ಕಾರ್ಗಿಲ್ ಯುದ್ಧದ ಹೀರೋ ವಿಷ ಕುಡಿದು ಸತ್ತಿದ್ದ!
ಕಾರ್ಗಿಲ್ ಯುದ್ಧ ನಡೆಯಿತಲ್ಲ, ಆ ಸಂದರ್ಭದಲ್ಲೇ ನಡೆದುಹೋದ, ಆದರೆ ಯಾವ ಪತ್ರಿಕೆಯಲ್ಲೂ ಪ್ರಮುಖ ಸುದ್ದಿಯಾಗಿ ವರದಿಯಾಗದೇ ಹೋದ ಪ್ರಸಂಗವಿದು.
ಆ ಯುದ್ಧದಲ್ಲಿ ಆಂಧ್ರಪ್ರದೇಶದ ವೆಲ್ಲೂರು ಜಿಲ್ಲೆಯ ಹಳ್ಳಿಯೊಂದಕ್ಕೆ ಸೇರಿದ ಒಬ್ಬ ಯೋಧನೂ ಇದ್ದ. ಹಳ್ಳಿಯಲ್ಲಿ ಅವನ ತಂದೆ- ತಾಯಿ ಇದ್ದರು. ಅವರಿಗೆ ಜಮೀನಿತ್ತು, ತೋಟವಿತ್ತು. ಸರಕಾರಿ ನೌಕರಿಯೂ ಇತ್ತು! ಇಂಥವರ ಏಕಮಾತ್ರ ಪುತ್ರ ಬಾಲ್ಯದಿಂದಲೇ ದೇಶಸೇವೆಯ ಹುಚ್ಚು ಬೆಳೆಸಿಕೊಂಡ. ಮಗನನ್ನು ಎಂಜಿನಿಯರ್ ಮಾಡಬೇಕು ಎಂದು ತಂದೆಯೂ, ಅವನನ್ನು ಡಾಕ್ಟರಾಗಿ ಮಾಡಿಯೇ ಸೈ ಎಂದು ತಾಯಿಯೂ ಯೋಚಿಸುತ್ತಿದ್ದಾಗಲೇ ಈ ಭೂಪ, ಮನೆಯಲ್ಲಿ ಹೇಳದೆ ಕೇಳದೆ ಹೋಗಿ ಸೈನ್ಯ ಸೇರಿಬಿಟ್ಟ!
ಐದು ವರ್ಷ ಬೇರೆ ಬೇರೆ ಕಡೆಗಳಲ್ಲಿ ಯೋಧನಾಗಿ ದುಡಿದವನನ್ನು ಆರನೇ ವರ್ಷ ದೇಶದ ಗಡಿಯಲ್ಲಿ ನೌಕರಿಗೆ ಹಾಕಲಾಯಿತು. ಅದಾದ ಕೆಲವೇ ದಿನಗಳಲ್ಲಿ ಯುದ್ಧವೇ ಶುರುವಾಗಿಬಿಟ್ಟಿತು. ದಿನಾ ಟಿವಿ- ರೇಡಿಯೋ ವಾರ್ತೆಗೆ ಕಿವಿಗೊಟ್ಟರೆ ಸಾಕು, ಸಾವು- ನೋವಿನ ವರದಿ. ಎಷ್ಟೋ ಬಾರಿ ವೆಲ್ಲೂರಿನ ಯೋಧರೇ ಸತ್ತುಹೋಗಿರುತ್ತಿದ್ದರು. ಈ ಸುದ್ದಿ ಕೇಳಿದಾಗೆಲ್ಲ ಇಲ್ಲಿ ಮನೆಯಲ್ಲಿದ್ದ ತಂದೆ-ತಾಯಿ ಕಂಗಾಲು ಕಂಗಾಲು. ಅವರಿಗೆ ಕ್ಷಣಕ್ಷಣವೂ ಮಗ ನೆನಪಾಗುತ್ತಿದ್ದ. ಯುದ್ಧದಲ್ಲಿ ಅವನಿಗೆ ಏನಾದರೂ ಪೆಟ್ಟಾದರೆ... ಹೀಗೆ ಯೋಚಿಸಿಯೇ ಆ ದಂಪತಿ ಕಣ್ಣೀರಾಗುತ್ತಿದ್ದರು.
ಅವರು ಮಗನ ಧ್ಯಾನದಲ್ಲಿ ಕಣ್ಣೀರಾಗುತ್ತಿದ್ದ ಸಂದರ್ಭದಲ್ಲೇ ಭಾರತ ಯುದ್ಧ ಗೆದ್ದ ಸುದ್ದಿ ಬಂತು. ಸದ್ಯ, ಯುದ್ಧ ಮುಗೀತು ಎಂದು ಆ ದಂಪತಿ ನಿಟ್ಟುಸಿರುಬಿಟ್ಟರು. ಮರುದಿನವೇ ಕಾರ್ಗಿಲ್ನಿಂದ ಫೋನ್- ಮಗ ಮಾತಾಡುತ್ತಿದ್ದ. ಗೊತ್ತಾಯ್ತೇನಪ್ಪ ನನ್ನ ತಾಕತ್ತೇನು ಅಂತ! ಯುದ್ಧ ಗೆದ್ದಿದ್ದೀನಿ ನೋಡು ಅಂದ. ಸ್ವಲ್ಪ ಅಮ್ಮಂಗೆ ಕೊಡ್ತೀಯಾ ಅಂದವನೇ- ಅಮ್ಮನ ಮುಂದೆಯೂ ತನ್ನ ಪೌರುಷ ಹೇಳಿಕೊಂಡ.
'ಮಗೂ, ನೀನು ಮನೆಗೆ ಯಾವಾಗ ಬರ್ತೀಯಪ್ಪಾ...?'- ಅಮ್ಮ ಕೇಳಿದಾಗ ಅವನು ನಿಧಾನವಾಗಿ ಹೇಳಿದ: 'ಅಮ್ಮಾ, ಮುಂದಿನ ವಾರವೇ ಬರ್ತೀನಿ. ಆದ್ರೆ ಒಬ್ಬನೇ ಬರಲ್ಲ, ನನ್ನ ಜತೆಗೆ ಇನ್ನೊಬ್ರು ಬರ್ತಾರೆ...'.
ಮಗ, ಪ್ರೀತಿಸಿ ಮದುವೆಯಾಗಿರಬಹುದು. ಬಹುಶಃ ತನ್ನೊಂದಿಗೆ ಹೆಂಡತಿಯನ್ನು ಕರೆತರುತ್ತಾನೇನೋ. ಬಹುಶಃ ಆಕೆ ಬೇರೆ ಜಾತಿ-ಧರ್ಮದವಳಿರಬೇಕು. ಅದಕ್ಕೇ ಯಾರಿಗೂ ಸುದ್ದಿ ಕೊಡದೇ ಮದುವೆಯಾದನೇನೋ ಅನಿಸಿತು ತಾಯಿಗೆ. ಅದನ್ನೇ ಗಂಡನಿಗೆ ಪಿಸುಗುಟ್ಟಿದಳು. ಅವರು ಸಣ್ಣ ಅಸಹನೆಯಿಂದಲೇ ಫೋನ್ ಕಿತ್ತುಕೊಂಡು- 'ಅಲ್ಲ ಕಣೋ, ನಮಗೆ ಹೇಳದೇನೇ ಮದುವೆಯಾಗಿಬಿಟ್ಯಾ? ಅದ್ಸರಿ, ಅವ್ಳು ಯಾರು? ಯಾವ ಜಾತಿ? ಏನು ಕೆಲ್ಸ ಮಾಡ್ತಾಳೆ?'ಕೇಳಿದರು.
ಅಪ್ಪ- ಅಮ್ಮನ ಮಾತು ಕೇಳಿ ಮಗನಿಗೆ ನಗು ಬಂತು. ಆತ ಗಂಭೀರವಾಗಿ ಹೇಳಿದ: 'ಇಲ್ಲಪ್ಪಾ, ನಾನು ಮದುವೆಯಾಗಿಲ್ಲ. ಏನಾಗಿದೆ ಅಂದ್ರೆ- ಮೊನ್ನೆ ಯುದ್ಧ ಆಯ್ತಲ್ಲ, ಆಗ ನನ್ನ ಫ್ರೆಂಡ್ ಒಬ್ಬನಿಗೆ ಒಂದು ಕೈ, ಒಂದು ಕಾಲು ಪೂರ್ತಿ ಮುರಿದುಹೋಗಿದೆ. ಅವನಿಗೆ ಅಪ್ಪ- ಅಮ್ಮ, ಅಕ್ಕ- ತಂಗಿ, ಅಣ್ಣ- ತಮ್ಮ ಯಾರೂ ಇಲ್ಲ, ಅವನನ್ನ ಜತೇಲಿ ಕರ್ಕೊಂಡು ಬರೋಣಾಂತ ಇದೀನಿ. ಅವನ ವಿಷಯದಲ್ಲಿ ಒಂದಿಷ್ಟು ಕೇರ್ ತಗೊಳ್ಳೋಕೆ ನೀವಿದ್ದೀರಲ್ಲ...'.
ಮಗನ ಮಾತನ್ನು ಅಷ್ಟಕ್ಕೇ ತಡೆದ ತಂದೆ ಹೇಳಿದರು: 'ಮಗೂ, ಬೇರೆಯವರ ಉಸಾಬರಿ ನಿಂಗ್ಯಾಕೆ ಬೇಕಪ್ಪ? ನಿನ್ನ ಫ್ರೆಂಡ್ಗೆ ಒಂದು ಕೈ, ಒಂದು ಕಾಲು ಇಲ್ಲ ಅಂತೀಯ. ಅವನನ್ನ ಮನೇಲಿಟ್ಕೊಂಡು ಏನುಪಯೋಗ? ಅಕಸ್ಮಾತ್ ಆತ ಟಾಯ್ಲೆಟ್ಗೆ ಹೋಗೋಕಾಗದೆ, ಅರ್ಜೆಂಟಾಗಿ, ಕೂತಲ್ಲೇ... ಹಾಗೇನಾದ್ರೂ ಆದ್ರೆ ಗತಿಯೇನಪ್ಪ? ಅಂಥವರೆಲ್ಲ ಬಂದ್ರೆ ಮನೆ ಗಬ್ಬೆದ್ದುಹೋಗುತ್ತೆ. ಸುಮ್ನೆ ನಿನ್ನ ಪಾಡಿಗೆ ನೀನು ಬಾ. ನಿನ್ನ ಗೆಳೆಯನನ್ನು ದಯವಿಟ್ಟು ಕರ್ಕೊಂಡು ಬರಬೇಡ...' ಅಂದರು. ಹಿಂದೆಯೇ ರಿಸೀವರ್ ಕಿತ್ತುಕೊಂಡ ತಾಯಿ- 'ಹೌದು ಮಗಾ, ಕೈ ಇಲ್ಲದವರು ಕಾಲಿಲ್ಲದವರೆಲ್ಲ ನಮಗ್ಯಾಕೆ? ಬಾ ಸುಮ್ನೆ' ಅಂದರು!
'ಕಾರ್ಗಿಲ್ನಲ್ಲಿದ್ದ ನಿಮ್ಮ ಮಗ ಸತ್ತುಹೋಗಿದ್ದಾನೆ. ಇದು ಆತ್ಮಹತ್ಯೆ ಎಂದು ನಂಬಲಾಗಿದೆ...' ಹತ್ತು ದಿನಗಳ ನಂತರ ಹಳ್ಳಿಯಲ್ಲಿದ್ದ ಆ ಸಿರಿವಂತ ತಂದೆ- ತಾಯಿಗೆ ಟೆಲಿಗ್ರಾಂ ಬಂತು. ಅವರು ಅತ್ತರು. ಗೋಳಿಟ್ಟರು. ಎದೆ ಎದೆ ಬಡಿದುಕೊಂಡರು. ಮರುದಿನವೇ ಸೇನೆಯ ವಿಶೇಷ ವಾಹನದಲ್ಲಿ ಆ ಯೋಧನ ಶವ ಊರಿಗೆ ಬಂತು. ದುಃಖತಪ್ತ ದಂಪತಿ ಶವದ ಮೇಲಿದ್ದ ಬಿಳಿ ಬಟ್ಟೆಯನ್ನು ಇಷ್ಟಿಷ್ಟೇ ತೆಗೆದರು. ದಿಗ್ಭ್ರಮೆಯೊಂದು ಅವರಿಗಾಗಿ ಕಾದಿತ್ತು: ಶವವಾಗಿದ್ದ ಆ ಯೋಧನಿಗೆ ಒಂದು ಕೈ, ಒಂದು ಕಾಲು ಇರಲಿಲ್ಲ!
ಅವನು ವಿಷ ಕುಡಿದು ಜೀವ ಬಿಟ್ಟಿದ್ದ!!