ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಲಂಬಾಣಿ ಕನ್ನಡಿಯಲ್ಲಿ ಜೀವನ ಹವನ

Mainashree
Updated On : 29 Mar 2014, 12:56 pm

ಜನಾಂಗೀಯ ಕಥನಗಳು ಸಾಹಿತ್ಯದ ವಸ್ತುವಾಗಿ ಕನ್ನಡದಲ್ಲಿ ಬಹಳಷ್ಟು ಬಂದಿವೆ. ಮೂಲತಃ ಅಲೆಮಾರಿ ಜನಾಂಗವಾದ ಲಂಬಾಣಿಗರ ಕುರಿತು ಮಲ್ಲಿಕಾರ್ಜುನ ಹಿರೇಮಠ ಅವರು 'ಹವನ' ಎಂಬ ಕಾದಂಬರಿಯನ್ನು ಬರೆದಿರುವರು. ಈಗಾಗಲೇ ವಿಮರ್ಶಕರು ಒರೆಗೆ ಹಚ್ಚಿರುವ ಈ ಕೃತಿಯು ವಾಸ್ತವವಾದಿ ಕೃತಿ ಎನ್ನಿಸಿಕೊಂಡಿದೆ. ಜನಾಂಗೀಯ ವಸ್ತುವನ್ನು ಹೊಂದಿರುವ ಕಾದಂಬರಿ ಲೇಖಕ ಸ್ವಲ್ಪ ಎಚ್ಚರ ತಪ್ಪಿದರೆ ಸಮಾಜಶಾಸ್ತ್ರೀಯ ಟಿಪ್ಪಣಿಯಾಗುವ ಅಪಾಯ ಇರುತ್ತದೆ. ಅಂಥ ಅಪಾಯವನ್ನು ಈ ಕೃತಿ ಮೀರಿ ನಿಂತಿದೆ.
ಹಿರಿಯ ವಿಮರ್ಶಕ ಮಾಧವ ಕುಲಕರ್ಣಿಯವರು, 'ವಿಕಾಸವೆಂದರೆ ಕೇವಲ ಭೌತಿಕ ವಿಕಾಸವೆಂದು ತಿಳಿದಾಗ ಉಂಟಾಗುವ ಹೃದಯದ ಅವನತಿಯನ್ನು ಕಾದಂಬರಿಯು ಸಬಲವಾಗಿ ಸೆರೆ ಹಿಡಿಯುತ್ತದೆ. ನಾನು ಇತ್ತೀಚಿಗೆ ಓದಿದ ಕಾದಂಬರಿಗಳಲ್ಲಿಯೇ 'ಹವನ' ಶ್ರೇಷ್ಠ ಮಟ್ಟದ ಬರವಣಿಗೆ. ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರಬಹುದಾದ ಎಲ್ಲ ಗುಣಗಳನ್ನು ಹಿರೇಮಠರ ಈ ಹವನ ಕಾದಂಬರಿ ಪಡೆದುಕೊಂಡಿದೆ' ಎಂದಿದ್ದಾರೆ.
ಮೊದಲ ನೋಟಕ್ಕೇ ಇತರರಿಂದ ಭಿನ್ನವಾಗಿ ತಮ್ಮ ವೇಷಭೂಷಣ ಭಾಷೆ ಸಂಸ್ಕೃತಿಗಳಿಂದ ಕಾಣುವ ಲಂಬಾಣಿಗರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವುದಕ್ಕೆ ಮತ್ತು ಒಂದು ಸಾಮರಸ್ಯದ ಸಮಾಜದ ಭಾಗವಾಗುವುದಕ್ಕೆ ಹೇಗೆ ಕಷ್ಟಪಡುತ್ತಾರೆ ಎನ್ನುವುದನ್ನು ಮಲ್ಲಿಕಾರ್ಜುನ ಹಿರೇಮಠರು ಇಲ್ಲಿ ಸೊಗಸಾಗಿ ದಾಖಲಿಸಿದ್ದಾರೆ.
ಕಲ್ಲೂರು ಬಳಿಯ ಒಂದು ಲಂಬಾಣಿ ತಾಂಡಾದ ಹೆಸರು ಹವನ. ಈ ತಾಂಡಾದ ಕೆಲವು ವ್ಯಕ್ತಿಗಳ ಬದುಕಿನ ಆಗುಹೋಗುಗಳನ್ನು ಚಿತ್ರಿಸುವ ಲೇಖಕರು ಆ ಮೂಲಕ ಒಂದು ಜನಾಂಗದ ತಳಮಳವನ್ನು ಕಟ್ಟಿಕೊಡುತ್ತಾರೆ. ಲಂಬಾಣಿಗರಿಗೇ ವಿಶಿಷ್ಟವಾದ ಆಚಾರಗಳು, ನಂಬಿಕೆಗಳು ಇವೆ. ಆಧುನಿಕ ನಾಗರಿಕತೆಯೊಂದಿಗೆ ಅವುಗಳ ಮುಖಾಮುಖಿಯಾದಾಗ ಸಂಭವಿಸುವ ತೊಡಕುಗಳು ಲೇಖಕರ ಮುಖ್ಯ ಕಾಳಜಿಯಾಗುತ್ತದೆ.
ಅಲೆಮಾರಿಗಳು ಸ್ಥಾಯಿಯಾಗಬೇಕಾದರೆ ಅವರಿಗೆ ಈ ಭೂಮಿಯ ಮೇಲೆ ಹಕ್ಕು ಸಿಗಬೇಕು. ತಾವು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಗೋಮಾಳದ ಜಮೀನಿನ ಪಟ್ಟಾ ಪಡೆಯುವುದು ಅವರ ಆಸೆ. ಆದರೆ ಇದಕ್ಕೆ ಉಳ್ಳವರ ವಿರೋಧ. ಲಂಬಾಣಿಗಳು ಅವರಲ್ಲಿ ಕೂಲಿಯವರಾಗಿ ದುಡಿಯಬೇಕಾದ ಸ್ಥಿತಿ ಇರುತ್ತದೆ. ಇಂಥ ದೈನ್ಯದ ಬದುಕಿನಲ್ಲಿ ಉಳ್ಳವರಿಂದ ಇವರ ಮೇಲೆ ನಿರಂತರ ದೌರ್ಜನ್ಯ. ಹವನ ತಾಂಡಾಕ್ಕೆ ಶಾಲೆಯ ಮಾಸ್ತರನಾಗಿ ಬಂದ ಬಸಪ್ಪನ ಗ್ರಹಿಕೆಯ ನೆಲೆಯಲ್ಲಿ ಕಾದಂಬರಿಯ ಮೊದಲ ಭಾಗ ನಿರೂಪಿಸಲ್ಪಟ್ಟಿದೆ. ಕಾದಂಬರಿಯ ಎರಡನೇ ಭಾಗವು ತಾಂಡದವರೇ ಆದ ಲೋಕು, ಝಿಮ್ರಿ, ಹರಿ ಮತ್ತು ಕಸನು ಇವರ ಗ್ರಹಿಕೆಯಲ್ಲಿ ನಮೂದಾಗಿದೆ.
ಶೋಷಣೆಗೆ ಒಳಗಾಗುವ ಲಂಬಾಣಿಗರ ಭೂಮಿಯ ಕನಸು ಮತ್ತು ಪ್ರತಿಭಟನೆಯ ರೊಚ್ಚನ್ನು ದಾಖಲಿಸುವ ಕಾದಂಬರಿಯ ಈ ಭಾಗವನ್ನು ನೋಡಿ: ಸಿಟ್ಟಿಗೆದ್ದ ದಾಮ್ಲಾ ಕುಡಿದು ರಾತ್ರಿ ಒದರಾಡಕ ಸುರುಮಾಡಿದ್ದ. "ನಮ್ಮ ಹೆಣ್ಮಕ್ಕಳ ಮೈಮ್ಯಾಲ ಕೈಮಾಡಿ ಅಸಹ್ಯ ಮಾಡಿದ ಸೂಳೇಮಕ್ಕಳನ್ನ ನಾ ಬಿಡೂದಿಲ್ಲ.. ಅವರನ್ನ ಒಂದು ಕೈ ನೋಡೇ ಬಿಡ್ತೀನಿ" ಅಂತ ಕ್ಯಾಕಿ ಹಾಕುತ್ತಿದ್ದ. "ದಾರುದಂಧೆ ಬ್ಯಾಡ ಅಂತಾರ. ಕಟ್ಟಿಗೆ ಕಡಿಯೋದು ಬ್ಯಾಡ ಅಂತಾರ. ಕವಳಿ ಕಾಯಿ ಕೀಳಾಕೂ ಬ್ಯಾಡಂತಾರ. ಮತ್ತ ನಾವೇನು ಮಾಡಬೇಕು? ನಾವು ಈ ಭೂಮಿ ಮ್ಯಾಗ ಇರಬೇಕಂತೋ ಇರಬಾರದಂತೊ?.. ನಾವ ಏನ ಮಣ್ಣು ತಿನ್ನಬೇಕೇನು? ಈ ಭೂಮಿ ಎಲ್ಲಾ ಇವರಪ್ಪನ ಆಸ್ತೀ ಏನು?.." ಹೀಗೆಲ್ಲ ಕೂಗಾಡುತ್ತಲೇ ಇದ್ದ.
ತಾಂಡಾದ ಮುಖಂಡ ಸೋಮಲ್ಯಾನ ಮಗ ಕಾಲೇಜು ಶಿಕ್ಷಣವನ್ನು ಪಡೆಯುತ್ತಾನೆ. ತನಗೆ ನೌಕರಿ ಸಿಗುವುದಕ್ಕೆ ನೆರವಾದವರ ಮಗಳನ್ನು ಮದುವೆಯಾಗುತ್ತಾನೆ. ತನ್ನ ಮದುವೆಯ ನಿಶ್ಚಯಕ್ಕೆ ತಂದೆ ತಾಯಿಯನ್ನು ಕರೆಯುವುದಿಲ್ಲ. ಸೋಮಲ್ಯಾನಿಗೆ ಮದುವೆಗೆ ಹೋಗುವುದಕ್ಕೇ ಮನಸ್ಸು ಇರುವುದಿಲ್ಲ. ಆದರೆ ಬಸಪ್ಪ ಮಾಸ್ತರ ಇದು ಕಾಲದ ಬದಲಾವಣೆ ಎಂದು ಕಾಲ ಮಹಿಮೆಯನ್ನು ವಿವರಿಸಿ ಮದುವೆಗೆ ಕಳುಹಿಸುತ್ತಾರೆ. ಮುಂದೆ ಸೋಮಲ್ಯಾ ಅನಾರೋಗ್ಯ ಪೀಡಿತನಾದಾಗ ಮಗನ ಮನೆಗೇ ಹೋಗಿ ನಿಲ್ಲಬೇಕಾಗುತ್ತದೆ. ಮಗ ಹರಿಯ ಹೆಂಡತಿ ತನ್ನ ಗಂಡನಿಗೆ 'ನಿಮ್ಮ ಯಾಡಿ ಲಮಾಣಿ ಡ್ರೆಸ್‌ದಾಗಿರೋದು ಸರಿ ಅಲ್ಲ. ಆಕಿಗೆ ನಾವು ತುರ್ತಾಗಿ ಸೀರಿ ಜಂಪರ್ ತಂದುಕೊಡೋಣ' ಎಂದು ಹೇಳುತ್ತಾಳೆ. ಇದಕ್ಕೆ ಸೋಮಲ್ಯಾನ ವಿರೋಧ ಲೆಕ್ಕಕ್ಕೇ ಬರುವುದಿಲ್ಲ.
ಇಂಥ ಸಂಸ್ಕೃತಿ ಪಲ್ಲಟದ ಹಲವು ಎಳೆಗಳಿಂದ ಕಾದಂಬರಿ ಸಮೃದ್ಧವಾಗಿ ಹೃದಯ ಮತ್ತು ಮಿದುಳು ಎರಡೂ ಮಿಡುಕುವ ಹಾಗೆ ಮಾಡುತ್ತದೆ. ಇದೇ ಕಾದಂಬರಿಯ ಯಶಸ್ಸು.
'ಹವನ' ಹೆಸರು ಸಾಂಕೇತಿಕವಾದದ್ದು. ಲೋಕೋದ್ಧಾರಕ್ಕೆಂದು ನಡೆಸುವ ಹವನದ ಕೊನೆಯಲ್ಲಿ ಬಲಿ ನಡೆಯುತ್ತದೆ. ಬಲಿಯಾದುದ್ದಕ್ಕೆ ಏನೂ ಪ್ರಯೋಜನವಿಲ್ಲ. ಉಳಿದವರು ನಡೆಸುವ ಬದುಕಿನ ಯಜ್ಞದಲ್ಲಿ ಲಂಬಾಣಿಗಳು ಬಲಿಯಾಗುತ್ತಾರೆ ಎಂಬುದನ್ನು ಲೇಖಕರು ಇಲ್ಲಿ ಸಾಂಕೇತಿಕವಾಗಿ ಹೇಳುತ್ತಾರೆ.
ಪ್ರ: ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ, ಪುಟಗಳು 216, ಬೆಲೆ ರು. 120


ಭಗವದ್ಗೀತೆ ಧರ್ಮಗ್ರಂಥವಲ್ಲ

ಭಗವದ್ಗೀತೆ ಬೋಧಿಸುವ ಸಂದೇಶ ಏನು ಎಂಬುದರ ಬಗ್ಗೆ ಇಂಥ ವೈವಿಧ್ಯಮಯವಾದ ಅಭಿಪ್ರಾಯ ಕಾಣುವುದು ದೊಡ್ಡ ಆಶ್ಚರ್ಯದ ಸಂಗತಿಯಲ್ಲ. ವಿದ್ವಾಂಸರು ದಾರಿ ತಪ್ಪಿದ್ದರೆಂಬುದೇ ಇದಕ್ಕೆ ನನ್ನ ಉತ್ತರ. ಖುರಾನ್, ಬೈಬಲ್ ಅಥವಾ ಧಮ್ಮಪದದ ಹಾಗೆ ಭಗವದ್ಗೀತೆಯೂ ಕೂಡಾ ಒಂದು ಸಂದೇಶವನ್ನು ಕೊಡುತ್ತದೆ ಎಂಬ ಭಾವನೆಯಿಂದ ಅವರು ಹೊರಟಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಈ ಭಾವನೆ ಸಂಪೂರ್ಣ ತಪ್ಪು ಭಾವನೆಯಾಗಿದೆ. ಭಗವದ್ಗೀತೆಯು ದೇವವಾಣಿಯಲ್ಲ. ಆದ್ದರಿಂದ ಅದು ಯಾವ ಸಂದೇಶವನ್ನೂ ಕೊಡಲಾರದು. ಅದನ್ನು ಹುಡುಕುವುದು ವ್ಯರ್ಥ. ಭಗವದ್ಗೀತೆ ಧರ್ಮಗ್ರಂಥವೂ ಅಲ್ಲ, ದರ್ಶನಗ್ರಂಥವೂ ಅಲ್ಲ ಎಂಬುದೇ ನನ್ನ ಉತ್ತರ. ತಾತ್ವಿಕ ನೆಲೆಗಟ್ಟಿನ ಮೇಲೆ ಕೆಲವು ಧಾರ್ಮಿಕ ನಂಬಿಕೆಗಳನ್ನು ಸಮರ್ಥಿಸುವುದೇ ಭಗವದ್ಗೀತೆಯ ಉದ್ದೇಶ. ಈ ಕಾರಣದಿಂದಾಗಿ ಅದನ್ನು ಯಾರಾದರೂ ಧರ್ಮಗ್ರಂಥ ಅಥವಾ ದರ್ಶನಗ್ರಂಥ ಎಂದು ಕರೆಯಲಿಚ್ಚಿಸಿದರೆ ಅವರು ಹಾಗೆಯೇ ಮಾಡಲಿ; ಆದರೆ ಅದು ಮೂಲಭೂತವಾಗಿ ಇದಾವುದೂ ಅಲ್ಲ. ಅದು ಧರ್ಮವನ್ನು ಸಮರ್ಥಿಸಲು ತತ್ವಜ್ಞಾನವನ್ನು ಬಳಸುತ್ತದೆ. ಈ ವಾದದ ಕೇವಲ ಹೇಳಿಕೆಯಿಂದ ನನ್ನ ವಿರೋಧಿಸಲು ತೃಪ್ತರಾಗುವುದಿಲ್ಲ; ನಿಶ್ಚಿತ ನಿದರ್ಶನಗಳಿಂದ ನನ್ನ ವಾದವನ್ನು ಸಾಬೀತುಪಡಿಸಬೇಕೆಂದು ಅವರು ಒತ್ತಾಯಪಡಿಸಿಯಾರು, ಅದು ನಿಜವಾಗಿ ಅತ್ಯಂತ ಸುಲಭದ ಕೆಲಸ.
ಭಗವದ್ಗೀತೆಯನ್ನು ಓದಿದರೆ ಮೊಟ್ಟಮೊದಲಿಗೆ ಗೊತ್ತಾಗುವ ವಿಷಯವೆಂದರೆ ಯುದ್ಧದ ಸಮರ್ಥನೆ. ರಾಜ್ಯಕ್ಕಾಗಿ ಸ್ವಜನರನ್ನು ಕೊಲ್ಲುವುದಿಲ್ಲವೆಂದೂ, ಯುದ್ಧ ಮಾಡುವುದಿಲ್ಲವೆಂದೂ ಅರ್ಜುನ ಘೋಷಿಸಿದ್ದ; ಯುದ್ಧದಲ್ಲಿ ಕೊಲ್ಲುವುದನ್ನೂ, ಯುದ್ಧದ ಸಮರ್ಥನೆಯನ್ನೂ ಕೃಷ್ಣ ಹೇಳುತ್ತಾನೆ. ಯುದ್ಧ ಈ ತಾತ್ವಿಕ ಸಮರ್ಥನೆಯನ್ನು 2ನೇ ಅಧ್ಯಾಯದ 11ರಿಂದ 28ರವರೆಗಿನ ಶ್ಲೋಕಗಳಲ್ಲಿ ನೋಡಬಹುದು.
ಲೇ: ಡಾ. ಬಿ.ಆರ್. ಅಂಬೇಡ್ಕರ್
ಕೃತಿ: ಭಗವದ್ಗೀತೆ ಗ/ಖ ಬೌದ್ಧತತ್ವ
ಪ್ರಕಾಶನ: ಲಡಾಯಿ ಪ್ರಕಾಶನ
ಪುಟ: 48, ಬೆಲೆ: 30 ರುಪಾಯಿ


ಮೂಗು ರಾಮಾಯಣಕ್ಕೆ ಮೂಲ
ರಾಮಾಯಣವನ್ನು ಆಧರಿಸಿ ಆಧುನಿಕ ಕನ್ನಡದಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚನೆಯಾಗಿದೆ. ಡಾ. ಪ್ರಭಾಕರ ಶಿಶಿಲ ಅವರ 'ಮೂಗು' ಕಾದಂಬರಿಯು ಶೂರ್ಪನಖೆಯ ಮೂಗನ್ನು ಕೊಯ್ದುದೇ ಹೇಗೆ ರಾಮಾಯಣಕ್ಕೆ ಕಾರಣವಾಯ್ತು ಎಂಬುದರ ವ್ಯಾಖ್ಯಾನದಂತೆ ಇದೆ. ಆಧುನಿಕ ಪರಿಕಲ್ಪನೆಗಳಿಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಇದರಲ್ಲಿ ಮಾಡಿಕೊಳ್ಳಲಾಗಿದೆ. ಶ್ರೀರಾಮ, ಸೀತೆಯನ್ನು ಪರಿತ್ಯಾಗ ಮಾಡುವುದಕ್ಕೆ ಶೂರ್ಪನಖೆಯೇ ಕಾರಣ, ಶಂಭುಕ ಆಕೆಯ ಮಗ ಇತ್ಯಾದಿ ಮುಖ್ಯಾಂಶಗಳು.
ಪ್ರ: ರಾಜ್ ಪ್ರಕಾಶನ, ಮೈಸೂರು, ಪುಟಗಳು 160, ಬೆಲೆ ರು. 100

ಬ್ಯಾಕೋಡರ ಮಕ್ಕಳ ಸಾಹಿತ್ಯ
ಮಕ್ಕಳ ಸಾಹಿತ್ಯವನ್ನೇ ತಮ್ಮ ಅಭಿವ್ಯಕ್ತಿಯ ಪ್ರಥಮ ಆದ್ಯತೆಯನ್ನಾಗಿಸಿಕೊಂಡಿರುವ ಹ.ಸ. ಬ್ಯಾಕೋಡ ಅವರು, ಇದೀಗ ಎರಡು ಹೊಸ ಕೃತಿಗಳೊಂದಿಗೆ ನಿಮ್ಮ ಮುಂದೆ ಬಂದಿದ್ದಾರೆ. 'ಮಾವಿನ ತೋಟದಲಿ ಹಲಸಿನ ಸುವಾಸನೆ', 'ಹಾರದಿರಲಿ ಪ್ರಾಣಪಕ್ಷಿ' ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸುವುದಕ್ಕೆ ನೆರವಾಗಲಿದೆ. 'ಮಾವಿನ ತೋಟದಲಿ...' ಕೃತಿಯಲ್ಲಿ ಹತ್ತು ನೀತಿ ಕತೆಗಳಿವೆ. ಪ್ರಾಣಿ ಪಕ್ಷಿ ವೃಕ್ಷಗಳೇ ಇಲ್ಲಿ ಪಾತ್ರಗಳಾಗಿವೆ. 'ಹಾರದಿರಲಿ ಪ್ರಾಣಪಕ್ಷಿ' ಕೃತಿಯಲ್ಲಿ ನಗರಕೇಂದ್ರಿತ ನಾಗರಿಕತೆಯಲ್ಲಿ ಪಕ್ಷಿಗಳ ಕಷ್ಟದ ಚಿತ್ರಣವಿದೆ.
ಪ್ರ: ಶ್ರೀಅಮ್ಮ ಪ್ರಕಾಶನ, ಬೆಂಗಳೂರು, ಪುಟಗಳು 88/104, ಬೆಲೆ ರು. 60/70

ಬಿ.ಎ. ಸನದಿ 80
ಕವಿ ಡಾ.ಬಿ.ಎ. ಸನದಿಯವರಿಗೆ ಈಗ ಎಂಬತ್ತು ತುಂಬಿದೆ. ಅವರ ಬದುಕು ಮತ್ತು ಬರೆಹವನ್ನು ಸಮೀಕ್ಷಿಸುವ 122 ಲೇಖನಗಳನ್ನು ಒಳಗೊಂಡ '80ರ ಪಯಣ' ಕೃತಿಯನ್ನು ಪ್ರೊ. ಮೋಹನ ಹಬ್ಬು ಸಂಪಾದಿಸಿದ್ದಾರೆ. ಐದು ಮಜಲುಗಳಲ್ಲಿ ಲೇಖನಗಳನ್ನು ವಿಭಾಗಿಸಲಾಗಿದೆ. ಪಾಟೀಲ ಪುಟ್ಟಪ್ಪ, ವಿ.ಕೃ. ಗೋಕಾಕ, ಗುರುಲಿಂಗ ಕಾಪಸೆ, ಸುಬ್ಬಣ್ಣ ಎಕ್ಕುಂಡಿ, ಜಿ.ಎಂ. ಹೆಗಡೆ ಹೀಗೆ ನಾಡಿನ ಹಲವು ಪ್ರಮುಖರು ವಿವಿಧ ಸಂದರ್ಭಗಳಲ್ಲಿ ಸನದಿಯವರ ಬಗ್ಗೆ ಬರೆದ ಬರೆಹಗಳು ಇದರಲ್ಲಿವೆ. ಸಮಗ್ರ ಸನದಿ ನಮಗಿಲ್ಲಿ ಲಭ್ಯ.
ಪ್ರ: ಸಾಹಿತ್ಯ ಸುಗ್ಗಿ, ಬೆಂಗಳೂರು, ಪುಟಗಳು 740, ಬೆಲೆ ರು. 700


ಕಾಖಂಡಕಿ ಕತೆಗಳು
ಉತ್ತರ ಕರ್ನಾಟಕದ ಮಣ್ಣಿನ ಭಾಷೆಯಲ್ಲಿ ಸಮರ್ಥವಾಗಿ ಅಭಿವ್ಯಕ್ತಿಸುವ ರೇಖಾ ಕಾಖಂಡಕಿಯವರು ಕನ್ನಡದ ಪ್ರಮುಖ ಬರೆಹಗಾರ್ತಿಯೆಂದು ಗುರುತಿಸಲ್ಪಟ್ಟಿದ್ದಾರೆ. ಅವರ 18 ಕತೆಗಳನ್ನು ಒಳಗೊಂಡ 'ರಿಂದಕ್ಕನ ಸ್ವಗತ' ಮಹಿಳೆಯ ಅಂತರಂಗದ ಮಾತಾಗಿ ಹೃದಯಕ್ಕೆ ತಟ್ಟುತ್ತವೆ. ವ್ಯವಸ್ಥೆಯನ್ನು, ಅಸಮಾನತೆಯನ್ನು ಪ್ರಶ್ನಿಸುವ, ಹಾಗೆ ಪ್ರಶ್ನಿಸುತ್ತಲೇ ತಮ್ಮಷ್ಟಕ್ಕೆ ತಾವು ಅದಕ್ಕೆ ಉತ್ತರವನ್ನೂ ಕಂಡುಕೊಳ್ಳುವ ಇಲ್ಲಿಯ ಸ್ತ್ರೀಪಾತ್ರಗಳು ಆಧುನಿಕ ಸಂವೇದಗಳಿಂದ ಬಲಗೊಂಡವುಗಳಾಗಿವೆ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 192, ಬೆಲೆ ರು. 150


= ಡಾ. ವಾಸುದೇವ ಶೆಟ್ಟಿ
vasudevs@sify.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement