಿಯೇ?', 'ನ್ಯೂಸ್ಪೇಪರಿಗೆ ಐವತ್ತು ರುಪಾಯಿಯೇ?'- ಹೀಗೆ ಎಲ್ಲ ಕಡೆಯೂ ಕೈ ಕಟ್ಟಲೆತ್ನಿಸುವ ಹೋಲಿಕೆಯ ಮಾಯಾಜಾಲದಿಂದ ಹೊರಬಂದು ಅಲ್ಲಿನ ಬದುಕಿನ ಲೆಕ್ಕಾಚಾರಕ್ಕೆ ಹೊಂದಾಣಿಕೆಯಾಗಲೂ ಸಾಕಷ್ಟು ಸಮಯ ಹಿಡಿಯುತ್ತದೆ- ಅದೂ ಅಗತ್ಯವಿದ್ದ ಅಂಶಗಳಿಗೆ ಮಾತ್ರ. ಹೊರಗೆ ತಿನ್ನುವುದಕ್ಕಿಂತ ಮನೆಯೂಟವೇ ಅಗ್ಗವೆಂಬ ಜಾಣತನ, ಆಫೀಸಿನ ಊಟಕ್ಕೂ ಬೆಳಗ್ಗೆಯೆ ಕಟ್ಟಿಕೊಂಡು ಹೋಗಿ, ಬಿಸಿ ಪೆಟ್ಟಿಗೆಯಲ್ಲಿ ಬಿಸಿ ಮಾಡಿಕೊಂಡು ತಿನ್ನುವುದು ಶಿಸ್ತಾಗಿ ಬಿಡುತ್ತದೆ. ಮನೆಗೆ ತರುವ ಐಷಾರಾಮಿ ಸರಕುಗಳೂ, ಸೇಲಿನಲ್ಲೋ, ಡಿಸ್ಕೌಂಟಿನಲ್ಲೋ, ಕೆಲವೊಮ್ಮೆ ಸೆಕೆಂಡ್ ಹ್ಯಾಂಡಿನಲ್ಲೋ ತರುವ ಬುದ್ಧಿವಂತಿಕೆಯ ಜಾಣತನವಾಗಿಬಿಡುತ್ತದೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆ ಸ್ವದೇಶದಲ್ಲಿ 'ಅಲ್ಲೇನು ಬಿಡ್ರಪ್ಪಾ, ರಾಜ ರಾಣಿ ಹಂಗಿರ್ಬೋದು' ಅನ್ನುವ ಭಾವನೆಯನ್ನು ನೇರವಾಗಿ ಅಲ್ಲಗಳೆಯಲೂ ಸಾಧ್ಯವಾಗದಂತೆ ನಟಿಸಬೇಕಾದದ್ದು ಅದೆಷ್ಟು ಬಾರಿಯೋ! ಹೀಗಿದ್ದೂ, 'ಅದೇನು ವಿದೇಶಿ ಮೋಹವಪ್ಪಾ' ಅನ್ನುತ್ತೀರಾ? ಅಲ್ಲೇ ಇರುವುದು ಸೂಕ್ಷ್ಮ!
ಬದುಕುವುದು ವಿದೇಶವೇ ಆದರೂ, ಬಂದ ಹೊಸತರಲ್ಲಿ ಎಲ್ಲರ ಮನದ ಹಿನ್ನೆಲೆಯಲ್ಲಿ ಅರಿತೋ ಅರಿಯದೆಯೋ ಕೆಲಸ ಮಾಡುವ ಭಾವನೆ- ಕೆಲ ವರ್ಷಗಳಷ್ಟೇ ದುಡಿದು ಹಣ ಸಂಪಾದಿಸಿ, ಮತ್ತೆ ಊರಿಗೆ ಹೋಗಿಬಿಡುತ್ತೇವೆಂಬ ಹವಣಿಕೆ. ಹೀಗಾಗಿ, ಇಲ್ಲಿನ ಸಂಬಳ, ಉಳಿತಾಯ ಏನೇ ಇರಲಿ ಅದನ್ನು ಸ್ಥಳೀಯ ಲೆಕ್ಕದಲ್ಲಿ ನೋಡುವುದಿಲ್ಲ. ಎಲ್ಲ ಖರ್ಚು ಕಳೆದು ತಿಂಗಳಿಗೆ ಬರೀ ಐನೂರು ಡಾಲರು ಉಳಿಸಿದರೂ, ಅದನ್ನು ರುಪಾಯಿಗೆ ಬದಲಿಸಿ, ಹನ್ನೆರಡರಿಂದ ಗುಣಿಸಿ ವರ್ಷಕ್ಕೆಷ್ಟು ರುಪಾಯಿ ಉಳಿತಾಯ ಎಂಬ ಗುಣಾಕಾರದಲ್ಲಿ ನೋಡುವುದರಿಂದ, ಬೇರೆಲ್ಲ ಥರದ ಹೊಂದಾಣಿಕೆಗೂ ಮನ ಸಿದ್ಧವಾಗುತ್ತದೆ. ಆ ಮನಸತ್ವವೆ ಹೆಚ್ಚೆಚ್ಚು ಉಳಿಸಲು ಮತ್ತಷ್ಟು ಪ್ರೇರೇಪಿಸಿ ದಿನದಿನದ ಎಲ್ಲ ವಿಷಯಗಳಲ್ಲೂ ಪ್ರಭಾವ ಬೀರತೊಡಗುತ್ತದೆ- ವೀಕೆಂಡ್ ಮೂವಿ ಬೇಕಾ? ಟೀವಿ ಮೂವಿ ಸಾಕಾ? ಒಂದಷ್ಟು ಜನ ಸೇರಿ ಸೀಡಿ ತಂದು ಶೇರು ಮಾಡಿದರೆ ಸಾಕಾ? ಟ್ಯಾಕ್ಸಿಯಾ ಬಸ್ಸಾ? ಟೂರು ಹೋಗಬೇಕಾ, ಬೇಡವಾ? ಹೀಗೆ ಎಲ್ಲ ಸಂಗತಿಗಳಲ್ಲೂ ನಮ್ಮರಿವಿಲ್ಲದೆ ಹಸ್ತಕ್ಷೇಪ ಮಾಡುವ ಉಳಿತಾಯದ ಲೆಕ್ಕಾಚಾರ, ಪ್ರತಿಯೊಂದನ್ನು ರುಪಾಯಿಗೆ ಬದಲಿಸಿ ವಿನಿಮಯ ಮೌಲ್ಯ ನೋಡುವ ತೆವಲಿನಷ್ಟೇ ಹಿನ್ನೆಲೆಗೆ ತಳ್ಳುತ್ತದೆ.
ಅಲ್ಲಿಯತನಕ ಕೆಲ ವರ್ಷದ ಮಟ್ಟಿಗೆಂದು ಮಾತ್ರವೆ ಚಿಂತಿಸುತ್ತಿದ್ದ ಮನ, ಈಗ ಮೀಡೀಯಂ ಟರ್ಮಿಗೂ ವಿಸ್ತರಿಸಿಕೊಳ್ಳುತ್ತದೆ. ಆಗ ರುಪಾಯಿಯ ಉಳಿತಾಯದ ಮೊತ್ತ ಕೆಲಸಕ್ಕೆ ಬರುವುದಿಲ್ಲ. ಸ್ಥಳೀಯ ಖರ್ಚುವೆಚ್ಚಗಳ ಆಧಾರವೇ ಪರಿಗಣಿಸಬೇಕು. ಅಷ್ಟು ಹೊತ್ತಿಗೆ ಕೆಲಸ ಬದಲಾಗೋ, ಸಂಬಳ ಹೆಚ್ಚಾಗೋ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯಾಗುವ ಕಾರಣ, ಈಗ ಮನದ ಚಿಂತನೆ ಈ ನೆಲದಲ್ಲೇ ಸಾಕಷ್ಟು ಕಾಲ ಬದುಕಬೇಕಾದ ಅನಿವಾರ್ಯಕ್ಕೆ ಸಿದ್ಧವಾಗತೊಡಗುತ್ತದೆ. ಮನೆ, ಕಾರು ಕೊಳ್ಳುವ ಬಗ್ಗೆ ಚಿಂತಿಸತೊಡಗುತ್ತದೆ. ಮಕ್ಕಳ ಶಾಲೆ, ಕಾಲೇಜುಗಳ ಕುರಿತು ಆಲೋಚಿಸುತ್ತದೆ. ಸ್ವದೇಶದಲ್ಲಿದ್ದ ಭವಿಷ್ಯ ನಿಧಿಯ ಹಣವೆಲ್ಲ ಲೆಕ್ಕಕಿಲ್ಲದ ಸಣ್ಣ ಗಂಟಾಗಿ ಕಂಡು, ಅದನ್ನು ವಿಸರ್ಜಿಸಿ, ಸ್ಥಳೀಯ ನಿವೃತ್ತಿ ಸಲಕರಣೆಗಳತ್ತ ಗಮನ ಹರಿಸುತ್ತದೆ.
ಇದೇ ಹೊಟ್ಟೆ ತುಂಬಿದ ಹೊತ್ತಿನಲ್ಲೇ ಧುತ್ತನೆ ಬಂದು ಮತ್ತೆ ಕಾಡುವ ಭೂತ ಐಡೆಂಟಿಟಿ ಕ್ರೈಸಿಸ್. ತನ್ನದಲ್ಲದ ನೆಲದಲ್ಲಿ ತನ್ನತನದ ಹುಡುಕಾಟ ಭಾಷೆಯ ಹೆಸರಲ್ಲೋ, ಸಂಘ- ಸಂಸ್ಥೆ- ಸಮಮನಸ್ಕರ ಒಡನಾಟದ ನೆಪದಲ್ಲೋ, ಬರಹದ ರೂಪದಲ್ಲೋ, ಹಾಡಿನ ಸೊಗಡಲ್ಲೋ- ಒಟ್ಟಾರೆ ಮಾನಸಿಕ ಹಸಿವೆಯ ತೀರುವಿಕೆಯ ದಾರಿಗಳನ್ನು ಹುಡುಕತೊಡಗಿ, ಹೊಸ ಮಜಲಿನತ್ತ ಚಲಿಸತೊಡಗುತ್ತದೆ ಜೀವನ. ಎನ್ನಾರೈ ಎಂಬ ಹೆಸರಿನಲ್ಲೋ, ಹೊರದೇಶದಲ್ಲಿದ್ದರೂ ಬಿಟ್ಟುಕೊಡದ ಪಾಸ್ಪೋರ್ಟಿನಲ್ಲೋ, ವಿಸರ್ಜಿಸದೆ ದುಡ್ಡು ಕಟ್ಟುತ್ತಲೇ ಕಾಪಾಡಿಕೊಂಡು ಬರುವ ಸ್ವದೇಶಿ ಬ್ಯಾಂಕು ಅಕೌಂಟಿನಲ್ಲೋ, ದೂರದಾಶೆಯಿಂದ ಬಿಡದೆ ಕಟ್ಟಿಕೊಂಡು ಬಂದ ವಿಮಾ ಪಾಲಿಸಿಯ ಪ್ರೀಮಿಯಮ್ಮಿನಲ್ಲೋ, ಕೊಂಡ ಸೈಟು, ಮನೆಗಳ ಹೆಸರಿನಲ್ಲೋ- ಕೊಂಡಿಯಂತೂ ಕಮಲದೆಲೆಗಂಟಿದ ನೀರಿನಂತೆ ಅಂಟಿಕೊಂಡೇ ಇರುತ್ತದೆ. ತನ್ನರಿವಿಲ್ಲದೆ ಎರಡು ದೋಣಿಯಲ್ಲಿ ಕಾಲಿಟ್ಟ ಪಯಣಿಗನ ಹಾಗೆ. ಅದು ಸ್ಪಷ್ಟವಾಗಿ ಗೊತ್ತಾಗುವ ಹೊತ್ತಿಗೆ, ಈಗಾಗಲೆ ಎರಡೂ ದಡಗಳಿಂದ ದೂರ ಬಂದಾಗಿಬಿಟ್ಟಿರುತ್ತದೆ. ಅತ್ತಕಡೆಯೂ- ಇತ್ತಕಡೆಯೂ ಇರದ ನಡುನೀರಿನಲ್ಲೇ ಈಜಾಡುವ ಮೀನಿನ ಹಾಗೆ. ಇದೆಲ್ಲದರ ನಡುವೆ ಎಲ್ಲರಿಗೂ ಎಲ್ಲವೂ ಸುಗಮವೆಂದೇನಲ್ಲ. ಹದಗೆಡುವ ಆರ್ಥಿಕ ಪರಿಸ್ಥಿತಿ, ಜಾಗತಿಕ ಗೋಮಾಳದಲ್ಲಿ ಉಂಟುಮಾಡುವ ಉಲ್ಕಾಪಾತಕ್ಕೆ ಯಾರೂ ಅತೀತರಲ್ಲ. ಹೊರದೇಶಕ್ಕೆ ಬಂದು ಹೆಣಗುವ ದಿನಗಳ ಒಂದು ಬೆಳಗು ಥಟ್ಟನೆ- ಆ ಕೆಲಸವಿಲ್ಲವೆಂದು ಘೋಷಿಸಿ ಮನೆಗೆ ಹೋಗಬೇಕಾದ ಸಂದರ್ಭಗಳೆಷ್ಟೋ. ಸಿಕ್ಕಸಿಕ್ಕ ಸಣ್ಣಪುಟ್ಟ ತಾತ್ಕಾಲಿಕ ಕೆಲಸ ಹಿಡಿದು ಹೊಡೆದಾಡುತ್ತ ಜೀವನ ಸಾಗಿಸುವ ಅನಿವಾರ್ಯಗಳೆಷ್ಟೋ. ಅದೂ ಸಾಧ್ಯವಾಗದೆ ಬೇರೆ ದೇಶಗಳತ್ತ ಮುಖಮಾಡಿ, ಸಾರಾಸಗಟೆ ಹೊಸ ಜೀವನ ಆರಂಭಿಸಿದ ಸಂಘಟನೆಗಳಿನ್ನೆಷ್ಟೋ. ಒಟ್ಟಾರೆ ಎಲ್ಲೆಡೆ ಕಾಡುವ ದ್ವಂದ್ವ, ಅನಿಶ್ಚಿತತೆಯಲ್ಲೂ ಗಾಢ- ಅನಿಶ್ಚಿತ ಜೀವನ ಶೈಲಿಯೇ ಈಗಿನ ಜೀವನದ ಹೊನಲಲಿ ಬದುಕುವ ಸಹಜ ಶೈಲಿಯೇ ಎಂಬ ಅನುಮಾನವೂ ಸರಿದು, ಹೌದು ಅದೇ ಜೀವನ ಶೈಲಿಯೆಂದು ನಂಬಿಕೆ ಹುಟ್ಟಿಸುವಷ್ಟರ ಮಟ್ಟಿಗೆ. ಈ ಸುತ್ತಾಟದಲ್ಲೇ ಹದಿನೈದು ವರ್ಷಗಳು ಉರುಳಿಹೋದವು. ಥಾಯ್ಲೆಂಡ್, ಫಿಲಿಪ್ಪೀನ್ಸ್, ಚೀನಾ, ಜರ್ಮನಿ, ನೆದರ್ಲೆಂಡ್, ಪೋರ್ಚುಗಲ್ ಎಂದೆಲ್ಲ ಸುತ್ತಾಡಿ ಈಗ ಮತ್ತೆ ಸಿಂಗಾಪುರದಲ್ಲೇ ತಳವೂರಿದ್ದಾಯ್ತು- ಎರಡು ದೋಣಿಯ ಅದೇ ದ್ವಂದ್ವದಲ್ಲಿ. ಈಗ ವಿನಿಮಯ ದರ, ರುಪಾಯಿ ಲೆಕ್ಕಾಚಾರ ಕಾಡುವುದಿಲ್ಲ.
ಮೊನ್ನೆ ಪ್ರೈಮರಿ ಪಾಸಾದ ಮಗನೊಂದಿಗೆ ಹೊರಗೆ ಹೋಗಿದ್ದಾಗ 'ಅಪ್ಪಾ, ಟ್ರೈನಿನಲ್ಲೇ ಹೋಗೋಣ... ಟ್ಯಾಕ್ಸಿ ಬೇಡ' ಎಂದ. ಅಂಗಡಿಯಲ್ಲಿ ಏನೋ ಕೊಳ್ಳುವಾಗಲೂ ತುಟ್ಟಿಯದನ್ನೆಲ್ಲ ಎತ್ತಿಟ್ಟು ಅಗ್ಗದ ದರದವನ್ನೇ ಆಯ್ದುಕೊಳ್ಳುತ್ತಿದ್ದ. ನಂತರ ರೆಸ್ಟೋರೆಂಟಿನಲ್ಲಿ ಊಟ ಆರ್ಡರು ಮಾಡುವಾಗಲೂ ಯಾವುದೋ ಐಸ್ಕ್ರೀಮು ಬೇಕೆಂದವನು, 'ಬೇಡಪ್ಪಾ ವೆರಿ ಎಕ್ಸ್ಪೆನ್ಸಿವ್' ಎಂದು ಬೇರೇನೋ ಹುಡುಕತೊಡಗಿದಾಗ ನಾನು ಹೇಳಿದೆ- 'ಅದನ್ನೇ ಆರ್ಡರು ಮಾಡು...'. ಅವನು ನನ್ನತ್ತ ಕಣ್ಣೆತ್ತಿ ನೋಡಿದ. 'ದಿನಾ ಅದೇ ಬೇಕು ಅನ್ಬೇಡ. ಬಟ್ ನೌ ಯೂ ಗೊ ಅಹೆಡ್..' ಎಂದೆ. ಅವನಿಗರಿವಿಲ್ಲದೆ ಅವನ ಕಣ್ಣು ಮುಖವೆರಡು ಅರಳಿದ್ದು ನೋಡಿದೆ. 'ತಿಂದಾದ ಮೇಲೆ ಆ ಅಂಗಡಿಗೆ ಮತ್ತೆ ಹೋಗೋಣ ಬಾ... ನಿನಗೆ ಇಷ್ಟವಾದ ಆ ಗೇಮ್ ಬೇಕೂಂದ್ರೆ ತೆಗೆದುಕೊಳ್ಳುವೆಯಂತೆ...' ಅವನಿಗೆ ಯಾಕೋ ಇನ್ನೂ ಅನುಮಾನ...'. 'ಅದು ತುಂಬಾ ಜಾಸ್ತಿಯಪ್ಪ...'. ನಾನು ಅವನ ಕಣ್ಣಲ್ಲೇ ಕಣ್ಣಿಟ್ಟು 'ಡು ಯೂ ಲೈಕ್ ಇಟ್ ಆರ್ ನಾಟ್ ಇಫ್ ಯೂ ಲೈಕ್ ಇಟ್.... ಜಸ್ಟ್ ಬೈ... ನೀ ಪಾಸಾದ್ದಕ್ಕೆ ಸ್ಪೆಶಲ್ ಗಿಫ್ಟು' ಎಂದೆ.
ಅವನು ಖುಷಿಯಿಂದ ತಲೆಯಾಡಿಸಿದ. ನಾವಂತೂ ಎರಡು ದೋಣಿಯ ದ್ವಂದ್ವದಿಂದ ಹೊರಬರಲಾಗದೆ ಒದ್ದಾಡಿದ್ದು ಆಯ್ತು. ಕನಿಷ್ಠ ನಮ್ಮ ಮುಂದಿನ ಪೀಳಿಗೆಗೆ ಆ ಗಿಲ್ಟ್ ಆದರೂ ಮನಸ್ಸಿನಿಂದ ದೂರವಾಗಿಸಿದರೆ ಸಾಕು ಎಂದುಕೊಂಡೆ ಮನಸಲ್ಲೇ.
ಈ ಎರಡು ದೋಣಿಯ ಪಯಣದ ಕಥೆ ಒಬ್ಬಿಬ್ಬರದಲ್ಲ. ಸಾಕಷ್ಟು ಜನ ದಡ ಮುಟ್ಟಿದವರೂ ಉಂಟು. ಏಗಲಾಗದೆ ಹಿಂದಿರುಗಿದವರೂ ಉಂಟು. ಇಕ್ಕೆಲದ ಇಬ್ಬಂಧಿಯಲ್ಲಿ ಸಿಕ್ಕು ಎರಡು ದೋಣಿಯ ಪಯಣವೆ ಬದುಕಿನ ಲಯವೆಂದುಕೊಂಡು ಹಾಗೆಯೇ ಮುಂದುವರಿದಿರುವ ಕರ್ಮ ಸಿದ್ಧಾಂತಿಗಳೂ ಉಂಟು.
- ನಾಗೇಶ ಮೈಸೂರು
nageshamysore@yahoo.co.in