ಖುಷಿ

ಜಯಕ್ಕಾಗಿ ಕಾಯುತ್ತಾ...

ಚುನಾವಣೆಗಳು ಅನೇಕ ಕಾರಣಗಳಿಂದಾಗಿ ವಿಶಿಷ್ಟವಾಗಿರುತ್ತವೆ. ಅದು ಭಾರತದಲ್ಲೊಂದೇ ಅಲ್ಲ. ಅಮೆರಿಕದಲ್ಲೂ ಹೀಗೇ. ಅಲ್ಲೂ ಅಧ್ಯಕ್ಷೀಯ ಚುನಾವಣೆಗಳು ನಡೆವಾಗ ಸಾಕಷ್ಟು ನಾಟಕೀಯ ವಿದ್ಯಮಾನಗಳು ನಡೆಯುವುದುಂಟು. ತನ್ನ ಅಧ್ಯಕ್ಷೀಯ ಪದವಿ ಉಳಿಸಿಕೊಳ್ಳುವುದಕ್ಕಾಗಿ ರಿಚರ್ಡ್ ನಿಕ್ಸನ್ ಚುನಾವಣೆ ಸಂದರ್ಭ ನಡೆಸಿದ ಕದ್ದಾಲಿಕೆ ಹಗರಣದ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಇನ್ನು ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳ ಚುನಾವಣೆಗಳ ಬಗ್ಗೆ ಹೇಳುವುದೇ ಬೇಡ.
ಭಾರತೀಯರಿಗೆ ಚುನಾವಣೆಯೂ ಒಂದು ಹಬ್ಬವೇ. ಹಬ್ಬವೆಂದ ಬಳಿಕ ಅಲ್ಲಿ ಕುಟುಂಬದ ಎಲ್ಲ ಸದಸ್ಯರ ಪಾತ್ರವೂ ಇದ್ದದ್ದೇ. ಅಲ್ಲಿ ಅಪ್ಪ- ಅಮ್ಮ- ಅಜ್ಜ- ಅಜ್ಜಿ- ಮಗ- ಮೊಮ್ಮಗಳು ತಮ್ಮ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಬೇಕು. ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸಬೇಕು. ಉದಾಹರಣೆಗೆ, ಮನೆಯ ಪುಟ್ಟ ಮಕ್ಕಳು ಎಳ್ಳು ಬೀರಲು ಹೋಗಿ ಹಿರಿಯರ ಆಶೀರ್ವಾದ ಪಡೆದು ಬರಬೇಕು ಎಂದಿದ್ದರೆ, ಹಾಗೇ ಮಾಡಬೇಕು. ಯುಗಾದಿಗೆ ಬೇವು ಬೆಲ್ಲ ಹಂಚಿ ತಿನ್ನಬೇಕು ಎಂದಿದ್ದರೆ, ಅದನ್ನೂ ಮಾಡಬೇಕು. ಇದು ಸಂಬಂಧಗಳು ಬೇರೂರುವ ಒಂದು ವಿಧಾನವೂ ಹೌದು. ಹೀಗಿಲ್ಲದೆ ಹೋದಾಗ ಸಂಬಂಧಗಳಲ್ಲಿ ಏರುಪೇರಾಗುವುದುಂಟು. ಹಬ್ಬಕ್ಕೆ ಕರೆಯದೆ ಹೋದರೆ ಮಗಳ ಮನೆ- ತವರಿನ ಸಂಬಂಧವೇ ಹಳಸುತ್ತದೆ.
ಚುನಾವಣೆಯನ್ನು ಒಂದು ಹಬ್ಬ ಎಂದು ಪರಿಗಣಿಸಿದಾಗ, ಈ ಅಂಶವೂ ನಮ್ಮ ಪರಿಗಣನೆಗೆ ಬರುತ್ತದೆ. ಅಂದರೆ ಇಲ್ಲಿ ಕೂಡ ನಾವು ಸಂಬಂಧಗಳ ಬದಲಾವಣೆಗಳನ್ನು ನೋಡಬಹುದು. ಪ್ರತಿ ಚುನಾವಣೆ ಘೋಷಣೆಯಾದಾಗಲೂ ಕೆಲವೆಡೆ ಹರ್ಷೋಲ್ಲಾಸದ ಉದ್ಗಾರಗಳು ಕೇಳಿಸುವಂತೆ, ಒಂದಲ್ಲ ಒಂದು ಕಡೆ ಒಡಕಿನ ದನಿಯೂ ಕೇಳುತ್ತದೆ. ಕಾರಣಗಳು ಏನೇ ಇರಬಹುದು- ಟಿಕೆಟ್ ಸಿಗದಿರುವುದು, ಬಯಸಿದ ಕಡೆಯೇ ಟಿಕೆಟ್ ದೊರೆಯದಿರುವುದು, ಪಕ್ಷದಲ್ಲಿ ಮೂಲೆಗುಂಪಾಗಿರುವುದು, ಬೇರೊಬ್ಬರಿಗೆ ಸಿಕ್ಕಷ್ಟು ಪ್ರಾಶಸ್ತ್ಯ ತನಗೆ ಸಿಕ್ಕಿಲ್ಲ ಎಂದು... ಹೀಗೇ. ಚುನಾವಣೆಯಲ್ಲಿ ಎಲ್ಲರಿಗೂ ಮತದಾನ ಮಾಡುವ ಹಕ್ಕಿದೆ ನಿಜ. ಆದರೆ ಎಲ್ಲರೂ ಸ್ಪರ್ಧಿಸುವುದು ಸಾಧ್ಯವಿಲ್ಲವಲ್ಲ. ಎಲ್ಲೆಲ್ಲಿ ಯಾರು ಗೆಲ್ಲಬಹುದೋ ನೋಡಿ, ಅಲ್ಲಿ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಇನ್ನು ಕೆಲವೊಮ್ಮೆ ಹೈಕಮಾಂಡ್‌ನ ಮನಸ್ಸಿದ್ದಂತೆ ಸ್ಥಾನ ನಿಗದಿಯಾಗುತ್ತದೆ. ಇಲ್ಲಿ ಪರಿಶ್ರಮಿಗೇ ಟಿಕೆಟ್ ಸಿಗಬೇಕೆಂದೇನೂ ಇಲ್ಲ. ಟಿಕೆಟ್ ಹಂಚುವುದರ ಹಿಂದಿನ ಲೆಕ್ಕಾಚಾರಗಳೇ ಬೇರೆ ಇರುತ್ತವೆ.
ಆದರೂ ನೊಂದ ಮನಸ್ಸು ಭಿನ್ನತೆಯ ಹಾದಿ ಹಿಡಿಯುತ್ತದೆ. ಅದು ಅಣ್ಣ- ತಮ್ಮಂದಿರೇ ಇರಬಹುದು, ಅಕ್ಕ- ತಂಗಿಯೇ ಇರಬಹುದು, ಗುರು- ಶಿಷ್ಯರೇ ಇರಬಹುದು, ತಂದೆ- ಮಕ್ಕಳೇ ಇರಬಹುದು. ಆದ್ದರಿಂದಲೇ ನಾವು, ಬೇರ್ಯಾವ ದೇಶದಲ್ಲೂ ಕಾಣಸಿಗದ ಸಂಬಂಧಗಳ ಮಹಾನಾಟಕವನ್ನು ನಮ್ಮ ಚುನಾವಣೆ ಸಂದರ್ಭದಲ್ಲಿ ಕಾಣಲು ಸಾಧ್ಯ.  
ಸಂಬಂಧಗಳು ಹಾಳಾಗುವುದು ಅಥವಾ ಬೆಸೆದುಕೊಳ್ಳುವುದು ಚುನಾವಣೆ ಸಂದರ್ಭದಲ್ಲಿ ಮಾತ್ರವೇನಾ ಎಂದು ನೀವು ಕೇಳಬಹುದು. ಹಾಗೇನಿಲ್ಲ. ಆದರೆ ಚುನಾವಣೆಯ ವೇಳೆ ಇದು ಹೆಚ್ಚು ಎಂದು ಹೇಳಬಹುದು. ನಮ್ಮ ಮಾಧ್ಯಮಗಳೂ ಈಗ ನಾಯಕರ ಹಾಗೂ ಸೆಲೆಬ್ರಿಟಿಗಳ ಅಂತರಂಗಕ್ಕೆ ಪ್ರವೇಶಿಸಿರುವುದರಿಂದ, ಪ್ರತಿಯೊಬ್ಬ ನಾಯಕನ ಮುಖದ ಸ್ಪಂದನದ ಒಂದೊಂದು ಗೆರೆಯೂ ನೋಡುಗನ ಮುಂದೆ ದಾಖಲಾಗುತ್ತದೆ. ಇಲ್ಲಿ ಯಾರೂ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಪ್ರಜಾಸತ್ತೆಯ ಪರೀಕ್ಷೆಯ ಕಾಲ ಮಾತ್ರವೇ ಅಲ್ಲ, ಸಂಬಂಧಗಳ ಪರೀಕ್ಷೆಯ ಕಾಲವೂ ಹೌದು. ಸಂಬಂಧಗಳ ಪಲ್ಲಟದ ಬೆಳಕಿನಲ್ಲಿ ನಾಯಕರು ಮಾತ್ರವೇ ತಮ್ಮನ್ನು ಪರೀಕ್ಷಿಸಿಕೊಳ್ಳುವುದಲ್ಲ. ನೋಡುಗರೂ ಅವರ ಪಾಡಿನಲ್ಲಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುತ್ತಿರುತ್ತಾರೆ. ಇಲ್ಲಿ ಗುರು- ಶಿಷ್ಯರಾಗಿದ್ದವರು ಶಾಶ್ವತವಾಗಿ ಹಾಗೇ ಇರುವುದಿಲ್ಲ. ಅವರು ವೈರಿಗಳಾಗಿ ಬದಲಾಗಬಹುದು. ಅಣ್ಣ ತಮ್ಮಂದಿರು ಪರಸ್ಪರ ಕೆಸರು ಎರಚಿಕೊಳ್ಳಬಹುದು. ವೈರಿಗಳಾಗಿಟ್ಟವರು ಮುಂದೆಂದೋ ಸರಿಹೋಗಬಹುದು. ಅದರಿಂದ ನಾಡಿಗೆ ಏನಾದರೂ ಲಾಭವಾಯಿತಾ? ಮುತ್ಸದ್ಧಿತನಕ್ಕಾಗಲೀ, ಪ್ರಜಾಪ್ರಭುತ್ವಕ್ಕಾಗಲೀ ಅದರಿಂದ ಯಾವುದಾದರೂ ಹೊಸ ಅಂಶ ಸೇರ್ಪಡೆಯಾಯಿತಾ? ಈ ಬಿಕ್ಕಟ್ಟು ಅಥವಾ ವಿಲೀನ ಐತಿಹಾಸಿಕವೇ? ಇದನ್ನು ಮುಂದಿನ ತಲೆಮಾರಿನ ಪ್ರಜೆಗಳು ಹೇಗೆ ನೆನಪಿಸಿಕೊಳ್ಳುತ್ತಾರೆ? ಈ ಘಟನೆ ಅಥವಾ ಪ್ರಕ್ರಿಯೆಯಲ್ಲಿ ನಮ್ಮ ಪಾಲೇನಾದರೂ ಇದೆಯೇ? ಇದರಲ್ಲಿರುವ ತಾತ್ವಿಕತೆ ಅಥವಾ ಸಂದೇಶ ಏನು? ಈ ಪ್ರಶ್ನೆಗಳನ್ನೆಲ್ಲ ಪ್ರಜೆ ತನ್ನಲ್ಲಿ ತಾನೇ ಕೇಳಿಕೊಳ್ಳಬೇಕು. ಆಗಷ್ಟೇ ಚುನಾವಣೆಯಲ್ಲಿ ನಡೆಯುವ ಸಂಬಂಧಗಳ ಮಹಾನಾಟಕ ಸಾರ್ಥಕವಾಗುತ್ತದೆ.
ಮುಂಬರಲಿರುವ 'ಜಯ' ಸಂವತ್ಸರ ಯಾರಿಗೆ ಜಯ ತರುತ್ತದೋ ಕಾದು ನೋಡೋಣ. ನಿಮಗಂತೂ ಜಯ ಸಿದ್ಧಿಯಾಗಲಿ.

- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!