ಜೀವಕೊಂದು ರೂಹಿನ ದಾಹ
ಒಂಟಿ ಮೂಲೆಯ ಧೂಳ ಸರಿಸಿ
ತಂತಿಯ ಮೀಟಿ ಬಿಟ್ಟರೆ ಸಾಲದು
ಬೆರಳುಗಳ ಅಲ್ಲಲ್ಲಿ ಸವರಿ
ತೀಡಿ ಒತ್ತಿಹಿಡಿದು ಬಿಟ್ಟು ಬಿಡದೇ
ಬರೀ ಮೀಟುದನಿಯ
ರಾಗಗಳಲಿ ಹರಿಹಾಯಿಸಿ
ಕಳೆದು ಹೋಗುವ ಕಾಡಿನಲ್ಲಿ
ಕಿರುಚುವ ಬಿದಿರು
ಬರೀ ಗಾಳಿಯೂದಿದರೆ ಸಾಲದು
ಕೊರೆದ ರಂಧ್ರಗಳ
ಮುಚ್ಚಿ ತೆರೆದು
ಅಳೆದು ಸೆಳೆದು
ಉಸಿರನ್ನು ಕೆಣಕಿ ನಾದವ ಒಸರಿಸಿ
ಹುಚ್ಚುಹೊಳೆಯಲಿ
ಕಕ್ಕಾಬಿಕ್ಕಿ ಕನಲುವ ನಾವೆ
ತೆರೆಯಮೇಲೆ ನೂಕಿದರೆ ಸಾಲದು
ಗೆರೆಕೊರೆದು ಗುರಿಯೆಡೆ
ದಡಕೆ ತಪಿಸುವ ಪಾಠ
ಸುತ್ತಿ ಸುಳಿದು
ಉಸಿರಿಗೆ ರೂಪವ ತೊಡಿಸಿ
ಬೆರಳುಗಳಲಿ ರಾಗವ ಸವರಿ
ಹರಿಗೋಲಲಿ
ಬೆಳಕ ತುಂಬಿಕೊಡುವ ಕ್ಷಣಕೆ
ಅದೆಷ್ಟು ಜೀವಗಳು ಪರಿತಪಿಸುತ್ತಿವೆ!
- ವಾಸುದೇವ ನಾಡಿಗ್
vvnadig@gmail.com