ಆ ವರ್ಷ ವಿಪರೀತ ಮಳೆ. ಎಲ್ಲಿ ನೋಡಿದರಲ್ಲಿ ನೀರಿನ ಒರತೆ ಎದ್ದು ಕಾಣುತ್ತಿತ್ತು. ಕಾಡಿನಲ್ಲಿರುವ ಪ್ರಾಣಿಗಳಿಗೆ ಸರಿಯಾದ ಮೇವೂ ಸಿಗದ ಸ್ಥಿತಿ ಬಂತು. ಭಾರಿ ಗಾತ್ರದ ಆನೆಗಳಿಗೆ ವಿಪರೀತ ಅವಾಂತರವಾಗುತ್ತಿತ್ತು. ಬೃಹತ್ ಗಾತ್ರ ಹೊಂದಿದ್ದರಿಂದ ಅವುಗಳಿಗೆ ಕಾಲಿಟ್ಟಲ್ಲಿ ಕುಸಿಯುವ ಭೀತಿ. ಆನೆಗಳ ಹಿಂಡಿನಲ್ಲಿ ತುಂಟ ಆನೆ ಮರಿಯೊಂದಿತ್ತು. ಅದಕ್ಕೆ ಇಡೀ ದಿನ ಆಡುವುದೇ ಕೆಲಸ. ಕುಣಿಕುಣಿದು ಕುಪ್ಪಳಿಸಿ ನೆಗೆ ನೆಗೆದು ಓಲಾಡಿ ಬೀಳುತ್ತಿತ್ತು. ಒಮ್ಮೆ ಆಡಿ ಆಡಿ ಸುಸ್ತಾಗಿ ದಾಹ ತೀರಿಸಿಕೊಳ್ಳಲು ಕೆರೆಯೊಂದಕ್ಕೆ ಇಳಿದಾಗ ಮರಿಯಾನೆಯ ಕಾಲು ರಾಡಿ ಮಣ್ಣಿನಲ್ಲಿ ಹೂತು ಹೋಯಿತು. ಅದು ಮೇಲಕ್ಕೆ ಬರಲು ಅದೆಷ್ಟೇ ಪ್ರಯತ್ನ ಪಟ್ಟರೂ ಅದರ ಭಾರದ ದೇಹ ಮತ್ತೂ ಆಳಕ್ಕೆ ಇಳಿಯಲ್ಪಡುತ್ತಿತ್ತು. ಕೆರೆ ಹೂಳಿನಲ್ಲಿ ಹೂತ ಮರಿಯಾನೆ ಮೇಲೇರಲಾರದೆ ಜೋರಾಗಿ ಘೀಳಿಟ್ಟಿತು.
ಮರಿಯಾನೆಯ ದನಿಯನ್ನಾಲಿಸಿದ ಆನೆಗಳ ಹಿಂಡು ತಂಡೋಪತಂಡವಾಗಿ ಕೆರೆಯ ಬಳಿ ಬಂದಾಗ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ ಅವುಗಳದ್ದು. ಆನೆ ಮರಿಯ ರಕ್ಷಣೆಗೆ ಮುಂದಾದ ಹಿರಿಯಾನೆಗಳ ಕಾಲುಗಳೂ ರಾಡಿ ಮಣ್ಣಿನಲ್ಲಿ ಹುಗಿಯುತ್ತಿತ್ತು. ವಿಫಲ ಯತ್ನದ ಬಳಿಕ ಅವೆಲ್ಲ ಹಿಂದೆ ಸರಿದವು. ತಾಯಿಯಾನೆ ಮಾತ್ರ ಮರಿಯಾನೆಯ ಯಾತನೆಯನ್ನು ನೋಡಲಾರದೆ ಏನಾದರೂ ಮಾಡಬೇಕೆಂದು ಅತ್ತಿಂದಿತ್ತ ಇತ್ತಿಂದತ್ತ ಮರುಗುತ್ತಾ ತಿರುಗುವುದೇ ಆಗಿತ್ತು. ಆನೆಗಳ ಹಿಂಡಿನಲ್ಲಿದ್ದ ಮುದಿ ಆನೆಯೊಂದರ ಸಲಹೆ ಮಾತ್ರ ಮರಿಯಾನೆಯ ಜೀವ ಉಳಿಸಲು ಪ್ರಬಲ ಅಸ್ತ್ರವಾಗಿ ಮಾರ್ಪಟ್ಟಿತ್ತು.
ಮರಿಯಾನೆಯು ಸೊಂಡಿಲನ್ನು ಕೆರೆಯ ದಂಡೆಯ ಅಂಚಿನಲ್ಲಿರುವ ತಾಯಿಯಾನೆಯು ತನ್ನ ಸೊಂಡಿಲಿನಿಂದ ಬಿಗಿಯಾಗಿ ಹಿಡಿಯಿತು. ಆ ತಾಯಿಯಾನೆಯ ಕಾಲನ್ನು ಮತ್ತೊಂದು ಆನೆಯು ಸೊಂಡಲಿನಿಂದ ಬಲವಾಗಿ ಹಿಡಿಯಿತು. ಅದರ ಹಿಂಗಾಲನ್ನು ಮಗದೊಂದು ಆನೆಯು ಸೊಂಡಲಿನಿಂದ ಗಟ್ಟಿಯಾಗಿ ಬಳಸಿ ಶಕ್ತಿ ಹಾಕಿ ಹೀಗೆ ಸರಪಳಿಯನ್ನು ಏರ್ಪಡಿಸಿಕೊಂಡು ಬಲವನ್ನು ಪ್ರಯೋಗಿಸಿ ಎಳೆಯತೊಡಗಿದವು. ಕೆರೆಯ ನಡುವಿನ ಕೆಸರಿನ ಮಣ್ಣಿನಲ್ಲಿ ಹೂತು ಹೋಗಿದ್ದ ಆನೆ ಮರಿಯು ನಿಧಾನವಾಗಿ ಮೇಲಕ್ಕೆ ಬಂತು. ಎಲ್ಲರೂ ವೃದ್ಧ ಆನೆಯ ಉಪಾಯವನ್ನು ಕೊಂಡಾಡಿದರು. ಮರಿಯಾನೆಯು ತುಸು ಕಾಲ ಚೇತರಿಸಿಕೊಂಡು ಮತ್ತೆ ತನ್ನ ತುಂಟಾಟವನ್ನು ಆರಂಭಿಸಿತು.
- ದತ್ತಗುರು ಕಂಠಿ
ಪ್ಲಾಸ್ಟಿಕ್ ಬಾಟಲಿ ಹೆಕ್ಕುವ ನಾಯಿ!
ಪ್ಲಾಸ್ಟಿಕ್ ವಿಚಾರದಲ್ಲಿ ಅಸಡ್ಡೆ ತೋರುವ ಮನುಷ್ಯರನ್ನು ನಾಚಿಸುವಂತಿದೆ ಟುಬ್ಬಿಯ ಚಟುವಟಿಕೆ! ಅಂದಹಾಗೆ ಟುಬ್ಬಿ ಲ್ಯಾಬ್ರಡಾರ್ ಜಾತಿಯ ನಾಯಿ. ಹೋದಲ್ಲೆಲ್ಲ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕಿ ತಂದು ರಿಸೈಕಲ್‌ಗೆ ಕೊಡುವುದು ಟುಬ್ಬಿಯ ಹಾಬಿ. ಸುಮಾರು 26,000 ಪ್ಲಾಸ್ಟಿಕ್ ಬಾಟಲಿಗಳನ್ನು ರಿಸೈಕ್ಲಿಂಗ್‌ಗೆ ನೀಡಿದೆ. ಆರು ವರ್ಷಗಳಿಂದ ಟುಬ್ಬಿ ಅಡ್ಡಾಡುವಾಗೆಲ್ಲಾ ಬಿದ್ದಿರುವ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕುತ್ತಿದೆ. ತನ್ನ ಈ ಕಾರ್ಯದಿಂದ ಗಿನ್ನೆಸ್ ಪುಸ್ತಕವನ್ನೂ ಸೇರಿದೆ. ಬ್ರಿಟನ್‌ನ ಸಂದ್ರಾ ಗಿಲ್ಮೋರ್ ಸಮಾಜಸೇವಕ ಟುಬ್ಬಿಯ ಮಾಲೀಕ. ಮಾಲಿನ್ಯ ದೂರ ಮಾಡಿ ಶುಚಿತ್ವ ಕಾಪಾಡುತ್ತಿರುವ ಟುಬ್ಬಿ ನಾಯಿಯಾದರೂ ಮನುಷ್ಯರಿಗೆ ಮಾದರಿಯೇ ಸರಿ!
ಪೋಲಾರ್ ಕರಡಿಗೆ ನೀರಿಗಿಳಿಯಲು ಹೆದರಿಕೆ
ಈಜು ಕಲಿಯುವ ಪ್ರಾರಂಭದಲ್ಲಿ ನೀರಿಗಿಳಿಯಲು ಅದೇನೋ ಭಯ. ತಣ್ಣನೆಯ ನೀರು ಸೋಕಿದಂತೆ ಕಾಲನ್ನು ಹಿಂದೆ ಸರಿಸಿಬಿಡುತ್ತೇವೆ. ರಷ್ಯಾದ ನೋವೋಸಿಬ್ರಿಸ್ಕ್ ಝೂನಲ್ಲಿರುವ 5 ತಿಂಗಳ ಪೋಲಾರ್ ಕರಡಿ ಮರಿಯ ಪಾಡು ಹಾಗೆಯೇ ಆಗಿದೆ. ಮುದ್ದಾಗಿ ಕಾಣುವ ಹಿಮಕರಡಿ ಮರಿಗೆ ನೀರಿಗಿಳಿಯಲು ಅದೇನೋ ಸಂಕೋಚ. ನೀರಲ್ಲಿ ಈಜಬೇಕು ಎನ್ನುವ ಆಸೆ ಮೂಗಿನ ತುದಿಯವರೆಗೂ ಇದೆ. ಆದರೆ ನೀರಿಗಿಳಿಯಲು ಹಿಂದೇಟು ಹಾಕುತ್ತದೆ. ಹಿಮದಿಂದ ಆವರಿಸಿದ ನೆಲದಂತಿದ್ದರೂ ಕೆಳಗೆ ತಂಪಾದ ನೀರಿರುತ್ತದೆ. ನಾವೇನಾದರು ಇಳಿದರೆ ಮರಗಟ್ಟಿ ಹೋಗುತ್ತೇವೆ. ಅಷ್ಟು ತಣ್ಣನೆಯ ನೀರಲ್ಲಿ ಓಡಾಡುವ ಮೀನನ್ನು ಪೋಲಾರ್ ಕರಡಿಗಳು ಬೇಟೆಯಾಡಬೇಕೆಂದರೆ ನೀರಿಗಿಳಿಯಲೇ ಬೇಕು. ನೀರಲ್ಲಿ ಬೇಟೆಯಾಡಬೇಕೆಂದರೆ ಈಜು ಕಲಿಯಲೇಬೇಕು. ಪುಟ್ಟ ಕರಡಿ ಮರಿಯ ಫಜೀತಿ ದೇವರಿಗೇ ಪ್ರೀತಿ. ತಾಯಿ ಕರಡಿ ನೀರಿಗೆ ಹಾರುವಂತೆ ಕಣ್ಣಲ್ಲೇ ಹೇಳುತ್ತದೆ. ಆದರೆ ಮರಿ ನೀರಿರುವ ಗುಂಡಿಯ ಸುತ್ತಲೂ ಸುತ್ತು ಹಾಕುತ್ತದೆ. ಇಳಿಯುವ ಧಾವಂತದಲ್ಲಿ ಒಂದು ಕಾಲನ್ನು ನೀರಲ್ಲಿ ಹಾಕುತ್ತದೆ. ನರನಾಡಿಯೆಲ್ಲ ಜುಂ ಎಂದಾಗ ಹಿಂತಿರುಗಿ ತಾಯಿ ಬಳಿ ಓಡಿಬರುತ್ತದೆ.
ತಾಯಿ ಗದರುವಿಕೆಗೆ ಹೆದರಿ ನೀರೊಳಗೆ ಹಾರಿಯೇ ಬಿಡುತ್ತದೆ. ನೀರಿನ ಉಷ್ಣಾಂಶ ಮೈಗೆ ತಾಕಿದ ಕೂಡಲೇ ದಡಕ್ಕೆ ಹತ್ತಿ ತಾಯಿ ಬಳಿಗೆ ಥರಥರ ನಡುಗುತ್ತ ಓಡಿಬರುತ್ತದೆ. ಹೀಗೆ ನಾಲ್ಕೈದು ಬಾರಿ ಹರಸಾಹಸ ಪಟ್ಟು ನೀರಲ್ಲಿ ಈಜುವ ಮೊಂಡು ನಿರ್ಧಾರ ಮಾಡುತ್ತದೆ. ಅಂತೆಯೇ 5 ತಿಂಗಳ ಪುಟ್ಟ ಹಿಮಕರಡಿ ನೀರೊಳಗೆ ಹಾರಿಯೇ ಬಿಡುತ್ತದೆ. ಈಜು ಕಲಿತ ಥ್ರಿಲ್‌ನಲ್ಲಿ ಓಲಾಡುತ್ತದೆ. ಹಿಮಪ್ರದೇಶಗಳಲ್ಲಿ ಕಾಣಸಿಗುವ ಇಂಥ ದೃಶ್ಯಗಳು ಕಣ್ಣಿಗೆ ಹಬ್ಬವೇ ಸರಿ.
ವ್ಹಾರೆ ವ್ಹಾ!
'ಗೊಲಿಯತ್ ಫ್ರಾಗ್' ಜಗತ್ತಿನ ಅತಿ ದೊಡ್ಡ ಕಪ್ಪೆ. ಅಂಟಾರ್ಟಿಕ ಹೊರತುಪಡಿಸಿ ಬೇರೆಲ್ಲ ಕಡೆಗಳಲ್ಲೂ ಕಾಣಸಿಗುತ್ತವೆ.
ಗ್ರೇಹೌಂಡ್ಸ್ ಅತ್ಯಂತ ವೇಗವಾಗಿ ಓಡುವ ನಾಯಿ. ಗಂಟೆಗೆ 41.7 ಮೈಲಿ ವೇಗದಲ್ಲಿ ಓಡುತ್ತದೆ. 6000 ವರ್ಷಗಳ ಹಿಂದಿನ ಈಜಿಪ್ಟ್ ನಾಗರಿಕತೆಯಲ್ಲಿ ಗ್ರೇಹೌಂಡ್ಸ್ ಇದ್ದವು.
ಪಾಂಡಾ ಹುಟ್ಟಿದಾಗ ಇಲಿಗಿಂತಲೂ ಸಣ್ಣ ಗಾತ್ರವಿರುತ್ತದೆ.
ಕಾಲ್ಬೆರಳಿನ ಉಗುರಿಗಿಂತ ಕೈ ಬೆರಳ ಉಗುರು ನಾಲ್ಕು ಪಟ್ಟು ವೇಗವಾಗಿ ಬೆಳೆಯುತ್ತದೆ!
ಪ್ರತಿ ಝೀಬ್ರಾಗಳ ಮೈ ಮೇಲಿನ ಪಟ್ಟೆಗಳು ಒಂದಕ್ಕೊಂದು ಸಮನಾಗಿರುವುದಿಲ್ಲ. ಕತ್ತೆ ಕಿರುಬ, ಕಾಡು ನಾಯಿ ಮತ್ತು ಸಿಂಹ ಝೀಬ್ರಾಗಳಿಗೆ ಮೃತ್ಯುರೂಪಿಗಳು. ಗಂಡು ಝೀಬ್ರಾಗಳಿಗೆ ಸ್ಟಾಲಿನ್ಸ್ ಎನ್ನಲಾಗುತ್ತದೆ. ಝೀಬ್ರಾಗಳು ಹಿಂಡುಗಳಾಗಿ ಬದುಕುತ್ತವೆ.
ಬೇಯಿಸಿದ ಮೊಟ್ಟೆಯ ಮ್ಯಾಜಿಕ್
ಪುಟ್ಟಾ... ಅಪ್ಪ ಅಮ್ಮನಿಗೆ ಸವಾಲು ಹಾಕಲು ರೆಡಿಯಾಗಿದ್ದೀಯಾ? ನೀನು ಯಾವತ್ತೂ ರೆಡಿ ಅಂತ ನಂಗೆ ಗೊತ್ತು. ಹೇಗೂ ರಜೆ ಅಲ್ವಾ? ಎರಡು ಮೊಟ್ಟೆ ತಗೋ. ಒಂದು ಮೊಟ್ಟೇನಾ ಬೇಯಿಸು. ಬೆಂದ ಮೊಟ್ಟೆಯನ್ನು ಫ್ರಿಡ್ಜ್ ಅಥವಾ ತಣ್ಣನೆಯ ನೀರಲ್ಲಿ ಅದ್ದಿಡು. ಎರಡೂ ಮೊಟ್ಟೆಯ ಉಷ್ಣತೆ ಒಂದೇ ಸಮನೆ ಇರಬೇಕು. ಇಷ್ಟು ಮಾಡಿದ ನಂತರ ಯಾರ್ಯಾರಿಗೆ ಸವಾಲೆಸೆಯಬೇಕು ಅಂದುಕೊಂಡಿದ್ದೀಯೋ ಎಲ್ಲರನ್ನೂ ಕರಿ. ಎರಡು ಮೊಟ್ಟೆಯನ್ನು ಅವರ ಮುಂದಿಟ್ಟು ಬೇಯಿಸಿದ ಮೊಟ್ಟೆ ಕಂಡುಹಿಡಿಯುವಂತೆ ಹೇಳು.
ಊಹ್ಞುಂ, ಯಾರಿಗೂ ಸಾಧ್ಯವಾಗಿಲ್ಲ ಅಲ್ವಾ? ಎರಡು ಮೊಟ್ಟೆಯನ್ನು ವೇಗವಾಗಿ ತಿರುಗುವಂತೆ ತಿರುಗಿಸಿ ಬಿಡು. ಮೊಟ್ಟೆಗಳು ತಿರುಗುವಾಗ ಕೈಬೆರಳಿಂದ ಮೆತ್ತಗೆ ಸ್ಪರ್ಶಿಸು. ಯಾವುದು ಬೇಗ ಚಲನೆ ನಿಲ್ಲಿಸುತ್ತದೋ ಅದು ಬೇಯಿಸಿದ ಮೊಟ್ಟೆಯಾಗಿರುತ್ತದೆ.
ಅಲ್ಲೇನಾಗುತ್ತದೆ?
ಬೇಯಿಸದಿರುವ ಮೊಟ್ಟೆಯಲ್ಲಿ ಹಳದಿ ಲೋಳೆ ಮತ್ತು ಬಿಳಿಯ ಲೋಳೆಗಳೆರಡೂ ಒಳಗಡೆ ಸುತ್ತುತ್ತವೆ. ಹಾಗಾಗಿ ನಿರಂತರ ಚಲನೆ ಉಂಟಾಗುತ್ತದೆ. ನೀನು ಮುಟ್ಟಿದ ನಂತರವೂ ಸುತ್ತುವುದು ಮುಂದುವರಿಯುತ್ತದೆ. ಅದನ್ನು ವಿಜ್ಞಾನದಲ್ಲಿ 'ಇನರ್ಷಾ' ಎನ್ನುವರು. ಬೇಯಿಸಿದ ಮೊಟ್ಟೆಯ ಒಳಭಾಗ ಪೂರ್ತಿಯಾಗಿ ಘನೀಕರಿಸಿರುತ್ತದೆ. ಹಾಗಾಗಿ ನೀನು ನಿಲ್ಲಿಸಲೆಂದು ಮುಟ್ಟಿದ ತಕ್ಷಣ ನಿಂತುಬಿಡುತ್ತದೆ. ಒಳಗೆ ಯಾವುದೇ ವ್ಯತಿರಿಕ್ತ ಚಲನೆ ಇಲ್ಲದ ಕಾರಣ ನಿನ್ನ ಸ್ಪರ್ಶಕ್ಕೆ ಬೇಗನೆ ಸ್ಪಂದಿಸಿತು.