ಕೆ. ಶ್ರೀನಿವಾಸ್ರಾವ್, ಹರಪನಹಳ್ಳಿ
ಬದುಕಿನಲ್ಲಿ ಭಾವನೆಗಳೇ ಇಲ್ಲದಿದ್ದರೆ ಹೇಗಿರುತ್ತಿತ್ತು?
- ಬದುಕನ್ನು ನೀವೇ ದೂಕಿಕೊಂಡು ಹೋಗ್ಬೇಕಾಗ್ತಿತ್ತು!
ರವಿಕುಮಾರ್ ಜಿ.ಬಿ. ಶೇಷಾದ್ರಿಪುರಂ
ಹೆಂಗಸರನ್ನು ಹೂವಿಗೆ ಹೋಲಿಸುತ್ತಾರೆ. ಗಂಡಸರನ್ನು?
- ಹೂಕುಂಡಕ್ಕೆ ಹೋಲಿಸಿದರೂ ಖುಷಿಪಡ್ತಾರೆ!
ಎನ್.ಎಚ್. ಮಂಜು ನೀರಕಲ್ಲು, ಮಧುಗಿರಿ
ಓಡುವ ಕುದುರೆಗೂ, ಹುಡುಗಿಯರ ಮನಸ್ಸಿಗೂ ಏನು ವ್ಯತ್ಯಾಸ?
- ಓಡುವ ಕುದುರೆ ಮೇಲೆ ಬೆಟ್ ಕಟ್ಟಿರಬಹುದು, ಹುಡುಗಿಯರ ಮನಸ್ಸಿಗೆ ಸಾಧ್ಯವಿಲ್ಲ!
ವಿ. ಹೇಮಂತ್ಕುಮಾರ್, ಬೆಂಗಳೂರು
ಠೇವಣಿ ಕಳೆದುಕೊಳ್ಳುತ್ತೇವೆಂದು ತಿಳಿದಿದ್ದರೂ ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಲ್ಲ?
- ಇವರು ಗೆಲ್ಲುವುದಕ್ಕಿಂತ ಇನ್ನಾರನ್ನೋ ಸೋಲಿಸುವುದೇ ಅವರ ಗುರಿ!
ಹೆಡತಲೆ ಮಾದನಾಯಕ, ಮೂಡಲಬಾಳ್ಯ
ಎಚ್.ಡಿ ಕುಮಾರಸ್ವಾಮಿಯ ಮುಂದಿನ ಕನಸುಗಳು ಏನು ಸಾರ್?
- ಅವರು ಕನಸು ಕಾಣಲು ದೇವೇಗೌಡರು ಸರಿಯಾಗಿ ನಿದ್ರೆ ಮಾಡೋಕೂ ಬಿಡ್ತಿಲ್ಲ!
ಆರ್.ಸಿ. ಪರಶುರಾಮ್, ಶಿಕಾರಿಪುರ
ಪತ್ರಿಕೆಯಲ್ಲಿ ಐದು ನಿಮಿಷದಲ್ಲಿ ಓದುವ ವಿಷಯನ ಟಿವಿಯಲ್ಲಿ ಗಂಟೆಗಟ್ಟಲೆ ಎಳೆದು ತೋರಿಸುತ್ತಾರಲ್ಲ ಏಕೆ?
- ನಾವು ಓದುಗರ ಬಗ್ಗೆ ಯೋಚಿಸ್ತೀವಿ. ಅವರು ಟಿಆರ್ಪಿ ಬಗ್ಗೆ ಯೋಚಿಸ್ತಾರೆ!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
ಹುಡುಗೀರು ನಗೋವಾಗ ಬಾಯಿಗೆ ಕೈಯನ್ನು ಅಡ್ಡ ಹಿಡಿಯುವುದೇಕೆ?
- ನಗು ಚೆಲ್ಲಬಾರದೂಂತ!
ಕೆ.ಎಂ. ಲಿಂಗರಾಜು, ನಂಜನಗೂಡು
ಪೆನ್ ಇಲ್ಲದಿದ್ದರೂ ಪೆನ್ಡ್ರೈವ್ ಎಂದು ಯಾಕೆ ಕರೆಯುತ್ತಾರೆ?
-ಇಲಿ ಅಲ್ಲದಿದ್ರೂ 'ಮೌಸ್' ಅಂತ ಕರೆಯೋಲ್ವ, ಹಾಗೆ!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
ಇತ್ತೀಚೆಗೆ ಪ್ರಾಮಾಣಿಕ ಅಧಿಕಾರಿಗಳನ್ನು ಕಂಡರೆ ಸರ್ಕಾರಕ್ಕೆ ಅಲರ್ಜಿಯಂತೆ?
- ಅಧಿಕಾರಿಗಳನ್ನಲ್ಲ, 'ಪ್ರಾಮಾಣಿಕತೆ' ಕಂಡರೆ ಅಲರ್ಜಿ!
-ಎಸ್.ವಿ. ಪದ್ಮನಾಭ