ಅದೊಂದು ದಿನ ಸುಮತಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮರದ ಬುಡದಲ್ಲಿ ಸುಮ್ಮನೆ ಕುಳಿತಿದ್ದಳು. ಸಂಗಾತಿಯ ಮೌನ ಕಂಡ ಪೋಲೋ ಆಕೆಯನ್ನು ಎಬ್ಬಿಸಲು ಭುಜ ಹಿಡಿದೆಳೆದ. ಸುಮತಿ ಹಾಗೇ ನೆಲಕ್ಕೆ ಉರುಳಿದಳು. ಆಕೆ ಸತ್ತು ಆಗಲೇ ಎರಡು ಗಂಟೆಯಾಗಿತ್ತು. ಸುಮತಿಯ ಒಂಟಿತನ ನೀಗಿಸಲು ಬಂದಿದ್ದ ಪೋಲೋ ಏಕಾಂಗಿಯಾದ.
ನಿತ್ಯದ ಪೋಲೋಟ!
ಸುಮತಿ ಸಾವಿನ ನಂತರ ಪೋಲೋನ ಮನಸ್ಸಲ್ಲಿ ಜಾಗ ಗಿಟ್ಟಿಸಿದ್ದು ಮೃಗಾಲಯದ ಸಿಬ್ಬಂದಿ. ಪೋಲೋನ ದಿನಚರಿ ಬೆಳಗ್ಗೆ ಎಂಟು ಗಂಟೆಗೆ ಆರಂಭ. ನಿದ್ರೆಯಿಂದ ಎದ್ದ ಕೂಡಲೆ ಆತನಿಗೆ ಹಾಲು ಮತ್ತು ಬ್ರೆಡ್ಡು. ಮಧ್ಯಾಹ್ನ ಸೇಬು, ದ್ರಾಕ್ಷಿ, ಮೂಸುಂಬಿ, ಬಾಳೆಹಣ್ಣು ಹೀಗೆ ಪುಷ್ಕಳ ಭೋಜನ. ಅದನ್ನು ತಿಂದು ಮರದ ಕೆಳಗೆ ಕಟ್ಟಿದ್ದ ತೊಟ್ಟಿಲಿನಲ್ಲಿ ಮಲಗಿ ಹಾಯಾಗಿ ನಿದ್ರಿಸುತ್ತಿದ್ದ. ಬಿಸಿಲಿನ ಬೇಗೆ ತಣಿಸಲು ಬಾಟಲಿನ ತುಂಬಾ ಎಳನೀರು ತುಂಬಿ ಕೈಗೆ ಕೊಟ್ಟಾಗ ಅಚ್ಚುಕಟ್ಟಾಗಿ ಅದರ ಮುಚ್ಚಳ ತೆಗೆದು ಎಳನೀರು ಹೀರುತ್ತಿದ್ದ. ಸಂಜೆ ಮತ್ತೆ ಹಣ್ಣುಗಳು, ಬೇಯಿಸಿದ ಮೊಟ್ಟೆ, ಈರುಳ್ಳಿ, ನಿಂಬೆ. ಜತೆಗೆ ಜಗ್ಗಿನ ತುಂಬ ಚಹಾ. ನಂತರ ಒಂದಷ್ಟು ಹೊತ್ತು ಜೋಕಾಲಿ ಆಟ. ಎರಡು ದಿನಕ್ಕೊಮ್ಮೆ ಸ್ನಾನ. ಪೈಪಿನಲ್ಲಿ ನೀರು ಬಿಟ್ಟರೆ ಆತನೇ ಮೈ ಉಜ್ಜಿ ತೊಳೆದುಕೊಳ್ಳುತ್ತಿದ್ದ. ಪೋಲೋಗೆ ಅತ್ಯಂತ ಸಂತೋಷವಾಗುತ್ತಿದ್ದುದು ಬೆಳಗಿನ ವೇಳೆ ಮಳೆ ಬಂದಾಗ. ಇಡೀ ದೇಹವನ್ನು ಮಳೆಗೆ ಒಡ್ಡಿ ಎರಡೂ ಕೈಗಳಿಂದ ಎದೆ ಬಡಿದುಕೊಳ್ಳುತ್ತಾ ಸಂಭ್ರಮಾಚರಿಸುತ್ತಿದ್ದ. ಪೋಲೋ ಮನಸ್ಸಲ್ಲಿ ಜಾಗ ಪಡೆದ ಕೀಪರ್ ಶಿಳ್ಳೆ ಹೊಡೆದರೆ ಸಾಕು ಎಲ್ಲಿದ್ದರೂ ಓಡಿಬರುತ್ತಿದ್ದ. ಕೀಪರ್ ಪೋಲೋವಿನ ಬಾಯಿಗೆ ಕೈ ಹಾಕಿ ಹಲ್ಲುಜ್ಜಿದರೆ ಪರಮಾನಂದ. ಕೈ ತುಂಬಾ ಜೇನುತುಪ್ಪ ಸವರಿಕೊಂಡು ಬಾಯಿಗೆ ಹಿಡಿದರೆ ಮಗುವಿನಂತೆ ಚೀಪುತ್ತಿದ್ದ.
ಮೈಸೂರು ಮೃಗಾಲಯದ ಆಕರ್ಷಣೆಯಾಗಿದ್ದ ಪೋಲೋ ಐರ್ಲೆಂಡ್ನವನು. 1995ರಲ್ಲಿ ಸುಮತಿಯ ಜೊತೆಗಾರನಾಗಿ ಪೋಲೋ ಮೈಸೂರಿಗೆ ಆಗಮಿಸಿದ್ದ. ಅಂದು ಸುಮತಿ ಮೃಗಾಲಯದಲ್ಲಿದ್ದ ಏಕೈಕ ಗೋರಿಲ್ಲ. ಲೈಂಗಿಕ ಸಾಂಗತ್ಯದಿಂದ ವಂಚಿತವಾಗಿ ವಿರಹದಲ್ಲಿದ್ದಳು. ಸುಮತಿಯ ಆಕಾಂಕ್ಷೆ ಅರಿತ ಮೃಗಾಲಯದ ಅಧಿಕಾರಿಗಳು ಆಕೆಗೆ ಜೊತೆಗಾರನಾಗಿ ಪೋಲೋನನ್ನು ಕರೆತಂದಿದ್ದರು. ಆದರೆ, ಪೋಲೋ ಸುಮತಿಯ ಸ್ನೇಹವನ್ನಷ್ಟೇ ಬಯಸಿದ್ದ. ಸಾಮಾನ್ಯವಾಗಿ ಗೋರಿಲ್ಲಾಗಳಲ್ಲಿ ಎರಡು ಜಾತಿ. ಮೌಂಟೈನ್ ಗೋರಿಲ್ಲ ಮತ್ತು ಸಿಲ್ವರ್ ಬ್ಯಾಕ್ ಗೊರಿಲ್ಲಾ. ಮೌಂಟೈನ್ ಗೋರಿಲ್ಲಾಗಳ ಮೈಯೆಲ್ಲ ಕಪ್ಪು ರೋಮಗಳಿಂದ ಕೂಡಿರುತ್ತದೆ. ಸುಮತಿ ಈ ಜಾತಿಗೆ ಸೇರಿದವಳು. ಸಿಲ್ವರ್ ಬ್ಯಾಕ್ ಗೊರಿಲ್ಲಾಗಳ ಬೆನ್ನಹಿಂದೆ ಬೆಳ್ಳಿಯ ಬಣ್ಣದ ಗೆರೆಗಳಿರುತ್ತವೆ. ಪೋಲೋಗೂ ಈ ರೀತಿಯ ಗೆರೆಗಳಿದ್ದವು. ಅನ್ಯ ಜಾತಿಯಾದ್ದರಿಂದಲೋ ಏನೋ ಸುಮತಿ ಮತ್ತು ಪೋಲೋ ಒಂದುಗೂಡಲಿಲ್ಲ. ಹಾಗಂತ ಎರಡೂ ಅನ್ಯೋನ್ಯವಾಗೇ ಇದ್ದವು. ಸುಮತಿಗೆ ಆಹಾರ ಕೊಡದಿದ್ದರೆ ಪೋಲೋ ಆಹಾರವನ್ನೇ ಮುಟ್ಟುತ್ತಿರಲಿಲ್ಲ. ಇವತ್ತು ಪೋಲೋ ಝೂ ಬಿಟ್ಟು ನಡೆದಿದ್ದಾನೆ.
ಬೆಟ್ಸ್ ಕಟ್ಟಿದ್ದ ವಿದೇಶಿಗರು
ಒಮ್ಮೆ ವಿದೇಶಿ ಪ್ರವಾಸಿಗರ ದಂಡೊಂದು ಪೋಲೋವನ್ನು ನೋಡುತ್ತಾ ನಿಂತಿತ್ತು. ಪೋಲೋ ದೂರದ ಮರವೊಂದರ ಬಳಿ ಅಡಗಿ ಕುಳಿತಿದ್ದ. ಇದರಿಂದ ಬೇಸರಗೊಂಡ ಪ್ರವಾಸಿಗರು ಯಾರಾದರೂ ಪೋಲೋವನ್ನು ಹತ್ತಿರಕ್ಕೆ ಕರೆದರೆ ಅವರಿಗೆ 500 ರು. ನೀಡುವುದಾಗಿ ತಿಳಿಸಿದರು. ಅಲ್ಲಿದ್ದ ಎಲ್ಲರ ಪ್ರಯತ್ನವೂ ವಿಫಲ. ಇದನ್ನು ಗಮನಿಸುತ್ತಿದ್ದ ಕೀಪರ್ ಒಮ್ಮೆ ಜೋರಾಗಿ ಶಿಳ್ಳೆ ಹೊಡೆದ. ಅದನ್ನು ಕೇಳುತ್ತಿದ್ದಂತೆ ಪೋಲೋ ನೇರವಾಗಿ ಕೀಪರ್ ಬಳಿಗೆ ಬಂದು ಕೈಕಟ್ಟಿ ನಿಂತೇಬಿಟ್ಟ!
ಬ್ರೆಡ್ಡನ್ನೂ ಮುಟ್ಟಲಿಲ್ಲ!
ಪೋಲೋ ಇಹಲೋಕ ತ್ಯಜಿಸುವ ಮುನ್ನ 15 ದಿನಗಳಿಂದ ಮಂಕಾಗಿದ್ದ. ಅನ್ನಾಹಾರ ತ್ಯಜಿಸಿದ್ದ. ವಿರಾಗಿಯಂತೆ ಎತ್ತಲೋ ನೋಡುತ್ತ ಕೂರುತ್ತಿದ್ದ. ಯಾರಿಗೂ ಮುಖ ತೋರಿಸುತ್ತಿರಲಿಲ್ಲ. ಮರವೊಂದಕ್ಕೆ ಒರಗಿ ಪೂರ್ತಿದಿನ ಕಳೆದು ಬಿಡುತ್ತಿದ್ದ. ಉಸಿರಾಟದ ತೊಂದರೆಗೂ ಸಿಲುಕಿದ. ಪೋಲೋವನ್ನು ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದ ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ವೈದ್ಯರ ತಂಡ ಆತನ ಆರೋಗ್ಯ ಸರಿಪಡಿಸಲು ಭಗೀರಥ ಪ್ರಯತ್ನ ನಡೆಸಿದರು. ಸಫಲವಾಗಲಿಲ್ಲ. ಕೀಪರ್ ಬ್ರೆಡ್ಡಿನ ತುಂಡನ್ನು ನೀಡಲು ಮುಂದಾದಾಗ ಪೋಲೋ ಅದನ್ನು ಮುಟ್ಟಲಿಲ್ಲ. ಬದಲಿಗೆ ಭಾವುಕತೆಯಿಂದ ಕೀಪರ್ನ ಕೈಹಿಡಿದು ಮೆಲ್ಲನೆ ಎಳೆಯುತ್ತಿದ್ದ. ಆ ಸ್ಪರ್ಶದಲ್ಲಿ ವಿದಾಯದ ಸಂತುಷ್ಟಿ ಇತ್ತು. ತನ್ನನ್ನು ಪ್ರೀತಿಯಿಂದ ಪೋಷಿಸಿದ ಒಡೆಯನಿಗೆ ಸಲ್ಲಿಸಿದ ಕೃತಜ್ಞತೆಯಿತ್ತು. ಅದಾದ ಮರುದಿನವೇ ಉಸಿರು ನಿಲ್ಲಿಸಿದ್ದ. ಈ ಮೂಲಕ ದಕ್ಷಿಣ ಏಷ್ಯಾದ ಏಕೈಕ ಗೊರಿಲ್ಲಾ ಇತಿಹಾಸದ ಪುಟ ಸೇರಿತು.
- ಎಸ್. ಉಮೇಶ್
Umesha_S@infosys.com