ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಮನಸ್ಸು...

Mainashree
Updated On : 29 Mar 2014, 1:00 am

ಥತ್ತೇರಿಕೆ, ಈ ಲೈಫೇ ಇಷ್ಟು ಸರ್. ಪೇಷೆಂಟ್ ಇದ್ದಾಗ ಡಾಕ್ಟ್ರು ಇರೋಲ್ಲ, ಡಾಕ್ಟ್ರು ಇದ್ದಾಗ ಈ ಪೇಷೆಂಟ್ ಇರೋಲ್ಲ ಅನ್ನೋ ಹಾಗೆ ಈ ಮನಸ್ಸು ಯದ್ವಾತದ್ವಾ ಹಾದಿತಪ್ಪಿ ಇತ್ತ ಡಾಕ್ಟ್ರೂ ಅಲ್ಲದ ಅತ್ತ ಪೇಷೆಂಟೂ ಅಲ್ಲದ ಕಾಂಪೌಂಡರನೇ ಸರಿ. ಈ ಮನಸ್ಸೆಂದರೆ ಹಾಗೆ ಅಲ್ವಾ? ಒಂದು ಥರದ ದಲ್ಲಾಳಿ. ನಮ್ಮನ್ನು ಯಾವ ಸಂದರ್ಭದಲ್ಲಿ ಅದ್ಯಾವ ಮನೋವ್ಯಾಪಾರಕ್ಕೆ ಸಿಲುಕಿಸಿ ಇತ್ತ ಖರೀದಿಯೂ ಆಗದಂತೆ, ಅತ್ತ ಮಾರಾಟವು ಆಗದಂತೆ ತಾನಂತೂ ಲಾಭ ಪಡೆದು ಗೂಟಾ ಕಿತ್ತುಕೊಂಡು ಹೋದವನೇ ಸರಿ. ಆದರೆ, ಇದನ್ನೇ ಬುದ್ಧಿವಂತರು ಅಂತ ಅನ್ನಿಸಿಕೊಂಡವರು 'ಫಿಕಲ್ ಮೈಂಡೆಡ್ ಪೀಪಲ್‌' ಅಂತ ಅನ್ನೋದು. ಅದು ನಿಜಕ್ಕೂ ನನ್ನ ಪಾಲಿಗಂತೂ ಮುಗ್ಧ ಮನಸ್ಸು ಕಣ್ರೀ! ನೀವು ಬೇಕಾದ್ರೆ ಗಮನಿಸಿ ನೋಡಿ, ಇಂಥವರು ಮತ್ತೊಬ್ಬರಿಗೆ ಮೋಸ ಮಾಡಿದ್ರು ಅನ್ನೋ ಸರ್ಟಿಫಿಕೇಟ್‌ಗಿಂತಲೂ ತಮಗೆ ತಾವು ಮೋಸ ಮಾಡಿಕೊಂಡ್ರು ಅನ್ನೋ ಪ್ರಮೋಷನ್‌ಗಳಂತೂ ಮಗದೊಬ್ಬರಿಂದ ಸಾಮಾನ್ಯವಾಗಿ ಬಂದಿರುತ್ತದೆ.
ನಿಜಕ್ಕೂ ಅಚ್ಚರಿಯ ಸಂಗತಿಯೆಂದರೆ, ಒಬ್ಬ ಮನುಷ್ಯನನ್ನು ಯಾವ ಮಂತ್ರ- ತಂತ್ರ- ಮಾತ್ರೆ- ಸಿರೀಂಜ್‌ಗಳಿಲ್ಲದೆ ಮಂಕಾಗಿಸುವ, ಮೌನವಾಗಿಸುವ, ಶಾಶ್ವತವಾಗಿ ಮಾತನಾಡದೇ ಹೋಗಿಸುವ, ಅಷ್ಟೇ ಏಕೆ ಬದುಕುವ, ಬದುಕಿಸುವ ಭರವಸೆಯ ಮಾತುಗಳೊಂದಿಗೆ ನಿದ್ದೆಗಣ್ಣಿನಲ್ಲೂ ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ ಹಪಹಪಿಸುವಂತೆ ಮಾಡಿಬಿಡಬಲ್ಲ ಆ ಒಂದು ವಸ್ತುವೇ ಈ ಮನಸ್ಸು.
ನಿಜಕ್ಕೂ ಯಾವ ಮನುಷ್ಯನೂ ಹುಟ್ಟು ಹುಟ್ಟುತ್ತಲೇ ತಮ್ಮ ಜೊತೆಗೆ ಸಂಕಷ್ಟಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಬರೋದಿಲ್ಲ. ಅಷ್ಟಕ್ಕೂ ಈ ಸಮಸ್ಯೆ- ಸಂಕಷ್ಟಗಳನ್ನು ಹುಟ್ಟಿಸಿಕೊಳ್ಳುವವರೇ ನಾವುಗಳು. ಆಮೇಲೆ ಹುಟ್ಟಿಸಿಕೊಂಡ ಸಮಸ್ಯೆಗಳಿಗೆ ಕಟ್ಟೀರಿಟ್ಟು ಅನಾಯಾಸವಾಗಿ ಅಮೂಲ್ಯವಾದ ಈ ಮನಸ್ಸನ್ನು ಒದ್ದೆಮಾಡಿಬಿಡುತ್ತೇವೆ. ಹಸಿಯಾದ ಮನಸ್ಸನ್ನು ಒಣಗಿಸಲು ಹೋದರೆ ಎಲ್ಲಿ ಒಣಗಿ, ರಸಹೀನವಾಗುತ್ತದೋ ಎಂಬ ಭಯ.
ಎಷ್ಟೋ ಬಾರಿ ಈ ಮುದ್ದು ಮನಸ್ಸನ್ನು ಕದ್ದು ಹೋಗುವವರಿಗಿಂತ, ಗೆದ್ದು ಹೋಗುವವರಿಗಿಂತ ಗುದ್ದಿ ಹೋಗುವವರ ಸಂಖ್ಯೆಯೇ ಜಾಸ್ತಿ. ಕೊಂಚ ಬೇಸರ, ಮೌನ, ಖಾಲಿಯಾದ ಮನಸ್ಸು, ತುಂಬಿ ಹೋದ ಖಿನ್ನತೆಯೊಂದಿಗೆ ಮನಸ್ಸು ಇನ್ನಷ್ಟು ಮತ್ತಷ್ಟು ಮಗದಷ್ಟು ಕುಸಿದುಬಿಡುತ್ತದೆ. ಅಷ್ಟಕ್ಕೂ ಇದೆಲ್ಲ ನಮ್ಮ ಬಾಳಿನಲ್ಲೇಕೆ? ಎಂದು ನೆನೆದರೆ ಮತ್ತಷ್ಟು ಭಯ. ಅಬ್ಬಾ..! ಏನಿದೀ ವಿಚಿತ್ರ? ಈ ಮನಸ್ಸೆಂದರೆ ಇಷ್ಟೊಂದು ಗಾಢವಾದ, ನಿಗೂಢ ರಹಸ್ಯವೇ? ಪ್ರೀತಿಸಲಾಗದ ತಾಜ್‌ಮಹಲ್ಲೇ? ಎಲ್ಲೆ ಇಲ್ಲದ ಅಂಬರವೇ? ಸ್ನೇಹ ತೋರದ ಕಟುಕನೇ? ಸ್ಪರ್ಶವನ್ನರಿಯದ ಬಂಡೆಯೇ? ಇಂಥ ಪ್ರಶ್ನೆಗಳಿಗೆ ಉತ್ತರ ಸಿಗೋದು ಸಾಧ್ಯವೇ ಇಲ್ಲ ಬಿಡಿ.
ಎಷ್ಟು ಬಾರಿ ಈ ಮನಸ್ಸಿಗೆ ಇಂಥ ಪ್ರಶ್ನೆಗಳ ಮಳೆಗರೆದರೂ ಉತ್ತರವಂತೂ ನಲ್ಲಿಯಲ್ಲಿಯ ಬರೀ ಒಣಹವೆಯಂತೆ ಸರಾಗವಾಗಿ ಬರುತ್ತಲೇ ಹೋಗುತ್ತದೆ. ಆದರೆ, ಇಂಥ ಸಂದರ್ಭದಲ್ಲೇ ಕೆಲವರಿಗೆ ದಾಹದ ಅತಿರೇಕ. ಈ ದಾಹ ನೀಗಿಸಿಕೊಳ್ಳಲು ಹೋದವರಲ್ಲಿ ಕೆಲವರು ಅತ್ತು ಹೋದರೆ ಇನ್ನೂ ಕೆಲವರು ಸತ್ತೇ ಹೋದರು. ಮುಖ್ಯವಾದ ಸಂಗತಿ ಎಂದರೆ, ಈ ಮನಸ್ಸು ಮತ್ತ್ಯಾರ ಬಳಿಯಲ್ಲಿ ಸಾಲವನ್ನು ಕೇಳದಂತೆ ಎಚ್ಚರವಹಿಸಿಕೊಳ್ಳಿ. ಏಕೆಂದರೆ, ಈ ಸಾಲ ನೀಡುವವನು ಕರುಣೆಯ ಕಣ್ಣಿಲ್ಲದವನು. ಕೆಲವು ಬಾರಿ ನೇರವಾಗಿ ಮನಸ್ಸಿಗೆ ಘಾಸಿಯನ್ನು ಉಂಟುಮಾಡಿ, ಇದ್ದ ಸಂತೋಷವನ್ನು ಬಡ್ಡಿ ಎಂಬ ಹೆಸರಿನಿಂದ ಕಿತ್ತುಕೊಂಡು ನಡೆದುಬಿಡುತ್ತಾನೆ. ಇಷ್ಟಕ್ಕೆ ಮುಗಿಯಿತು ಅನ್ನೋ ವೇಳೆಗೆ ಮತ್ತಷ್ಟನ್ನೂ ಹೀರುತ್ತಾನೆ. ಹೀಗೆ ಮತ್ತಷ್ಟು ಮಗದಷ್ಟು ಅನ್ನುತ್ತಾ ಕಡ್ಡಿ ಅನಾಯಾಸವಾಗಿ ಗುಡ್ಡವಾಗುತ್ತದೆ. ಹೀಗಾಗಿ ಅನಾಯಾಸವಾಗಿ ಎಲ್ಲರಿಂದ ಹೊರಹೊಮ್ಮುವ ಈ ಜ್ವಾಲಾಮುಖಿಯಂಥ ಸಾಲೇ 'ಥತ್ತೇರಿಕೆ. ಈ ಲೈಫೈ ಇಷ್ಟು ಸಾರ್‌'! ಮನಸ್ಸು ಎನ್ನುವ ಪದ ಆಕಾರದಲ್ಲಿ ಚಿಕ್ಕದಿದ್ದರೂ ಅಜಾಗರೂಕತೆಯಿಂದ ಹೆಜ್ಜೆಯನಿಟ್ಟರೆ, ಪುಕ್ಕಟೆಯಾಗಿ ಹೊತ್ತಿಲ್ಲದ ಹೊತ್ತಿನಲ್ಲಿ ನೋವಿನ ಬಂಪರ್ ಆಫರ್‌ಗಳು ಬೆನ್ನೇರಿ ಕುಳಿತು ಬಿಟ್ಟಿರುತ್ತವೆ.
ಕನಸುಗಳ ಹೊತ್ತ ಮನಸ್ಸು
ಆಸೆಗಳ ಮರಿ ಮಾಡಿಸಿ,
ಕನಸು ಬೇಕೋ? ಆಸೆ ಬೇಕೋ?
ಎಂದಾಗ, ಮನಸ್ಸಿಗಾದ ಘಾಸಿಗೆ
ಔಷಧಿ ಹಚ್ಚುವವರಿಲ್ಲ.
ದುಃಖ ನೀಡುವವರೇ ಎಲ್ಲ.
ಕೊನೆಗೂ ಉತ್ತರ ಸಿಗದೆ
ಈ ಮನಸ್ಸು ಮಂಕಾಯಿತಲ್ಲ...

=  ರಾಘವಾಂಕುರ
   raghavankura@gmail.com


'ಹ್ಯಾಗೆ ಬರೆಯೋದು?', 'ನಾವ್ ಬರೆದಿದ್ದನ್ನ ಪ್ರಕಟಿಸ್ತಾರಾ?' ಎಂಬ ಆತಂಕ ಬದಿಗಿಟ್ಟು ನಿಮ್ಮ ಮೊದಲ ಬರಹಗಳನ್ನು ನಮಗೆ ಕಳುಹಿಸಿ. 'ಇದೇ ಮೊದಲ ಬಾರಿಗೆ ನನ್ನ ಬರಹ ಪ್ರಕಟವಾಗಿದೆ' ಎಂಬ ಖುಷಿ ನಿಮ್ಮದಾದರೆ ಸಾಕು. ತೊದಲು ಬರಹಗಳಿಗೇ ಇರುವ ಅಂಕಣ ಇದು, 'ಮೊದಲ ಖುಷಿ'.  ನೀವೂ ಗೀಚಿ... . khushimag@gmail.com ನಮ್ಮ ಅಂಚೆ ವಿಳಾಸ: ಕನ್ನಡಪ್ರಭ, 'ಮೊದಲ ಖುಷಿ' ವಿಭಾಗ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು-01

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments